ADVERTISEMENT

ವಿಂಬಲ್ಡನ್‌ ಟೆನಿಸ್‌: ನಾಲ್ಕನೇ ಸುತ್ತಿಗೆ ಅಲ್ಕರಾಜ್‌; ಮ್ಯಾಡಿಸನ್‌ಗೆ ಲಾರಾ ಆಘಾತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 20:04 IST
Last Updated 4 ಜುಲೈ 2025, 20:04 IST
ಲಾರಾ ಸಿಗ್ಮಂಡ್‌ ಗೆಲುವಿನ ಸಂಭ್ರಮ ಎಪಿ ಚಿತ್ರ
ಲಾರಾ ಸಿಗ್ಮಂಡ್‌ ಗೆಲುವಿನ ಸಂಭ್ರಮ ಎಪಿ ಚಿತ್ರ   

ಲಂಡನ್‌: ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್‌ ಅವರು ಶುಕ್ರವಾರ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಹಾಕಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಮ್ಯಾಡಿಸನ್‌ ಕೀಸ್‌ ಟೂರ್ನಿಯಿಂದ ಹೊರಬಿದ್ದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿಯ ಛಲದಲ್ಲಿರುವ ಸ್ಪೇನ್‌ನ ಅಲ್ಕರಾಜ್‌ 6-1, 3-6, 6-3, 6-4ರಿಂದ ಜರ್ಮನಿಯ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ ಗೆಲುವು ಸಾಧಿಸಿದರು. 

ಎರಡನೇ ಶ್ರೇಯಾಂಕದ ಅಲ್ಕರಾಜ್ ಇಲ್ಲಿ 2022ರಲ್ಲಿ ನಾಲ್ಕನೇ ಸುತ್ತಿನಲ್ಲಿ ಯಾನಿಕ್‌ ಸಿನ್ನರ್‌ ವಿರುದ್ಧ ಕೊನೆಯ ಬಾರಿ ಸೋತಿದ್ದರು. ಕಳೆದ ಎರಡು ವಿಂಬಲ್ಡನ್ ಫೈನಲ್‌ಗಳಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. 

ADVERTISEMENT

ಕೀಸ್‌ಗೆ ಆಘಾತ: ಜರ್ಮನಿಯ ಲಾರಾ ಸಿಗ್ಮಂಡ್‌ 6-3, 6-3ರ ಸೆಟ್‌ಗಳಿಂದ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಮ್ಯಾಡಿಸನ್‌ (ಅಮೆರಿಕ) ಅವರಿಗೆ ಆಘಾತ ನೀಡಿದರು. ಡಬಲ್ಸ್‌ನಲ್ಲಿ ಮೂರು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಲಾರಾ, ಇಲ್ಲಿ ಇದೇ ಮೊದಲ ಬಾರಿ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.

ಸಿನ್ನರ್‌ಗೆ ಗೆಲುವು: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್ ಅವರು ನಿರಾಯಾಸವಾಗಿ ಮೂರನೇ ಸುತ್ತು ಪ್ರವೇಶಿಸಿದರು. ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್‌ 6-1, 6-1, 6-3ರ ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಕ್ ಅವರನ್ನು ಹಿಮ್ಮೆಟ್ಟಿಸಿದರು.

ಸೊನ್ಮೆಜ್ ದಾಖಲೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಝೆಯ್ನೆಪ್ ಸೊನ್ಮೆಜ್ ಅವರು 7-5, 7-5ರ ಸೆಟ್‌ಗಳಿಂದ ಕ್ಸಿನ್ಯು ವಾಂಗ್ (ಚೀನಾ) ಅವರನ್ನು ಸೋಲಿಸಿದರು. ಈ ಮೂಲಕ ಟೆನಿಸ್‌ನ ಓಪನ್‌ ಯುಗದಲ್ಲಿ ಯಾವುದೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಮೂರನೇ ಸುತ್ತು ತಲುಪಿದ ಟರ್ಕಿಯ ಮೊದಲ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರವಾದರು.

ಒಸಾಕಾ ನಿರ್ಗಮನ: ಒಸಾಕಾ ನಿರ್ಗಮನ: ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ, ಜಪಾನ್‌ ನವೋಮಿ ಒಸಾಕಾ ಮೂರನೇ ಸುತ್ತಿನಲ್ಲಿ ನಿರ್ಗಮಿಸಿದರು. ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ರಷ್ಯಾದ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ 3-6, 6-4, 6-4ರಿಂದ ಜಪಾನ್‌ ಆಟಗಾರ್ತಿಯನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಸ್ತುತ 51ನೇ ರ‍್ಯಾಂಕ್‌ನಲ್ಲಿರುವ ಒಸಾಕಾ 2021ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ ಯಾವುದೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಒಸಾಕಾ ನಾಲ್ಕನೇ ಸುತ್ತನ್ನು ತಲುಪಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.