ADVERTISEMENT

ಬಯೊ ಹ್ಯಾಕಿಂಗ್‌ ಮೇಲೆ ಮಾನವನ ಕಣ್ಣು

ಪೃಥ್ವಿರಾಜ್ ಎಂ ಎಚ್
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಬಯೊ ಹ್ಯಾಕಿಂಗ್‌ ಮೇಲೆ ಮಾನವನ ಕಣ್ಣು
ಬಯೊ ಹ್ಯಾಕಿಂಗ್‌ ಮೇಲೆ ಮಾನವನ ಕಣ್ಣು   

ತನ್ನ ಪ್ರತಿರೂಪ ಎಂಬಂತಹ ಯಂತ್ರಮಾನವನನ್ನು ಸೃಷ್ಟಿಸಿ, ಅದಕ್ಕೆ ಕೃತಕ ಬುದ್ಧಿಮತ್ತೆ ಜೋಡಿಸಿ, ಯಂತ್ರವೇ ನಿರ್ಣಯಗಳನ್ನು ಕೈಗೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಮತ್ತೊಂದೆಡೆ ತನ್ನ ದೇಹದಲ್ಲೇ ಯಂತ್ರಗಳನ್ನು, ಸಾಧನಗಳನ್ನು ಅಳವಡಿಸಿಕೊಂಡು, ಸಾಮ‌ರ್ಥ್ಯ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದ್ದಾನೆ. ಒಟ್ಟಿನಲ್ಲಿ ರೋಗಗಳನ್ನು, ಅಂಗವೈಕಲ್ಯಗಳನ್ನು ಮೆಟ್ಟಿ ನಿಲ್ಲಲು ಮಾನವ ನಡೆಸುತ್ತಿರುವ ಪ್ರಯತ್ನವೇ ಬಯೊಹ್ಯಾಕಿಂಗ್.

ದೇಹದ ಅಂಗಾಂಗಳಿಂದ ಸಾಧ್ಯವಾಗದ ಕೆಲಸವನ್ನು ಸಾಧನಗಳ ಸಹಾಯದಿಂದ ಮಾಡಿ, ಯಂತ್ರಗಳೊಂದಿಗೆ ಸಹಜೀವನ ನಡೆಸಲು ಪ್ರಯೋಗಗಳನ್ನು ನಡೆಸುತ್ತಿದ್ದಾನೆ. ತನ್ನ ಪ್ರಯತ್ನದಲ್ಲಿ ಕೆಲವು ಬಾರಿ ಯಶಸ್ವಿಯೂ ಆಗಿದ್ದಾನೆ.

ಹೃದಯಾಘಾತವನ್ನು ತಡೆಗಟ್ಟಲು ನೆರವಾಗುವ ಪೇಸ್‌ಮೇಕರ್ಸ್, ಶ್ರವಣ ದೋಷಗಳನ್ನು ನಿವಾರಿಸುವ ಕಾಂಕ್ಲಿಯರ್ ಇಂಪ್ಲಾಟ್ಸ್, ಸ್ತನಗಳ ಆಕೃತಿಯನ್ನು ಸರಿಪಡಿಸುವ ಬ್ರೆಸ್ಟ್ ಇಂಪ್ಲಾಂಟ್ಸ್ ಇವೆಲ್ಲಾ ಬಯೊಹ್ಯಾಕಿಂಗ್‌ನ ಪ್ರತಿರೂಪಗಳು. ಹೀಗೆ ಕೃತಕ ಹೃದಯ, ಕೃತಕ ಶ್ವಾಸಕೋಶ, ಕೃತಕ ರಕ್ತ ಎಂದು ಹಲವು ಪ್ರಯೋಗಗಳನ್ನು ಮಾಡಿದ್ದಾನೆ.

ADVERTISEMENT

ನ್ಯಾನೊ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಕಾಗ್ನೆಟಿವ್ ಸೈನ್ಸ್‌ನಂತಹ ತಂತ್ರಜ್ಞಾನಗಳು ಬಯೊ ಹ್ಯಾಕಿಂಗ್‌ಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿವೆ.

ಮಾನವ ತನ್ನ ಪಂಚೇಂದ್ರಿಯಗಳ ಮೂಲಕವೇ ಪ್ರಪಂಚದ ಜತೆ ಸಂವಹನ, ವ್ಯವಹಾರ ನಡೆಸುತ್ತಿದ್ದಾನೆ. ಆದರೆ ಬಯೊ ಹ್ಯಾಕಿಂಗ್ ಹೊಸ ಇಂದ್ರಿಯಗಳನ್ನು ನೀಡಿ ಮಾನವನ ಶಕ್ತಿಯನ್ನು ಹೆಚ್ಚಿಸುತ್ತಿದೆ. ಉದಾಹರಣೆಗೆ, ನಾರ್ತ್‌ ಸೆನ್ಸ್ ಸಾಧನವನ್ನು ಕೈಗೆ ಧರಿಸಿದರೆ ದಿಕ್ಸೂಚಿಯಂತೆ ನಿರಂತರವಾಗಿ ದಿಕ್ಕುಗಳನ್ನು ತೋರಿಸುತ್ತದೆ. ಹೆಚ್ಚು ದೂರ ಪ್ರಯಾಣಿಸುವವರಿಗೆ ನಾವಿಕರಿಗೆ, ಪರ್ವತಾರೋಹಿಗಳಿಗೆ ದಿಕ್ಕು ತಪ್ಪದಂತೆ ದಾರಿ ತೋರಿಸುತ್ತದೆ.

ಪ್ರತಿಧ್ವನಿ, ಪ್ರಕಂಪನಗಳ ಮೂಲಕ ಕೆಲಸ ಮಾಡುವಂತಹ ಎಲೊಕೇಷನ್ ಗಾಗಲ್ಸ್ ಮತ್ತು ಕೋಟ್ ಅನ್ನು ಅಂಧರು ಧರಿಸಿದರೆ ಸುತ್ತಮುತ್ತಲಿನ ಪರಿಸರವನ್ನು ಗ್ರಹಿಸಬಹುದು. ತಮ್ಮ ಎದುರಿಗಿರುವ ವಸ್ತುಗಳನ್ನು ಗುರುತಿಸಬಹುದು. ನ್ಯಾನೊ ಬೋಟ್‌ಗಳು ರಕ್ತದಲ್ಲಿ ನಿರಂತರವಾಗಿ ಸಂಚರಿಸುತ್ತಾ ಆರೋಗ್ಯವನ್ನು ಪರೀಕ್ಷಿಸುತ್ತವೆ. ಇದಷ್ಟೇ ಅಲ್ಲ, ದೂರದಿಂದಲೇ ಕೈ ಸನ್ನೆ ಮಾಡಿ ಬಾಗಿಲು ಮುಚ್ಚಲು, ವಾಹನಗಳನ್ನು ಚಾಲು ಮಾಡಲು, ಕಂಪ್ಯೂಟರ್‌ನಲ್ಲಿ ಲಾಗಿನ್‌ ಆಗುವಂತಹ ಕೆಲಸಗಳನ್ನು ಬಯೊ ಹ್ಯಾಕಿಂಗ್ ಮೂಲಕ ಮಾಡಬಹುದು. ಆದರೆ ಇವು ವಿಜ್ಞಾನ ಕಥೆಗಳಂತೆ ಕಂಡರೂ ವೈಜ್ಞಾನಿಕವಾಗಿ ಸಾಧ್ಯ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಇವು ಪ್ರಯೋಗ ಹಂತದಲ್ಲಿ ಇದ್ದರೂ, ಬಳಕೆಗೆ ಬಂದರೆ ಮನುಷ್ಯನ ಜೀವನ ಚಿತ್ರಣ ಬದಲಾಗಬಹುದು. ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತು. ಸೂಪರ್‌ಮ್ಯಾನ್‌ ಆಗಿ ಅವತರಿಸಬಹುದು. ಅಂತಹ ಕೆಲವು ವಿಶೇಷ ಸಾಧನಗಳು ಇವೆ.

ನ್ಯೂರೊ ಹೆಡ್‌ಸೆಟ್

ಕಂಪ್ಯೂಟರ್‌ನಲ್ಲಿ ಯಾವುದೊ ಒಂದು ಗೇಮ್‌ ಆಡಬೇಕು, ಆದರೆ ಕೈಲಿ ಕನ್ಸೋಲ್ಸ್‌ ಆಗಲಿ, ಮೌಸ್‌ ಆಗಲಿ ಇಲ್ಲ. ಆದರೂ ನೀವು ಅಂದುಕೊಂಡಹಾಗೆ ಆಟ ಆಡಬಹುದು. ಇದು ಹೇಗೆ ಸಾಧ್ಯವೆಂದರೆ? ಇಇಜಿ ತಂತ್ರಜ್ಞಾನ ನೆರವಿನಿಂದ ಕೆಲಸ ಮಾಡುವ ನ್ಯೂರೊ ಹೆಡ್‌ಸೆಟ್‌ ಧರಿಸಿದರೆ ಸಾಕು. ಮಿದುಳಿನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಸಂಕೇತಗಳನ್ನು ಕಂಪ್ಯೂಟರ್‌ಗೆ ಜೋಡಿಸುವ ಇದು ನಮ್ಮ ಆಲೋಚನೆಗಳಿಗೆ ಅನುಗುಣವಾಗಿ ಸೂಚನೆಗಳನ್ನು ನೀಡುತ್ತದೆ. ಕುತೂಹಲ, ಕೋಪ, ನಗು, ಪ್ರಶಾಂತತೆ ಹೀಗೆ 30 ವಿಧಧ ಭಾವನೆಗಳನ್ನು ಇದು ಗ್ರಹಿಸುತ್ತದೆ. ಪಾರ್ಶ್ವವಾಯು ಪೀಡಿತರಿಗೆ, ಅಂಗಾಂಗಗಳು ನಿಶ್ಚೇತನಗೊಂಡವರಿಗೆ ಇದು ಹಲವು ರೀತಿಯಲ್ಲಿ ನೆರವಾಗುತ್ತದೆ.

ಸ್ಮಾರ್ಟ್ ಕ್ಯಾಪ್

ಕಾರ್ಮಿಕರು, ಚಾಲಕರಿಗಾಗಿ ತಯಾರಿಸಿರುವಂತಹ ಸ್ಮಾರ್ಟ್‌ ಟೋಪಿ ಇದು. ಸುಸ್ತು, ನಿತ್ರಾಣವನ್ನು ಗುರುತಿಸಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡುವುದು ಇದರ ವಿಶೇಷ. ಇದರ ಒಳಗಿನ ಮೇಲ್ಭಾಗದಲ್ಲಿ ಪುಟ್ಟ ಪ್ರೊಸೆಸರ್‌ಗಳಿಂದ ಕೂಡಿದ ಕಾರ್ಡ್‌ ಇರುತ್ತದೆ. ವಾಹನ ಚಾಲನೆ ಮಾಡಬೇಕಾದರೆ ನಿದ್ದೆ ಬರುತ್ತಿದ್ದರೆ, ಸುಸ್ತಾಗಿದ್ದರೆ, ದೃಶ್ಯ, ಶಬ್ದದ ರೂಪದಲ್ಲಿ ಕಂಪ್ಯೂಟರ್‌ಗೆ ಮಾಹಿತಿ ರವಾನಿಸುತ್ತದೆ.

ಹೈಬ್ರಿಡ್ ಅಸಿಸ್ಟಿವ್

ಇದು ಟಚ್‌ಸ್ಕ್ರೀನ್ ರೀತಿ ಕೆಲಸ ಮಾಡುವ ಬ್ಲೂಟೂತ್ ಮಾದರಿಯ ಸಾಧನ . ಇದರ ಸಹಾಯದಿಂದ ನಮ್ಮ ಸಾಮರ್ಥ್ಯಕ್ಕೂ ಮೀರಿದ ತೂಕವನ್ನು ನಿರಾಯಾಸವಾಗಿ ಎತ್ತಬಹುದು. ಸೂಟ್‌ ರೀತಿಯ ಈ ಸಾಧನದಲ್ಲಿ ಕೀಲುಗಳಂತಹ, ಕೃತಕ ಅಂಗಾಂಗಳೂ, ಪ್ಯಾಡ್‌ಗಳು ಇರುತ್ತವೆ. ಈ ಪ್ಯಾಡ್‌ಗಳು ದೇಹಕ್ಕೆ ಅಂಟಿಕೊಂಡಿರುತ್ತವೆ.

ಇವು ನಮ್ಮ ದೇಹದ ವಿದ್ಯುತ್ ಸಂಕೇತಗಳನ್ನು ಗುರುತಿಸಿ ಸೂಟ್‌ಗೆ ಅನುಗುಣವಾಗಿ ಕೆಲಸ ಮಾಡುತ್ತವೆ. ನಮ್ಮ ಗುರುತ್ವಾಕರ್ಷಣ ಶಕ್ತಿಯನ್ನು ಗುರುತಿಸಿ, ಶರೀರದ ಚಲನೆಯನ್ನು ಅಂದಾಜಿಸಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಈ ಸೂಟ್‌ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.