ADVERTISEMENT

ಮೊಬೈಲ್ ಅಂತರ್ ಬ್ಯಾಂಕಿಂಗ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 11:55 IST
Last Updated 22 ಮಾರ್ಚ್ 2011, 11:55 IST
ಮೊಬೈಲ್ ಅಂತರ್ ಬ್ಯಾಂಕಿಂಗ್ ಸೌಲಭ್ಯ
ಮೊಬೈಲ್ ಅಂತರ್ ಬ್ಯಾಂಕಿಂಗ್ ಸೌಲಭ್ಯ   

ದೇಶದಾದ್ಯಂತ  13 ಬ್ಯಾಂಕುಗಳು ಶೀಘ್ರದಲ್ಲೇ  ಅಂತರ್ ಬ್ಯಾಂಕಿಂಗ್ ಮೊಬೈಲ್ ಪಾವತಿ ಸೇವೆ (ಐಎಂಪಿಎಸ್) ಪ್ರಾರಂಭಿಸಲಿವೆ. ಜತೆಗೆ ಈ ಹಣಕಾಸು ವರ್ಷದ ಅಂತ್ಯಕ್ಕೆ ‘ಐಎಂಪಿಎಸ್’ ವ್ಯಾಪ್ತಿಗೆ ಇನ್ನೂ 12 ಬ್ಯಾಂಕುಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು  ಭಾರತೀಯ ಮೊಬೈಲ್ ಪಾವತಿ ವೇದಿಕೆ ತಿಳಿಸಿದೆ. 

ಅಂತರ್ ಬ್ಯಾಂಕ್ ಮೊಬೈಲ್ ಹಣಕಾಸು ವಿನಿಮಯ ತಂತ್ರಜ್ಞಾನವನ್ನು ಭಾರತೀಯ ಪಾವತಿ ನಿಗಮ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದೆ.  ಹಣ ಪಾವತಿ ಇತ್ಯರ್ಥವನ್ನು ಭಾರತೀಯ ಕ್ಲಿಯರಿಂಗ್ ಕಾರ್ಪೊರೇಷನ್ ನೋಡಿಕೊಳ್ಳುತ್ತದೆ. 

ಅಂತರ್ ಬ್ಯಾಂಕಿಂಗ್ ವಹಿವಾಟು ಸೌಲಭ್ಯವು ಐಐಟಿ- ಚೆನ್ನೈ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಐಡಿಆರ್‌ಬಿಟಿ) ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ. ಏಪ್ರಿಲ್ ಮೊದಲ ವಾರದಿಂದ ಈ ಸೌಲಭ್ಯ ಜಾರಿಗೆ ಬರುವ ನಿರೀಕ್ಷೆ ಇದೆ. ಗ್ರಾಹಕರು ‘ಐಎಂಪಿಎಸ್’  ಸೌಲಭ್ಯದಿಂದ ಮನೆಯಲ್ಲಿ ಕುಳಿತೇ ತಮ್ಮ ಮೊಬೈಲ್‌ಗಳ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹು. ಉಳಿತಾಯ ಪರಿಶೀಲಿಸುವುದು ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲಿರುವ ಯಾವುದೇ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮಾಡಬಹುದು.

ಸದ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಉಚಿತವಾಗಿ ಪರಿಚಯಿಸಲು ಮುಂದಾಗಿವೆ.  ಭವಿಷ್ಯದಲ್ಲಿ ಮೊಬೈಲ್ ಮೂಲಕ ಬ್ಯಾಂಕಿಂಗ್ ವಹಿವಾಟು ಹೆಚ್ಚುವುದರಿಂದ ಹಾಗೂ ಮೊಬೈಲ್ ಚಂದಾದಾರರ ಸಂಖ್ಯೆಯೂ ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಬದಲಾವಣೆ ಅನಿವಾರ್ಯ ಎನ್ನುತ್ತಾರೆ ಬ್ಯಾಂಕಿನ ಅಧಿಕಾರಿಗಳು.

ಈಗಾಗಲೇ ಮೊಬೈಲ್ ಬ್ಯಾಂಕಿಂಗ್ ಸೇವೆ  ಜಾರಿಯಲ್ಲಿದ್ದರೂ, ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಾಗ ಸೇವಾ ಶುಲ್ಕ ಕಡಿತಗೊಳ್ಳುತ್ತದೆ. ಅಂತರ್ ಬ್ಯಾಂಕಿಂಗ್ ಸೌಲಭ್ಯದಿಂದ ಗ್ರಾಹಕರಿಗೆ ಈ ಹೊರೆ ತಪ್ಪುವ ಸಾಧ್ಯತೆಗಳಿವೆ. 

ರಿಲಯನ್ಸ್‌ನಲ್ಲಿ ಕ್ರಿಕೆಟ್ ವೀಕ್ಷಿಸಿ
ಎಲ್ಲೆಡೆ  ಕ್ರಿಕೆಟ್ ಹುಚ್ಚು. ಮೊಬೈಲ್‌ನಲ್ಲೇ ಸ್ಕೋರ್ ನೋಡುವ ತವಕ. ಏರುತ್ತಿರುವ ವಿಶ್ವಕಪ್ ಜ್ವರದ ಜತೆಯಲ್ಲಿಯೇ ರಿಲಯನ್ಸ್ ಮೊಬೈಲ್, ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ. ಬೆಂಗಳೂರು ಮೂಲದ ಮೊಬೈಲ್ ತಂತ್ರಜ್ಞಾನ ಕಂಪೆನಿ ‘ಟೆಲಿಬ್ರಹ್ಮ’ ಮೊಬೈಲ್‌ನಲ್ಲಿ ಕ್ರಿಕೆಟ್ ದೃಶ್ಯಗಳನ್ನು ವೀಕ್ಷಿಸಬಹುದಾದ ತಂತ್ರಾಂಶ ಸಿದ್ಧಪಡಿಸಿದೆ. 

 ಈ ತಂತ್ರಾಂಶದ ಮೂಲಕ ರಿಲಯನ್ಸ್ ಮೊಬೈಲ್‌ನಲ್ಲಿ ವಿಶ್ವಕಪ್ ಕ್ರಿಕೆಟ್‌ನ ಕ್ಷಣ ಕ್ಷಣದ ಚಿತ್ರವೀಕ್ಷಣೆ ಮಾಡಬಹುದು. ‘ಟೆಲಿಬ್ರಹ್ಮ’ ಬ್ಲೂಟೂಥ್ ತಂತ್ರಜ್ಞಾನದ ನೆರವಿನಿಂದ ಕ್ರೀಡಾಂಗಣದಿಂದ  ಪಂದ್ಯಗಳನ್ನು ಸೆರೆ ಹಿಡಿದು ಅದನ್ನು ನೇರವಾಗಿ ಮೊಬೈಲ್‌ಗಳಿಗೆ ತಲುಪಿಸುತ್ತದೆ. 

 ಕ್ರಿಕೆಟ್ ಸ್ಕೋರ್ ಜತೆಯಲ್ಲಿಯೇ ವಿಡಿಯೋ ಹೈಲೈಟ್ಸ್‌ಗಳನ್ನೂ ನೀಡುತ್ತದೆ. ಟಿವಿಯಲ್ಲಿ ಪಂದ್ಯ ನೋಡುತ್ತಿರುವಂತೇ ಈ ಚಿತ್ರಗಳನ್ನು ಕೂಡ ಮೊಬೈಲ್‌ನಲ್ಲಿ ನೋಡಬಹುದು.  ಇದು ರೋಮಾಂಚಕಾರಿ ಅನುಭವ ಎನ್ನುತ್ತಾರೆ ‘ಟೆಲಿಬ್ರಹ್ಮ ಸಂಸ್ಥೆಯ ಅಧ್ಯಕ್ಷ ಪಿ.ಆರ್ ಸತೀಶ್.  ಅಂದಹಾಗೆ ರಿಲಯನ್ಸ್ ಬಳಕೆದಾರರಿಗೆ ಮಾತ್ರ ಇದು ಉಚಿತ.  ಕಂಪೆನಿಯ ಶೇ 80ರಷ್ಟು ಹ್ಯಾಂಡ್‌ಸೆಟ್‌ಗಳಲ್ಲಿ  ಚಿತ್ರ ವೀಕ್ಷಣೆ ಸಾಧ್ಯ ಎಂದು ರಿಲಯನ್ಸ್  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.