ADVERTISEMENT

ಸಿಸಿಪಸ್‌ಗೆ ಎಟಿಪಿ ಫೈನಲ್ಸ್ ಪ್ರಶಸ್ತಿ

ಮೂರು ಸೆಟ್‌ಗಳ ಫೈನಲ್‌ನಲ್ಲಿ ಮಣಿದ ಥೀಮ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:56 IST
Last Updated 18 ನವೆಂಬರ್ 2019, 19:56 IST
ಪ್ರಶಸ್ತಿಯೊಂದಿಗೆ ಸ್ಟೆಫಾನೊಸ್‌ ಸಿಸಿಪಸ್‌ ಸಂಭ್ರಮ –ರಾಯಿಟರ್ಸ್ ಚಿತ್ರ
ಪ್ರಶಸ್ತಿಯೊಂದಿಗೆ ಸ್ಟೆಫಾನೊಸ್‌ ಸಿಸಿಪಸ್‌ ಸಂಭ್ರಮ –ರಾಯಿಟರ್ಸ್ ಚಿತ್ರ   

ಲಂಡನ್‌:ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಸೋಲಿಸಿ ಭಾನುವಾರ ಎಟಿಪಿ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಹೊಸ ಪೀಳಿಗೆಯ ಆಟಗಾರರಲ್ಲಿ ಸೂಪರ್‌ಸ್ಟಾರ್‌ ಪ‍ಟ್ಟಕ್ಕೇರುವ ಸಾಮರ್ಥ್ಯವನ್ನೂ ಪ್ರಚುರಪಡಿಸಿದರು.

21 ವರ್ಷದ ಸಿಸಿಪಸ್‌ 6–7 (6/8), 6–2, 7–6 (7‌/4) ರಿಂದ ಗೆಲ್ಲುವ ಮೂಲಕ, ಆಸ್ಟ್ರೇಲಿಯಾದ ಲೀಟನ್‌ ಹೆವಿಟ್‌ ನಂತರ (2001) ನಂತರ ಈ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಸಿಸಿಪಸ್‌, ಮೊದಲ ಪ್ರಯತ್ನದಲ್ಲೇ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ ಕೂಡ.

ಆರನೇ ಶ್ರೇಯಾಂಕ ಪಡೆದಿದ್ದ ಗ್ರೀಕ್‌ ಟೆನಿಸಿಗನಿಗೆ ಇದು ಈ ವರ್ಷದ ಮೂರನೇ ಪ್ರಶಸ್ತಿಯಾಗಿದೆ.

ADVERTISEMENT

ಫೈನಲ್‌ ಹಾದಿಯಲ್ಲಿ ಮೊದಲು ಅವರು ಆರು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದ್ದರು.‌ ‘ನನಗೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ನನ್ನ ಕಸನು ನನಸಾಗಿದೆ’ ಎಂದು ಸಿಸಿಪಸ್‌ ಫೈನಲ್‌ ನಂತರ ಪ್ರತಿಕ್ರಿಯಿಸಿದರು.‌

ಈ ವರ್ಷ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಸೇರಿ ಐದು ಪ್ರಶಸ್ತಿ ಗೆದ್ದಿರುವ ಥೀಮ್‌, ಸತತ ಎರಡನೇ ಬಾರಿ ಫ್ರೆಂಚ್‌ ಓಪನ್‌ ಫೈನಲ್‌ ಕೂಡ ತಲುಪಿದ್ದರು. ಈ ಸೋಲು ಅವರಿಗೆ ಸಹಜವಾಗಿ ನಿರಾಸೆ ಮೂಡಿಸಿತು.

ಇಬ್ಬರೂ ಈ ಟೂರ್ನಿಯಲ್ಲಿ ಸರ್ವ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಫೈನಲ್‌ ತಲುಪುವ ಮೊದಲು ಸಿಸಿಪಸ್‌ 47 ಸರ್ವಿಸ್‌ ಗೇಮ್‌ಗಳಲ್ಲಿ 44 ಅನ್ನು ಗೆದ್ದುಕೊಂಡಿದ್ದರು.

ಕಳೆದ 15 ವರ್ಷಗಳಿಂದ ಟೆನಿಸ್‌ ರಂಗವನ್ನು ಆಳುತ್ತಿರುವ ದಿಗ್ಗಜರಾದ ಫೆಡರರ್‌, ನೊವಾಕ್‌ ಜೊಕೊವಿಚ್‌ ಮತ್ತು ರಫೆಲ್‌ ನಡಾಲ್‌ ಅವರಿಗೆ ಸವಾಲೊಡ್ಡುವ ಹೊಸ ಪೀಳಿಗೆಯವರಲ್ಲಿ ಸಿಸಿಪಸ್‌ ಕೂಡ ಒಬ್ಬರು. ವಿಶ್ವ ನಾಲ್ಕನೇ ಕ್ರಮಾಂಕದ ಆಟಗಾರ ಡೇನಿಯಲ್‌ ಮೆಡ್ವೆಡೇವ್‌, ಅಲೆಕ್ಜಾಂಡರ್‌ ಜ್ವೆರೆವ್‌ ಕೂಡ ಗಮನ ಸೆಳೆಯುತ್ತಿದ್ದಾರೆ.

ಆದರೆ ಈ ವರ್ಷ ಮೂವರು ದಿಗ್ಗಜರನ್ನು ಬೇರೆ ಬೇರೆ ಸಂದರ್ಭದಲ್ಲಿ ಸೋಲಿಸಿರುವ ಸಿಸಿಪಸ್‌, ಹೊಸ ವರ್ಷವನ್ನು ಈಗ ಭರವಸೆ, ವಿಶ್ವಾಸದೊಡನೆ ಎದುರುನೋಡುವ ಸೂಚನೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.