ADVERTISEMENT

ಮತ್ತೆ ಸುದ್ದಿಯಲ್ಲಿ ಬ್ಲ್ಯಾಕ್ ಬೆರಿ

ಜೋಮನ್ ವರ್ಗಿಸ್
Published 19 ಏಪ್ರಿಲ್ 2011, 19:30 IST
Last Updated 19 ಏಪ್ರಿಲ್ 2011, 19:30 IST
ಮತ್ತೆ ಸುದ್ದಿಯಲ್ಲಿ ಬ್ಲ್ಯಾಕ್ ಬೆರಿ
ಮತ್ತೆ ಸುದ್ದಿಯಲ್ಲಿ ಬ್ಲ್ಯಾಕ್ ಬೆರಿ   

ಕಳೆದ ವಾರ ‘ಬ್ಲ್ಯಾಕ್ ಬೆರಿ’ ಸ್ಮಾರ್ಟ್‌ಫೋನ್ ತಯಾರಿಕೆ ಕಂಪೆನಿ ‘ರಿಸರ್ಚ್ ಇನ್ ಮೋಷನ್’ನ (ರಿಮ್) ಸ್ಥಾಪಕ ಮೈಕ್ ಲಜಾರ್ಡಿಸ್ ‘ಬಿಬಿಸಿ’ ಸಂದರ್ಶನ ನಡೆಯತ್ತಿರುವಾಗಲೇ ಹಠಾತ್ತಾಗಿ ನಿರ್ಗಮಿಸಿದರು. ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬ್ಲ್ಯಾಕ್ ಬೆರಿ ಸೇವಾ ಸುರಕ್ಷತೆ  ವಿಷಯಗಳಿಗೆ ಸಂಬಂಧಪಟ್ಟಂತೆ ವರದಿಗಾರ ಕೇಳಿದ ಪ್ರಶ್ನೆಗೆ ಮೈಕ್ ಸಿಡಿಮಿಡಿಗೊಂಡಿದ್ದೆ ಇದಕ್ಕೆ ಕಾರಣ.

ಹಾಗೆ ನೋಡಿದರೆ, ಭಾರತದಲ್ಲಿ ಬ್ಲ್ಯಾಕ್‌ಬೆರಿ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಪ್ರಾರಂಭವಾಗಿ ಆರೇಳು ತಿಂಗಳುಗಳೇ ಕಳೆದಿವೆ. ಬ್ಲ್ಯಾಕ್‌ಬೆರಿ ಮೆಸೆಂಜರ್ ಮತ್ತು ಇ-ಮೇಲ್‌ನಲ್ಲಿ ಬಳಸುವ ಗೂಢ ಲಿಫಿಯನ್ನು ಓದಲು ಹಾಗೂ ಅದರ ಮೇಲೆ ನಿಗಾ ವಹಿಸಲು ಆಗುವುದಿಲ್ಲ, ಇದು ದೇಶದ ಭದ್ರತೆಗೆ ಆತಂಕ ತರುವ ವಿಷಯ ಎನ್ನುವುದು ಇಲ್ಲಿನ ಭದ್ರತಾ ಅಧಿಕಾರಿಗಳ ವಾದ. ಭಾರತ ಸರ್ಕಾರಕ್ಕೆ ಈ ಸೇವೆಗಳ ಮೇಲೆ ನಿಗಾ ವಹಿಸುವ ತಂತ್ರಜ್ಞಾನವನ್ನು ಒದಗಿಸುತ್ತೇವೆ ಹಾಗೂ ಭಾರತದಲ್ಲಿಯೇ ಸರ್ವರ್ ಪ್ರಾರಂಭಿಸುತ್ತೇವೆ ಎಂದು ‘ರಿಮ್’ ಹೇಳುತ್ತಲೇ ಬಂದಿದೆ.

‘ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಬ್ಲ್ಯಾಕ್ ಬೆರಿ ಎದುರಿಸುತ್ತಿರುವ ಸೇವಾ ಸುರಕ್ಷತೆ ಲೋಪಗಳೇನು? ಎಂಬ ವರದಿಗಾರನ ಈ ಪ್ರಶ್ನೆಗೆ ಮೈಕ್ ಸಿಟ್ಟಿನಿಂದಲೇ ‘ನಾವು ಯಾವುದೇ ದೇಶದಲ್ಲಿ ಭದ್ರತೆ ಸಮಸ್ಯೆ ಎದುರಿಸುತ್ತಿಲ್ಲ. ಪ್ರಪಂಚದಾದ್ಯಂತ ನಾವು ವ್ಯವಹಾರ ನಡೆಸುತ್ತೇವೆ. ವಾಣಿಜ್ಯ ಮುಖಂಡರು, ಖ್ಯಾತನಾಮರು, ಗ್ರಾಹಕರು ಸೇರಿದಂತೆ ಹದಿಹರೆಯದವರೂ ಕೂಡ ‘ಬ್ಲ್ಯಾಕ್‌ಬೆರಿ’ ಬಳಸುತ್ತಿದ್ದಾರೆ. ಇಲ್ಲಿ ‘ಭದ್ರತೆ’ ಎನ್ನುವುದೇ ನ್ಯಾಯಯುತವಾದ ಪ್ರಶ್ನೆ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  ಈಗಾಗಲೇ  ಗೃಹ ಸಚಿವಾಲಯ ಬ್ಲ್ಯಾಕ್‌ಬೆರಿಗೆ ಅನೇಕ ಬಾರಿ ಗಡುವುಗಳನ್ನು ವಿಸ್ತರಿಸಿದೆ. ಕೊನೆಯದಾಗಿ ಭದ್ರತಾ ಸಂಸ್ಥೆಗಳಿಗೆ ‘ನಿಗಾ’ ವಹಿಸುವ ತಂತ್ರಜ್ಞಾನವನ್ನು ಒದಗಿಸಬೇಕು ಇಲ್ಲವೇ ಬ್ಲ್ಯಾಕ್‌ಬೆರಿ ಸೇವೆಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. ಸದ್ಯ ಭಾರತದಲ್ಲಿ ಕೆನಡಾ ಮೂಲದ ಈ ಕಂಪೆನಿಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿದ್ದಾರೆ. ಭಾರತ ಪ್ರಪಂಚದಲ್ಲಿಯೇ ಎರಡನೆಯ ಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿದ್ದು, ಬ್ಲ್ಯಾಕ್‌ಬೆರಿ ಇಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯಾಗಿದೆ.

 ‘ಇತರೆ ಸ್ಮಾರ್ಟ್‌ಪೋನ್‌ಗಳ ಸೇವಾ ಸುರಕ್ಷತೆಯ ಬಗ್ಗೆಯೂ ತನಿಖೆ ನಡೆಸಿ, ಕೇವಲ, ‘ರಿಮ್’ ಕಂಪೆನಿಯನ್ನು ಮಾತ್ರ ಯಾಕೆ ಗುರಿಯಾಗಿಟ್ಟುಕೊಂಡು ನೋಡುತ್ತೀರಿ, ‘ಭದ್ರತೆ’ ಒಟ್ಟು ಸ್ಮಾರ್ಟ್‌ಫೋನ್ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಎನ್ನುತ್ತಾರೆ ಮೈಕ್. ಬ್ಲ್ಯಾಕ್ ಬೆರಿ ಸೇವೆಗಳಂತೆ  ಜಿ-ಮೇಲ್ ಮತ್ತು ಸ್ಕೈಪ್ ಸೇವೆ ಕೂಡ ಸಮಾನ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ, ಇದನ್ನು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ ಎನ್ನುವುದು ಅವರ ವಾದ. ‘ಭಾರತದಲ್ಲಿ ಬ್ಲ್ಯಾಕ್ ಬೆರಿ ತನ್ನ ಸರ್ವರ್ ನಿರ್ಮಿಸಲಿ. ಇದರಿಂದ ಮೆಸೆಂಜರ್ ಸೇವೆಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. 

‘ಸಂದರ್ಶನದಿಂದ ಮೈಕ್ ಎದ್ದು ಹೊರನಡೆದ ಬೆನ್ನಲ್ಲೇ, ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಮ್ ಬ್ಲಾಸಿಲ್ಲಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ತಮ್ಮ  ಕಂಪೆನಿಯ ಬಗ್ಗೆ ಬರೆಯದಿರುವಂತೆ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ. ಆದರೆ, ಬ್ಲ್ಯಾಕ್‌ಬೆರಿಯ ಬಹುನಿರೀಕ್ಷಿತ ‘ಪ್ಲೇ ಬುಕ್ ಟ್ಯಾಬ್ಲೆಟ್’ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು, ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯ ಹೇಳಿಕೆಗಳು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ‘ಪ್ಲೇ ಬುಕ್’ ಆ್ಯಪಲ್ ಐಫೋನ್ ಹೊಸ ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ಸೂಚನೆ ಇದೆ. ಆದರೆ, ಬ್ಲ್ಯಾಕ್‌ಬೆರಿಯನ್ನು  ‘broken brand’ ಎಂದು ಈಗಾಗಲೇ ಅಮೆರಿಕದ ಮೊಬೈಲ್ ವಿಶ್ಲೇಷಣೆಕಾರರು ಬಣ್ಣಿಸಿದ್ದಾರೆ.

7 ಇಂಚಿನ ‘ಬ್ಲ್ಯಾಕ್ ಬೆರಿ ಪ್ಲೇ ಬುಕ್’ ವಿನ್ಯಾಸ ಕಣ್ಣು ಕುಕ್ಕುವಂತಿದೆ. ಕಂಪೆನಿ ಇದನ್ನು ಭವಿಷ್ಯದ ‘ಕರಡಚ್ಚು’ ಎಂದೇ ಬಣ್ಣಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ‘ಬ್ಲ್ಯಾಕ್ ಬೆರಿ ಟಾರ್ಚ್’ ಮಾರುಕಟ್ಟೆಗೆ ಬಂದ ನಂತರ ‘ರಿಮ್’ ಯಾವುದೇ ಹೊಸ  ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ  ಮಾಡಿಲ್ಲ. ಈಗಾಗಲೇ ಅಮೆರಿಕದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ನೆಲೆ ಕುಸಿಯತೊಡಗಿದೆ.  ಈ ಹಿನ್ನೆಲೆಯಲ್ಲಿ ಕಂಪೆನಿಗೆ ‘ಪ್ಲೇ ಬುಕ್’ ಬಹು ನಿರೀಕ್ಷಿತ ಉತ್ಪನ್ನ.  ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಸಾಗರೋತ್ತರ ಮೊಬೈಲ್ ಮಾರುಕಟ್ಟೆಯತ್ತ ‘ರಿಮ್’ ಹೆಚ್ಚಿನ ಗಮನಹರಿಸುತ್ತಿದೆ.

ಸದ್ಯ ಬ್ಲ್ಯಾಕ್‌ಬೆರಿ 180 ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಒಟ್ಟು ಜಾಗತಿಕ ಮಾರುಕಟ್ಟೆಯ ಶೇ 93ರಷ್ಟು ಭಾಗವನ್ನು ನಾವು ತಲುಪಿದ್ದೇವೆ. ಅಮೆರಿಕದಲ್ಲಿ ಸಂಸ್ಥೆಗೆ ಸ್ವಲ್ಪ ಹಿನ್ನಡೆ ಆಗಿರಬಹುದು. ಆದರೆ, ಇದು ಜಾಗತಿಕ ವ್ಯವಹಾರ, ಏಳುಬೀಳುಗಳು ಸಾಮಾನ್ಯ  ಎನ್ನತ್ತಾರೆ ಜಿಮ್. ಸದ್ಯ ‘ರಿಮ್’ ತನ್ನ ಸ್ಮಾರ್ಟ್‌ಫೋನ್ ಗ್ರಾಹಕರಿಗಾಗಿ 27 ಸಾವಿರಕ್ಕೂ ಹೆಚ್ಚು ಆಪ್ಲಿಕೇಶನ್ಸ್‌ಗಳನ್ನು ಅಭಿವೃದ್ಧಿಪಡಿಸಿದೆ. ಹಾಗೆ ನೋಡಿದರೆ ಐಫೋನ್ ಆಪ್ಲಿಕೇಶನ್ಸ್‌ಗಳ ಸಂಖ್ಯೆ ಈಗಾಗಲೇ 3.5 ಲಕ್ಷವನ್ನು ದಾಟಿದೆ. ಗೂಗಲ್ ಆಂಡ್ರಾಯ್ಡಾ ಬಳಕೆದಾರರಿಗಾಗಿಯೇ  1.5 ಲಕ್ಷ ಆಪ್ಲಿಕೇಶನ್ಸ್‌ಗಳು ಲಭ್ಯ ಇವೆ.

‘ಪ್ಲೇಬುಕ್’ ಬ್ಲ್ಯಾಕ್‌ಬೆರಿ 6.1 ಕಾರ್ಯನಿರ್ವಹಣಾ ತಂತ್ರಾಂಶ  ಹೊಂದಿದೆ. ಇದು ಗರಿಷ್ಠ ಸ್ಪಷ್ಟತೆಯ ದೃಶ್ಯ ಪರದೆಯನ್ನು ಹೊಂದಿರುವುದು ಮಾತ್ರವಲ್ಲದೆ, ಏಕಕಾಲದಲ್ಲಿ ಹಲವು ಆಪ್ಲಿಕೇಶನ್ಸ್ ಬಳಸಲು ನೆರವಾಗತ್ತದೆ.  ‘ರಿಮ್’ ತನ್ನ ಎಲ್ಲ ಹೊಸ ಟಚ್‌ಸ್ಕ್ರೀನ್ ಉಪಕರಣಗಳಿಗೆ ‘ವರ್ಚುವಲ್’ ಕಿಲಿಮಣೆಯನ್ನು  ವಿನ್ಯಾಸಗೊಳಿಸುವುದಾಗಿ ಪ್ರಕಟಿಸಿದೆ. ವಿವಾದಗಳ ನಡುವೆ ಬ್ಲ್ಯಾಕ್ ಬೆರಿ ಮತ್ತೊಮ್ಮೆ ಎದ್ದು ಬರುವುದೇ ಕಾದು ನೋಡಬೇಕು.
                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.