ADVERTISEMENT

ಪ್ರೀ ಕ್ವಾರ್ಟರ್‌ಗೆ ಜೊಕೊವಿಚ್‌, ಥೀಮ್‌

ಶಾಂಘೈ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ

ಏಜೆನ್ಸೀಸ್
Published 9 ಅಕ್ಟೋಬರ್ 2019, 18:21 IST
Last Updated 9 ಅಕ್ಟೋಬರ್ 2019, 18:21 IST
ಚೆಂಡು ಹಿಂದಿರುಗಿಸುತ್ತಿರುವ ನೊವಾಕ್‌ ಜೊಕೊವಿಚ್‌– ಎಎಫ್‌ಪಿ ಚಿತ್ರ
ಚೆಂಡು ಹಿಂದಿರುಗಿಸುತ್ತಿರುವ ನೊವಾಕ್‌ ಜೊಕೊವಿಚ್‌– ಎಎಫ್‌ಪಿ ಚಿತ್ರ   

ಶಾಂಘೈ: ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಶಾಂಘೈ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅವರು ಕೆನಡಾದ ಯುವ ಆಟಗಾರ ಡೆನಿಸ್‌ ಶಪವಲೊವ್‌ ಎದುರು 6–3, 6–3ರಿಂದ ಜಯಿಸಿದರು.

ಇತ್ತೀಚೆಗೆ ಜಪಾನ್‌ ಓಪನ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸರ್ಬಿಯದ ಜೊಕೊವಿಚ್‌, 16ರ ಘಟ್ಟದ ಪಂದ್ಯದಲ್ಲಿ ಅಮೆರಿಕದ ಜಾನ್‌ ಇಸ್ನೆರ್‌ ಅವರನ್ನು ಎದುರಿಸುವರು.

ಶಪವಲೊವ್ ಅವರನ್ನು ಜೊಕೊವಿಚ್‌ ಕೇವಲ 70 ನಿಮಿಷಗಳಲ್ಲಿ ಮಣಿಸಿದರು.

ADVERTISEMENT

ಅಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರು ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬಸ್ಟಾ ಎದುರು 7–6, 6–3ರಿಂದ ಗೆದ್ದು ಪ್ರೀಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ರಾಕೆಟ್‌ ಕುಕ್ಕಿದ ಜ್ವೆರೆವ್‌: ಜರ್ಮನಿಯ ಯುವ ಟೆನಿಸ್‌ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಕೂಡ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದರು. ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರು 7–6, 7–6 ರಿಂದ ಗೆದ್ದರು. ಈ ಹಣಾಹಣಿ ಹಲವು ಘಟನೆಗಳಿಗೆ ಸಾಕ್ಷಿಯಾಯಿತು.

ಪಾಯಿಂಟ್‌ ಗಳಿಸುವ ಯತ್ನದಲ್ಲಿ ಜ್ವೆರೆವ್‌ ಅವರು ಹೊಡೆದ ಚೆಂಡು ಟಿವಿ ಕ್ಯಾಮರಾಮನ್‌ ಒಬ್ಬರ ದವಡೆಗೆ ಬಡಿಯಿತು. ಜರ್ಮನಿಯ ಆಟಗಾರ ಕ್ಷಮೆ ಕೇಳಿದರು. ಮೊದಲ ಸೆಟ್‌ ಟೈಬ್ರೇಕ್‌ ವೇಳೆ ತಾಳ್ಮೆ ಕಳೆದುಕೊಂಡ ಜ್ವೆರೆವ್‌ ರಾಕೆಟ್‌ ನೆಲಕ್ಕೆ ಕುಕ್ಕಿದರು.

ಎರಡನೇ ಸೆಟ್‌ ಸಾಗುತ್ತಿದ್ದ ಸಂದರ್ಭದಲ್ಲಿ ಚೆಂಡು ಹಿಂದಿರುಗಿಸುವ ಯತ್ನದಲ್ಲಿ ಜ್ವೆರೆವ್‌ ಹಿಡಿತ ಕಳೆದುಕೊಂಡರು. ರಾಕೆಟ್‌ ಗ್ಯಾಲರಿಯಲ್ಲಿ ಕುಳಿತ್ತಿದ್ದ ಪ್ರೇಕ್ಷಕರತ್ತ ಚಿಮ್ಮಿತು. 1 ಗಂಟೆ 48 ನಿಮಿಷಗಳವರೆಗೆ ನಡೆದ ಹಣಾಹಣಿಯಲ್ಲಿ ಅಂತಿಮವಾಗಿ ಅವರು ಜಯದ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.