ADVERTISEMENT

ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ
ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ   

ಒಂದು ವೇಳೆ ನೀವು ನಿಮ್ಮ ಲ್ಯಾಪ್‌ಟಾಪ್‌ ಕಳೆದುಕೊಂಡರೆ, ಅದಕ್ಕೆ ನೀವು ಪ್ರಬಲ ಪಾಸ್‌ವರ್ಡ್‌ ನೀಡಿದ್ದರೂ, ಅದರಲ್ಲಿ ಇರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಸುಲಭವಾಗಿ ಪಡೆದುಕೊಳ್ಳಬಹುದು.

’ವಿಶಿಷ್ಟ ಪಾಸ್‌ವರ್ಡ್‌ ನೀಡಿದ್ದರೂ ಅದು ನಿಮ್ಮ ದತ್ತಾಂಶ ರಕ್ಷಿಸಲು ಸಹಾಯವಾಗುವುದಿಲ್ಲ. ಆ ಪಾಸ್‌ವರ್ಡ್‌ ನಿಮ್ಮ ಕಂಪ್ಯೂಟರ್‌ಗೆ ಲಾಗ್‌ಇನ್‌ ಆಗುವುದನ್ನು ತಡೆಯುತ್ತದೆಯೇ ಹೊರತು ಅದರಲ್ಲಿರುವ ಫೈಲ್‌ಗಳನ್ನು ನಕಲು ಮಾಡಿಕೊಳ್ಳುವುದನ್ನಲ್ಲ’ ಎಂದು ಸೈಫರ್‌ಟೆಕ್ಸ್‌ ಕಂಪನಿಯ ಭದ್ರತಾ ಎಂಜಿನಿಯರ್ ಡೆನಿಸ್ ಸ್ಟುವರ್ಟ್‌ ಅಭಿಪ್ರಾಯಪಡುತ್ತಾರೆ.

ಕಳ್ಳರು ಲ್ಯಾಪ್‌ಟಾಪ್‌ನ ಹಾರ್ಡ್‌ ಡ್ರೈವ್‌ ತೆಗೆದು, ಅದನ್ನು ಇನ್ನೊಂದು ಕಂಪ್ಯೂಟರ್‌ಗೆ ಅಳವಡಿಸಿ, ನೀವು ಸಂಗ್ರಹಿಸಿದ್ದ ಫೈಲ್‌ಗಳನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್‌ನ ಪಾಸ್‌ವರ್ಡ್‌ ರೀಸೆಟ್‌ ಮಾಡಿ, ನಿಮ್ಮ ಇ–ಮೇಲ್‌, ಪಾಸ್‌ವರ್ಡ್‌ಗಳು ಮತ್ತು ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳೂ ಇವೆ.

ADVERTISEMENT

ಹಾಗಿದ್ದರೆ, ಈ ಎರಡೂ ರೀತಿಯ ಅಪಾಯಗಳಿಂದ ದತ್ತಾಂಶ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ದತ್ತಾಂಶವನ್ನು ಗೂಢಲಿಪಿ (ಎನ್‌ಕ್ರಿಪ್ಷನ್‌) ಮೂಲಕ ಉಳಿಸಿಕೊಂಡರೆ ಈ ತೊಂದರೆ ತಪ್ಪುತ್ತದೆ.

‘ಗೂಢಲಿಪೀಕರಣ ಎಂಬುದು ದತ್ತಾಂಶವನ್ನು ಅದಲುಬದಲಾಗಿ ಮಾಡುವ ಗಣಿತ ಪ್ರಕ್ರಿಯೆ. ಬಹುಮುಖ್ಯವಾದ ಕಡತ ಅಥವಾ ಸಂಪೂರ್ಣ ಸಾಧನ
ವನ್ನೆ ಎನ್‌ಕ್ರಿಪ್ಟ್‌ ಮಾಡಿದರೆ ಅದನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ. ನಿಮ್ಮ ಲ್ಯಾಪ್‌ಟಾಪ್‌ ಕಳುವಾದರೂ ಅದರಲ್ಲಿರುವ ದತ್ತಾಂಶ ಪಡೆಯಲಾಗುವುದಿಲ್ಲ. ಪಾಸ್‌ವರ್ಡ್‌ ಇಲ್ಲದಿದ್ದರೆ ಗೋಜಲುಗೋಜಲಾಗಿರುವ ಮಾಹಿತಿಯಷ್ಟೇ ದೊರಕುತ್ತದೆ. ಲ್ಯಾಪ್‌ಟಾಪ್‌ ಅನ್ನೇ ಎನ್‌ಕ್ರಿಪ್ಟ್‌ ಮಾಡಿದರೆ ಪಾಸ್‌ವರ್ಡ್‌ ರೀಸೆಟ್‌ ಮಾಡುವುದೂ ಕಷ್ಟ’ ಎನ್ನುತ್ತಾರೆ ಸ್ಟುವರ್ಟ್‌.

ಎನ್‌ಕ್ರಿಪ್ಟ್‌ ಮಾಡುವುದು ಹೇಗೆ?
ಎನ್‌ಕ್ರಿಪ್ಷನ್‌ ಪ್ರಕ್ರಿಯೆಯನ್ನು ಸಾಫ್ಟ್‌ವೇರ್‌ ಎಂಜಿನಿಯರ್‌ಗಳೋ ಅಥವಾ ಕಂಪ್ಯೂಟರ್‌ ಸೈನ್ಸ್‌ ಓದಿರುವವರು ಮಾತ್ರ ಮಾಡುವಂತದ್ದಲ್ಲ. ಕೆಲವೇ ನಿಮಿಷಗಳಲ್ಲಿ ಯಾರು ಬೇಕಾದರೂ ಮಾಡಬಹುದು.

ನಿಮ್ಮಲ್ಲಿ ವಿಂಡೋಸ್‌ 10 ಮಾದರಿಯ ಲ್ಯಾಪ್‌ಟಾಪ್‌ ಇದ್ದರೆ ಅದರಲ್ಲಿ ಡಿಫಾಲ್ಟ್‌ ಆಗಿ ಎನ್‌ಕ್ರಿಪ್ಟ್‌ ಸೌಲಭ್ಯ ಇರುತ್ತದೆ. ಅದನ್ನು ಸೆಟ್ಟಿಂಗ್ಸ್‌, ಎಬೌಟ್‌, ಮತ್ತು ಡಿವೈಸ್‌ ಎನ್‌ಕ್ರಿಪ್ಷನ್‌ ಮೂಲಕ ಖಚಿತಪಡಿಸಿಕೊಳ್ಳಬಹುದು.

ಒಂದು ವೇಳೆ ನಿಮ್ಮ ಲ್ಯಾಪ್‌ಟಾಪ್‌ ಎನ್‌ಕ್ರಿಪ್ಷನ್‌ಗೆ ಸಹಕರಿಸದಿದ್ದರೆ, ಇತರ ಎನ್‌ಕ್ರಿಪ್ಷನ್‌ ಸಾಧನಗಳನ್ನು ಬಳಸಬಹುದು. ಅದರಲ್ಲಿ ಬಿಟ್‌ಲಾಕರ್‌ ಸಹ ಒಂದು. ಇದು ಔದ್ಯೋಗಿಕ ಮಾದರಿಯ ವಿಂಡೋಸ್‌ ಮತ್ತು ಇತರ ಆಧುನಿಕ ಮಾದರಿಗಳಲ್ಲಿ ಲಭ್ಯವಿದೆ. ಇದನ್ನು ಅತ್ಯಂತ ಸುಲಭವಾಗಿ ಅಳವಡಿಸಬಹುದು. ವಿಂಡೋಸ್‌ನ ಕಂಟ್ರೋಲ್‌ ಪ್ಯಾನೆಲ್‌, ಸಿಸ್ಟಂ ಮತ್ತು ಸೆಕ್ಯುರಿಟಿ, ಮ್ಯಾನೇಜ್‌ ಬಿಟ್‌ಲಾಕರ್‌ ವಿಧಾನದಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು. ಇದರ ಪಾಸ್‌ವರ್ಡ್‌ ಅನ್ನು ಅತ್ಯಂತ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ.

ವೆರಾಕ್ರಿಪ್ಟ್‌ ಎನ್ನುವ ಇನ್ನೊಂದು ಆಯ್ಕೆಯೂ ಇದೆ. ಇದನ್ನು ಬಳಸಿ ನಿಮ್ಮ ಕಂಪ್ಯೂಟರ್‌ನ ಹಾರ್ಡ್‌ ಡ್ರೈವ್‌ ಎನ್‌ಕ್ರಿಪ್ಟ್‌ ಮಾಡಬಹುದು. ಇದು ವಿಂಡೋಸ್‌ ಮತ್ತು ಬಿಟ್‌ಲಾಕರ್‌ ಬಳಸಿ ಎನ್‌ಕ್ರಿಪ್ಟ್‌ ಮಾಡಿದಷ್ಟು ಸರಳವಿಲ್ಲ. ಇನ್ನು, ಮ್ಯಾಕ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳು ಇನ್ನೂ ಆಧುನಿಕವಾಗಿವೆ. ಇವುಗಳಲ್ಲಿ ಫೈಲ್‌ವಾಲ್ಟ್‌ ಎಂಬ ಸಾಧನವಿದ್ದು, ಅದು ಸಂಪೂರ್ಣ ಸಿಸ್ಟಂ ಡ್ರೈವ್‌ ಅನ್ನು ಎನ್‌ಕ್ರಿಪ್ಟ್‌ ಮಾಡುತ್ತದೆ.

ಈಗಿನ ಐಫೋನ್‌ಗಳು ಮತ್ತು ಆಂಡ್ರಾಯ್ಡ್‌ ಫೋನ್‌ಗಳು, ನೀವು ಎಲ್ಲಿಯವರೆಗೂ ಪಾಸ್‌ವರ್ಡ್‌ ಬಳಸುತ್ತೀರೋ ಅಲ್ಲಿಯವರೆಗೂ ತಾನೇತಾನಾಗಿ ಎನ್‌ಕ್ರಿಪ್ಟ್‌ ಆಗುವ ಸೌಲಭ್ಯ ಒಳಗೊಂಡಿವೆ.

ಇವೆಲ್ಲಕ್ಕೂ ನಿಮ್ಮ ಪಾಸ್‌ವರ್ಡ್‌ ಸಂರಕ್ಷಿಸಿ, ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹುಮುಖ್ಯ. ನೀವು ಬೇಗನೆ ಪಾಸ್‌ವರ್ಡ್‌ ಮರೆಯುವವರಾದರೆ, ಅದನ್ನು ಒಂದು ಕಡೆ ಬರೆದು, ಜತೆಗೆ ಪಾಸ್‌ವರ್ಡ್‌ ರಿಕವರಿ ವಿಧಾನವನ್ನೂ ಬರೆದುಕೊಂಡು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಿ. ಅತೀ ಜಾಗ್ರತೆ ಮಾಡುವುದಕ್ಕಿಂತ ಕಣ್ಣಿಗೆ ಕಾಣುವ, ಆಗಾಗ್ಗೆ ಬಳಸುವ ಸ್ಥಳದಲ್ಲಿ ಇಡುವುದು ಉತ್ತಮ.
-ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.