ನವದೆಹಲಿ: ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ಅವರನ್ನು ಸಂಸ್ಥೆಯ ಕಾರ್ಯಕಾರಿ ಸಮಿತಿಯು ಆ ಸ್ಥಾನದಿಂದ ತೆಗೆದುಹಾಕಿದೆ. ಅವರ ವಯಸ್ಸು 70 ವರ್ಷ ದಾಟಿದ್ದು, ಈಗಾಗಲೇ ನಾಲ್ಕು ವರ್ಷಗಳ ಅವಧಿ ಪೂರೈಸಿದ ಕಾರಣ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ
ಎಂದು ಹೇಳಿದೆ.
ಕಾರ್ಯಕಾರಿ ಸಮಿತಿಯ 25 ಸದಸ್ಯರ ಪೈಕಿ 17 ಮಂದಿ ಹಾಜರಾಗಿದ್ದು, ಬಹುಮತದಿಂದ ಈ ನಿರ್ಣಯ ಅಂಗೀಕರಿಸಿದೆ. ಅವರ ಸ್ಥಾನಕ್ಕೆ ಪ್ರಭಾರಿಯಾಗಿ ಜಂಟಿ ಕಾರ್ಯದರ್ಶಿ ಸುಂದರ್ ಅಯ್ಯರ್ ಅವರನ್ನು ನೇಮಿಸಿದೆ.
2024ರ ಸೆಪ್ಟೆಂಬರ್‌ನಲ್ಲಿ ಎಐಟಿಎಗೆ ನಡೆದ ಚುನಾವಣೆಗಳ ಸಿಂಧುತ್ವ ಪ್ರಶ್ನಿಸಿ ಸೋಮದೇವ್ ದೇವ್‌ವರ್ಮನ್ ಮತ್ತು ಪುರವ್ ರಾಜಾ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವ ಅಧಿಕಾರವನ್ನು ಸಮಿತಿಯು ಅಯ್ಯರ್ ಅವರಿಗೆ ವಹಿಸಿದೆ.
ಕೆಲವು ಅಭ್ಯರ್ಥಿಗಳ ಅರ್ಹತೆ ಪ್ರಶ್ನಿಸಿ ಈ ಇಬ್ಬರು ಆಟಗಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
72 ವರ್ಷ ವಯಸ್ಸಿನ ಧುಪರ್ 2020ರಲ್ಲಿ ನಾಲ್ಕು ವರ್ಷಗಳ ಅವಧಿಗೆ ಮಹಾ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಆಗಿದ್ದರು. 2024ರ ಚುನಾವಣೆಯಲ್ಲಿ ಅವರು ಯಾವುದೇ ಪದಾಧಿಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ ಕೋರ್ಟ್ ‘ಚುನಾವಣೆ ನಡೆಸಬಹುದು. ಆದರೆ ಫಲಿತಾಂಶ ಪ್ರಕಟಿಸಿವಂತಿಲ್ಲ’
ಎಂದು ಹೇಳಿದ್ದರಿಂದ ಅವರು ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.