ADVERTISEMENT

ಟೆನಿಸ್: ಅಗ್ರ ಶ್ರೇಯಾಂಕಿತೆಗೆ ಸೋಲುಣಿಸಿದ ವನ್ಯಾ

ಕೆಎಸ್‌ಎಲ್‌ಟಿಎ–ಎಐಟಿಎ ಟೆನಿಸ್ ಟೂರ್ನಿ: ಶ್ರೀನಿಕೇತ್, ಕೃಷ್ ಅಜಯ್, ತನ್ವಿ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 14:01 IST
Last Updated 1 ಏಪ್ರಿಲ್ 2021, 14:01 IST
ವನ್ಯಾ ಶ್ರೀವಾಸ್ತವ್
ವನ್ಯಾ ಶ್ರೀವಾಸ್ತವ್   

ಬೆಂಗಳೂರು: ಪ್ರಬಲ ಪೈಪೋಟಿಯಲ್ಲಿ ಅಗ್ರ ಶ್ರೇಯಾಂಕಿತೆ ಗಗನಾ ಮೋಹನ್ ಕುಮಾರ್ ಅವರನ್ನು ಮಣಿಸಿದ ವನ್ಯಾ ಶ್ರೀವಾಸ್ತವ್ ಕೆಎಸ್‌ಎಲ್‌ಟಿಎ–ಎಐಟಿಎ ಆಯೋಜಿಸಿರುವ 16 ವರ್ಷದೊಳಗಿನವರ ತತ್ವಂ ಜೂನಿಯರ್ ಟೆನಿಸ್‌ ಟೂರ್‌ನ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.

ಮೊದಲ ಎರಡು ಸೆಟ್‌ಗಳ ಪೈಕಿ ಉಭಯ ಆಟಗಾರ್ತಿಯರುತಲಾ ಒಂದೊಂದನ್ನು ಗೆದ್ದುಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ವನ್ಯಾ 3–5ರ ಹಿನ್ನಡೆಯಲ್ಲಿದ್ದಾಗ ಎದುರಾಳಿ ಸುಲಭ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸುತ್ತಾರೆ ಎಂದೆನಿಸಿತ್ತು. ಆದರೆ ಕೆಚ್ಚೆದೆಯಿಂದ ಹೋರಾಡಿದ ವನ್ಯಾ ಸತತ ನಾಲ್ಕು ಗೇಮ್‌ಗಳನ್ನು ಗೆದ್ದು ಅಂತಿಮ ಫೈನಲ್‌ಗೆ ಲಗ್ಗೆ ಇರಿಸಿದರು.

ಫ್ರ್ಯಾಂಕ್ ಅಂಥೋಣಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ, 14 ವರ್ಷದ ವನ್ಯಾ ಮೊದಲ ಸೆಟ್‌ನಲ್ಲಿ 6–2ರ ಜಯ ಗಳಿಸಿದ್ದರು. ಎರಡನೇ ಸೆಟ್‌ 6–1ರಲ್ಲಿ ಗಗನಾ ಗೆದ್ದಿದ್ದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀ ತನ್ವಿ ದಾಸರಿ 6-4, 6-1ರಲ್ಲಿ ಆನ್ವಿ ಪುನಗಂಟಿ ಎದುರು ಗೆದ್ದರು.

ADVERTISEMENT

ಸಿಂಗಲ್ಸ್‌ನಲ್ಲಿ ಪರಸ್ಪರ ಕಾದಾಡಿದ ವನ್ಯಾ ಮತ್ತು ಗಗನಾ ಬಾಲಕಿಯರ ಡಬಲ್ಸ್‌ನಲ್ಲಿ ಜೊತೆಗೂಡಿ ಫೈನಲ್ ಪ್ರವೇಶಿಸಿದರು. 6-3, 6-2ರಲ್ಲಿ ಅವರು ಉಮಾಮ್ ಅಹಮ್ಮದ್ ಮತ್ತು ಮಹಿಕಾ ರೆಡ್ಡಿ ವಿರುದ್ಧ ಗೆಲುವು ಸಾಧಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಹರ್ಷಿಣಿ ಮತ್ತು ದಿಶಾ ಖಂಡೋಜಿ ಜೋಡಿ ತನಿಷ್ಕಾ ಕಣ್ಣನ್ ಮತ್ತು ಕಾವ್ಯಾ ಸರವಣನ್ ವಿರುದ್ಧ 6-3, 6-1ರಲ್ಲಿ ಜಯ ಸಾಧಿಸಿದರು.

ಶ್ರೀನಿಕೇತ್‌–ಕೃಷ್‌ ಫೈನಲ್ ಪೈಪೋಟಿ

ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಶ್ರೀನಿಕೇತ್ ಕಣ್ಣನ್ ಮತ್ತು ಕೃಷ್ ಅಜಯ್‌ ತ್ಯಾಗಿ ಫೈನಲ್‌ನಲ್ಲಿ ಸೆಣಸುವರು. ದೇವ್ ಶಿವಶಂಕರ್ ಎದುರು ಶ್ರೀನಿಕೇತ್ 2-6, 6-3, 6-2ರಲ್ಲಿ ಜಯ ಗಳಿಸಿದರೆ ಸೆಹಜ್ ಸಿಂಗ್ ಪವಾರ್‌ ಎದುರು ಕೃಷ್ 7-5, 2-6, 7-5ರಲ್ಲಿ ಗೆದ್ದರು.

ಬಾಲಕರ ಡಬಲ್ಸ್‌ನಲ್ಲಿ ಅನೂಪ್ ಕೇಶವಮೂರ್ತಿ ಮತ್ತು ಕೃಷ್‌ ಅಜಯ್ 2-6, 6-0 (10-4)ರಲ್ಲಿ ದೇವ್ ಶಿವಶಂಕರ್ ಮತ್ತು ಶಿವಪ್ರಸಾದ್ ಜೋಡಿಯನ್ನು ಮಣಿಸಿದರೆ ಜೇಸನ್ ಮೈಕಲ್ ಡೇವಿಡ್‌ ಮತ್ತು ಶ್ರೀನಿಕೇತ್ ಕಣ್ಣನ್6-2, 6-2ರಲ್ಲಿ ಪ್ರಕಾಶ್‌ ಮತ್ತು ಕುಶಲ್ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.