ADVERTISEMENT

ಸರ್ಕಾರಿ ಶಾಲೆಯಲ್ಲಿ ಕೇಳು ಕಿಶೋರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

`ಮದುವೆ ಬೇಡ ಬೇಡ~ ಎಂದು ಎಷ್ಟೇ ಬೇಡ್ಕೊಂಡ್ರೂ ಸಂಗೀತಳ ತಂದೆ ತಾಯಿಗಳು ಕೇಳಲೇ ಇಲ್ಲ. ಆತುರದಿಂದ ಚಿಕ್ಕ ವಯಸ್ಸಿಗೇ ಆಕೆಯ ಮದುವೆ ಮಾಡಿ ತಮ್ಮ ಕರ್ತವ್ಯವನ್ನೇನೋ ಪೂರೈಸಿದ್ದರು.

ಸಮಾಜದ  ಮೌಢ್ಯತೆ, ಹೆಣ್ಣುಮಕ್ಕಳ ಬಗೆಗೆ ಇರುವ ತಾತ್ಸಾರ, ಅನೇಕ ಮನೆಗಳಲ್ಲಿ ಹಿರಿಯರು ಮತ್ತು ತಂದೆತಾಯಿಗಳು ತಮ್ಮ ಹೆಣ್ಣುಮಕ್ಕಳ ಬಗ್ಗೆ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ಆತಂಕಕಾರಿ ವಿಷಯವಾಗಿದೆ.  ಚಿಕ್ಕ ವಯಸ್ಸಿನಲ್ಲಿಯೇ ಮದುವೆಗೆ ಕೊರಳೊಡ್ಡುವ ಹುಡುಗಿಯರು ಮುಂದೆ ಅನೇಕ ತೊಂದರೆಗಳಿಗೆ ಸಲುಕಿಕೊಳ್ಳುತ್ತಾರೆ. ಅದರಲ್ಲೂ ಗರ್ಭಾವಸ್ಥೆಯಲ್ಲಿ ಸಕ್ಕರೆ ಕಾಯಿಲೆ, ರಕ್ತ ಹೀನತೆ, ಅಧಿಕ ರಕ್ತದ ಒತ್ತಡ, ಕಬ್ಬಿಣಾಂಶದ ಕೊರತೆ ಮುಂತಾದ ತೊಂದರೆಗಳಿಗೆ ಒಳಗಾದ ಉದಾಹರಣೆಗಳು ಬೇಕಾದಷ್ಟಿವೆ. ಈ ಕಾರಣದಿಂದ ಇಂದು ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೆ 154 ಹೆಣ್ಣುಮಕ್ಕಳು ಹೆರಿಗೆ ಸಮಯದಲ್ಲೇ  ಸಾಯುತ್ತಿದ್ದಾರೆ. ಸರ್ಕಾರ ಈ ಪ್ರಮಾಣವನ್ನು 2015ನೇ ವರ್ಷಕ್ಕೆ 109ಕ್ಕೆ ಇಳಿಸುವ ಗುರಿ ಹೊಂದಿವೆ. ಆದರೆ ಈ ಗುರಿ-ಉದ್ದೇಶಕ್ಕೆ ಸಮಾಜದ ಸ್ಪಂದನೆ ಮುಖ್ಯ.
ಈ ಎಲ್ಲಾ ತೊಂದರೆ ಹೋಗಲಾಡಿಸಲು ಹುಡುಗಿಯರಲ್ಲೇ ಜಾಗೃತಿ ಮೂಡಿಸುವ ಪ್ರಯತ್ನ ಫಲಕಾರಿಯಾಗಲೇಬೇಕು. ಇಂಥ ಅವಕಾಶವನ್ನು ಹುಡುಗಿಯರು ಬಳಸಿಕೊಂಡಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈ ಕಾರ್ಯದಲ್ಲಿ ತಂದೆ ತಾಯಿಗಳು, ಪೋಷಕರು, ಮುಖ್ಯವಾಗಿ ಮನೆಯಲ್ಲಿರುವ ಹಿರಿಯ ಮಹಿಳೆಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು, ಅವರ ಆಸೆ-ಆಕಾಂಕ್ಷೆಗಳಿಗೆ ಕಿವಿಗೊಡಬೇಕು.



ಆದರೆ ಆ ಚಿಕ್ಕ ವಯಸ್ಸಿನಲ್ಲಿ ಇನ್ನೂ ಶಾಲೆಯಲ್ಲಿ ಆಡಿಕೊಂಡು, ಓದಿಕೊಂಡು ಖುಷಿ ಪಡಬೇಕಾಗಿದ್ದ ಹುಡುಗಿ ಹರೆಯ ಕಾಲಿಡುವ ಮುನ್ನವೇ ತಾಯ್ತನದ ವೇದಿಕೆ ಏರಿದ್ದಳು! ಆದರೆ ಹೆರಿಗೆಯ ಸಂದರ್ಭದಲ್ಲಿ ಚಿರನಿದ್ರೆಗೆ ಜಾರಿದ್ದಳು. ತಂದೆ ತಾಯಿ, ಗಂಡ, ಬಂಧು ಬಳಗದ ದುಃಖ ಊಹಿಸಲು ಸಾಧ್ಯವೆ? ಇದು ಸಂಗೀತಳ ಬದುಕು ದುರಂತ ಕಥೆಯಾದ ಬಗೆ.

`ಅಪ್ಪ, ದೇವ್ರೇ ಬೀರ‌್ಲಿಂಗ! ನನ್ನ ಮೊಮ್ಮಗಳು ರಾಧ ಮದುವೆಯಾಗಿ ವರ್ಷವಾಗಿಲ್ಲ. ಏನೇನೋ ಮಾತ್ನಾಡ್ತಾಳೆ, ನಗ್ತಾಳೆ, ಸಿಟ್ಮಾಡ್ಕೋಂತಾಳೆ. ಒಂಥರಾ ಹುಚ್ಚರಂತೆ ಆಡ್ತಾಳೆ. ಗಂಡ ಅಂದ್ರೆ ಸಾಕು ಸಿಡ್ದೇ ಬೀಳ್ತಾಳೆ. ಸಿಟ್ಟು ಸಿಟ್ಟು ಮಾಡ್ತಾಳೆ. ಏನಾದ್ರೂ ದಾರಿ ತೋರ‌್ಸಪ್ಪ. ನಮ್ಗೆ ಏನೂ ತೋಚ್ತಾ ಇಲ್ಲ. ನೀ ಹೇಳಿದ್ಹಾಂಗೆ ನಡ್ಕೊಂತೀವಿ ನನ್ನಪ್ಪ. ಮೊಮ್ಮಗಳ ಬಾಳ ಹಸನ ಮಾಡಪ್ಪ ದೇವ್ರೇ~ ಇದು ಬಡ ಗ್ರಾಮೀಣ ಮನೆಯೊಂದರ ಅಜ್ಜಿಯ ಮೊರೆ ದೇವಸ್ಥಾನದಲ್ಲಿ.

ಇಂತಹ ಹತ್ತಾರು ಉದಾಹರಣೆಗಳು ಇನ್ನೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಣ್ಣಿಗೆ ಕಾಣುತ್ತವೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ 13ರ ಹರೆಯದ ಹುಡುಗಿಗೆ ಮದುವೆ, ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಮದುವೆ ಮುಂತಾದ ಸುದ್ದಿಗಳು ದಿನ ಬೆಳಗಾದರೆ ಇರುತ್ತವೆ.

ಇದು ಹೀಗೇ ಮುಂದುವರಿದರೆ ಗ್ರಾಮೀಣ ಹಾಗೂ ನಗರದ ಶಿಕ್ಷಣ ವಂಚಿತ, ಜಾಗೃತಿ ಇಲ್ಲದ ಹಾಗೂ ಮೂಢನಂಬಿಕೆಗೆ ಜೋತು ಬಿದ್ದ ಕುಟುಂಬಗಳ ಹುಡುಗಿಯರ ಭವಿಷ್ಯ ಏನು, ಅವರ ಆರೋಗ್ಯ ಏನಾಗಬಹುದು? ಇದರ ಅರಿವಿಲ್ಲದ ಪೋಷಕರಿಗೆ ಮಾತ್ರ, ತಮ್ಮ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಆದಷ್ಟು ಬೇಗ ತಮ್ಮ ಹೆಗಲ ಮೇಲಿರುವ `ಭಾರ~ ಇಳಿಸಿಕೊಳ್ಳುವ ಕನಸು.

ಈ ಪರಿಸ್ಥಿತಿಯ ವರ್ತುಲದಲ್ಲಿ ಸಿಲುಕಿರುವ ನಮ್ಮ ಹೆಣ್ಣುಮಕ್ಕಳು ತಮ್ಮ ಜೀವನದ ಬಗ್ಗೆ ತಮ್ಮದೇ ದೃಢ ನಿಲುವು ತೆಗೆದುಕೊಳ್ಳಲು, ತಮ್ಮ ಆರೋಗ್ಯದ ರಕ್ಷಣೆಗೆ ಮುಂದಾಗಲು, ಸಾಮಾಜಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಜಾಗೃತಿ ಕಾರ್ಯಕ್ರಮ ಹಾಕಿಕೊಂಡಿವೆ. ಇದರನ್ವಯ ಕರ್ನಾಟಕದಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಮೂರು- ನಾಲ್ಕು ವರ್ಷಗಳಿಂದ `ಕಿಶೋರಿಯರಿಗೆ ಕಿವಿ ಮಾತು~ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುತ್ತಿದೆ.

ಆದರೆ, 2011-12 ನೇ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಟ್ಟದಲ್ಲಿ 6, 7 ಹಾಗೂ 8 ನೇ ತರಗತಿಯ ಹುಡುಗಿಯರಿಗೆ `ಕೇಳು ಕಿಶೋರಿ~ ಜಾರಿಗೊಂಡಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶದ  ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರಿಗೆ ತಮ್ಮ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ದಾರಿದೀಪವಾಗಿದೆ.

ಏನೇನಿದೆ?
ಇದು ಮುಖ್ಯವಾಗಿ ಹದಿಹರೆಯಕ್ಕೆ ಕಾಲಿಡುವ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳುವ ತರಬೇತಿ. ಜೀವನ ಕೌಶಲ್ಯ, ಆರೋಗ್ಯ, ಪೌಷ್ಟಿಕತೆ, ಆತ್ಮ ಸ್ಥೈರ್ಯ ತಿಳಿಸುವ, ಲಿಂಗ ತಾರತಮ್ಯ, ಮಕ್ಕಳ ಮಾರಾಟ ಮುಂತಾದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ. ಇದರಲ್ಲಿ ಹುಡುಗಿಯರಿಗೆ ಕಿವಿಮಾತಿನ ಜೊತೆಗೆ ಪೂರ್ಣ ಮಾಹಿತಿ ನೀಡುವ ಪುಸ್ತಕ ವಿತರಿಸಲಾಗುತ್ತಿದೆ. ಈ ಪುಸ್ತಕವನ್ನು  ಮನೆಯವರೆಲ್ಲ ಓದಿ ತಿಳಿದುಕೊಳ್ಳುವುದೂ ಮುಖ್ಯ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.