ADVERTISEMENT

ಮೊಬೈಲ್ ಮೇಲಿನ ಬೆರಳುಗಳೇ... ಗೆಟಿಟ್!

ಪ್ರಜಾವಾಣಿ ವಿಶೇಷ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST
ಮೊಬೈಲ್ ಮೇಲಿನ ಬೆರಳುಗಳೇ... ಗೆಟಿಟ್!
ಮೊಬೈಲ್ ಮೇಲಿನ ಬೆರಳುಗಳೇ... ಗೆಟಿಟ್!   

ಬೆಂಗಳೂರು ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ನಗರಿ. ಇಲ್ಲಿಗೆ ನಿತ್ಯ ಹೊಸಮುಖಗಳು ದಾಖಲಾಗುತ್ತಲೇ ಇರುತ್ತದೆ. ಕೆಲಸಕ್ಕೆಂದು ಆಗಮಿಸುವ ವಲಸಿಗರಿಗೆ ವಾರಾಂತ್ಯವನ್ನು ರಂಜನೀಯವಾಗಿ ಕಳೆಯಲು ಪಬ್, ಕ್ಲಬ್, ರೆಸ್ಟೋರಾ, ರೆಸಾರ್ಟ್, ಮಾಲ್, ಮಲ್ಟಿಪ್ಲೆಕ್ಸ್ ಹೀಗೆ ನಾನಾ ನಮೂನೆಯ ಸ್ಥಳಗಳು ಬೇಕು.

ಆದರೆ ಅವರಿಗೆ ಇವುಗಳೆಲ್ಲಾ ಎಲ್ಲೆಲ್ಲಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಇರುವುದಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಗೆಟಿಟ್ ಹೊಸ ಅಪ್ಲಿಕೇಷನ್ ಹೊರತಂದಿದೆ. ಸ್ಥಳೀಯರಿಗೂ ಈ ಅಪ್ಲಿಕೇಷನ್ ಉಪಯೋಗಕಾರಿ.

ದೇಶದ ಅತಿದೊಡ್ಡ ಮಾಹಿತಿ ಶೋಧನಾ ಸೇವಾ ಸಂಸ್ಥೆ ಗೆಟಿಟ್ ಎಲ್ಲ ಮೊಬೈಲ್ ಪ್ಲಾಟ್‌ಫಾರಂಗಳಲ್ಲಿಯೂ ಲಭ್ಯವಾಗುವಂತಹ ಸ್ಥಳೀಯ ಶೋಧನಾ ಅಪ್ಲಿಕೇಷನ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಇಂತಹ ಸೇವೆಯನ್ನು ಒದಗಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಗೆಟಿಟ್ ಪಡೆದಿದೆ.
 
ಈ ಅಪ್ಲಿಕೇಷನ್ ಮೂಲಕ ಗ್ರಾಹಕರು ತಮಗೆ ಬೇಕಾದ ಯಾವುದೇ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಪಡೆಯಬಹುದು. ತಮ್ಮ ನೆಚ್ಚಿನ ಪಿಜ್ಜಾ ಅಥವಾ ಮಲ್ಟಿಪ್ಲೆಕ್ಸ್ ಟಿಕೆಟ್ ಖರೀದಿಸಬಹುದು. ಈ ಸೇವೆಯಲ್ಲಿ 4400 ಸಂಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
 
ಎಲ್ಲ ಸಮಯದಲ್ಲಿಯೂ ಈ ಸೇವೆ ಮೊಬೈಲ್‌ನಲ್ಲಿ ಲಭ್ಯ. ಹಾಟ್ ಡೀಲ್ ಹಾಗೂ ಸ್ಮಾರ್ಟ್ ಡೀಲ್ ಕೂಡ ಮಾಡಬಹುದು. ಏಳು ಲಕ್ಷಕ್ಕೂ ಅಧಿಕ ಜನರು ಈ ಸೇವೆ ಉಪಯೋಗಿಸುತ್ತಿದ್ದಾರೆ. ಸೇವೆಯಿಂದ ಖುಷಿಯಾಗಿದ್ದಾರೆ.

`ಆಂಡ್ರಾಯಿಡ್, ಐ-ಫೋನ್ ಮತ್ತು ಬ್ಲ್ಯಾಕ್‌ಬೆರ‌್ರಿ ಮೊಬೈಲ್ ಮಾರ್ಕೆಟ್ ಸ್ಟೋರ್‌ಗಳಿಂದ ಈ ಅಪ್ಲಿಕೇಷನ್‌ನ್ನು ಗ್ರಾಹಕರು ಸುಲಭವಾಗಿ ಮತ್ತು ನೇರವಾಗಿ ತಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದೂ ಸಂಪೂರ್ಣ ಉಚಿತವಾಗಿ.

ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆ ಮತ್ತು ಸ್ಮಾರ್ಟ್‌ಫೋನ್‌ಗಳ ವಿವಿಧ ಪ್ಲಾಟ್‌ಫಾರಂಗಳನ್ನು ತಲುಪಲು ಸಾಧ್ಯವಾಗುವಂತೆ ಗೆಟಿಟ್ ಈ ಅಪ್ಲಿಕೇಷನ್ ರೂಪಿಸಿದೆ. ಈ ಪೈಕಿ ಅಂಡ್ರಾಯಿಡ್ ಬಹಳ ಬೇಗನೇ ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ~ ಎನ್ನುತ್ತಾರೆ ಗೆಟಿಟ್ ಇನ್ಫೋ ಸರ್ವಿಸ್‌ನ ಸಿಇಒ ಸಿದ್ಧಾರ್ಥ್ ಗುಪ್ತಾ.

ಈ ಅಪ್ಲಿಕೇಷನ್ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಇದರಲ್ಲಿ ಇಂಟರ‌್ಯಾಕ್ಟಿವ್ ಮತ್ತು ಗ್ರಾಫಿಕಲ್ ಇಂಟರ್‌ಫೇಸ್ ಇರುವುದರಿಂದ ಗ್ರಾಹಕರು ಮನೋರಂಜನೆಯ ಮಾದರಿಯಲ್ಲಿಯೇ ಮಾಹಿತಿ ಅಗೆಯಲು ಮುಂದಾಗಬಹುದು.
 
ಜಿಪಿಎಸ್ ಬಳಕೆಯ ಮೂಲಕ ಗ್ರಾಹಕರು ಹಾಲಿ ಇರುವ ಸ್ಥಳವನ್ನು ಈ ಅಪ್ಲಿಕೇಷನ್ ತಾನಾಗಿಯೇ ಪತ್ತೆ ಹಚ್ಚುತ್ತದೆ. ಜನಪ್ರಿಯ ಮತ್ತು ಪ್ರಮುಖ ವಿಭಾಗಗಳಿಗೆ ತ್ವರಿತವಾಗಿ ಲಿಂಕ್ ಒದಗಿಸುವ ಗೆಟಿಟ್ ಅಪ್ಲಿಕೇಷನ್ ಸ್ಥಳ ಮತ್ತು ಶೋಧನಾ ಆಧಾರಿತದ ಪದಗಳನ್ನು ಒದಗಿಸುತ್ತದೆ.
 
ಸಾಗಬೇಕಾದ ದಿಕ್ಕಿನ ಮಾರ್ಗದರ್ಶನ ನೀಡುವ ಇಂಟರ‌್ಯಾಕ್ಟಿವ್ ಮ್ಯಾಪ್ ಕೂಡ ಇದರಲ್ಲಿದೆ. ಒಂದೇ ಒಂದು ಕ್ಲಿಪ್ ಅಥವಾ ಟ್ಯಾಪ್ ಮೂಲಕ ಯಾವುದೇ ವಹಿವಾಟಿಗೆ ಸಂಬಂಧಿಸಿದ ಕರೆ ಮಾಡಬಹುದು ಇಲ್ಲವೇ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು.

ಗೆಟಿಟ್ ಕರ್ನಾಟಕದಲ್ಲಿ ಕಳೆದ 25 ವರ್ಷಗಳಿಂದ ಸೇವೆಯಲ್ಲಿದ್ದು, ಬೆಂಗಳೂರಿನಲ್ಲಿ ಗೆಟಿಟ್ ಯೆಲ್ಲೋ ಪೇಜಸ್‌ನ 19 ಆವೃತ್ತಿಗಳನ್ನು ಹೊರತಂದಿದೆ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಮಾಹಿತಿ ಸೇವೆ ಒದಗಿಸುತ್ತಿರುವ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯನ್ನೂ ಗೆಟಿಟ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.