ADVERTISEMENT

16ರ ಸುತ್ತಿಗೆ ಲಕ್ಷ್ಯ, ಮಿಥುನ್, ರಾಹುಲ್‌

ಸಾರ್‌ಲೋರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 5:20 IST
Last Updated 1 ನವೆಂಬರ್ 2019, 5:20 IST

ಸಾರ್‌ಬ್ರುಕನ್‌, ಜರ್ಮನಿ: ಭಾರತದ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್, ಫಿನ್ಲೆಂಡ್‌ನ ಈಟು ಹೀನೊ ಅವರನ್ನು ತೀವ್ರ ಹೋರಾಟದ ಪಂದ್ಯದಲ್ಲಿ ಸೋಲಿಸಿ ಸಾರ್‌ಲೋರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು.

ಸೆಪ್ಟೆಂಬರ್‌ನಲ್ಲಿ ಹೀನೊ ಅವರನ್ನು ಸೋಲಿಸಿ ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಟೂರ್ನಿಯನ್ನು ಗೆದ್ದುಕೊಂಡಿದ್ದ ಲಕ್ಷ್ಯ ಬುಧವಾರ ರಾತ್ರಿ 21–18, 18–21, 22–20 ರಿಂದ ಇದೇ ಎದುರಾಳಿಯನ್ನು ಸೋಲಿಸಿದರು. ಈ ಪಂದ್ಯ 56 ನಿಮಿಷಗಳ ಕಾಲ ನಡೆಯಿತು.

ಎಂಟನೇ ಶ್ರೇಯಾಂಕದ ಲಕ್ಷ್ಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ಲಾರ್ಸ್ ಷಾಯೆಂಜ್ಲರ್‌ ಅವರನ್ನು ಎದುರಿಸಲಿದ್ದಾರೆ. 18 ವರ್ಷದ ಉತ್ತರಾಖಂಡದ ಈ ಆಟಗಾರ ಅಕ್ಟೋಬರ್‌ ಮೊದಲ ವಾರ ಡಚ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ADVERTISEMENT

ಮಿಥುನ್‌ ಮಂಜುನಾಥ್‌ ಮತ್ತು ಬಿ.ಎಂ.ರಾಹುಲ್‌ ಭಾರದ್ವಾಜ್‌ ಕೂಡ ನೇರ ಗೇಮ್‌ಗಳ ಗೆಲುವಿನೊಡನೆ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು. ಮಿಥುನ್‌ 21–15, 21–14 ರಿಂದ ಮಲೇಷ್ಯಾದ ಚೊಂಗ್‌ ಯೀ ಹಾನ್‌ ಅವರನ್ನು ಮಣಿಸಿದರು. ಅವರ ಮುಂದಿನ ಎದುರಾಳಿ ಐದನೇ ಶ್ರೇಯಾಂಕದ ಟೋಬಿ ಪೆಂಟಿ (ಇಂಗ್ಲೆಂಡ್‌). ರಾಹುಲ್‌ ಭಾರದ್ವಾಜ್‌ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಕೈ ಷಾಫರ್‌ ಅವರನ್ನು 21–13, 21–15 ರಿಂದ ಸೋಲಿಸಿದ್ದು, ಕ್ವಾರ್ಟರ್‌ಫೈನಲ್‌ ತಲುಪುವ ಹಾದಿಯಲ್ಲಿ ಐರ್ಲೆಂಡ್‌ನ ನ್ಹಾಟ್‌ ಗುಯೆನ್‌ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ 16ರ ಸುತ್ತನ್ನು ತಲುಪಿದ್ದಾರೆ. ಅವರು ಡೆನ್ಮಾರ್ಕ್‌ನ ಜೋಡಿ ಜೂಲಿ– ಮಾಯಿ ಸುರೊ ವಿರುದ್ಧ ಆಡಲಿದ್ದಾರೆ. ವೈಭವ್ ಮತ್ತು ಪ್ರಕಾಶ್‌ ರಾಜ್‌ 16ರ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್‌ ಡನ್‌– ಆ್ಯಡಂ ಹಾಲ್‌ (ಸ್ಕಾಟ್ಲೆಂಡ್‌) ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.