ADVERTISEMENT

ಗೂಗಲ್: ಖಾಸಗಿ ನೀತಿ ವಿವಾದ..!

ಪ್ರಜಾವಾಣಿ ವಿಶೇಷ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಗೂಗಲ್‌ನ ಹೊಸ ಖಾಸಗಿ ನೀತಿಯು ಮಾರ್ಚ್ 1ರಿಂದ ಜಾರಿಗೆ ಬರಲಿದೆ. ಸದ್ಯ ಸಂಸ್ಥೆ ಸೇವೆ ಒದಗಿಸುತ್ತಿರುವ ಸುಮಾರು 60ಕ್ಕೂ ಹೆಚ್ಚು ವಿಭಾಗಗಳ  ಗ್ರಾಹಕರ ದತ್ತಾಂಶಗಳನ್ನು ಹೊಸ ನೀತಿಯಲ್ಲಿ ವಿಲೀನಗೊಳಿಸಲಾಗಿದೆ.
 
ಹೀಗೆ ಮಾಡಿರುವುದರಿಂದ ಬಳಕೆದಾರರ ಖಾಸಗಿ ಮಾಹಿತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬದಲಿಗೆ  ಗೂಗಲ್ ಸೇವೆಗಳನ್ನು ಇನ್ನಷ್ಟು ವೇಗವಾಗಿ ಮತ್ತು ಮುಕ್ತವಾಗಿ ಬಳಸಬಹುದು ಎನ್ನುವ ಸಮರ್ಥನೆಯನ್ನೂ  ಕಂಪೆನಿ ನೀಡಿದೆ.

ಆದರೆ, ಅಂತರ್ಜಾಲ ತಜ್ಞರಿಂದ ಗೂಗಲ್‌ನ ಈ ನೀತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಇಂಟರ್‌ನೆಟ್ ಬಳಕೆದಾರರ ಖಾಸಗಿತನಕ್ಕೆ ಹಾನಿಯುಂಟುಮಾಡುತ್ತದೆ ಎಂದು ಅನೇಕರು ವಾದಿಸುತ್ತಿದ್ದಾರೆ. 

`ಗೂಗಲ್ ತನ್ನ ಷೇರುದಾರರಿಗೆ ಏನು ಬೇಕೋ ಅದನ್ನು ಮಾಡುತ್ತಿದೆ. ಹೊಸ ಖಾಸಗಿ ನೀತಿಯು ಇಂಟರ್‌ನೆಟ್ ಬಳಕೆದಾರರಿಗೆ ಧನಾತ್ಮಕವಾಗಿಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಇದನ್ನು ಒಪ್ಪಿಕೊಳ್ಳಬೇಕು  ಅಥವಾ ಅನಿವಾರ್ಯವಾಗಿ ಗೂಗಲ್ ಬಳಸುವುದನ್ನು ಬಿಡಬೇಕು. ಇವರೆಡೇ ಮಾರ್ಗ ಇರುವುದು~  ಎನ್ನುತ್ತಾರೆ ಇಂಟರ್‌ನೆಟ್ ಮತ್ತು ಸಮಾಜ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಅಬ್ರಹಾಂ.

ಇಂಟರ್‌ನೆಟ್ ಬಳಕೆದಾರರಿಗೆ ಉಚಿತ ಇಂಟರ್‌ನೆಟ್ ಬೇಕೇ ಅಥವಾ ನಿಯಂತ್ರಣ ಹೊಂದಿರುವ ದತ್ತಾಂಶ ಬೇಕೇ ಎನ್ನುವ ಕುರಿತು ಈಗಾಗಲೇ ಹಲವು ವಾದಗಳು ನಡೆಯುತ್ತಿವೆ. ಅಂತ್ಯದಲ್ಲಿ ಇಂಟರ್‌ನೆಟ್ ಬಳಕೆ ವಿಷಯ ಬಂದಾಗ ವಿಶ್ವಾಸಾರ್ಹತೆ ಪ್ರಶ್ನೆ ಉದ್ಭವಿಸುತ್ತದೆ.

ಬಳಕೆದಾರ ಮತ್ತು ಗ್ರಾಹಕನಿಗೆ  ವಿಶ್ವಾಸಾರ್ಹ ದತ್ತಾಂಶ ನೀಡುವ ಸಲುವಾಗಿ ಗೂಗಲ್ ತನ್ನ ಖಾಸಗಿ ನೀತಿಯನ್ನು ಪ್ರಕಟಿಸಿದೆ ಎನ್ನುತ್ತಾರೆ `ಪಿಡಬ್ಲ್ಯುಸಿ~ ಇಂಡಿಯಾದ ನಿರ್ದೇಶಕ ಸೋಮಿಕ್ ಗೋಸ್ವಾಮಿ.

ಇಂಟರ್‌ನೆಟ್‌ನಲ್ಲಿ ಸೇವೆ ಒದಗಿಸುವ ಅನೇಕ ಕಂಪೆನಿಗಳು ಅಸಲಿಗೆ ಬಳಕೆದಾರನಿಗೆ ಏನು ಬೇಕು ಎನ್ನುವುದರ ಮೇಲೆ ಸೇವೆ ವಿಸ್ತರಿಸುತ್ತವೆ. ಉದಾಹರಣಗೆ ನಿಮಗೆ ಕಾಫಿ ಮಳಿಗೆ ಕ್ಯಾಫಚಿನೊ ತುಂಬಾ ಇಷ್ಟ ಎಂದಿಟ್ಟುಕೊಳ್ಳಿ. ಇದು ಮಾರಾಟಗಾರನಿಗೂ ತಿಳಿದಿರುತ್ತದೆ.
 
ಪ್ರತಿ ಬಾರಿ ನೀವು ಆತನ ಅಂಗಡಿಯ ಮುಂದೆ ಬಂದಾಗಲೂ, ಕೇಳದಿದ್ದರೂ ಆತ ನಿಮಗೆ ಕ್ಯಾಫಚಿನೊ ತುಂಬಿದ ಕಫ್  ನೀಡಲು ಮುಂದಾಗುತ್ತಾನೆ. ಇಲ್ಲಿ ಖಾಸಗಿತನಕ್ಕಿಂತ ವಿಶ್ವಾಸರ್ಹಾತೆ  ಮುಖ್ಯವಾಗುತ್ತದೆ. 

`ಕ್ಯಾಫಚಿನೊ~ ನೀಡುವುದು ಆ ಸಂದರ್ಭಕ್ಕೆ ಪ್ರಸ್ತುತ ಎನಿಸುತ್ತದೆ ಹಾಗೂ ನಿಮಗೂ ಅದು ಬೇಕಿರುತ್ತದೆ. ಬಳಕೆದಾರನಿಗೆ  ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಬೇಕಿರುವಾಗ ಗೂಗಲ್ ನೀತಿ ಪರಿಷ್ಕರಿಸಿರುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ ಟಿಬ್ಕೊ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ರಾಮ್ ಮೇನನ್.

ಮುಖ್ಯ ವಿಷಯವೆಂದರೆ ಗೂಗಲ್‌ನ ಎಲ್ಲ ಸೇವೆಗಳೂ ಅಂತರ್ಜಾಲದಲ್ಲಿ ಮುಕ್ತವಾಗಿವೆ ಮತ್ತು ಉಚಿತವಾಗಿವೆ ಎನ್ನುವುದು. `ಜಿ-ಮೇಲ್~ ಖಾತೆಯೊಂದಕ್ಕೆ ಲಾಗಿನ್ ಆಗುವುದು ಬಿಟ್ಟರೆ ಉಳಿದ ಯೂಟ್ಯೂಬ್, ಗೂಗಲ್ ಮ್ಯಾಪ್, ಸರ್ಚ್ ಸೇರಿದಂತೆ ಭಾಗಶಃ ಸೌಲಭ್ಯ ಪಡೆಯಲು ಲಾಗಿನ್ ಆಗಬೇಕಾದ ಅಗತ್ಯವೇ ಇಲ್ಲ. 

ಹಾಗೂ ಗೂಗಲ್‌ನ ಸೇವೆಗಾಗಿ ಬಳಕೆದಾರ ನಯಾಪೈಸೆ ಶುಲ್ಕ ಪಾವತಿಸಬೇಕಾದ ಅಗತ್ಯವಿಲ್ಲ. ಆದರೆ, ಕಂಪೆನಿಗೆ ಪ್ರಮುಖವಾಗಿ ವರಮಾನ ಬರುವುದು ಜಾಹೀರಾತಿನಿಂದ. ಹೀಗಾಗಿ ಗೂಗಲ್‌ನ ವಾಣಿಜ್ಯ ನೀತಿ ಜಾಹೀರಾತನ್ನು ಅವಲಂಬಿಸಿದೆ ಎನ್ನುತ್ತದೆ ಆಸ್ಟ್ರೇಲಿಯಾ ಮೂಲದ ಖಾಸಗಿ ವೆಬ್ ಪ್ರತಿಷ್ಠಾನವೊಂದು. ತನ್ನ 60ಕ್ಕೂ ಹೆಚ್ಚು ಸೇವಾ ಕ್ಷೇತ್ರಗಳ ದತ್ತಾಂಶವನ್ನು ವಿಲೀನಗೊಳಿಸುವುದರ ಹಿಂದೆ ಗೂಗಲ್‌ನ ವಾಣಿಜ್ಯ ದೂರದೃಷ್ಟಿಯೂ ಇದೆ ಎನ್ನುತ್ತದೆ ಈ ಸಂಸ್ಥೆ.

ಮೊಬೈಲ್ ಕಂಪ್ಯೂಟಿಂಗ್ ಬಳಕೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಹೊಸ ನೀತಿ ಇನ್ನಷ್ಟು ಅಪಾಯಕಾರಿ ಎನ್ನುತ್ತದೆ ಪ್ರೈವಸಿ ಡಾಟ್ ಕಾಂ ಎನ್ನುವ  ವೆಬ್ ತಾಣ (privacy.­­org.­au). ಅದರಲ್ಲೂ ಆಂಡ್ರಾಯ್ಡ  ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಪ್ರತಿ ಸ್ಮಾರ್ಟ್‌ಫೋನ್ ಬಳಕೆದಾರನೂ, ಗೂಗಲ್ ಖಾತೆ ಹೊಂದುವುದು ಅನಿವಾರ್ಯವಾಗುತ್ತದೆ. ಹಾಗೂ ಆ ಮೂಲಕ ಖೆಡ್ಡಾಕ್ಕೆ ಬೀಳುವಂತೆ ಕಂಪೆನಿ ಮಾಡುತ್ತದೆ ಎನ್ನುತ್ತದೆ.

ಸ್ನೇಹಿತರು ಮತ್ತು ಕುಟುಂಬ ವರ್ಗದವರೊಡನೆ ಸದಾ ಸಂಪರ್ಕದಲ್ಲಿರಲು ನೆರವು ನೀಡುವ ಗೂಗಲ್‌ನ `ಲ್ಯಾಟಿಟ್ಯೂಡ್~ ಸೇವೆಯನ್ನು ಮೊಬೈಲ್ ಮೂಲಕ ಬಳಸುವವರು ಎಚ್ಚರವಾಗಿರಬೇಕು.

ಈ ಸೇವೆಯಲ್ಲಿ ಬಳಕೆದಾರ ತಾನಿರುವ ಸ್ಥಳದ ಕುರಿತು ತನ್ನ ಸ್ನೇಹಿತರಿಗೆ, ಬಂಧುಗಳಿಗೆ ಮಾಹಿತಿ ನೀಡಬಹುದು. ಲಾಗಿನ್ ಆದ ಕೂಡಲೇ ತಾನಿರುವ ಸ್ಥಳ ಉಳಿದವರಿಗೆ ತಿಳಿಯುವಂತೆ ಮಾಡಬಹುದು.

ಬಳಕೆದಾರರನ ಪ್ರತಿ ಚಲನವಲನಗಳ ಮೇಲೆ ನಿಗಾ ವಹಿಸಲು ಇದರಿಂದ ಗೂಗಲ್‌ಗೆ ಸಾಧ್ಯವಾಗುತ್ತದೆ. ಹೇಳಿ ಕೇಳಿ ಗೂಗಲ್ ಎನ್ನುವುದು ಜಾಹೀರಾತು ಅವಲಂಬಿತ ಕಂಪೆನಿ. 

ಇಂದೆಲ್ಲ ನಾಳೆ ತನ್ನ ಬಳಿ ಇರುವ ಸಾವಿರಾರು ಬಳಕೆದಾರರ ಖಾಸಗಿ ಮಾಹಿತಿಯನ್ನು ಮೂರನೆಯ ವ್ಯಕ್ತಿ, ಕಂಪನಿಗೆ ವಿನಿಮಯ ಮಾಡಿಕೊಳ್ಳುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ? ಉಚಿತ ಸೇವೆ ಪಡೆಯುತ್ತಿರುವುದರಿಂದ  ದತ್ತಾಂಶ ವಿನಿಮಯಕ್ಕೆ ಗ್ರಾಹಕರಿಂದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗಿಲ್ಲ ಎನ್ನತ್ತಾರೆ ವೆಬ್ ಕಾನೂನು ತಜ್ಞರು.

ಹಾಗಾದರೆ ಏನು ಮಾಡಬಹುದು. ಬಳಕೆದಾರರ ಹಿತಾಸಕ್ತಿ ರಕ್ಷಿಸಲು ಭಾರತದಂತಹ ದೇಶಗಳಲ್ಲಿ ಯಾವುದೇ ನಿರ್ದಿಷ್ಟ ಕಾನೂನಿಲ್ಲ ಎನ್ನುತ್ತಾರೆ ಅಬ್ರಹಾಂ. ಅಮೆರಿಕದಲ್ಲಿ  ಇಂಟರ್‌ನೆಟ್ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದಂತೆ ನಿಯಮಗಳಿವೆ. ಆದರೆ, ಭಾರತದಲ್ಲೂ ಇಂತಹ ಖಾಸಗಿ ನೀತಿಯೊಂದರ ಅಗತ್ಯವಿದೆ ಎನ್ನುತ್ತಾರೆ ಅವರು.  

ಗೂಗಲ್‌ನ ಹೊಸ ಖಾಸಗಿ ನೀತಿಗೆ ಅಮೆರಿಕದ ಕಾನೂನು ತಜ್ಞರಿಂದಲೇ ವಿರೋಧ ವ್ಯಕ್ತವಾಗಿದೆ. ಇಂಟರ್‌ನೆಟ್‌ನಲ್ಲಿ ಬಳಕೆದಾರರು ಯಾವ ಮಾಹಿತಿ ಶೋಧಿಸುವವರೋ, ಅದಕ್ಕೆ ಪೂರಕವಾಗಿ ವ್ಯಕ್ತಿಗತ ಜಾಹೀರಾತುಗಳನ್ನು ಅಭಿವೃದ್ಧಿಪಡಿಸಲು ಜಾಹೀರಾತು ಕಂಪೆನಿಗಳಿಗೆ ಹೊಸ ನೀತಿ ಅನುಕೂಲ ಕಲ್ಪಿಸುತ್ತದೆ ಎಂದು ಹೇಳಿದ್ದಾರೆ.
 
ಆದರೆ, ಈ ನೀತಿಯಿಂದ ಗ್ರಾಹಕರ ದತ್ತಾಂಶವನ್ನು ಇನ್ನಷ್ಟು ಸುರಕ್ಷಿತವಾಗಿ ಸಂರಕ್ಷಿಸಬಹುದು ಮತ್ತು ನಿರ್ಬಂಧವಿಲ್ಲದ, ತ್ವರಿತ ಇಂಟರ್‌ನೆಟ್ ಸೌಲಭ್ಯ ಪಡೆಯಬಹದು ಎನ್ನುವುದು ಕಂಪೆನಿಯ  ಸಮರ್ಥನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.