ADVERTISEMENT

ಅಂತರ್‌ಜಾಲದ ಅನಂತ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ವಿಜಯಲಕ್ಷ್ಮೀ ತನ್ನ ಲ್ಯಾಪ್‌ಟಾಪ್ ತೆರೆದು, ಬಟನ್ ಒತ್ತುತ್ತಾರೆ. ಅದು ತನ್ನ ಕೆಲಸ ಆರಂಭಿಸುತ್ತಲೇ, ಸ್ಕ್ರೀನ್ (ಪರದೆ) ಮೇಲೆ ಮೌಸ್‌ನ ಕರ್ಸರ್ ಓಡಾಡಿಸುತ್ತಾರೆ. ಡೆಸ್ಕ್‌ಟಾಪ್‌ನ ಒಂದೊಂದು ಐಕಾನ್ ಮೇಲೆ ಕರ್ಸರ್ ಹೋಗುತ್ತಿದ್ದಂತೆ, ಅದರ ವಿವರ ಕೇಳಿಸುತ್ತದೆ. ತನಗೆ ಬೇಕೆನಿಸುವ ಐಕಾನ್ ಆಯ್ಕೆ ಮಾಡಿ, `ಎಂಟರ್~ ಬಟನ್ ಒತ್ತುತ್ತಾರೆ. `...ವೂಪ್~ ಎಂಬ ಕಿರುಶಬ್ದದೊಂದಿಗೆ `ಸ್ಕೈಪ್~ ತೆರೆದುಕೊಳ್ಳುತ್ತದೆ.

ಇಪ್ಪತ್ತೈದರ ವಯಸ್ಸಿನ ವಿಜಯಲಕ್ಷ್ಮೀಯಂಥ ಹಲವು ಅಂಧರಿಗೆ `ಸ್ಕೈಪ್~ನಂಥ ಹಲವು ಸೌಲಭ್ಯಗಳು ವರದಾನವಾಗಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ಇವು ಅವರಿಗೆ ಜೀವನೋಪಾಯ ಕಲ್ಪಿಸಿಕೊಳ್ಳಲೂ ನೆರವಾಗಿವೆ. `ನಾನು ಇದನ್ನು ಮೂರು ವರ್ಷಗಳಿಂದಲೂ ಬಳಸುತ್ತಿದ್ದೇನೆ.
 
ಇಂಟರ್‌ನೆಟ್‌ಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು~ ಎನ್ನುತ್ತಾರೆ ವಿಜಯಲಕ್ಷ್ಮೀ. ಬೆಂಗಳೂರಿನಲ್ಲಿ ವಾಸಿಸುವ ಇವರು ಆಸಕ್ತರಿಗೆ ಶಾಸ್ತ್ರೀಯ ಸಂಗೀತ ಕಲಿಸುತ್ತಾರೆ; ಅವರಲ್ಲಿ ಕೆಲವರು ಬೇರೆ ಬೇರೆ ದೇಶಗಳಲ್ಲಿ ಇರುವಂಥವರು! `ಸ್ಕೈಪ್ ಅಥವಾ ಇಂಟರ್‌ನೆಟ್ ಇಲ್ಲದ ಜಗತ್ತನ್ನು ನಾನು ಊಹಿಸಲೂ ಆಗುತ್ತಿಲ್ಲ~ ಎಂಬುದು ಅವರ ಅನಿಸಿಕೆ.

ವೃತ್ತಿ ಸಂಬಂಧಿ ಅವಕಾಶ, ವ್ಯಾಪಾರ-ವಹಿವಾಟುಗಳನ್ನು ವಿಸ್ತರಿಸಿಕೊಳ್ಳಲು ಬಳಕೆಯಾಗುವ ಕಂಪ್ಯೂಟರ್, ಕಲಿಕೆಯ ಸಾಧನವಾಗಿಯೂ ರೂಪುಗೊಳ್ಳುತ್ತಿದೆ. ಮಾಹಿತಿ- ಮನೋರಂಜನೆಯ ಪ್ರಮುಖ ತಾಣವಾದ `ಯೂಟ್ಯೂಬ್~ನಲ್ಲಿ ಸಂಗೀತ ಕಲಿಕೆಗೆ ಸಂಬಂಧಿಸಿದಂತೆ ಎಷ್ಟೋ ವಿಡಿಯೊ  ತುಣುಕುಗಳು ಇವೆ. ಅವುಗಳ ನೆರವನ್ನೂ ಸಂಗೀತ ಕಲಿಕೆಯಲ್ಲಿ ಪಡೆಯಬಹುದು. ಇದನ್ನು ಹೊರತುಪಡಿಸಿದರೆ ಅಂಧರಿಗೆ ಬೇರೆ ಇನ್ನಿತರ ವಿಧಾನಗಳ ಮೂಲಕ ಇಂಟರ್‌ನೆಟ್ ಬಳಕೆ ಸಾಧ್ಯವಿಲ್ಲ.

`ನನ್ನ ವಿದ್ಯಾರ್ಥಿಗಳಿಗೆ ಸಂಗೀತದ ಪಾಠಗಳನ್ನು ನಾನು ಸ್ಕೈಪ್ ಮೂಲಕ ಹೇಳಿ ಕೊಡುತ್ತೇನೆ. ಅವರು ಅಭ್ಯಾಸ ಮಾಡಿದ ಬಳಿಕ ತಮ್ಮ ಧ್ವನಿ ಕಡತಗಳನ್ನು (ವಾಯ್ಸ ಫೈಲ್)ಗಳನ್ನು ನನಗೆ ಕಳಿಸುತ್ತಾರೆ. ಅದನ್ನು ನಾನು ಕೇಳಿ, ಏನಾದರೂ ವ್ಯತ್ಯಾಸವಿದ್ದರೆ ಸ್ಕೈಪ್‌ನಲ್ಲೇ ತಿಳಿಸಿ, ಸರಿಪಡಿಸುತ್ತೇನೆ~ ಎಂದು ವಿಜಯಲಕ್ಷ್ಮೀ ಹೇಳುತ್ತಾರೆ.

ಅವರ ಶಿಷ್ಯಂದಿರು ಇಂಟರ್‌ನೆಟ್ ಮೂಲಕ ಬ್ಯಾಂಕ್ ಖಾತೆಗೆ ಶುಲ್ಕ ಜಮಾ ಮಾಡುತ್ತಾರೆ (ಒಂದು ವೇಳೆ ಅವರು ಚೆಕ್ ಕೊಟ್ಟಿದ್ದರೆ, ದೂರದ ಬ್ಯಾಂಕ್‌ಗೆ ಹೋಗಿ ಅದನ್ನು ಜಮಾ ಮಾಡುವ ಪಡಿಪಾಟಲು ಕೇಳುವಂತಿಲ್ಲ).

ಇದೇ ಮಾದರಿಯಲ್ಲಿ ಸ್ಕೈಪ್ ಬಳಸಿ, ಇಂಗ್ಲಿಷ್ ಭಾಷಾ ಕಲಿಕೆ, ವೆಬ್‌ಸೈಟ್ ಡಿಸೈನ್ ಹಾಗೂ ಮೆಡಿಕಲ್ ಟ್ರಾನ್ಸ್‌ಸ್ಕ್ರಿಪ್ಶನ್ ವಲಯದಲ್ಲೂ ಸಾವಿರಾರು ಅಂಧರು ಬದುಕು ಕಟ್ಟಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದೆ ಇಂಟರ್‌ನೆಟ್ ಎಂದರೆ, ಫೈಲ್‌ಗಳನ್ನು ಕಳಿಸುವ- ಇಳಿಸಿಕೊಳ್ಳುವ ಹಾಗೂ ಇ-ಮೇಲ್ ವಿನಿಮಯಕ್ಕಷ್ಟೇ ಸೀಮಿತವಾಗಿತ್ತು. ಆದರೀಗ ಸಾಮಾಜಿಕ ತಾಣಗಳ ಮೂಲಕ ಅಂಧರಿಗೆ ಹೊರ ಜಗತ್ತು ತೆರೆದುಕೊಂಡಿದ್ದು, ಅನೇಕ ವೃತ್ತಿಪರ ಗುಂಪುಗಳು ಇವರಿಗೆ ಅವಕಾಶ ಕೊಡುವ ವಿಶಿಷ್ಟ ಸೌಲಭ್ಯವನ್ನು ಫೇಸ್‌ಬುಕ್ ಕಲ್ಪಿಸಿದೆ.

`ಯಾವುದೇ ವೆಬ್‌ಸೈಟ್ ಎಲ್ಲರಿಗೂ ಸಿಗುವಂತಾದರೆ ಅದರ ಬಳಕೆ ಹೆಚ್ಚಳವಾಗುತ್ತದೆ. ಇದಕ್ಕಾಗಿ ಆ ಅಂತರಜಾಲ ತಾಣಕ್ಕೆ ಹಲವು ಸೌಲಭ್ಯ ಅಳವಡಿಸಬೇಕು~ ಎಂದು ಅಂತರಜಾಲ ವಿನ್ಯಾಸ  ಕಂಪೆನಿಯೊಂದರ ಮುಖ್ಯಸ್ಥ ಅಖಿಲೇಶ್ ಮಲಾನಿ ಅಭಿಪ್ರಾಯಪಡುತ್ತಾರೆ. `ಸ್ಕ್ರೀನ್ ರೀಡಿಂಗ್ ಸಾಫ್ಟ್‌ವೇರ್ ಅನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿದರೆ, ಅಂಧರೂ ಇದನ್ನು ಸುಲಭವಾಗಿ ಬಳಸಬಹುದು. ಇದೆಲ್ಲ ಸಾಧ್ಯವಾಗಿದ್ದು ಇಂಟರ್‌ನೆಟ್‌ನಿಂದ~ ಎಂದು  ಹೇಳುತ್ತಾರೆ.


ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಸಾಮಾಜಿಕ ತಾಣಗಳ ಮೇಲೆ ನಿರ್ಬಂಧ ವಿಧಿಸುವ ನಿರ್ಧಾರ ತೆಗೆದುಕೊಂಡಾಗ, ತುಸು ಆತಂಕದ ವಾತಾವರಣ ಮೂಡಿತ್ತು. ಉಗ್ರರ ಬೆದರಿಕೆ, ಆಕ್ಷೇಪಾರ್ಹ ವಿಷಯಗಳ ಕಾರಣದಿಂದಾಗಿ ಕೇಂದ್ರ ಸರ್ಕಾರ ಫೇಸ್‌ಬುಕ್, ಟ್ವಿಟರ್ ಹಾಗೂ ಸ್ಕೈಪ್ ಮೇಲೆ ಕೆಂಗಣ್ಣು ಬೀರಿದೆ. ಆದರೆ, ಕಾಗದಪತ್ರ, ಪುಸ್ತಕಗಳಿಂದಲೂ ಸಾಕಷ್ಟು ಅಹಿತಕರ ಘಟನೆ ನಡೆದಿವೆ ಎಂಬುದನ್ನು ಗಮನಿಸಬೇಕು.

ವಾಸ್ತವವಾಗಿ ಸರ್ಕಾರದ ನಿರ್ಧಾರಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ, ಇದರಿಂದ ಸೌಲಭ್ಯಗಳಿಂದ ವಂಚಿತವಾಗಬಹುದಾದ ಸಮುದಾಯವನ್ನೂ ಗಮನಿಸಬೇಕು~ ಎಂಬುದು ಮೈಸೂರಿನ ಮಾರಿಯಾ ದುರಾನಿ ಅವರ ಅಭಿಮತ. ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡಿರುವ ಇವರು, ಆನ್‌ಲೈನ್ ರೇಡಿಯೊ  ಕೇಂದ್ರಗಳಿಗೆ ಅನೇಕ ಬಾರಿ ಟಾಕ್ ಶೋ ಕೊಡುತ್ತಾರೆ.

ನಗರ-ಪಟ್ಟಣಗಳ ಸಾಕಷ್ಟು ಅಂಧರು ಬ್ರೈಲ್ ಲಿಪಿ ಬಳಸದೇ ಹೋದರೂ, ಅದರ ಬಗ್ಗೆ ಅವರಿಗೆ ಗೊತ್ತಿದೆ. `ದೃಷ್ಟಿ ಕಳೆದುಕೊಂಡ ಬಳಿಕ ಲೂಯಿಸ್ ಬ್ರೈಲ್ ಅವರು ಲಿಪಿ ರೂಪಿಸಿದ ವಿಧಾನವೇ ತೀವ್ರ ಕುತೂಹಲ ಮೂಡಿಸುತ್ತದೆ. ಎಲ್ಲೆಲ್ಲಿ ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಉಪಕರಣ ಬಳಕೆ ಅಸಾಧ್ಯವೋ, ಅಲ್ಲೆಲ್ಲ ಬ್ರೈಲ್ ಲಿಪಿ ಬಳಸಬಹುದಾಗಿದೆ~ ಎನ್ನುತ್ತಾರೆ ಮಾರಿಯಾ.

30ರಿಂದ 40 ವರ್ಷದೊಳಗಿನವರು ಬ್ರೈಲ್ ಲಿಪಿಯನ್ನು ಹೆಚ್ಚಿಗೆ ಬಳಸುತ್ತಿದ್ದಾರೆ. ಸುಲಭ ಹಾಗೂ ಸರಳತೆ ಇದರ ವೈಶಿಷ್ಟ್ಯ. ಆದರೆ ಯುವಪೀಳಿಗೆಯು ಕಂಪ್ಯೂಟರ್ ಹಾಗೂ ಇಂಟರ್‌ನೆಟ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾಮಾನ್ಯರು ಹೇಗೆ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆಯೋ, ಹಾಗೆಯೇ ಈ ಅಸಾಮಾನ್ಯರು ಕಂಪ್ಯೂಟರ್ ತಂತ್ರಜ್ಞಾನದ ಪ್ರಯೋಜನ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಭಗವಾನ್ ಮಹಾವೇರ್ ಜೈನ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜದೀಪ್ ಮನ್ವಾನಿ ವಿಶ್ಲೇಷಿಸುತ್ತಾರೆ.
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT