ADVERTISEMENT

ನೆಲೆ ತಪ್ಪಿದ ನಕ್ಷತ್ರ

ಬಿ.ಎಸ್.ಶೈಲಜಾ
Published 23 ಆಗಸ್ಟ್ 2011, 19:30 IST
Last Updated 23 ಆಗಸ್ಟ್ 2011, 19:30 IST
ನೆಲೆ ತಪ್ಪಿದ ನಕ್ಷತ್ರ
ನೆಲೆ ತಪ್ಪಿದ ನಕ್ಷತ್ರ   

ಇತ್ತೀಚೆಗೆ ನಮ್ಮ ನೆರೆ ಗೆಲಾಕ್ಸಿ ಲಾರ್ಜ್ ಮೆಜಲಾನಿಕ್ ಕ್ಲೌಡ್‌ನಲ್ಲಿ ಒಂದು ವಿಶೇಷ ನಕ್ಷತ್ರ ಪತ್ತೆಯಾಯಿತು.  ಆ ಗೆಲಾಕ್ಸಿಯಲ್ಲಿ 30 ಡೊರಾಡಸ್ ಎಂಬ ಹೆಸರಿನ ಬೃಹತ್ ಮೋಡವೊಂದಿದೆ. ಇದಕ್ಕೆ ಟೊರಂಟುಲಾ ನೆಬ್ಯುಲಾ ಎಂಬ ಹೆಸರೂ ಇದೆ.

ನೀಹಾರಿಕಾ ಲೋಕದಲ್ಲಿ ಚರ್ಚೆಯಾಗಿದೆ. ಅದರಲ್ಲಿ ಭಾರೀ ಗಾತ್ರದ ನಕ್ಷತ್ರಗಳು ರಚನೆಯಾಗುತ್ತಿರುವ ಕುರುಹುಗಳು ಕಂಡು ಬಂದಿವೆ. ಇದರ ಅಂಚಿನಲ್ಲಿ ಏಕಾಂಗಿಯಾಗಿ ಒಂದು ಬೃಹತ್ ನಕ್ಷತ್ರ - ಸೌರರಾಶಿಯ ಸುಮಾರು 90 ಪಟ್ಟು ಹೆಚ್ಚು ದ್ರವ್ಯರಾಶಿಯದು ಕಂಡುಬಂದಿತು.

ಇದಕ್ಕೆ 16 ಎಂಬ ಸಂಖ್ಯೆ ಇದೆ. ಈ ಬಗೆಯ ನಕ್ಷತ್ರಗಳು ಸಾಧಾರಣವಾಗಿ ಗುಂಪುಗುಂಪಾಗಿ ಗುಚ್ಛಗಳಲ್ಲಿ ಸೃಷ್ಟಿಯಾಗುತ್ತವೆ. ಇದು ಒಂಟಿಯಾಗಿ ಏಕಿದೆ? ಇದು ನೆಲೆ ತಪ್ಪಿಸಿಕೊಂಡ ನಕ್ಷತ್ರವೇ?

ಹೀಗೆ ಅನೇಕ ಪ್ರಶ್ನೆಗಳೆದ್ದವು. ಈ ನಿಟ್ಟಿನಲ್ಲಿ ಇದರ ವೇಗ ಒಂದು ಸುಳಿವನ್ನು ಒದಗಿಸಿತು. ನಮ್ಮ ಗೆಲಾಕ್ಸಿಯ ತಟ್ಟೆಯ ಭಾಗದಿಂದ ತಪ್ಪಿಸಿಕೊಂಡು ಓಡುತ್ತಿದ್ದ ಪಲಾಯನ ನಕ್ಷತ್ರಗಳನ್ನು ಪತ್ತೆ ಮಾಡುವ ವಿಧಾನ ದೊರಕಿತು. ಅವು ತಟ್ಟೆಯ ಮೇಲೋ ಕೆಳಗೋ ಏಕಾಂಗಿಯಾಗಿ ಅತಿ ವೇಗದಿಂದ ಓಡುತ್ತಿದ್ದವು.
 
ಆದರೆ ಇಂತಹ  ಪಲಾಯನವಾದಿಗಳು ಬೇರೆ ಗೆಲಾಕ್ಸಿಗಳಲ್ಲಿಯೂ ಇರಬಹುದೇ? ಈ ಪ್ರಶ್ನೆಗೆ ನೇರ ಉತ್ತರ ಸಿಕ್ಕಿರಲಿಲ್ಲ. ಈಗ ಈ ಏಕಾಂಗಿ ನಕ್ಷತ್ರ ಇಂತಹ ಪಲಾಯನ ನಕ್ಷತ್ರವಾಗಿರಬಹುದು ಎಂಬ ಸಂಭಾವ್ಯತೆಯ ಬಗ್ಗೆ ಗಮನ ಹರಿಯಿತು.
 
ಇದರ ವೇಗ ಸೆಕೆಂಡಿಗೆ ಸುಮಾರು 500 ಕಿಮೀ (ಸೂರ್ಯನದ್ದು ಕೇವಲ 20 ಕಿಮೀ). ಜೊತೆಗೆ ಇದು ಓಡಿ ಬಂದ ದಾರಿಯುದ್ದಕ್ಕೂ ಅನಿಲ ಮತ್ತು ಧೂಳನ್ನು ಒತ್ತರಿಸಿ ಹಾದಿಯನ್ನು ತೋರಿಸಿಕೊಟ್ಟಿದೆ. ಈ   ನಕ್ಷತ್ರ ರಚನೆಯಾಗಿ ಸುಮಾರು 1-2 ಮಿಲಿಯನ್ ವರ್ಷಗಳಾಗಿರಬಹುದು.

ಅಷ್ಟೇ. ಆದ್ದರಿಂದ ಅದು ತೋರಿಸಿಕೊಟ್ಟ ಹಾದಿಯಲ್ಲೇ ಹಿಂದುವರೆದರೆ ಅದು 1 ದಶಲಕ್ಷ ವರ್ಷದ ಹಿಂದೆ ಇದ್ದರಬಹುದಾದ ತಾಣ ಸಿಗುತ್ತದೆಯಲ್ಲವೇ? ಹಾಗೆ ಸಿಕ್ಕಿದ್ದೇ ಆರ್ 136. ಕ್ರಮಿಸಿದ್ದ ದೂರ ಸುಮಾರು 375 ಜ್ಯೋತಿರ್ವರ್ಷಗಳು.

30 ಡೊರಾಡಸ್‌ನಲ್ಲಿ ಅನೇಕ ಗುಚ್ಛಗಳಂತೆ ಒಟ್ಟೊಟ್ಟಾಗಿ ಸೇರಿಕೊಂಡಿವೆ. ಕೆಲವು ನಕ್ಷತ್ರಗಳು ಸೌರರಾಶಿಯ ಒಂದು ನೂರು ಪಟ್ಟು ಇರಬಹುದು ಎಂದು ಲೆಕ್ಕ ತಿಳಿಸುತ್ತದೆ. ಇವುಗಳನ್ನು ಆರ್ ಎಂಬ ಸಂಖ್ಯೆಯಿಂದ ಗುರುತಿಸಲಾಗುತ್ತದೆ.
 
ಆರ್ 136 ಎಂಬ ಗುಚ್ಛದಲ್ಲಿ ನೂರಾರು ಬೃಹತ್ ನಕ್ಷತ್ರಗಳು ಜನ್ಮ ತಾಳುತ್ತಿವೆ ಎಂದು  ತಿಳಿದಿತ್ತು. ಹಬಲ್ ದೂರದರ್ಶಕ ತೆಗೆದ ಈ ಚಿತ್ರದಲ್ಲಿ ಆರ್ 136ರ ಸ್ಥಾನವನ್ನು ವೃತ್ತದಿಂದ ಗುರುತಿಸಲಾಗಿದೆ.

16ನೆಯ ಸಂಖ್ಯೆಯ ಓಡಿಹೋದ ನಕ್ಷತ್ರದ ಸ್ಥಾನ ಆರ್ 136ರಿಂದ ಸಾಕಷ್ಟು ದೂರದಲ್ಲಿದೆ. ಇಲ್ಲಿರುವ ನೀಲಿ ಚುಕ್ಕೆಗಳು ನಕ್ಷತ್ರಗಳು; ಕೆಂಪು ಬಣ್ಣ ಹೈಡ್ರೋಜನ್ ಅನ್ನು ಗುರುತಿಸುತ್ತದೆ; ಹಸಿರು ಬಣ್ಣ ಆಕ್ಸಿಜನ್ ಅಯಾಣುಗಳ ಹಂಚಿಕೆಯನ್ನು ಸೂಚಿಸುತ್ತದೆ.

ಹಬಲ್ ದೂರದರ್ಶಕ 16ನೆಯ ನಕ್ಷತ್ರದ ಆಸುಪಾಸನ್ನು ವಿವರವಾಗಿ ಸೆರೆ ಹಿಡಿದಿದೆ. ಅದರ ಸುತ್ತಲಿನ ನೆಬ್ಯುಲಾ ಮತ್ತು ಎಳೆಯ ನಕ್ಷತ್ರ ಉತ್ಸರ್ಜಿಸಿದ್ದ ವಸ್ತು ಎಲ್ಲವನ್ನೂ ನಕ್ಷತ್ರದ ಅತಿನೇರಿಳೆ ಕಿರಣಗಳು ಬೆಳಗುತ್ತಿವೆ. ಅವುಗಳ ಆಕಾರದ ಸ್ಪಷ್ಟ ನೋಟ ಮೂಡಿಸುತ್ತಿವೆ.

16 ಎಂಬ ಈ ನಕ್ಷತ್ರ ಹೊರಬಿದ್ದದ್ದೇಕೆ? ಅತಿ ಬಲಿಷ್ಠ ಎನ್ನಿಸುವ ಈ ಪುಂಡನನ್ನು ಇನ್ನೂ ಬಲಿಷ್ಠರಾದ ಸೋದರರು  ಒದ್ದು  ಹೊರ ಹಾಕಿದರೇ? ಅಥವಾ ಇದರ ಅತಿ ಬಲಿಷ್ಠ  ಅವಳಿ  ನಕ್ಷತ್ರ ಸೂಪರ್ ನೋವಾ ಆಗಿ  ಸತ್ತ  ಆಘಾತಕ್ಕೆ ಇದು ಹೊರಕ್ಕೆ ಚಿಮ್ಮಿತೇ? ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.