ಪ್ಯಾರಿಸ್ (ಎಎಫ್‌ಪಿ): ಯುವ ತಾರೆಗಳಾದ ಕಾರ್ಲೋಸ್ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್
ಅವರು ಭಾನುವಾರ ಗ್ರ್ಯಾನ್‌ಸ್ಲಾಮ್ ಫೈನಲ್ ಗಳ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ಪಂದ್ಯ ವೊಂದನ್ನು ಆಡಿದರು. ಆ ಮೂಲಕ ಮುಂಬರುವ ವರ್ಷಗಳಲ್ಲಿ ಪುರುಷರ ಟೆನಿಸ್ ಕ್ಷೇತ್ರವನ್ನು ಆಳುವ ಎರಡು ಪ್ರಬಲ ಶಕ್ತಿಗಳು ತಾವಾಗಬಹುದು ಎಂಬುದನ್ನು ತೋರಿದರು.
22 ವರ್ಷ ವಯಸ್ಸಿನ ಅಲ್ಕರಾಜ್ ಮತ್ತು 23ವರ್ಷ ವಯಸ್ಸಿನ ಸಿನ್ನರ್ ನಡುವಣ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಫೈನಲ್ ತೀವ್ರ ಸಂಚಲನ ಮೂಡಿಸಿದ ಪಂದ್ಯ ಎಂಬುದು ನಿಸ್ಸಂಶಯ.
ಸ್ಪೇನ್‌ನ ಅಲ್ಕರಾಜ್ ಮತ್ತು ಇಟಲಿಯ ಸಿನ್ನರ್ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಎದುರಾಳಿಗಳಾಗಿದ್ದರು. ಪಂದ್ಯವೂ ನಿರಾಸೆ ಮೂಡಿಸಲಿಲ್ಲ; ಮೇಲುಗೈನ ಏರಿಳಿತ, ತಿರುವುಗಳು, ನಾಟ ಕೀಯ ಕ್ಷಣ, ಆರಂಭದಿಂದ ಕೊನೆಯವರೆಗೆ ಅದ್ಭುತ ಹೊಡೆತಗಳು... ಹೀಗೆ ರೋಚಕತೆ ಸಾಕಷ್ಟು ಇತ್ತು.
‘ನಾನು ಈವರೆಗೆ ಆಡಿದ ಅತಿ ರೋಮಾಂಚನ ಕಾರಿ ಪಂದ್ಯಗಳಲ್ಲಿ ಇದೂ ಒಂದು ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದು ಅಲ್ಕರಾಜ್ ಸುದೀರ್ಘ ಫೈನಲ್ ನಂತರ ಬಣ್ಣಿಸಿದರು. ಈ ಪಂದ್ಯ ದಾಖಲೆಯ 5 ಗಂಟೆ 29 ನಿಮಿಷ ನಡೆಯಿತು.
ಅಲ್ಕರಾಜ್ ಈ ಪಂದ್ಯದಲ್ಲಿ 4-6, 6-7 (4–7), 6–4, 7–6 (7–3), 7–6 (10–2)ರಿಂದ ಗೆಲುವು ಸಾಧಿಸಿದರು. ಅವರು, ಮೂರು ಬಾರಿ ಸೋಲಿನ ಸುಳಿಯಿಂದ (ಮ್ಯಾಚ್ ಪಾಯಿಂಟ್ ರಕ್ಷಿಸಿ) ಪಾರಾಗುವಲ್ಲಿ ಯಶಸ್ವಿ ಆದರು.
‘ನಾನೂ ರಫೇಲ್ ನಡಾಲ್ ಅವರ ಹಾಗೆ 22 ವರ್ಷ, ಒಂದು ತಿಂಗಳು ಮೂರು ದಿನ ಇರುವಂತೆ ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದೆ. ಇದು ದೈವಲೀಲೆಯೇನೊ’ ಎಂದು ಸ್ಪೇನ್‌ನವರೇ ಆದ ಅಲ್ಕರಾಜ್ ಬಣ್ಣಿಸಿದರು. ನಡಾಲ್, ಅಲ್ಕರಾಜ್‌ಗೆ ಅಚ್ಚುಮೆಚ್ಚಿನ ಆಟಗಾರ.
ನಡಾಲ್ ಅವರ ಐದನೇ ಪ್ರಮುಖ ಪ್ರಶಸ್ತಿ ಬಂದಿದ್ದು 2008ರ ವಿಂಬಲ್ಡನ್‌ನಲ್ಲಿ. ರೋಜರ್ ಫೆಡರರ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದ ಆ ಫೈನಲ್ ಕೂಡ ಗ್ರ್ಯಾನ್‌ಸ್ಲಾಮ್ ಇತಿಹಾಸದ ಸ್ಮರಣೀಯ ಪಂದ್ಯಗಳಲ್ಲಿ ಒಂದು.
ಸಿನ್ನರ್ ವಿರುದ್ಧ ತಮ್ಮ ಗೆಲುವಿಗೆ ಹೆಚ್ಚಿನ ತೂಕ ನೀಡಲು ಅಲ್ಕರಾಜ್ ಹಿಂಜರಿದರು. 2012ರ ಆಸ್ಟ್ರೇಲಿಯಾ ಓಪನ್‌ನಲ್ಲಿ ನಡಾಲ್ ವಿರುದ್ಧ ನೊವಾಕ್ ಜೊಕೊವಿಚ್ ಸಾಧಿಸಿದ ಗೆಲುವು ಹೆಚ್ಚು ಮೌಲ್ಯಯುತವಾದುದು ಎಂಬ ಅಭಿಪ್ರಾಯಪಟ್ಟರು.
‘ಜನರು ನಮ್ಮ ಪಂದ್ಯಕ್ಕೆ ಹೆಚ್ಚಿನ ಮೌಲ್ಯ ನೀಡಿದರೆ, ಅದು ನನಗೆ ಸಲ್ಲುವ ಅತಿದೊಡ್ಡ ಗೌರವ’ ಎಂದು ಅಲ್ಕರಾಜ್ ಹೇಳಿದರು. ‘ಆದರೆ ಗ್ರ್ಯಾಂಡ್‌ಸ್ಲಾಮ್ ಮತ್ತು ರೋಲ್ಯಾಂಡ್ ಗ್ಯಾರೋಸ್ ಇತಿಹಾಸದಲ್ಲಿ ನಮ್ಮ ಪಂದ್ಯಕ್ಕೆ ಉನ್ನತ ಸ್ಥಾನ ನೀಡಿದ್ದರಿಂದ ಸಂತಸವಾಗಿದೆ’ ಎಂದರು.
ಈ ಹಿಂದೆ ಜೊಕೊವಿಚ್, ನಡಾಲ್ ಮತ್ತು ಫೆಡರರ್ ನಡುವಣ ಪೈಪೋಟಿ ಸುಮಾರು ಎರಡು ದಶಕಗಳ ಕಾಲ ಮುಂದುವರಿದಿತ್ತು. ಆದರೆ, ‘ಭಿನ್ನ ತಲೆಮಾರುಗಳ ಹೋಲಿಕೆ ಮಾಡುವುದು ಕಷ್ಟ. ಆದರೆ ತಾವೂ ಅದರ ಭಾಗವಾಗಿರುವುದು ಹೆಮ್ಮೆ ಮೂಡಿಸುತ್ತದೆ’ ಎಂದು ಸಿನ್ನರ್ ಪ್ರತಿಕ್ರಿಯಿಸಿದರು.
ಮೂವರು ವಿಜೇತರು– ಫೆಡರರ್: ಈ ಅಸಾಧಾರಣ ಆಟಕ್ಕೆ ಇವರಿಬ್ಬರನ್ನು ಅಭಿನಂದಿಸಿದವರಲ್ಲಿ ಫೆಡರರ್ ಮತ್ತು ನಡಾಲ್ ಮೊದಲಿಗರಾಗಿದ್ದರು.
‘ಪ್ಯಾರಿಸ್‌ನಲ್ಲಿ ಇಂದು ಮೂವರು ವಿಜೇತರಾದರು. ಕಾರ್ಲೋಸ್ ಅಲ್ಕರಾಜ್, ಯಾನಿಕ್ ಸಿನ್ನರ್ ಮತ್ತು ಟೆನಿಸ್ ಎಂಬ ಸುಂದರ ಆಟ. ಎಂಥಾ ಪಂದ್ಯ!’ ಎಂದು ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಫೆಡರರ್ ಮತ್ತು ನಡಾಲ್ ನಿವೃತ್ತರಾಗಿದ್ದು,ಜೊಕೊವಿಚ್‌ಗೆ ಈಗ 38 ವರ್ಷ ವಯಸ್ಸು. ಈ ‘ಮೂವರು ಮಹಾತಾರೆಗಳು’ ಸೃಷ್ಟಿಸಿರುವ ನಿರ್ವಾತವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗೆ ಉತ್ತರ ದೊರಕಿದೆ.
‘ಆಟವನ್ನು ಹೊಸ ಮಟ್ಟಕ್ಕೆ ಏರಿಸಿರುವ ಇವರಿಬ್ಬರ ಪೈಪೋಟಿಯನ್ನು ಸವಿಯುವ ಅವಕಾಶ ನಮಗೆ ದೊರಕಿರುವುದನ್ನು ನಂಬಲಾಗುತ್ತಿಲ್ಲ’ ಎಂದು ಏಳು ಗ್ರ್ಯಾನ್‌ಸ್ಲಾಮ್ ವಿಜೇತ ಮ್ಯಾಟ್ಸ್ ವಿಲಾಂಡರ್ ಹೇಳಿದ್ದಾರೆ. ರಫಾ, ರೋಜರ್ ಮತ್ತು ನೊವಾಕ್ ನಂತರ ಇಷ್ಟು ಬೇಗ ಈ ಮಟ್ಟದ ಆಟಗಾರರು ಬರಬಹುದೆಂದು ಯೋಚಿಸಿರಲಿಲ್ಲ ಎಂದಿದ್ದಾರೆ.
ಅಲ್ಕರಾಜ್ ಮತ್ತು ಸಿನ್ನರ್ ಮೊದಲ ಮುಖಾಮುಖಿ 2021ರ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ
ಆಗಿತ್ತು. ಅಲ್ಕರಾಜ್ 12 ಮುಖಾಮುಖಿಗಳಲ್ಲಿ ಕೊನೆಯ ಐದು ಸೇರಿ ಎಂಟು ಬಾರಿ ಜಯಿಸಿದ್ದಾರೆ. ಆದರೆ ಈ ಇಬ್ಬರೂ ಉತ್ತುಂಗಕ್ಕೇರುವ ಮೊದಲೇ ಟೆನಿಸ್‌ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ
ಈ ಹಿಂದೆ ಈ ಕ್ಲೇ ಅಂಕಣದಲ್ಲಿ ಅತಿ ಸುದೀರ್ಘ ಪಂದ್ಯದಲ್ಲಿ (1982ರಲ್ಲಿ ಗಿಲೆರ್ಮೊ ವಿಲಾಸ್ ವಿರುದ್ಧ 4 ಗಂಟೆ 42 ನಿಮಿಷ) ಆಡಿದ ಹೆಗ್ಗಳಿಕೆ ಈ ವಿಲಾಂಡರ್ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.