ADVERTISEMENT

ಸ್ಕೈಪ್ ಸಿದ್ಧತೆ...ಇ–ಸಂದರ್ಶನ

ಸುಶೀಲಾ ಡೋಣೂರ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

‘ಸಂದರ್ಶನ’ ಎಂದೊಡನೆ ಬೆಚ್ಚಿ–ಬೀಳುವ ಕಾಲ ಒಂದಿತ್ತು. ಅದರಲ್ಲೂ ಮೊದಲ ಸಂದರ್ಶನ ಎಂದರೆ ಏನೊ ರೋಮಾಂಚನ, ಕಳವಳ. ಆದರೆ ಈಗ ಸಂದರ್ಶನದ ರೂಪ ಬದಲಾಗುತ್ತಿದೆ. ನಿಮ್ಮದೇ ಮನೆಯ, ನಿಮ್ಮ ಅನುಕೂಲದ ಜಾಗದಲ್ಲಿ, ನಿಗದಿತ ಸಮಯದಲ್ಲಿ ನೀವೀಗ ಸಂದರ್ಶನಕ್ಕೆ ಕುಳಿತುಕೊಳ್ಳಬಹುದು. ಕಾರ್ಪೋರೇಟ್ ವಲಯವೂ ಸೇರಿದಂತೆ ಅನೇಕ ಕಂಪೆನಿಗಳು ಈಗ ದೂರದ ಅಭ್ಯರ್ಥಿಗಳ ಸಂದರ್ಶನಕ್ಕೆ ‘ಸ್ಕೈಪ್’ ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಇದು ಅಭ್ಯರ್ಥಿಗಳ ಹಾಗೂ ಸಂದರ್ಶಕರ ಸಮಯ–ಶ್ರಮ ಉಳಿಸಬಹುದು. ಅದರ ಜೊತೆಗೇ ಹೊಸ ಹೊಣೆಗಾರಿಕೆಗಳನ್ನಂತೂ ಇಬ್ಬರ ಮೇಲೂ ಹೇರುತ್ತದೆ ಎನ್ನುವುದೂ ಸತ್ಯ.

ಕಲವು ಕಂಪೆನಿಗಳು ಆಯ್ಕೆ ಸಮಿತಿ ಹಾಗೂ ಅಭ್ಯರ್ಥಿಯ ನಡುವೆ ವೆಬ್ ಕ್ಯಾಂ ಇಟ್ಟು ಆರಂಭಿಕ ಭೇಟಿಗೆ ನಾಂದಿ ಹಾಡಬಹುದು. ಇನ್ನೂ ಕೆಲವು ಇದೇ ಹಂತದಲ್ಲಿ ಔಪಚಾರಿಕ ಮಾತು–ಕತೆಯನ್ನೂ ನಡೆಸಬಹುದು. ಅಲ್ಲದೇ, ಎಷ್ಟೊ ಸಂದರ್ಭಗಳಲ್ಲಿ ದೂರದ ವಲಯದಲ್ಲಿರುವ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನೂ ಇದೇ ಮಾರ್ಗದ ಮೂಲಕ ಮುಗಿಸುವುದೂ ಇದೆ. ಆದರೆ ಇಂತಹ ಸಂದರ್ಶನಕ್ಕೆ ಒಡ್ಡಿಕೊಳ್ಳುವ ಮೊದಲು ನೀವು ಎಲ್ಲಾ ರೀತಿಯಿಂದ ತಯಾರಿ ಮಾಡಿಕೊಳ್ಳುವುದು ಮುಖ್ಯ. ಸಾಂಪ್ರದಾಯಿಕ ಸಂದರ್ಶನದ ಸಿದ್ಧತೆಯ ಜೊತೆಗೆ ಒಂದಷ್ಟು ಹೊಸ ಜವಾಬ್ದಾರಿಗಳನ್ನೂ ನೀವಿಲ್ಲಿ ನಿರ್ವಹಿಸಬೇಕು.

* ಉಡುಪು: ಮುಖಾಮುಖಿ ಸಂದರ್ಶನಕ್ಕೆ ಹೋಗುವ ರೀತಿಯಲ್ಲಿಯೇ ಡ್ರೆಸ್ ಮಾಡಿಕೊಳ್ಳಬೇಕು. ಮನೆಯಲ್ಲಿ ಸಂದರ್ಶನ ನೀಡುತ್ತಿದ್ದೀರಿ ಎನ್ನುವ ಕಾರಣಕ್ಕೆ ಯಾವುದೇ ಉಡುಪು ನಡೆದೀತು ಎನ್ನುವ ವಿಚಾರ ಬೇಡ. ವೆಬ್ ಕ್ಯಾಂ ಕಣ್ಣಿಗೆ ನಿಮ್ಮ ಮೇಲಿನ ಭಾಗ ಮಾತ್ರ ಕಾಣುವುದರಿಂದ ಅದಕ್ಕಷ್ಟೇ ಗಮನ ಕೊಟ್ಟರೆ ಸಾಲದು. ನಿಮ್ಮ ವ್ಯಕ್ತಿತ್ವ, ಉದ್ಯೋಗ, ಅನುಭವ, ಆಸಕ್ತಿಗೆ ತಕ್ಕಂತೆ ಪರಿಪೂರ್ಣ ಉಡುಪು ಆರಿಸಿಕೊಳ್ಳುವುದು ಅಗತ್ಯ.

* ಕೋಣೆಯ ಶಿಸ್ತು–ಗಾಂಭಿರ್ಯ: ನೇರ ಸಂದರ್ಶನದಲ್ಲಿ ಈ ಸಂಗತಿ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಸ್ಕೈಪ್ ಸಂದರ್ಶನಕ್ಕೆ ನೀವು ಆಯ್ಕೆ ಮಾಡಿಕೊಳ್ಳುವ ಜಾಗವೂ ಮುಖ್ಯವಾಗುತ್ತದೆ. ಅದನ್ನು ನೀಟಾಗಿ ಇಟ್ಟುಕೊಳ್ಳುವ ಹೊಸ ಹೊಣೆಗಾರಿಗೆ ನೀವು ಹೆಗಲು ಕೊಡಬೇಕು. ಇದಕ್ಕೆ ಮಲಗುವ ಕೋಣೆಯನ್ನು ಆಯ್ಕೆ ಮಾಡಿಕೊಳ್ಳದೇ ಇರುವುದು ಒಳ್ಳೆಯದು. ಉಳಿದಂತೆ ಹರವಿಕೊಂಡಿರುವ ಪುಸ್ತಕಗಳು, ಮಕ್ಕಳ ಆಟಿಕೆ, ಬಟ್ಟೆಗಳು, ಕುಡಿದಿಟ್ಟ ಕಾಫಿ ಕಪ್ಪು ಅಥವಾ ತಿಂಡಿಯ ಪ್ಲೇಟುಗಳನ್ನೆಲ್ಲ ಎತ್ತಿಟ್ಟು ಕೋಣೆಯನ್ನು ಸ್ವಚ್ಚ­ಗೊಳಿಸುವುದು ಈ ಸಂದರ್ಶನದ ಒಂದು ಭಾಗ. ಅಲ್ಲದೇ, ಗೋಡೆಯ ಮೇಲೆ ಅಂಟಿಸಿರುವ ಪೋಸ್ಟರುಗಳು, ಫೋಟೊಗಳು ಸಹ ನಿಮ್ಮ ಅಭಿರುಚಿಯನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಗಮನಿಸಬೇಕು.

* ಗಲಿಬಿಲಿ ಶಬ್ದಗಳಿಗೆ ಕಡಿವಾಣ: ಈ ಸಂದರ್ಶನದಲ್ಲಿ ಉಂಟಾಗುವ ಧ್ವನಿ, ಶಬ್ದ, ಸದ್ದು–ಗದ್ದಲಕ್ಕೆ ನೀವೇ ಹೊಣೆ. ಟಿವಿ, ರೇಡಿಯೊ, ಮಕ್ಕಳ ಅಥವಾ ಮನೆಯ ಇತರೆ ಸದಸ್ಯರ ಅನಗತ್ಯ ಸದ್ದನ್ನು ತಡೆಯಬೇಕಾದ್ದು ನಿಮ್ಮದೇ ಕೆಲಸ.

* ಅಗತ್ಯ ಸಾಮಗ್ರಿ– ದಾಖಲೆಗಳು: ಸಂದರ್ಶನ ಆರಂಭವಾಗಿ ನಿಮ್ಮ ಸಂದರ್ಶಕರು ಕೇಳಿದ ನಂತರ ದಡಬಡಿಸಿ ಎದ್ದು ದಾಖಲೆಗಳನ್ನು ಹುಡುಕುವ ಜಂಜಾಟ ಬೇಡ. ಅವರು ಕೇಳಬಹುದಾದ ಎಲ್ಲಾ ದಾಖಲೆಗಳನ್ನು ಟೇಬಲ್ ಮೇಲೆಯೇ ಜೋಡಿಸಿಟ್ಟುಕೊಳ್ಳಿ. ಅಲ್ಲದೇ, ಕೆಲವು ದಾಖಲೆಗಳು ಸಾಫ್ಟ್ ಕಾಪಿ ರೂಪದಲ್ಲಿಯೂ ನಿಮ್ಮ ಡೆಸ್ಕ್ ಟಾಪ್ ಮೇಲೇ ಇರಲಿ. ಅಗತ್ಯ ಬಿದ್ದರೆ ಕೂಡಲೇ ನೀವದನ್ನು ರವಾನಿಸಲು ಸಾಧ್ಯವಾಗಬೇಕು.

* ವೆಬ್ ಕ್ಯಾಂ ಬಳಕೆ: ಸ್ಕೈಪ್ ಸಂದರ್ಶನ ಎಂದ ಕೂಡಲೇ ಮೊದಲು ನಿಮ್ಮ ತಲೆಯಲ್ಲಿ ಬರುವುದೇ ವೆಬ್ ಕ್ಯಾಂ. ನಿಜ, ಈ ಸಂದರ್ಶನದಲ್ಲಿ ವೆಬ್ ಕ್ಯಾಂ ಬಹಳ ಪ್ರಮುಖ ಪಾ-ತ್ರ ವಹಿಸುತ್ತದೆ. ಯಾವುದೇ ಮಾತು, ಸ್ಪಷ್ಟನೆ, ಉತ್ತರಕ್ಕೆ ನೇರವಾಗಿ ಕ್ಯಾಮೆರಾ ನೋಡಿ ಮಾತನಾಡಿ. 

* ಸಾಧನಗಳ ಮರುಪರಿಶೀಲನೆ: ಸಂದರ್ಶಕರಿಗೆ ಆಹ್ವಾನ ಕಳುಹಿಸುವ ಮೊದಲು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್, ಅದರ ಕ್ಯಾಮೆರಾ, ಮೈಕ್ರೊಫೋನ್  ನಂತಹ ಸಾಧನಗಳ ಗುಣಮಟ್ಟವನ್ನೊಮ್ಮೆ ಪರಿಶೀಲಿಸಿ. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರನ್ನು ಸಂಪರ್ಕಿಸುವ ಮೂಲಕ ಅವು ಸರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಂದರ್ಶನ ನಡೆಯುವಾಗ ಯಾವುದೇ ಅಭಾಸ ಸಂಭವಿಸದಂತೆ ನೋಡಿಕೊಳ್ಳಲು ಹೈಸ್ಪೀಡ್ (ಕನಿಷ್ಠ 256 kb ps. ವೇಗ) ಇಂಟರ್ನೆಟ್ ಬಳಸಿ.

* ಸ್ಕೈಪ್ ಪ್ರೊಫೈಲ್ ಗಾಂಭಿರ್ಯ: ಸ್ಕೈಪ್ ಒಂದು ಸಾಮಾಜಿಕ ಜಾಲತಾಣ ಎನ್ನುವುದು ಗೊತ್ತಿರಲಿ. ಪ್ರೊಫೈಲ್ ನಲ್ಲಿ ನೀವು ಜೋಡಿಸಿದ ವಿವರ, ಮಾಹಿತಿ ಹಾಗೂ ಭಾವಚಿತ್ರವನ್ನೂ ನಿಮ್ಮ ಸಂದರ್ಶಕರು ಗಮನಿಸಬಹುದು. ‘ಡ್ರೀಮ್ ಬಾಯ್’, ‘ನಾಟಿ ಗರ್ಲ್’ ಎಂಬ ಯೂಸರ್ ನೇಮ್ ನಿಮ್ಮ ವ್ಯಕ್ತಿತ್ವದ ತೂಕ ಕಳೆಯಬಹುದು.

* ಬೆಳಕು: ಸಂದರ್ಶನದ ಕೋಣೆಯಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಲಿ. ಬೆಳಕು ನಿಮ್ಮ ಬೆನ್ನ ಹಿಂದಿನಿಂದ ಬರದಂತೆ ನೋಡಿಕೊಳ್ಳಿ. ಇದರಿಂದ ಸಂದರ್ಶಕರಿಗೆ ನಿಮ್ಮ ಮುಖ ಸರಿಯಾಗಿ ಕಾಣುವುದಿಲ್ಲ. ಬೆಳಕು ಕ್ಯಾಮೆರಾ ಹಿಂದಿನಿಂದ ನಿಮ್ಮ ಮುಖದ ಮೇಲೆ ಬೀಳುವಂತಿರಬೇಕು.

ನಿಮ್ಮ ಸಾಮರ್ಥ್ಯ, ವಿದ್ಯಾಭ್ಯಾಸ, ಗ್ರಹಿಕೆ, ನಿಲುವು, ವ್ಯಕ್ತಿತ್ವ ಎಲ್ಲವನ್ನು ಕೆಲವೇ ನಿಮಿಷಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಎದುರಿಗಿರುವ ಸಂದರ್ಶಕರ ಮುಂದಿಡುತ್ತೀರಿ ಎನ್ನುವುದು ನಿಮ್ಮ ಸಂದರ್ಶನದ ಯಶಸ್ಸನ್ನು ಅವಲಂಭಿಸಿರುತ್ತದೆ. ನೀವು ಏನು ಹಾಗೂ ಆ ಸಂಸ್ಥೆಗೆ ನೀವು ಹೇಗೆ, ಎಷ್ಟು ಉಪಯೋಗ ಎನ್ನುವುದನ್ನು ಅಷ್ಟೇ ಪರಿಣಾಮಕಾರಿಯಾಗಿ ಬಿಚ್ಚಿಡಬೇಕಾಗುತ್ತದೆ. ‘ಸಂದರ್ಶನ’ ಪ್ರತಿ ವ್ಯಕ್ತಿಯ ಜೀವನದ ಬಹುಮುಖ್ಯ ಘಟ್ಟ. ಕಾಲಕಾಲಕ್ಕೆ ತಕ್ಕಂತೆ ಸಂದರ್ಶನದ ರೂಪ–ಆಕಾರಗಳು ಬದಲಾಗುತ್ತಿರುವ ಈ ಹೊತ್ತು ಅದಕ್ಕೆ ತಕ್ಕಂತೆ ಸಿದ್ಧಗೊಳ್ಳಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.

ಗ್ರಾಹಕ ಸ್ನೇಹಿ ಗುಣ...
2003ರಿಂದ ಈಚೆಗೆ ಆನ್ ಲೈನ್ ಸಂದರ್ಶನದಲ್ಲಿ ಸ್ಕೈಪ್ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದು ಸತ್ಯ. ಸುಲಭ ಲಭ್ಯತೆ, ಸರಳ ಬಳಕೆ,

ಗ್ರಾಹಕ ಸ್ನೇಹಿ ಗುಣದಿಂದಾಗಿ ಬಹಳ ಬೇಗ ಇದು ಅಭ್ಯರ್ಥಿಗಳ ಹಾಗೂ ಉದ್ಯೋಗದಾತರ ಮೆಚ್ಚುಗೆಗೆ ಕಾರಣವಾಯಿತು. ಉದ್ಯೋಗ ಅರಸುವವರಿಗೂ, ಉದ್ಯೋಗಿಗಳನ್ನು ಹುಡುಕುವವರಿಗೂ ಸ್ಕೈಪ್ ಅನುಕೂಲ ನಿಜ. ಆದರೆ ಸ್ಕೈಪ್ ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಮುಖಾಮುಖಿ ಸಂದರ್ಶನಕ್ಕಿಂತಲೂ ಭಿನ್ನ ಹಾಗೂ ಸೂಕ್ಷ್ಮ.

ADVERTISEMENT

ಈ ಹೊಸ ರೂಪದ ಸಂದರ್ಶನವನ್ನು ಎದುರಿಸುವ ಸೂತ್ರಗಳೂ ಹೊಸದಾಗಿರಬೇಕು ಮತ್ತು ಪರಿಣಾಮಕಾರಿಯೂ ಆಗಿರಬೇಕು. ಮುಖಾಮುಖಿ ಸಂದರ್ಶನಕ್ಕೆ ಹೋಗಬೇಕಾದಾಗ ನೀವು ಶೂ ಇಂದ ಹಿಡಿದು ಕೇಶ ವಿನ್ಯಾಸದವರೆಗೂ ಎಲ್ಲಾ ಸಂಗತಿಗಳ ಕಡೆಗೂ ಗಮನ ಕೊಡುತ್ತೀರಿ. ತೊಡುವ ವಸ್ತ್ರ,  ಆಭರಣ, ನಿಮ್ಮ ಚಹರೆ, ಒಳಗೆ ಬರುವ, ಕುಳಿತುಕೊಳ್ಳುವ, ಸಂದರ್ಶಕರನ್ನು ಅಭಿನಂದಿಸುವ ಶೈಲಿ ಇತ್ಯಾದಿ ಇತ್ಯಾದಿ... ಎಲ್ಲೆಡೆಯೂ ನಿಮ್ಮ ಭಿನ್ನತೆಯನ್ನು ಸಾದರಪಡಿಸುತ್ತೀರಿ. ಆದರೆ ಸ್ಕೈಪ್ ಸಂದರ್ಶನದಲ್ಲಿ ಇದಷ್ಟೇ ಸಾಲದು. ಇದೆಲ್ಲದರೊಂದಿಗೆ ಸಂದರ್ಶನಕ್ಕೆ ಆರಿಸಿಕೊಂಡಿರುವ ಕೋಣೆ, ಖುರ್ಚಿ, ಮೇಜು, ನಿಮ್ಮ ಹಿನ್ನೆಲೆಯಲ್ಲಿ ಕಾಣುವ ಗೋಡೆ, ಲೈಟು, ಸುತ್ತ–ಮುತ್ತಲಿನ ಪರಿಸರ... ಎಲ್ಲವೂ ಇಲ್ಲಿ ತನ್ನದೇ ಆದ ಮೌಲ್ಯ ಪಡೆಯುತ್ತವೆ.

ವೆಬ್ ಕ್ಯಾಂ ವ್ಯಾಪ್ತಿಗೆ ಬರುವ ಪ್ರತಿ ಸೂಕ್ಷ್ಮ ಸಂಗತಿಯೂ ನಿಮ್ಮ ಶಿಸ್ತು, ದಕ್ಷತೆ, ಜವಾಬ್ದಾರಿ, ಜೀವನಶೈಲಿ, ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ವೆಬ್ ಕ್ಯಾಂ ಕಣ್ಣಿಗೆ ಬೀಳುವ ಪ್ರತಿ ಇಂಚು–ಅಂಚನ್ನೂ ನೀವು ಜಾಗರೂಕತೆಯಿಂದ ನಿರ್ವಹಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.