ADVERTISEMENT

ಗುರುತಿನ ಪತ್ರ ತೋರಿಸುವಂತೆ ಫೆಡರರ್‌ಗೆ ಕೇಳಿದ ಭದ್ರತಾ ಸಿಬ್ಬಂದಿ

ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ

ಏಜೆನ್ಸೀಸ್
Published 19 ಜನವರಿ 2019, 16:12 IST
Last Updated 19 ಜನವರಿ 2019, 16:12 IST
ಫೆಡರರ್‌ ಅವರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿರುವುದು –ಟ್ವಿಟರ್‌ ಚಿತ್ರ
ಫೆಡರರ್‌ ಅವರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿರುವುದು –ಟ್ವಿಟರ್‌ ಚಿತ್ರ   

ಮೆಲ್ಬರ್ನ್‌: ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ತಾರೆ ರೋಜರ್‌ ಫೆಡರರ್‌, ಆಸ್ಟ್ರೇಲಿಯಾ ಓಪನ್‌ನಲ್ಲಿ ಆರು ಬಾರಿ ಚಾಂಪಿಯನ್‌ ಆಗಿದ್ದಾರೆ. ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ. ಅವರ ಪರಿಚಯ ಯಾರಿಗಿರೊಲ್ಲ ಹೇಳಿ ಅಂತ ನೀವು ಕೇಳಬಹುದು.

ಆದರೆ ಶನಿವಾರ, ಭದ್ರತಾ ಸಿಬ್ಬಂದಿಯೊಬ್ಬರು ಗುರುತಿನ ಪತ್ರ ತೋರಿಸಲಿಲ್ಲ ಎಂಬ ಕಾರಣದಿಂದ ಫೆಡರರ್‌ ಅವರನ್ನು ಅಂಗಳ ಪ್ರವೇಶಿಸಿದಂತೆ ತಡೆದು ನಿಲ್ಲಿಸಿದ ಪ್ರಸಂಗ ನಡೆದಿದೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿರುವ ಫೆಡರರ್‌, ಶನಿವಾರ ಅಭ್ಯಾಸ ನಡೆಸಲು ಅಂಗಳಕ್ಕೆ ಬಂದಿದ್ದರು. ಈ ವೇಳೆ ಅವರು ಪಾಸ್‌ ತರುವುದನ್ನು ಮರೆತಿದ್ದರು. ಅಭ್ಯಾಸಕ್ಕೆ ನಿಗದಿಯಾಗಿದ್ದ ‘ಕೋರ್ಟ್‌’ಗೆ ಹೋಗಲು ಮುಂದಾದ ಫೆಡರರ್‌ ಅವರನ್ನು ತಡೆದ ಭದ್ರತಾ ಸಿಬ್ಬಂದಿ ಪಾಸ್‌ ತೋರಿಸುವಂತೆ ಕೇಳಿದ್ದಾರೆ. ಪಾಸ್‌ ಇಲ್ಲ ಎಂದಾಗ ಪ್ರವೇಶ ನಿರಾಕರಿಸಿದ್ದಾರೆ. ಹೀಗಾಗಿ ರೋಜರ್‌, ತಮ್ಮ ಕೋಚಿಂಗ್‌ ತಂಡದ ಸಿಬ್ಬಂದಿಯೊಬ್ಬರು ಬರುವವರೆಗೂ ಅಲ್ಲೇ ಕಾದಿದ್ದಾರೆ. ಅವರು ಬಂದು ಗುರುತಿನ ಪತ್ರ ತೋರಿಸಿದ ಬಳಿಕ ಸಿಬ್ಬಂದಿ, ಫೆಡರರ್‌ ಅವರನ್ನು ಒಳಗೆ ಬಿಟ್ಟಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರೋಧದ ಚರ್ಚೆಗಳು ಶುರುವಾಗಿವೆ. ಹಲವರು ಭದ್ರತಾ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಮೆಚ್ಚಿದ್ದಾರೆ. ಫೆಡರರ್‌ ಅಭಿಮಾನಿಗಳು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

29 ಸೆಕೆಂಡುಗಳ ಈ ವಿಡಿಯೊವನ್ನು ಕೆಲವೇ ಗಂಟೆಗಳಲ್ಲಿ ಐದು ಲಕ್ಷ ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.