ADVERTISEMENT

ಟೆನಿಸ್‌ ಟೂರ್ನಿ | ಜಿ ಗುಂಪಿಗೆ ಬೆಂಗಳೂರಿನ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 4:26 IST
Last Updated 20 ಜೂನ್ 2025, 4:26 IST
   

ಬೆಂಗಳೂರು : ಪ್ರತಿಷ್ಠಿತ ಬಿಲ್ಲೀ ಜೀನ್‌ ಕಿಂಗ್‌ ಕಪ್‌ ಪ್ಲೇ ಆಫ್‌ನ ‘ಜಿ’ ಗುಂಪಿನ ಪಂದ್ಯಗಳ ಆತಿಥ್ಯವನ್ನು ಬೆಂಗಳೂರು ವಹಿಸಲಿದೆ. ಇದೇ ನವೆಂಬರ್‌ 14ರಿಂದ ಈ ಪಂದ್ಯಗಳು ನಡೆಯಲಿದ್ದು, ಭಾರತ ತಂಡವು, ಸ್ಲೊವೇನಿಯಾ ಮತ್ತು ನೆದರ್ಲೆಂಡ್ಸ್‌ ತಂಡಗಳ ಜೊತೆ ‘ಜಿ’ ಗುಂಪಿನಲ್ಲಿದೆ.

ಈ ವಿಭಿನ್ನ ಮಾದರಿಯ ಟೆನಿಸ್‌ ಟೂರ್ನಿಯಲ್ಲಿ 21 ತಂಡಗಳು ಭಾಗಹಿಸುತ್ತಿದ್ದು ಏಳು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಏಳು ರಾಷ್ಟ್ರಗಳು ಒಂದೊಂದು ಗುಂಪಿನ ಪಂದ್ಯಗಳ ಆತಿಥ್ಯ ವಹಿಸುತ್ತಿವೆ. ಲಂಡನ್‌ನಲ್ಲಿ ಗುರುವಾರ ‘ಡ್ರಾ’ ನಡೆದಿದ್ದು, ಪಂದ್ಯಗಳು ನಡೆಯುವ ಏಳು ತಾಣಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

ಮೂರು ದಿನಗಳ ಪ್ಲೇ ಆಫ್‌ ಪಂದ್ಯಗಳು ನವೆಂಬರ್‌ 16ರಂದು ಕೊನೆಗೊಳ್ಳಲಿವೆ.

ADVERTISEMENT

ಭಾರತ ಪ್ಲೇ ಆಫ್‌ಗೆ ನೇರ ಅರ್ಹತೆ ಪಡೆದಿದೆ. ಪುಣೆಯಲ್ಲಿ ನಡೆದ ಏಷ್ಯಾ–ಒಷಾನಿಯಾ ಒಂದನೇ ಗುಂಪಿನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ ಭಾರತ ಅವಕಾಶ ಪಡೆದಿದೆ. ಭಾರತದ ಜೊತೆಗೆ ನ್ಯೂಜಿಲೆಂಡ್ ಸಹ ಅರ್ಹತೆ ಗಳಿಸಿದೆ. ‌ಆರು ತಂಡಗಳ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಲಾ ನಾಲ್ಕು ಪಂದ್ಯಗಳನ್ನು ಜಯಿಸಿದ್ದವು.

ಈ ಪ್ರತಿಷ್ಠಿತ ಟೆನಿಸ್‌ ಕಪ್‌ನ ಇತಿಹಾಸದಲ್ಲಿ ಭಾರತ ಎರಡನೇ ಬಾರಿ ಪಾಲ್ಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.