ADVERTISEMENT

ಫೆಡ್‌ ಕಪ್‌ ಮಹಿಳಾ ಟೆನಿಸ್‌ ಟೂರ್ನಿ: ಭಾರತಕ್ಕೆ ನಾಲ್ಕನೇ ಸ್ಥಾನ

ದಕ್ಷಿಣ ಕೊರಿಯಾಕ್ಕೆ ಜಯ

ಪಿಟಿಐ
Published 9 ಫೆಬ್ರುವರಿ 2019, 15:58 IST
Last Updated 9 ಫೆಬ್ರುವರಿ 2019, 15:58 IST
ಅಂಕಿತಾ ರೈನಾ
ಅಂಕಿತಾ ರೈನಾ   

ಅಸ್ತಾನ, ಕಜಕಸ್ತಾನ: ಭಾರತ ಮಹಿಳಾ ತಂಡದವರು ಫೆಡ್‌ ಕಪ್‌ ಏಷ್ಯಾ ಒಸೀನಿಯಾ ಗುಂಪು–1 ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತ 1–2ರಿಂದ ದಕ್ಷಿಣ ಕೊರಿಯಾ ಎದುರು ಪರಾಭವಗೊಂಡಿತು. ಸಿಂಗಲ್ಸ್‌ ವಿಭಾಗದ ಆಟಗಾರ್ತಿ ಕರ್ಮನ್‌ ಕೌರ್‌ ಥಾಂಡಿ, ಗಾಯದಿಂದಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಇದು ತಂಡಕ್ಕೆ ಮುಳುವಾಯಿತು. ಅವರ ಬದಲಿಗೆ ಮಹಕ್‌ ಜೈನ್‌ ಅಂಗಳಕ್ಕಿಳಿದಿದ್ದರು.

ಮೊದಲ ಸಿಂಗಲ್ಸ್‌ನಲ್ಲಿ ಆಡಿದ ಮಹಕ್‌ 2–6, 6–3, 1–6ರಲ್ಲಿ ನಾ ರಿ ಕಿಮ್‌ ಎದುರು ಸೋತರು.

ADVERTISEMENT

ಎರಡನೇ ಸಿಂಗಲ್ಸ್‌ನಲ್ಲಿ ಮೈದಾನಕ್ಕಿಳಿದ ಅಂಕಿತಾ ರೈನಾ ಮಿಂಚಿದರು. ಅವರು 6–3, 6–3 ನೇರ ಸೆಟ್‌ಗಳಿಂದ ಸುನಾಮ್‌ ಜಿಯೊಂಗ್‌ ಎದುರು ಗೆದ್ದು 1–1 ಸಮಬಲಕ್ಕೆ ಕಾರಣರಾದರು.

ಒಂದು ಗಂಟೆ 18 ನಿಮಿಷಗಳ ಕಾಲ ನಡೆದ ಹೋರಾಟದ ಎರಡು ಸೆಟ್‌ಗಳಲ್ಲೂ ಅಂಕಿತಾ ಮೋಡಿ ಮಾಡಿದರು. ಬಲಿಷ್ಠ ಕ್ರಾಸ್‌ ಕೋರ್ಟ್‌ ಮತ್ತು ಶರವೇಗದ ಸರ್ವ್‌ಗಳ ಮೂಲಕ ಜಿಯೊಂಗ್‌ ಅವರನ್ನು ಕಂಗೆಡಿಸಿದರು.

ಮಹತ್ವದ್ದೆನಿಸಿದ್ದ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಭಾರತಕ್ಕೆ ನಿರಾಸೆ ಕಾಡಿತು.

ಅಂಕಿತಾ ಮತ್ತು ಪ್ರಾರ್ಥನಾ ಥೊಂಬಾರೆ 4–6, 4–6 ನೇರ ಸೆಟ್‌ಗಳಿಂದ ಸು ಜಿಯೊಂಗ್‌ ಜಾಂಗ್‌ ಮತ್ತು ನಾ ರಿ ಕಿಮ್‌ ಎದುರು ಪರಾಭವಗೊಂಡರು.

‘ಮಹಕ್‌ ಮೊದಲ ಬಾರಿ ಫೆಡ್‌ ಕಪ್‌ನಲ್ಲಿ ಕಣಕ್ಕಿಳಿದಿದ್ದರು. ಪದಾರ್ಪಣೆ ಪಂದ್ಯದಲ್ಲೇ ಅವರು ದಿಟ್ಟ ಆಟ ಆಡಿದ್ದಾರೆ. ಮೊದಲ ಸಿಂಗಲ್ಸ್‌ನಲ್ಲಿ ಗೆಲ್ಲಲು ಅವರಿಗೆ ಉತ್ತಮ ಅವಕಾಶ ಇತ್ತು. ಆದರೆ ಮೂರನೇ ಸೆಟ್‌ನ ಆರಂಭದಿಂದಲೇ ಗೇಮ್‌ಗಳನ್ನು ಕೈಚೆಲ್ಲಿದ್ದು ಹಿನ್ನಡೆಯಾಗಿ ಪರಿಣಮಿಸಿತು’ ಎಂದು ಭಾರತ ತಂಡದ ನಾಯಕ ವಿಶಾಲ್‌ ಉಪ್ಪಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.