ADVERTISEMENT

ಮರೆಗುಳಿಗಾಗಿ `ಹುಡುಕು' ತಂತ್ರಾಂಶ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST
ಮರೆಗುಳಿಗಾಗಿ `ಹುಡುಕು' ತಂತ್ರಾಂಶ!
ಮರೆಗುಳಿಗಾಗಿ `ಹುಡುಕು' ತಂತ್ರಾಂಶ!   

ವಸ್ತುಗಳನ್ನು ಮರೆತು ಅಲ್ಲಲ್ಲಿ ಇಡುವ ಮರೆಗುಳಿಗಳು ಅದನ್ನು ಜ್ಞಾಪಿಸಿಕೊಳ್ಳಲು ಪಡುವ ಚಡಪಡಿಕೆ ಹೇಳ ತೀರದು. `ಇಲ್ಲೇ ಇರಿಸಿದ್ದೆ, ಎಲ್ಲಿ ಹೋಯ್ತು?' ಎಂದು ಮನೆಯಲ್ಲಿ ಕುಟುಂಬದವರ ಮೇಲೂ, ಕಚೇರಿಯಲ್ಲಾದರೆ ಕೈಕೆಳಗಿನ ಸಿಬ್ಬಂದಿ ಮೇಲೂ ರೇಗುತ್ತಲೇ ಇರುತ್ತಾರೆ!

ಇಂತಹ ಮರೆಗುಳಿಗಳಿಗೆ ಕಳೆದುಕೊಂಡ ವಸ್ತುವನ್ನು ಕ್ಷಣಾರ್ಧದಲ್ಲಿ ಹುಡುಕಿಕೊಡುವ ತಂತ್ರಜ್ಞಾನವೊಂದು ಅಭಿವೃದ್ಧಿಯಾಗಿದೆ.
ಸ್ಮಾರ್ಟ್‌ಫೋನ್ ಇಲ್ಲವೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಈ  ಅಪ್ಲಿಕೇಷನ್‌ಗೆ `ಫೈಂಡ್ ಮೈ ಸ್ಟಫ್' ಎಂದು ಹೆಸರು. ಇದು ಮರೆತು ಅಲ್ಲಿ- ಇಲ್ಲಿ ಇರಿಸಿದ ಕೀ, ಪರ್ಸ್, ಕನ್ನಡಕ ಇನ್ನಿತರ ವಸ್ತುಗಳನ್ನು ಹುಡುಕಿಕೊಡುತ್ತದೆ.

ಇದಕ್ಕೆ ನೀವು ಮಾಡಬೇಕಿದ್ದು ಇಷ್ಟೆ. ಸೂಕ್ಷ್ಮ ಸಂವೇದಿ ಚಿಪ್ ಒಂದನ್ನು ಬೆಲೆ ಬಾಳುವ ವಸ್ತುಗಳಿಗೆ(ಅಥವಾ ನೀವು ಪದೇ ಪದೇ ಮರೆಯುವ ವಸ್ತುವಿಗೆ) ಅಡಕ ಮಾಡಬೇಕು. ಒಂದು ವೇಳೆ ವಸ್ತು ಕಳೆದು ಹೋದರೆ ಸ್ಮಾರ್ಟ್‌ಫೋನ್ ಇಲ್ಲವೆ ಕಂಪ್ಯೂಟರ್‌ನಲ್ಲಿರುವ `ಫೈಂಡ್ ಮೈ ಸ್ಟಫ್' ಗ್ಯಾಜೆಟ್ ಅಪ್ಲಿಕೇಷನ್‌ನಲ್ಲಿ ಮರೆತ ವಸ್ತುವಿನ ವಿವರ ನಮೂದಿಸಿ `ಸರ್ಚ್' ಒತ್ತಿದರೆ ಚಿಪ್‌ಗೆ ಸಂದೇಶ ರವಾನೆ ಆಗುತ್ತದೆ. ಕಳೆದುಹೋದ ವಸ್ತು ಎಲ್ಲಿದೆ ಎಂಬ ಮಾಹಿತಿ ಕ್ಷಣ ಮಾತ್ರದಲ್ಲಿ ಲಭ್ಯವಾಗುತ್ತದೆ.

ಉದಾಹರಣೆಗೆ ಪದೇ ಪದೇ ಕಾರಿನ ಕೀ ಮರೆಯುವ ಮರೆಗುಳಿ ನೀವಾದರೆ, ಕಾರಿನ ಕೀಗೆ `ಫೈಂಡ್ ಮೈ ಸ್ಟಫ್' ಗ್ಯಾಜೆಟ್‌ನ ಚಿಪ್ ಅಡಕಗೊಳಿಸಿಡಿ. ಕಾರಿನ ಕೀ ಎಲ್ಲೋ ಇರಿಸಿ ಮರೆತಿದ್ದಾಗ ಸ್ಮಾಟ್‌ಫೋನ್ ಇಲ್ಲವೆ ಲ್ಯಾಪ್‌ಟ್ಯಾಪ್ ತೆರೆದು `ಫೈಂಡ್ ಮೈ ಸ್ಟಫ್' ಗ್ಯಾಜೆಟ್ ಅಪ್ಲಿಕೇಷನ್‌ಗೆ ಕೀ ವಿವರ ನಮೂದಿಸಿ `ಸರ್ಚ್' ಒತ್ತಿದರೆ, ಒಡನೆಯೇ ಕೀ ಎಲ್ಲಿ ಇದೆ ಎಂಬ ಸಂದೇಶ ಬರುತ್ತದೆ.

ಈ ಗ್ಯಾಜೆಟ್ ಅಭಿವೃದ್ಧಿ ಪಡಿಸಿರುವ ಜರ್ಮನಿಯ ಉಲಮ್ (ಯುಎಲ್‌ಎಂ) ವಿಶ್ವವಿದ್ಯಾಲಯದ ತಂತ್ರಜ್ಞಾನಿಗಳ ತಂಡವು ಪರ್ಸ್, ಕೀಚೈನ್, ಕನ್ನಡಕಗಳ ಮೇಲೆ ಇದನ್ನು ಪ್ರಯೋಗಿಸಿದ್ದು, ಉತ್ತಮ ಫಲಿತಾಂಶ ದೊರಕಿದೆ ಎಂದೂ ಹೇಳಿಕೊಂಡಿದ್ದಾರೆ.

ದೂರವಾಣಿ ಸಂಪರ್ಕ ಸಾಧನಗಳ ತಯಾರಕರು ಈ ತಂತ್ರಜ್ಞಾನವನ್ನು ಅಡಕ ಮಾಡಿದರೆ ಸಾಕು ಅದಕ್ಕೆ ಒಂದು ಆ್ಯಂಟನಾ ಹಾಕಿಕೊಂಡು ಈ ಗ್ಯಾಜೆಟ್ ಚಾಲು ಮಾಡಬಹುದು ಎಂಬುದು ತಂತ್ರಜ್ಞಾನಿಗಳ ಆಂಬೋಣ.

ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಕಂಪೆನಿಗಳ ಸಹಕಾರ ದೊರೆತರೆ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೂ ಬಳಸಿಕೊಳ್ಳಬಹುದಾಗಿದೆ ಎಂದು ತಂತ್ರಜ್ಞರ ತಂಡ ಹೇಳಿದೆ. ಅಂದಹಾಗೆ ಈ ತಂತ್ರಜ್ಞಾನ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ.

`ಈ ಸೂಕ್ಷ್ಮ ಸಂವೇದಿ ಚಿಪ್ ಮತ್ತು ಟ್ರಾನ್ಸ್‌ಮೀಟರ್ ಬಹಳ ಚಿಕ್ಕ ಗಾತ್ರದ್ದು ಮತ್ತು ಬೆಲೆ ಕೂಡ ಕಡಿಮೆ. ಜಗತ್ತು ಡಿಜಿಟಲ್‌ಗೆ ಪರಿರ್ವತನೆ ಆಗುತ್ತಿದೆ. ನಿಮ್ಮ ಮನೆಯೂ ಡಿಜಿಟಲೀಕರಣ ಆಗಬೇಡವೆ'? ಇದು ಗ್ಯಾಜೆಟ್ ಅಭಿವೃದ್ಧಿಪಡಿಸಿರುವ ತಂತ್ರಜ್ಞರು `ಮರೆಯದೇ' ಕೇಳುವ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.