ADVERTISEMENT

ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌: ನಿಕ್ಷೇಪ್‌, ಅಲೋಕ್‌–ರಿಭವ್‌ಗೆ ಪ್ರಶಸ್ತಿ

ತಹಾ ಕಪಾಡಿಯಾ, ಖಾದ್ರಿ ಫಯಾಜ್‌ ಹುಸೇನ್‌ಗೆ ನಿರಾಸೆ

ವಿನಾಯಕ ಭಟ್ಟ‌
Published 1 ಮಾರ್ಚ್ 2019, 17:26 IST
Last Updated 1 ಮಾರ್ಚ್ 2019, 17:26 IST
ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌ ಟೂರ್ನಿಯ ಡಬಲ್ಸ್‌ ಪ್ರಶಸ್ತಿ ವಿಜೇತ ದಾವಣಗೆರೆಯ ರಿಭವ್‌ ರವಿಕಿರಣ್‌–ಅಲೋಕ್‌ ಆರಾಧ ಹಾಗೂ ಸಿಂಗಲ್ಸ್‌ನ ಪ್ರಶಸ್ತಿ ವಿಜೇತ ಬೆಂಗಳೂರಿನ ಬಿ.ಆರ್‌. ನಿಕ್ಷೇಪ್‌ ಟ್ರೋಫಿಯೊಂದಿಗೆ. –ಪ್ರಜಾವಾಣಿ ಚಿತ್ರ/ ಅನೂಪ್‌ ಆರ್‌. ತಿಪ್ಪೇಸ್ವಾಮಿ
ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌ ಟೂರ್ನಿಯ ಡಬಲ್ಸ್‌ ಪ್ರಶಸ್ತಿ ವಿಜೇತ ದಾವಣಗೆರೆಯ ರಿಭವ್‌ ರವಿಕಿರಣ್‌–ಅಲೋಕ್‌ ಆರಾಧ ಹಾಗೂ ಸಿಂಗಲ್ಸ್‌ನ ಪ್ರಶಸ್ತಿ ವಿಜೇತ ಬೆಂಗಳೂರಿನ ಬಿ.ಆರ್‌. ನಿಕ್ಷೇಪ್‌ ಟ್ರೋಫಿಯೊಂದಿಗೆ. –ಪ್ರಜಾವಾಣಿ ಚಿತ್ರ/ ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ಬೆಂಗಳೂರಿನ ಬಿ.ಆರ್‌. ನಿಕ್ಷೇಪ್‌ ರಾಷ್ಟ್ರೀಯ 50–ಕೆ ಪುರುಷರ ಸಿಂಗಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಎಂ.ಪಿ. ರವೀಂದ್ರ ಸ್ಮಾರಕ ಟ್ರೋಫಿ ಗೆದ್ದುಕೊಂಡರು. ಡಬಲ್ಸ್‌ನಲ್ಲಿ ದಾವಣಗೆರೆಯ ಅಲೋಕ್‌ ಆರಾಧ್ಯ ಹಾಗೂ ರಿಭವ್‌ ರವಿಕಿರಣ್‌ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು.

ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌, ಹೂವಿನಹಡಗಲಿಯ ರಂಗಭಾರತಿ ಮತ್ತು ಕರ್ನಾಟಕ ಟೆನಿಸ್‌ ಪ್ಲೇಯರ್ಸ್‌ ಪೇರೆಂಟ್ಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಟೂರ್ನಿಯ ಸಿಂಗಲ್ಸ್‌ನ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ನಿಕ್ಷೇಪ್‌ 6–0, 6–1ರಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರರಾದ ತೆಲಂಗಾಣದ ತಹಾ ಕಪಾಡಿಯಾ ಅವರನ್ನು ಸುಲಭವಾಗಿ ನೇರ ಸೆಟ್‌ಗಳಿಂದ ಮಣಿಸಿದರು.

ನಿಕ್ಷೇಪ್‌, ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಎದುರಾಳಿಗೆ ಯಾವುದೇ ರೀತಿಯ ಅವಕಾಶ ನೀಡಲಿಲ್ಲ. ಸತತವಾಗಿ ಮೂರು ಗೇಮ್‌ಗಳಲ್ಲಿ ಬ್ರೇಕ್‌ ಪಾಯಿಂಟ್‌ ಪಡೆದು, 6–0ಯಲ್ಲಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಸೆಟ್‌ನ ಆರಂಭದಲ್ಲೂ ನಿಕ್ಷೇಪ್‌ ತೋರಿದ ಸಮತೋಲಿತ ಆಟ ಎದುರಾಳಿಯಲ್ಲಿ ಅಳಕು ಮೂಡಿಸಿತು. ಅವರ ಆಕರ್ಷಕ ಏಸ್‌ ಹಾಗೂ ರಿಟರ್ನ್‌ಗಳನ್ನು ಎದುರಿಸುವಲ್ಲಿ ತಹಾ ಕಪಾಡಿಯಾ ವಿಫಲರಾದರು. ಚೆಂಡನ್ನು ಹೊರಹಾಕುವುದು, ರಿಟರ್ನ್‌ ಮಾಡು ವಾಗ ನೆಟ್‌ಗೆ ಹೊಡೆಯುತ್ತಿರುವುದು ಅವರು ಒತ್ತಡದಲ್ಲಿ ಸಿಲುಕಿರುವುದರ ಪ್ರತೀಕವಾಗಿತ್ತು. ಮೊದಲ ಎರಡು ಗೇಮ್‌ಗಳನ್ನು ಸುಲಭದಲ್ಲಿ ನಿಕ್ಷೇಪ್‌ ತಮ್ಮದಾಗಿಸಿಕೊಂಡರು. ಬಳಿಕ ಕಪಾಡಿಯಾ ಒಂದು ಗೇಮ್‌ ಬ್ರೇಕ್‌ ಮಾಡಿದರು. ಆದರೆ, ನಿಕ್ಷೇಪ್‌ ಎರಡು ಬ್ರೇಕ್‌ಗಳೊಂದಿಗೆ ನಾಲ್ಕು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು 6–1ರಲ್ಲಿ ಗೆಲುವಿನ ಮೆಟ್ಟಿಲು ಏರಿದರು.

ಬೆಂಗಳೂರಿನ ಸುರಾನಾ ಕಾಲೇಜು ವಿದ್ಯಾರ್ಥಿಯಾಗಿರುವ ನಿಕ್ಷೇಪ್ ₹ 6,500 ನಗದು ಹಾಗೂ ಟ್ರೋಫಿ ಯನ್ನು ಗಳಿಸಿದರು. ಈ ಟೂರ್ನಿಯಿಂದ ತಮ್ಮ ಖಾತೆಗೆ 15 ಪಾಯಿಂಟ್‌ಗಳನ್ನು ಸೇರಿಸಿಕೊಂಡರು.

ಡಬಲ್ಸ್‌ ಫೈನಲ್‌ನಲ್ಲಿ ಆತಿಥೇ ಯರಾದ ಅಲೋಕ್ ಆರಾಧ್ಯ–ರಿಭವ್‌ ರವಿಕಿರಣ್‌ 6–3, 6–0ರಲ್ಲಿ ತಹಾ ಕಪಾ ಡಿಯಾ (ತೆಲಂಗಾಣ)–ಖಾದ್ರಿ ಫಯಾಜ್‌ ಹುಸೇನ್‌ (ಮಹಾರಾಷ್ಟ್ರ) ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಒಂದು ಹಂತ ದಲ್ಲಿ 3–3ರಲ್ಲಿ ಸಮಬಲ ಏರ್ಪ ಟ್ಟಿತ್ತು. ಹೊಂದಾಣಿಕೆ ಆಟ ತೋರಿದ ಅಲೋಕ್‌–ರಿಭವ್‌ ಜೋಡಿ ಮುಂದಿನ ಸತತ ಮೂರು ಗೇಮ್‌ಗಳೊಂದಿಗೆ ಸೆಟ್‌ ಗೆದ್ದು ಮುನ್ನಡೆ ಸಾಧಿಸಿತು.

ಎರಡನೇ ಸೆಟ್‌ನ ಆರಂಭದಿಂದಲೇ ಆತಿಥೇಯರು ಆಕ್ರಮಣಕಾರಿ ಆಟವಾ ಡಿದರು. ಅಲೋಕ್‌ ಅವರ ಆಕರ್ಷಕ ಸರ್ವ್‌ ಹಾಗೂ ರಿಭವ್‌ ಅವರ ಡಿಫೆನ್ಸ್‌ನ ಹೊಂದಾಣಿಕೆ ಆಟ ಎದುರಾಳಿಗಳಲ್ಲಿ ಬೆವರು ತರಿಸಿತು. ಮೂರು ಬ್ರೇಕ್‌ಗಳೊಂದಿಗೆ ಸತತವಾಗಿ ಆರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡ ಅಲೋಕ್‌–ರಿಭವ್‌ ಜೋಡಿ ಪಂದ್ಯವನ್ನು ಗೆದ್ದುಕೊಂಡಿತು.

₹ 3,150 ನಗದು ಹಾಗೂ ಟ್ರೋಫಿಯ ಜೊತೆಗೆ ಟೂರ್ನಿಯಿಂದ 12 ಪಾಯಿಂಟ್‌ಗಳನ್ನು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.