ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧಿಗಳ ನಡವಳಿಕೆಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಕಂಪ್ಯೂಟರ್ ಆ್ಯಂಟಿ ವೈರಸ್ ಸಂಸ್ಥೆ ‘ಸಿಮ್ಯಾಂಟೆಕ್ ಕಾರ್ಪೊರೇಷನ್’ ಇತ್ತೀಚೆಗೆ ಅಧ್ಯಯನ ನಡೆಸಿ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ, ಮಾಹಿತಿ ಕದಿಯಲು ಹ್ಯಾಕರ್‌ಗಳು ಬಳಸುತ್ತಿದ್ದ ‘ಕ್ಷಿಪ್ರ ದಾಳಿ’ ಈಗ ತೆರೆಮರೆಗೆ ಸರಿದಿದೆ. ಬದಲಿಗೆ ಯಾವುದಾದರೂ ಒಂದು ಕಂಪೆನಿಯನ್ನು ಗುರಿಯಾಗಿಟ್ಟುಕೊಂಡು ತಿಂಗಳುಗಟ್ಟಲೆ ಹೊಂಚು ಹಾಕಿ ‘ಮಹಾ ದಾಳಿ’ (mega breaches) ನಡೆಸುವ ಅಪಾಯಗಳು ಹೆಚ್ಚಿವೆ.
‘ಕ್ಷಿಪ್ರದಾಳಿ’ಯಲ್ಲಿ ಮಾಹಿತಿ ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ, ಮಹಾದಾಳಿಯಲ್ಲಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂದರೆ ಒಂದು ಮಹಾದಾಳಿ 50 ಸಣ್ಣ ದಾಳಿಗಳಿಗೆ ಸಮನಾಗಿರುತ್ತದೆ ಎನ್ನುತ್ತಾರೆ ಕಂಪ್ಯೂಟರ್ ತಂತ್ರಜ್ಞರು.
ಆತಂಕಕಾರಿ ಸಂಗತಿ ಎಂದರೆ, ಭಾರತದಲ್ಲಿ ಇತ್ತೀಚೆಗೆ ನಡೆದಿರುವ ಸೈಬರ್ ದಾಳಿಗಳಲ್ಲಿ ಶೇ 69ರಷ್ಟು ಬೃಹತ್ ಪ್ರಮಾಣದ ಉದ್ಯಮ ಸಂಸ್ಥೆಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆದಿವೆ ಎನ್ನುತ್ತಾರೆ ಸಿಮ್ಯಾಂಟೆಕ್ ಇಂಡಿಯಾದ ತಂತ್ರಜ್ಞಾನ ಮಾರಾಟ ವಿಭಾಗದ ನಿರ್ದೇಶಕ ತರುಣ್ ಕೌರಾ.
‘ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳ ತಾಳ್ಮೆ, ಆತ್ಮವಿಶ್ವಾಸ ಅದೆಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂದರೆ ಬೃಹತ್ ಪ್ರಮಾಣದ ಹಾನಿ ಉಂಟು ಮಾಡುವ ಅವಕಾಶ ಸಿಗುವವರೆಗೂ ಅವರು ಕಾಯುತ್ತಲೇ ಇರುತ್ತಾರೆ. ಸರ್ವರ್ ಮೇಲೆ ದಾಳಿ ನಡೆಸಿ ದತ್ತಾಂಶಗಳನ್ನು ಕದಿಯುವ ಪ್ರಕರಣಗಳಲ್ಲಿ ಈ ವರ್ಷ ಕಳೆದ ವರ್ಷಕ್ಕಿಂತ ಶೇ ೬೨ರಷ್ಟು ಹೆಚ್ಚಳ ಕಂಡುಬಂದಿದೆ. ಇದರಿಂದ ಸುಮಾರು ೫೫ ಕೋಟಿಗೂ ಅಧಿಕ ಮಂದಿಯ ವೈಯಕ್ತಿಕ ಮಾಹಿತಿಗಳು ಬಹಿರಂಗಗೊಂಡಿವೆ. ಕಂಪೆನಿಗಳ ಮೇಲೆ ಹೊಂಚು ಹಾಕಿ ನಡೆಸುವ ಸೈಬರ್ ದಾಳಿ ಪ್ರಮಾಣ ೨೦೧೨ಕ್ಕೆ ಹೋಲಿಸಿದರೆ ೨೦೧೩ರಲ್ಲಿ ಮೂರು ಪಟ್ಟು ಹೆಚ್ಚಿವೆ’ ಎನ್ನುತ್ತಾರೆ ಅವರು.
‘ದತ್ತಾಂಶ ಸೋರಿಕೆಯಲ್ಲಿ ಸಂಸ್ಥೆಯ ಒಳಗೇ ಇರುವ ದೋಷಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕಂಪೆನಿಯೂ ತನ್ನ ದತ್ತಾಂಶ ಸುರಕ್ಷತಾ ವ್ಯವಸ್ಥೆಯನ್ನು ಮತ್ತೆ ಮತ್ತೆ ಪರಿಶೀಲಿಸುತ್ತಿರಬೇಕಿದೆ. ಸಾಧ್ಯವಾದರೆ ಇಡೀ ಸುರಕ್ಷತಾ ವ್ಯವಸ್ಥೆಯನ್ನೇ ಮರು ವಿನ್ಯಾಸಗೊಳಿಸಬೇಕಿದೆ’ ಎಂಬ ಸಲಹೆಯನ್ನೂ ತರುಣ್ ಮುಂದಿಡುತ್ತಾರೆ.
ಹುಲಿ ಬೇಟೆಗೆ ಮೇಕೆ!
ಸೈಬರ್ ಅಪರಾಧಿಗಳು ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ ಮಾಡುವವರನ್ನು, ಮುಖ್ಯವಾಗಿ ಪ್ರಮುಖ ಹುದ್ದೆಯಲ್ಲಿರುವವರ ಖಾಸಗಿ ಸಹಾಯಕರನ್ನೇ ಗುರಿಯಾಗಿಟ್ಟು ದಾಳಿ ಮಾಡುತ್ತಾರೆ. ಈ ದಾಳಿಯಿಂದ ಲಭಿಸುವ ಮಾಹಿತಿಯನ್ನು ದೊಡ್ಡ ದಾಳಿಗೆ ಮೆಟ್ಟಿಲಾಗಿ ಬಳಸಿಕೊಳ್ಳುತ್ತಾರೆ. ಹುಲಿಯನ್ನು ಬೇಟೆಯಾಡಲು ಮೇಕೆಯನ್ನು ಬೋನಿಗೆ ಕಟ್ಟಿದಂತೆ ದೊಡ್ಡ ದೊಡ್ಡ ಕಂಪೆನಿಗಳ, ವಾಣಿಜ್ಯೋದ್ಯಮ ಸಂಸ್ಥೆಗಳ ಪ್ರಮುಖರ ಮಾಹಿತಿ ಕೋಶಕ್ಕೆ ಕನ್ನ ಹಾಕುವ ಸಲುವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು ದಾಳಗಳಾಗಿ ಬಳಸಿಕೊಳ್ಳಲಾಗುತ್ತದೆ. ಇಂತಹ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳು ತಮ್ಮಲ್ಲಿನ ದತ್ತಾಂಶ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಹೀಗಾಗಿ ದಾಳಿಗೆ ಸುಲಭವಾಗಿ ತುತ್ತಾಗುತ್ತವೆ. ಭಾರತದಲ್ಲಿ ಇತ್ತೀಚೆಗೆ ಇಂತಹ ದಾಳಿ ಹೆಚ್ಚಿದೆ ಎನ್ನುತ್ತದೆ ‘ಸಿಮ್ಯಾಂಟೆಕ್’ ವರದಿ.
ಭಾರತದಲ್ಲಿ ಇತ್ತೀಚೆಗೆ ನಡೆದ ಸೈಬರ್ ದಾಳಿಗಳಲ್ಲಿ ಪ್ರತಿ ಹತ್ತರಲ್ಲಿ ನಾಲ್ಕು ದಾಳಿಗಳು ಹೋಟೆಲ್‌ಗಳು, ಆತಿಥ್ಯ ಸೇವಾ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ವೈಯಕ್ತಿಕ ಸೇವಾ ಸಂಸ್ಥೆಗಳ ಮೇಲೆಯೇ ನಡೆದಿವೆ. ಸುಲಭವಾಗಿ ದಾಳಿಗೆ ತುತ್ತಾಗುವ ಸಂಸ್ಥೆಗಳಲ್ಲಿ ಹಣಕಾಸು ಮತ್ತು ವಿಮಾ ಸೇವಾ ಕ್ಷೇತ್ರದ ಸಂಸ್ಥೆಗಳೂ ಸೇರಿವೆ.
ಇಂತಹ ದಾಳಿಗಳು ಒಂದೆಡೆಯಾದರೆ, ಇನ್ನೊಂದೆಡೆ ಕೇವಲ ವ್ಯಕ್ತಿಗಳ ಹೆಸರು, ಅಂಚೆ ವಿಳಾಸ, ಇ- ಮೇಲ್ ವಿಳಾಸ ಮತ್ತು ಸರ್ಕಾರದಿಂದ ಪಡೆದ ಗುರುತಿನ ಚೀಟಿ ಮೊದಲಾದವನ್ನು ಬಳಸಿಕೊಂಡು ವೈಯಕ್ತಿಕ ಮಾಹಿತಿ ಕದಿಯುವುದೂ ವ್ಯಾಪಕವಾಗಿ ನಡೆಯುತ್ತಿದೆ.
ಭಾರತ 3ನೇ ಸ್ಥಾನ
ಜಾಗತಿಕ ಸೈಬರ್ ಅಪರಾಧಿಗಳ ಪಾಲಿಗೆ ಭಾರತ ಬಹಳ ಸುಲಭದ ಕೇಂದ್ರ. ವಿಶ್ವದಲ್ಲಿಯೇ ದತ್ತಾಂಶ ಸೋರಿಕೆಗೆ ಬಲಿಯಾಗುವಂತಹ ದೇಶಗಳಲ್ಲಿ ಭಾರತಕ್ಕೆ ೩ನೇ ಸ್ಥಾನವಿದೆ. ಇ ಮೇಲ್ ‘ಸ್ಪಾಮ್’ ಚಟುವಟಿಕೆಯಲ್ಲಿ ಭಾರತ ವಿಶ್ವದ ರಾಜಧಾನಿ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ!
೧೪೫ ಕೋಟಿ ಬೂಟ್‌ನೆಟ್ ಸ್ಪಾಮ್‌ಗಳು ಪ್ರತಿ ದಿನ ಭಾರತದಿಂದಲೇ ಸೃಷ್ಟಿಯಾಗುತ್ತವೆ ಎಂಬ ಅಂದಾಜಿದೆ. ಕಟ್‌ವೇಲ್ ಮತ್ತು ಕೆಲಿಹೋಸ್‌ನಂತಹ ಬೃಹತ್ ಬೂಟ್ನೆಟ್ಗಳು ಈ ವರ್ಷ ಬಲು ಹೆಚ್ಚಿನ ಇ ಮೇಲ್ಗಳಿಗೆ ಮೆತ್ತಿಕೊಂಡು ವಿಶ್ವದೆಲ್ಲೆಡೆಗೆ ಹರಿದಾಡಿ ದೊಡ್ಡ ಮಟ್ಟದ ಅಪಾಯವನ್ನೇ ತಂದೊಡ್ಡಿವೆ.
ಗ್ಯಾಜೆಟ್‌ಗಳ ವ್ಯಾಪಕ ಬಳಕೆಯಿಂದ ಸೈಬರ್ ಅಪರಾಧ ಚಟುವಟಿಕೆಗಳು ಹೆಚ್ಚಿದೆ ಎನ್ನುತ್ತಾರೆ ತಂತ್ರಜ್ಞರು.
ಗ್ಯಾಜೆಟ್‌ಗಳಿಂದ ವಿವಿಧ ಅಪ್ಲಿಕೇಷನ್ಸ್ ಬಳಸಿ ರವಾನಿಸುವ ದತ್ತಾಂಶಗಳ ಪ್ರಮಾಣ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದುವೇ ಸೈಬರ್ ಅಪರಾಧಿಗಳ ಚಟುವಟಿಕೆ ಹೆಚ್ಚಲು ಪ್ರಮುಖ ಕಾರಣ. ಇಂತಹ ಗ್ಯಾಜೆಟ್‌ಗಳ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಕಾಪಾಡಿಕೊಳ್ಳಲು ಎಚ್ಚರ ವಹಿಸಬೇಕಿದೆ.
ಸುರಕ್ಷತಾ ಕ್ರಮಗಳು
*ನಿಮ್ಮ ಅಮೂಲ್ಯವಾದ ದತ್ತಾಂಶ ಎಲ್ಲಿದೆ ಮತ್ತು ಯಾವ ಕಡೆಗೆ ಅದು ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳಿರಿ. ಇದರಿಂದ ಅತ್ಯುತ್ತಮ ಸುರಕ್ಷತಾ ಕ್ರಮಗಳನ್ನು, ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ.
*ವೈಯಕ್ತಿಕ ಹಾಗೂ ಕಂಪೆನಿಯ ಅಮೂಲ್ಯವಾದ ಮಾಹಿತಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರ ರಚಿಸಿರಿ.
*ದತ್ತಾಂಶ ಸೋರಿಕೆ ತಡೆ, ಸಂಪರ್ಕ ಜಾಲ ಸುರಕ್ಷತೆ, ಎಂಡ್ ಪಾಯಿಂಟ್ ಸೆಕ್ಯುರಿಟಿ, ಪರಿಶೋಧನೆಗೆ ಬಲಿಷ್ಠವಾದ ಸುಭದ್ರತಾ ವ್ಯವಸ್ಥೆಯನ್ನು ಜಾರಿಗೆ ತನ್ನಿರಿ.
*ವೈಯಕ್ತಿಕ ಮಾಹಿತಿ ಕೋಶಕ್ಕೆ ಪ್ರಬಲವಾದ ಪಾಸ್‌ವರ್ಡ್ ರಚಿಸಿಕೊಳ್ಳಿರಿ. ಪ್ರತಿಯೊಂದು ವೆಬ್ತಾಣವನ್ನು ವೀಕ್ಷಿಸಿದಾಗಲೂ ವೈಯಕ್ತಿಕ ಮಾಹಿತಿಗೆ ಹಾನಿಯಾಗದಂತೆ ವಿಶೇಷವಾದ ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿರಿ. ಅದಕ್ಕಾಗಿ ಪಾಸ್‌ವರ್ಡ್ ನಿರ್ವಹಣಾ ತಂತ್ರಾಂಶದ ನೆರವು ಪಡೆದುಕೊಳ್ಳಿರಿ.
*ನಿಮ್ಮ ಬ್ಯಾಂಕ್ ವಹಿವಾಟಿನ ಮತ್ತು ಕ್ರೆಡಿಟ್ ಕಾರ್ಡ್‌ನ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸುತ್ತಿರಿ. ಶಂಕಾಸ್ಪದವಾದುದು ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ವರದಿ ಮಾಡಿರಿ.
*ಅನಪೇಕ್ಷಿತ ಇ ಮೇಲ್‌ಗಳ ಬಗೆಗಂತೂ ಬಹಳ ಜಾಗ್ರತೆ ವಹಿಸಿರಿ. ಆನ್‌ಲೈನ್ ಮೂಲಕ ನಿಮ್ಮ ಇ ಮೇಲ್‌ಗೆ ಬರುವ ಆಕರ್ಷಕ ಕೊಡುಗೆಗಳ ಆಮಿಷಗಳಿಗೆ ಬಲಿಯಾಗದಿರಿ.
*ಚಿಲ್ಲರೆ ವಹಿವಾಟು ಸಂಸ್ಥೆಗಳು, ಆನ್‌ಲೈನ್ ಮೂಲಕವೇ ಸೇವೆ ಒದಗಿಸುವಂತಹವರ ಬಗ್ಗೆ ಬಹಳ ಜಾಗ್ರತೆಯಾಗಿರಿ. ಯಾವುದೇ ಕಾರಣಕ್ಕೂ ಇ ಮೇಲ್‌ನಲ್ಲಿ ಬಂದ ಇಂತಹ ಲಿಂಕ್‌ಗಳ ಮೇಲೆ ಮೌಸ್ ಕ್ಲಿಕ್ ಮಾಡದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.