ನವದೆಹಲಿ: ಅಲ್ಟಿಮೇಟ್ ಟೇಬಲ್‌ಟೆನಿಸ್ ಟೂರ್ನಿಯ ಆರನೇ ಆವೃತ್ತಿಯು ಅಹಮದಾಬಾದಿನಲ್ಲಿ ಇದೇ ತಿಂಗಳ 31ರಂದು ಆರಂಭವಾಗಲಿದೆ. ಅದು ಎರಡು ಪಂದ್ಯದೊಡನೆ (ಡಬಲ್ ಹೆಡರ್) ಎಂಟು ಫ್ರಾಂಚೈಸಿ ತಂಡಗಳು ಭಾಗವಹಿಸುವ ಈ ಲೀಗ್ ಆರಂಭವಾಗಲಿದೆ.
ಅಂದು ಹಾಲಿ ಚಾಂಪಿಯನ್ ಡೆಂಪೊ ಗೋವಾ ಚಾಲೆಂಜರ್ಸ್ ತಂಡವು, ಅಹಮದಾಬಾದ್ ಎಸ್‌ಸಿ ಪೈಪರ್ಸ್ ತಂಡವನ್ನು ಎದುರಿಸಲಿದೆ. ಅದೇ ದಿನ, ಎರಡನೇ ಆವೃತ್ತಿಯ ವಿಜೇತ ದಬಾಂಗ್ ಡೆಲ್ಲಿ ಟಿಟಿಸಿ ತಂಡವು, ಶ್ರೀಜಾ ಅಕುಲಾ ನೇತೃತ್ವದ ಜೈಪುರ ಪೇಟ್ರಿಯಟ್ಸ್ ತಂಡದ ವಿರುದ್ಧ ಆಡಲಿದೆ.
ಒಟ್ಟು 23 ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ಜೂನ್ 15ರಂದು ನಿಗದಿಯಾಗಿದೆ. ಸೆಮಿಫೈನಲ್ ಪಂದ್ಯಗಳು ಜೂನ್ 13 ಮತ್ತು 14ರಂದು ನಡೆಯಲಿವೆ.
ವಿಶ್ವದ 14ನೇ ನಂಬರ್ ಆಟಗಾರ್ತಿ ಬೆರ್ನಾಡೆಟೆ ಸೋಕ್ಸ್ ಮುಂಬೈ ತಂಡದ ನಾಯಕಿಯಾಗಿದ್ದು, ಉದಯೋನ್ಮುಖ ತಾರೆ ಯಶಸ್ವಿನಿ ಘೋರ್ಪಡೆ ಆ ತಂಡದಲ್ಲಿದ್ದಾರೆ. ಯಶಸ್ವಿನಿ ಕರ್ನಾಟಕದವರು.
ಪ್ರತಿ ತಂಡವು ಗುಂಪು ಹಂತದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಪ್ರತಿ ಪಂದ್ಯವು ಎರಡು ಪುರುಷರ ಸಿಂಗಲ್ಸ್, ಎರಡು ಮಹಿಳಾ ಸಿಂಗಲ್ಸ್ ಮತ್ತು ಒಂದು ಮಿಶ್ರ ಡಬಲ್ಸ್ ಪಂದ್ಯಗಳನ್ನು ಹೊಂದಿದೆ. ಲೀಗ್ ಹಂತದ ನಂತರ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಮುನ್ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.