ADVERTISEMENT

ಫೇಸ್‌ಬುಕ್‌ನ ನಿಗೂಢ ನಡೆ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST
ಫೇಸ್‌ಬುಕ್‌ನ ನಿಗೂಢ ನಡೆ!
ಫೇಸ್‌ಬುಕ್‌ನ ನಿಗೂಢ ನಡೆ!   

ಜನಪ್ರಿಯತೆಯ ಉತ್ತುಂಗದಲ್ಲಿರುವ ಸಾಮಾಜಿಕ ಜಾಲ ತಾಣ `ಫೇಸ್‌ಬುಕ್~ ಇತ್ತೀಚೆಗೆ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ.

`ಡಾರ್ಕ್ ಪ್ರೊಫೈಲ್~ (Dark Profiles) ಅರ್ಥಾತ್ ಬಳಕೆದಾರರ `ರಹಸ್ಯ ಖಾತೆ~ ಸೃಷ್ಟಿಸುವುದು ಈ ನಿಗೂಢ ಯೋಜನೆ. `ಡಾರ್ಕ್ ಪ್ರೊಫೈಲ್ ಎಂದರೆ ಇಲ್ಲಿ  `ವ್ಯಕ್ತಿ ಚಿತ್ರ~  ಗುಪ್ತವಾಗಿರುತ್ತದೆ.
 
ಉದಾಹರಣೆಗೆ ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರ ವಿವರಗಳು ಹೇಗೆ ರಹಸ್ಯ ವಾಗಿರುತ್ತದೆಯೋ ಹಾಗೆಯೇ ಇಲ್ಲಿ ಕೂಡ `ವ್ಯಕ್ತಿಚಿತ್ರ~ ನಿಗೂಢವಾಗಿರುತ್ತದೆ!
ಇನ್ನೂ   ವಿಶೇಷವೆಂದರೆ, ಇಂತಹ ಖಾತೆಗಳಿಗೆ ಬಳಕೆದಾರರ ಲಾಗಿನ್ ಆಗುವ ಅಗತ್ಯ ಕೂಡ ಇಲ್ಲ. ಕಂಪೆನಿಯೇ ಇದನ್ನು ನಿರ್ವಹಿಸುತ್ತದೆ. ಫೇಸ್‌ಬುಕ್‌ನಿಂದ ನಿವೃತ್ತಿಯಾದ ಉದ್ಯೋಗಿಯೊಬ್ಬರು ಇತ್ತೀಚೆಗೆ ಬರೆದಿರುವ ಪುಸ್ತಕದಲ್ಲಿ `ಡಾರ್ಕ್ ಪ್ರೊಫೈಲ್~ ಪರಿಕಲ್ಪನೆ ಬಹಿರಂಗಪಡಿಸಿದ್ದಾರೆ.

ಈ ಪುಸ್ತಕದ ಹೆಸರು `ದ ಬಾಯ್ ಕಿಂಗ್ಸ್; ಎ ಜರ್ನಿ ಇನ್ ಟು ದ  ಹಾರ್ಟ್ ಆಫ್ ಸೋಷಿಯಲ್ ನೆಟ್‌ವರ್ಕ್~. ಲೇಖಕಿ `ಕ್ಯಾಥರಿನ್ ಲ್ಯೂಸ್~.

2005ರಿಂದ 2010ರವರೆಗೆ `ಫೇಸ್‌ಬುಕ್~ನ ಗ್ರಾಹಕ ವ್ಯವಹಾರಗಳ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕ್ಯಾಥರಿನ್, ಕೆಲಕಾಲ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಭಾಷಣ ಬರೆದುಕೊಡುವ `ಸ್ಪೀಚ್ ರೈಟರ್~ ಆಗಿಯೂ  ಕೆಲಸ ಮಾಡಿದವರು. ಸದ್ಯ ಅವರ ಪುಸ್ತಕ `ಫೇಸ್‌ಬುಕ್~ಗಿಂತಲೂ ಹೆಚ್ಚು ಸುದ್ದಿ ಮಾಡುತ್ತಿದೆ.

ಪರದೆ ಮೇಲೆ ಕಾಣಿಸಿಕೊಳ್ಳದೆ, ತೆರೆಮರೆಯಲ್ಲಿ ಇದ್ದುಕೊಂಡೇ ಸಾಮಾಜಿಕ ಜಾಲ ತಾಣಗಳ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುವವರಿಗಾಗಿ ಇಂತಹ `ಷಾಡೊ ಪೇಜ್~ (shadow pa­ges)  ಸಿದ್ಧಪಡಿಸಲು  `ಫೇಸ್‌ಬುಕ್~ ಎಂಜಿನಿಯರ್‌ಗಳ ತಂಡ ಶ್ರಮಿಸುತ್ತಿದೆ. ಇಂತಹ ರಹಸ್ಯ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಇತರೆ ಬಳಕೆದಾರರಂತೆಯೇ ಗೋಡೆ ಮೇಲೆ ಗೀಚಬಹುದು.

ಚಿತ್ರ, ಸಂಗೀತ, ದೃಶ್ಯ ತುಣುಕುಗಳನ್ನು ಅಪ್‌ಲೋಡ್ ಮಾಡಬಹುದು. ಕ್ಷಣ ಕ್ಷಣದಲ್ಲಿ ತಮಗೆ ಏನು ಅನಿಸುತ್ತಿದೆಯೋ ಅದನ್ನೆಲ್ಲಾ ಬರೆದುಕೊಳ್ಳಬಹುದು. ಆದರೆ, ಇಂತಹ ಪ್ರೊಫೈಲ್‌ಗಳು ಮಾತ್ರ ರಹಸ್ಯವಾಗಿರುತ್ತವೆ. `ನೀರಿನಲ್ಲಿ ಮೀನಿನ ಹೆಜ್ಜೆ ಗುರುತು ಹುಡುಕಿದಂತೆ~ ಇತರೆ ಬಳಕೆದಾರರಿಗೆ ಇವರು ಸದಾ ಅನಾಮಿಕರಾಗಿಯೇ ಇರುತ್ತಾರೆ ಎನ್ನುತ್ತಾರೆ ಕ್ಯಾಥರಿನ್.

`ಫೇಸ್‌ಬುಕ್~ನ ಇಂತಹ `ರಹಸ್ಯ~ ನಡೆಗಳು ಒಂದೆರಡಲ್ಲ. 2007ರಲ್ಲಿ  ಸಂಸ್ಥೆಯ ತಂತ್ರಜ್ಞರ ತಂಡ `ಜಡ್ಜ್ ಬಾಕ್ಸ್~ (Judgebox) ಎನ್ನುವ ಪ್ರೋಗ್ರಾಂ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಈ ಪ್ರೊಗ್ರಾಂ ಬಳಸಿ ಮಹಿಳೆಯರ ಧ್ವನಿ ಅನುಕರಿಸಬಹುದಿತ್ತು ಮತ್ತು ಅವರ ಲೈಂಗಿಕ ಸಾಮರ್ಥ್ಯದ ಕುರಿತು ರೇಟಿಂಗ್ ನೀಡಬಹುದಿತ್ತು!

ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾರ್ವಡ್‌ನಲ್ಲಿದ್ದಾಗ ಅಭಿವೃದ್ಧಿಪಡಿಸಿದ್ದ `ಫೇಸ್‌ಮಾಷ್~ (Facemash)  ಎನ್ನುವ ಅಪ್ಲಿಕೇಷನ್‌ನಂತೆಯೇ (hot or not)ಇದು ಕೂಡ ರಹಸ್ಯ ಕಾರ್ಯಾಚರಣೆ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಲೇಖಕಿ.

ಆರಂಭದಲ್ಲಿ ಫೇಸ್‌ಬುಕ್ ತನ್ನ ಸಿಬ್ಬಂದಿಗಾಗಿಯೇ `ಸ್ಟಾಕರ್~ (Fac­e­book Stalker)  ಎನ್ನುವ ಪ್ರೊಗ್ರಾಂ ಅಭಿವೃದ್ಧಿಪಡಿಸಿತ್ತು. ಈ ಪ್ರೊಗ್ರಾಂ ಬಳಸಿ, ಸಿಬ್ಬಂದಿಗಳು ತಮ್ಮ ಖಾತೆಗೆ ಭೇಟಿ ನೀಡಿದ ಇತರೆ ಬಳಕೆದಾರರ ಮಾಹಿತಿಗಳನ್ನು ಪಡೆಯಬಹುದಿತ್ತು ಮತ್ತು ಮೂರನೇ ವ್ಯಕ್ತಿಯ ಖಾತೆಗಳ ಮೇಲೆ ನಿಗಾ ಇಡಬಹುದಿತ್ತು. ಈ ನಿಗೂಢ ಕಾರ್ಯಾಚರಣೆ ಬಗ್ಗೆ `ಡೈಲಿ ಮೇಲ್~ ವರದಿ ಮಾಡಿತ್ತು.

ಫೇಸ್‌ಬುಕ್ ಆರಂಭದಲ್ಲಿ ತನ್ನ ಬಳಕೆದಾರರಿಗೆ `ಮಾಸ್ಟರ್ ಪಾಸ್‌ವರ್ಡ್~ ನೀಡುತ್ತಿತ್ತು. ಇದು ಎಷ್ಟು ದುರ್ಬಲವಾಗಿತ್ತು ಎಂದರೆ, ಇದಕ್ಕೆ ಯಾವುದೇ ಭದ್ರತೆ ಇರಲಿಲ್ಲ. ಸ್ವಲ್ಪ ಗಣಕ ಜ್ಞಾನ ಇದ್ದ ಯಾರು ಬೇಕಾದರೂ ಸುಲಭವಾಗಿ ಇದನ್ನು ಹ್ಯಾಕ್ ಮಾಡಬಹುದಿತ್ತು ಎನ್ನುವ ಕ್ಯಾಥರಿನ್, `ಡಾರ್ಕ್  ಪ್ರೊಫೈಲ್~ ಸೃಷ್ಟಿಸುವ ಯತ್ನ 2006ರಲ್ಲೇ ನಡೆದಿತ್ತು ಎನ್ನುತ್ತಾರೆ.

ಇತ್ತೀಚೆಗೆ ತನ್ನ 90 ಕೋಟಿಗೂ ಹೆಚ್ಚಿನ ಬಳಕೆದಾರರು ಫೇಸ್‌ಬುಕ್ ಇ-ಮೇಲ್ ಖಾತೆಯನ್ನೇ ಹೊಂದಬೇಕು  ಎಂದು ಹೇಳಿ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಈ ಸಾಮಾಜಿಕ ಜಾಲ ತಾಣ, ಈಗ ಕ್ಯಾಥರಿನ್ ಆರೋಪವನ್ನೂ ಮೈಮೇಲೆ ಎಳೆದುಕೊಂಡಿದೆ. ಸಾಮಾಜಿಕ ಜಾಲ ತಾಣಗಳ ನಿಗೂಢ ನಡೆ ಬಲ್ಲವರ‌್ಯಾರು?
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.