ADVERTISEMENT

ಅಲ್ಕರಾಜ್‌ಗೆ ಸಿಂಗಲ್ಸ್‌ ಕಿರೀಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 19:29 IST
Last Updated 13 ಏಪ್ರಿಲ್ 2025, 19:29 IST
<div class="paragraphs"><p>ಟ್ರೋಫಿಯೊಂದಿಗೆ ಕಾರ್ಲೊಸ್ ಅಲ್ಕರಾಜ್‌</p></div>

ಟ್ರೋಫಿಯೊಂದಿಗೆ ಕಾರ್ಲೊಸ್ ಅಲ್ಕರಾಜ್‌

   

ಮಾಂಟೆ ಕಾರ್ಲೊ (ಎಎಫ್‌ಪಿ): ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಅಲ್ಕರಾಜ್‌ 3-6, 6-1, 6-0ರಿಂದ ಇಟಲಿಯ ಲೊರೆಂಝೊ ಮುಸೆಟ್ಟಿ ಅವರನ್ನು ಮಣಿಸಿ ಇಲ್ಲಿ ಮೊದಲ ಬಾರಿ ಚಾಂಪಿಯನ್‌ ಆದರು.

ADVERTISEMENT

ನಾಲ್ಕು ಗ್ರ್ಯಾನ್‌ಸ್ಲಾಮ್‌ ಕಿರೀಟಗಳಿಗೆ ಒಡೆಯನಾಗಿರುವ 21 ವರ್ಷ ವಯಸ್ಸಿನ ಅಲ್ಕರಾಜ್‌, ತಮ್ಮ ಆರನೇ ಮಾಸ್ಟರ್ಸ್‌ ಟ್ರೋಫಿಗೆ ಮುತ್ತಿಕ್ಕಿದರು. ಕಳೆದ ವರ್ಷದ ವಿಂಬಲ್ಡನ್‌ ಬಳಿಕ ಅವರು ಗೆದ್ದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ.

ಮೊದಲ ಸೆಟ್‌ನಲ್ಲಿ ಲಯ ಕಂಡುಕೊಳ್ಳಲು ಸ್ಪೇನ್‌ ಆಟಗಾರ ಪರದಾಡಿದರು. ಇದರ ಲಾಭ ಪಡೆದ 13ನೇ ಶ್ರೇಯಾಂಕದ ಮುಸೆಟ್ಟಿ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು. ಆದರೆ, ನಂತರದಲ್ಲಿ ಅಮೋಘವಾಗಿ ಪುನರಾಗಮನ ಮಾಡಿದ ಅಲ್ಕರಾಜ್‌ ಸತತ ಎರಡು ಸೆಟ್‌ಗಳನ್ನು ನಿರಾಯಾಸವಾಗಿ ಗೆದ್ದುಕೊಂಡರು. 

ಈ ಗೆಲುವಿನೊಂದಿಗೆ ಅಲ್ಕರಾಜ್‌ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಅವರು, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ರನ್ನರ್ಸ್ ಅಪ್‌ ಆದ 23 ವರ್ಷ ವಯಸ್ಸಿನ ಮುಸೆಟ್ಟಿ ಐದು ಸ್ಥಾನಗಳ ಬಡ್ತಿಯೊಂದಿಗೆ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಟಲಿಯ ಯಾನಿಕ್‌ ಸಿನ್ನರ್‌ ಅವರ ಅಗ್ರಸ್ಥಾನ ಅಬಾಧಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.