ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಸಿನ್ನರ್‌, ಜೊಕೊವಿಚ್

ಏಜೆನ್ಸೀಸ್
Published 27 ಮೇ 2025, 16:31 IST
Last Updated 27 ಮೇ 2025, 16:31 IST
<div class="paragraphs"><p>ಗೆಲುವಿನ ಸಂಭ್ರಮದಲ್ಲಿ ಇಟಲಿಯ ಯಾನಿಕ್‌ ಸಿನ್ನರ್‌&nbsp;&nbsp;</p></div>

ಗೆಲುವಿನ ಸಂಭ್ರಮದಲ್ಲಿ ಇಟಲಿಯ ಯಾನಿಕ್‌ ಸಿನ್ನರ್‌  

   

ಪ್ಯಾರಿಸ್‌ : ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫ್ರಾನ್ಸ್‌ನ ಆರ್ಥರ್ ರಿಂಡರ್‌ಕ್ನೆಚ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದರು. ಈ ಮೂಲಕ ಇಟಲಿಯ ಆಟಗಾರ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಗೆಲುವಿನ ಓಟವನ್ನು 15 ಪಂದ್ಯಗಳಿಗೆ ವಿಸ್ತರಿಸಿಕೊಂಡರು.

ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟ ಗೆದ್ದ ಬಳಿಕ ಉದ್ದೀಪನ ಮದ್ದು ಸೇವನೆಗಾಗಿ 23 ವರ್ಷದ ಸಿನ್ನರ್‌ ಮೂರು ತಿಂಗಳ ನಿಷೇಧಕ್ಕೆ ಒಳಗಾಗಿದ್ದರು. ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಸಿನ್ನರ್‌ಗೆ ಎರಡನೇ ಟೂರ್ನಿ ಇದಾಗಿದೆ. ಕಳೆದ ವರ್ಷ ಅಮೆರಿಕ ಓಪನ್‌ ಟೂರ್ನಿಗೆ ಮುನ್ನ ಡೋಪಿಂಗ್‌ ಪ್ರಕರಣ ಬೆಳಕಿಗೆ ಬಂದಿತ್ತು. ಅದಾಗ್ಯೂ ಅಮೆರಿಕ ಓಪನ್‌ ಪ್ರಶಸ್ತಿಯನ್ನು ಅವರು ಮುಡಿಗೇರಿಸಿಕೊಂಡಿದ್ದರು.

ADVERTISEMENT

ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಿಗೆ ಒಡೆಯನಾಗಿರುವ ಸಿನ್ನರ್‌ ಕಳೆದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದು ಈವರೆಗಿನ ಉತ್ತಮ ಸಾಧನೆಯಾಗಿದೆ. ಕಳೆದ ವಾರ ಇಟಾಲಿಯನ್‌ ಓಪನ್‌ ಫೈನಲ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಸಿನ್ನರ್‌ ಇಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸೇನ್‌ನ ತಾರೆ ಕಾರ್ಲೋಸ್‌ ಅಲ್ಕರಾಜ್‌ ಇಟಾಲಿಯನ್‌ ಓಪನ್‌ ಕಿರೀಟ ಗೆದ್ದಿದ್ದರು.

ಫಿಲಿಪ್ ಶಾಟಿಯೆ ಕೋರ್ಟ್‌ನಲ್ಲಿ ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಸಿನ್ನರ್‌ 6-4, 6-3, 7-5ರಿಂದ 75ನೇ ಕ್ರಮಾಂಕದ ಆಟಗಾರನನ್ನು ಮಣಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಎರಡನೇ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಮತ್ತೊಬ್ಬ ಆಟಗಾರ ರಿಚರ್ಡ್ ಗ್ಯಾಸ್ಕ್ವೆಟ್ ಅವರನ್ನು ಎದುರಿಸಲಿದ್ದಾರೆ. 38 ವರ್ಷ ವಯಸ್ಸಿನ  ರಿಚರ್ಡ್ ಅವರಿಗೆ ವೃತ್ತಿಜೀವನದ ಕೊನೆಯ ಟೂರ್ನಿ ಇದಾಗಿದೆ.

ಜೊಕೊವಿಚ್‌ ಮುನ್ನಡೆ: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಹುಡುಕಾಟದಲ್ಲಿರುವ ಸರ್ಬಿಯಾದ ತಾರೆ ನೊವಾಕ್‌ ಜೊಕೊವಿಚ್‌ ಎರಡನೇ ಸುತ್ತು ಪ್ರವೇಶಿಸಿದರು. ಆರನೇ ಶ್ರೇಯಾಂಕದ ಜೊಕೊವಿಚ್‌ 6-3, 6-3, 6-3ರ ನೇರ ಸೆಟ್‌ಗಳಿಂದ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಅವರನ್ನು ಸೋಲಿಸಿದರು. 

ಕಳೆದ ವಾರಾಂತ್ಯದಲ್ಲಿ ಜಿನೀವಾದಲ್ಲಿ ದಾಖಲೆಯ 100ನೇ ಎಟಿಪಿ ಪ್ರಶಸ್ತಿಗೆ ಮುತ್ತಿಕ್ಕಿರುವ 38 ವರ್ಷ ವಯಸ್ಸಿನ ಜೊಕೊವಿಕ್ ಇಲ್ಲಿ ನಾಲ್ಕನೇ ಕಿರೀಟದ ನಿರೀಕ್ಷೆಯಲ್ಲಿದ್ದಾರೆ. 98ನೇ ‍ರ‍್ಯಾಂಕ್‌ನ ಆಟಗಾರನನ್ನು ಹೆಚ್ಚು ಪ್ರಯಾಸವಿಲ್ಲದೆ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸೋಲಿಸಿದ ಅವರು 64ರ ಸುತ್ತಿಗೆ ಮುನ್ನಡೆದರು.

ಹಾಲಿ ರನ್ನರ್‌ ಅಪ್‌ ಅಲೆಕ್ಸಾಂಡರ್‌ ಜ್ವರೇವ್‌ ಎರಡನೇ ಸುತ್ತು ಪ್ರವೇಶಿಸಿದರು. ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಪ್ರಯತ್ನದಲ್ಲಿರುವ ಜರ್ಮನಿಯ ಆಟಗಾರ 6-3, 6-3, 6-4ರಿಂದ ಅಮೆರಿಕದ ಲರ್ನರ್ ಟಿಯೆನ್ ಅವರನ್ನು ಮಣಿಸಿ ಅಭಿಯಾನ ಆರಂಭಿಸಿದರು. ಕಳೆದ ವರ್ಷ ಫೈನಲ್‌ನಲ್ಲಿ ಅಲ್ಕರಾಜ್‌ ವಿರುದ್ಧ ಐದು ಸೆಟ್‌ಗಳ ಹೋರಾಟದಲ್ಲಿ ಜ್ವರೇವ್‌ ಸೋಲು ಕಂಡಿದ್ದರು.

9ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ (ಆಸ್ಟ್ರೇಲಿಯಾ) 6-3, 6-4, 7-6 (8/6)ರಿಂದ ಸರ್ಬಿಯಾದ ಲಾಸ್ಲೊ ಡಿಜೆರೆ ವಿರುದ್ಧ ಜಯ ಸಾಧಿಸಿದರು.

ಆದರೆ, 11ನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೇಡೆವ್‌ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಬ್ರಿಟನ್‌ನ ಕ್ಯಾಮೆರಾನ್ ನಾರ್ರಿ 7-5, 6-3, 4-6, 1-6, 7-5ರ ಐದು ಸೆಟ್‌ಗಳ ಹೋರಾಟದಲ್ಲಿ ರಷ್ಯಾದ ಆಟಗಾರನಿಗೆ ಆಘಾತ ನೀಡಿದರು.

ಗಾಫ್‌ ಶುಭಾರಂಭ

2022ರ ರನ್ನರ್‌ ಅಪ್‌, ಅಮೆರಿಕದ ಕೊಕೊ ಗಾಫ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಎರಡನೇ ಶ್ರೇಯಾಂಕದ ಗಾಫ್‌ 6-2, 6-2ರಿಂದ ಆಸ್ಟ್ರೇಲಿಯಾದ ಒಲಿವಿಯಾ ಗಾಡೆಕ್ಕಿ ಅವರನ್ನು ಸೋಲಿಸಿದರು. 21 ವರ್ಷ ವಯಸ್ಸಿನ ಗಾಫ್‌ ಎರಡನೇ ಸುತ್ತಿನಲ್ಲಿ ಝೆಕ್‌ ರಿಪಬ್ಲಿಕ್‌ನ ತೆರೆಸಾ ವ್ಯಾಲೆಂಟೋವಾ ಅವರನ್ನು ಎದುರಿಸಲಿದ್ದಾರೆ.

ಆರನೇ ಶ್ರೇಯಾಂಕದ ಮಿರಾ ಆ್ಯಂಡ್ರೀವಾ 6-4, 6-3ರಿಂದ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು. ರಷ್ಯಾದ ಆಟಗಾರ್ತಿಗೆ ಅಮೆರಿಕದ ಆಶ್ಲಿನ್ ಕ್ರೂಗರ್ ಮುಂದಿನ ಎದುರಾಳಿಯಾಗಿದ್ದಾರೆ.

ಪೆಗುಲಾಗೆ ಜಯ: ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ (ಅಮೆರಿಕ) ಅವರೂ ಮೊದಲ ಸುತ್ತಿನಲ್ಲಿ 6–2, 6–4 ನೇರ ಸೆಟ್‌ಗಳಿಂದ ರುಮೇನಿಯಾದ ಅನ್ಸಾ ತಡೋನಿ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.