ADVERTISEMENT

ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷೆ: ಸೋಮದೇವ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 13:44 IST
Last Updated 4 ಜೂನ್ 2022, 13:44 IST
ಸೋಮದೇವ್
ಸೋಮದೇವ್   

ಬೆಂಗಳೂರು: ‘ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಕ್ಯಾಸ್ಪರ್‌ ರೂಡ್‌ ಅವರು ರಫೆಲ್‌ ನಡಾಲ್‌ಗೆ ತಕ್ಕ ಪೈಪೋಟಿ ಒಡ್ಡಲಿದ್ದು, ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಬಹುದು’ ಎಂದು ಭಾರತದ ಹಿರಿಯ ಟೆನಿಸ್‌ ಆಟಗಾರ ಸೋಮದೇವ್‌ ದೇವವರ್ಮನ್ ಅಭಿಪ್ರಾಯಪಟ್ಟರು.

ಶನಿವಾರ ನಡೆದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರೂಡ್‌ ಅವರು ಫೈನಲ್‌ ಪ್ರವೇಶಿಸುವ ನೆಚ್ಚಿನ ಆಟಗಾರ ಎನಿಸಿದ್ದ ಮರಿನ್‌ ಸಿಲಿಚ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದಿದ್ದರು. ಇದು ಸಹಜವಾಗಿ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. ನಡಾಲ್‌ಗೆ ಸವಾಲೊಡ್ಡುವ ಎಲ್ಲ ಸಾಧ್ಯತೆಗಳಿವೆ’ ಎಂದರು.

‘ರೂಡ್‌ ಟೂರ್ನಿಯುದ್ದಕ್ಕೂ ಉತ್ತಮ ಆಟ ಆಡಿದ್ದಾರೆ. ನಡಾಲ್‌, ತಮ್ಮ ಎದುರಾಳಿಯನ್ನು ಹಗುರವಾಗಿ ಪರಿಗಣಿಸಿಲ್ಲ. ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡೇ ಕಣಕ್ಕಿಳಿಯಬೇಕಾಗಿದೆ. ವೇಗ ಮತ್ತು ನಿಖರವಾದ ಸರ್ವ್‌ಗಳು ರೂಡ್‌ ಅವರ ಶಕ್ತಿ. ಅದನ್ನು ಎದುರಿಸುವ ಸವಾಲು ಸ್ಪೇನ್‌ ಆಟಗಾರನ ಮುಂದಿದೆ’ ಎಂದು ತಿಳಿಸಿದರು.

ADVERTISEMENT

‘ನಡಾಲ್‌ ಅವರನ್ನು ಮಣಿಸುವುದು ಸುಲಭವಲ್ಲ ಎಂಬ ಅರಿವು ರೂಡ್‌ಗೆ ಇದೆ. ಆದರೆ ಆರಂಭದಿಂದ ಕೊನೆಯವರೆಗೂ ಪೂರ್ಣ ಸಾಮರ್ಥ್ಯದೊಂದಿಗೆ ಆಡಿದರೆ ಅಚ್ಚರಿಯ ಫಲಿತಾಂಶ ನೀಡಬಲ್ಲರು. ಇದೇ ಮೊದಲ ಬಾರಿ ಗ್ರ್ಯಾನ್‌ ಸ್ಲಾಂ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಯುವ ಆಟಗಾರ, ಒತ್ತಡವನ್ನು ಮೆಟ್ಟನಿಲ್ಲಬೇಕಿದೆ’ ಎಂದು ಹೇಳಿದರು.

‘ರೂಡ್‌ ಮತ್ತು ನಡಾಲ್‌ ಅವರ ಆಟದ ಶೈಲಿ ಭಿನ್ನವಾಗಿದ್ದು, ಫೈನಲ್‌ ಹೋರಾಟವನ್ನು ಟೆನಿಸ್‌ ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.