ADVERTISEMENT

ಚಂದ್ರನೂರಿಗೆ ಮತ್ತೊಂದು ಯಾತ್ರೆ

ಚಂದ್ರಯಾನ–2

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 9:41 IST
Last Updated 22 ಜುಲೈ 2019, 9:41 IST
   

ಭಾರತದ ಬಹುನಿರೀಕ್ಷಿತ ಚಂದ್ರಯಾನ–2 ಸೋಮವಾರ ಮಧ್ಯಹ್ನಾ 2.43ಕ್ಕೆ ಸರಿಯಾಗಿಯಶಸ್ವಿಯಾಗಿ ಉಡ್ಡಯನಗೊಂಡಿದೆ. ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಕೆ ಈ ಬಾರಿಯ ವಿಶೇಷ.

ಚಂದ್ರಯಾನ–2 ಯೋಜನೆ ಏಕೆ
ಚಂದ್ರನ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಎಲ್ಲ ದೇಶಗಳೂ ಪ್ರಯತ್ನಿಸುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೊ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬೇರಾವ ದೇಶಗಳೂ ಸಮೀಪಿಸದ ‘ಚಂದ್ರನ ದಕ್ಷಿಣ ಧ್ರುವ ಪ್ರದೇಶ’ವನ್ನು ಎರಡನೇ ಚಂದ್ರಯಾನ ಕಾರ್ಯಕ್ರಮದ ಮೂಲಕ ತಲುಪಲಾಗುತ್ತಿದೆ. ಇಲ್ಲಿ ನಡೆಯಲಿರುವ ಸಂಶೋಧನೆಗಳು ಭಾರತ ಹಾಗೆಯೇ ಮನುಕುಲಕ್ಕೆ ನೆರವಾಗಲಿವೆ. ಇದು ಇನ್ನಷ್ಟು ಯಾನಗಳಿಗೆ ಪ್ರೇರಣೆಯೂ ಆಗಬಲ್ಲದು ಎಂಬುದು ಇಸ್ರೊ ಅಶಾವಾದ.

ಸಂಶೋಧನೆಗೆ ಚಂದ್ರನ ಆಯ್ಕೆ ಏಕೆ
ಚಂದ್ರ ನಮಗೆ ಅತಿಹತ್ತಿರದ ಆಕಾಶಕಾಯ. ಹೀಗಾಗಿ ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ಯೋಜನೆಗಳಿಗೆ ಬೇಕಾದ ತಂತ್ರಜ್ಞಾನಗಳನ್ನು ಪರೀಕ್ಷೆಗೊಳಪಡಿಸುವ ಭರವಸೆಯ ಪ್ರಯೋಗಾಲಯವೂ ಆಗಿದೆ. ಹಲವು ಪ್ರಯೋಗ ಗಳಿಗೆಚಂದ್ರಯಾನ ವೇದಿಕೆಯಾಗಲಿದೆ.

ADVERTISEMENT

ಚಂದ್ರಯಾನ–2 ವೈಜ್ಞಾನಿಕ ಉದ್ದೇಶ
ಭೂಗ್ರಹದ ಹುಟ್ಟಿನ ಚರಿತ್ರೆ ಕುರಿತು ಚಂದ್ರ ಅತ್ಯುತ್ತಮ ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ ಚಂದ್ರನ ಮೂಲದ ಬಗ್ಗೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ. ಚಂದ್ರನ ಹುಟ್ಟು ಹಾಗೂವಿಕಾಸ ಪ್ರಕ್ರಿಯೆಯನ್ನು ಅರಿಯಬೇಕಾದರೆ, ಚಂದ್ರನ ಮೇಲ್ಮೈ ಸಂಯೋಜನೆಯ ವ್ಯತ್ಯಾಸ ಅರಿಯುವುದು ಅತಿಮುಖ್ಯ.

ಚಂದ್ರನಲ್ಲಿ ನೀರಿನ ಕಣಗಳಿವೆ ಎಂಬುದಕ್ಕೆ ಚಂದ್ರಯಾನ–1 ಯೋಜನೆಯು ಸಾಕ್ಷ್ಯ ನೀಡಿತ್ತು. ಇದೀಗ ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳ ಹಂಚಿಕೆ ಹಾಗೂ ಪ್ರಸರಣವನ್ನು ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಮೇಲ್ಮೈ, ಮೇಲ್ಮೈ ಕೆಳಭಾಗ ಹಾಗೂ ಬಾಹ್ಯಗೋಳದಲ್ಲಿ ನೀರಿನ ಅಣುಗಳ ಇರುವಿಕೆ ಕುರಿತು ನಡೆಯುವ ಸಂಶೋಧನೆಯು, ಗ್ರಹದ ನೀರಿನ ಮೂಲ ತಿಳಿಯಲು ಸಹಕಾರಿಯಾಗಲಿದೆ.

ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ
ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ ಕೂಡ. ಈ ಭಾಗ ಕತ್ತಲಿನಿಂದ ಕೂಡಿದೆ. ಮೇಲಾಗಿ ಉತ್ತರ ಭಾಗಕ್ಕೆ ಹೋಲಿಸಿದರೆ, ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆ ಇದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿದ್ದು, ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆಯಿದೆ.

ಸುರಕ್ಷಿತ ಇಳಿಕೆ
ಚಂದ್ರಯಾನ–2 ಯೋಜನೆಯ ಲ್ಯಾಂಡರ್ ಹಾಗೂ ರೋವರ್ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸಲು (ಸಾಫ್ಟ್ ಲ್ಯಾಂಡ್) ಇಸ್ರೊ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪ್ಯಾರಾಚೂಟ್‌ ಮೂಲಕ ಸೂಕ್ಷ್ಮ ವಾಗಿ ಇವೆರಡೂ ಉಪಕರಣಗಳನ್ನು ಮೇಲ್ಮೈ ಮೇಲೆ ಇಳಿಸಲಾಗುತ್ತದೆ. ಸುರಕ್ಷಿತ ಇಳಿಕೆ ಈ ಬಾರಿಯ ವೈಶಿಷ್ಟ್ಯ.

‘ಮಂಜಿನಸ್ ಸಿ’ ಹಾಗೂ ‘ಸಿಂಪೆಲಿಯಸ್ ಎನ್’ ಎಂಬ ಎರಡು ಕುಳಿಗಳ ನಡುವಿನ 70° ಅಕ್ಷಾಂಶದ (ದಕ್ಷಿಣ) ಜಾಗದಲ್ಲಿ ಲ್ಯಾಂಡಿಂಗ್ ಆಗಲಿದೆ.

1. ಚಂದ್ರಯಾನ–2 ಬಾಹ್ಯಾಕಾಶ ನೌಕೆಯು ಶ್ರೀಹರಿಕೋಟಾದ ಕೇಂದ್ರದಿಂದ ಕಕ್ಷೆಗಾಮಿ, ರೋವರ್, ಲ್ಯಾಂಡರ್ ಹೊತ್ತು
ಚಂದ್ರನತ್ತ ಚಿಮ್ಮಲಿದೆ.
2. ಜಿಎಸ್ಎಲ್‌ವಿ ಮಾರ್ಕ್ III ರಾಕೆಟ್ ಭೂಸ್ಥಿರ ಕಕ್ಷೆಗೆ ನೌಕೆಯನ್ನು ಸೇರಿಸಲಿದೆ.
3. ಕಕ್ಷೆಯಲ್ಲಿರುವ ನೌಕೆಯು ಚಂದ್ರನ ಕಕ್ಷೆಯನ್ನು ಸಮೀಪಿಸಲು ಒಂದು ತಿಂಗಳ ಸಮಯ ಹಿಡಿಯಲಿದೆ.
4. ಕಕ್ಷೆಗಾಮಿಯಿಂದ ಕಳಚಿಕೊಳ್ಳುವ ಲ್ಯಾಂಡರ್, ಚಂದ್ರನ ದಕ್ಷಿಣ ಧ್ರುವದಲ್ಲಿ ಕೋಟ್ಯಂತರ ವರ್ಷ ಹಳೆಯ ಬಂಡೆಗಳ ಮೇಲೆ ಸುರಕ್ಷಿತವಾಗಿ ಇಳಿಯಲಿದೆ.
5. ಲ್ಯಾಂಡರ್‌ಗೆ ಅಂಟಿಕೊಂಡಿರುವ ರೋವರ್, ಅಲ್ಲಿಂದ ಬೇರ್ಪಟ್ಟು ಚಂದ್ರನ ಮೇಲೆ ಸಂಚಾರ ಮಾಡುತ್ತದೆ.

ಹೀಗಿತ್ತು ಚಂದ್ರಯಾನ–1:ಭಾರತದ ಮಹತ್ವಾಕಾಂಕ್ಷಿ ಚಂದ್ರನ ಅಧ್ಯಯನ ಅಧ್ಯಾಯ ಆರಂಭವಾಗಿದ್ದು ಚಂದ್ರಯಾನ–1 ಬಾಹ್ಯಾಕಾಶ ಕಾರ್ಯಕ್ರಮದ ಮೂಲಕ.2008ರ ಅಕ್ಟೋಬರ್ 22ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ಉಡ್ಡಯನ ಆಗಿತ್ತು. ಆಗಸ್ಟ್ 15, 2003ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ–1 ಯೋಜನೆಗೆ ಅನುಮೋದನೆ ನೀಡಿದ್ದರು.

ಚಂದ್ರನಲ್ಲಿ ನೀರಿನ ಕಣಗಳಿವೆ ಎಂದು ದೃಢಪಟ್ಟಿದ್ದು ಚಂದ್ರಯಾನ–1 ಯೋಜನೆಯಿಂದ. ಒಂದು ಕಾಲದಲ್ಲಿ ಚಂದ್ರನಲ್ಲಿ ದ್ರವರೂಪದ ನೀರು ಇತ್ತು ಎಂದು ಸಂಶೋಧನೆ ತಿಳಿಸಿತ್ತು. ಯೋಜನೆ ಅವಧಿಯಲ್ಲಿ ಸುಮಾರು 25 ಸೌರಜ್ವಾಲೆಗಳನ್ನು ಪತ್ತೆಹಚ್ಚಲಾಗಿತ್ತು. ಟೈಟಾನಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಅಲ್ಯುಮಿನಿಯಂ ಮತ್ತು ಕಬ್ಬಿಣದ ಅಂಶಗಳನ್ನು ಗುರುತಿಸಿತ್ತು.ಸಾಕಷ್ಟು ಅಚ್ಚರಿಯ ದತ್ತಾಂಶಗಳನ್ನು ಸಂಗ್ರಹಿಸಿಲಾಗಿದೆ ಎಂದು ಇಸ್ರೊ ತಿಳಿಸಿತ್ತು.

ಚಂದ್ರಯಾನ–2 ಏಕೆ ವಿಶಿಷ್ಟ
* ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತಿರುವ ಭಾರತದ ಮೊದಲ ಬಾಹ್ಯಾಕಾಶ ಯೋಜನೆ
* ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿಕೊಂಡು ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಸುತ್ತಿರುವ ಮೊದಲ ಯೋಜನೆ
* ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿಕೊಂಡು ಚಂದ್ರನ ಮೇಲ್ಮೈನಲ್ಲಿ ಅನ್ವೇಷಣೆ ನಡೆಸುತ್ತಿರುವ ಮೊದಲ ಯೋಜನೆ
* ಭಾರತವು ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸುತ್ತಿರುವ ನಾಲ್ಕನೇ ದೇಶವಾಗಲಿದೆ.

ಮಹಿಳೆಯರ ನೇತೃತ್ವ
* ಯೋಜನಾ ತಂಡದಲ್ಲಿ 30% ಮಹಿಳೆಯರು
* ಚಂದ್ರಯಾನ–2 ಕಾರ್ಯಕ್ರಮಕ್ಕೆ ಇಬ್ಬರು ಮಹಿಳೆಯರ ನೇತೃತ್ವ
* ಯೋಜನಾ ನಿರ್ದೇಶಕಿ ಎಂ.ವನಿತಾ
* ಅಭಿಯಾನ ನಿರ್ದೇಶಕಿ ರಿತು ಕರಿಧಾಲ್
* ಇಬ್ಬರಿಗೂ ಇಸ್ರೊದಲ್ಲಿ 20 ವರ್ಷಗಳ ಸೇವಾನುಭವ
* ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಣೆ
* ಸಮಸ್ಯೆ ನಿವಾರಿಸುವ ಅತ್ಯುತ್ತಮ ಕೌಶಲ

ವೈಜ್ಞಾನಿಕ ಸಂಶೋಧನೆ
* ಮೇಲ್ಮೈಯ ವಿಸ್ತೃತ ಅಧ್ಯಯನ, ಸಮಗ್ರ ಖನಿಜಾಂಶಗಳ ವಿಶ್ಲೇಷಣೆ
* ಚಂದ್ರಯಾನ–1 ಯೋಜನೆ ಮಾಡಿದ್ದ ಸಂಶೋಧನೆಗಳ ಮುಂದುವರಿಕೆ
* ಚಂದ್ರನ ಮೇಲ್ಮೈನ ರಾಸಾಯನಿಕ ಸಂಯೋಜನೆ, ಮೇಲ್ಮೈ ಮಣ್ಣಿನಉಷ್ಣ–ಭೌತಿಕ ಗುಣಲಕ್ಷಣಗಳ ಅಧ್ಯಯನ
* ಚಂದ್ರನ ವಾತಾವರಣದ ಸೂಕ್ಷ್ಮ ಸಂಯೋಜನೆ ಅರಿಯುವುದು
* ಭಾರತದ ಬಾಹ್ಯಾಕಾಶ ಹೆಜ್ಜೆಗಳನ್ನು ವಿಸ್ತರಿಸುವುದು

ಪ್ರಮುಖ ಉಪಕರಣಗಳು ಮತ್ತು ಅವುಗಳ ಕೆಲಸ
* ಚಂದ್ರಯಾನ–2 ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್–ರೇ ಸ್ಪೆಕ್ಟ್ರೋಮೀಟರ್: ಚಂದ್ರನ‌ಲ್ಲಿರುವ ಧಾತುಗಳ ಸಂಯೋಜನೆಯ ಮೌಲ್ಯಮಾಪನ
* ಇಮೇಜಿಂಗ್ ಐಆರ್‌ ಸ್ಪೆಕ್ಟ್ರೋಮೀಟರ್: ಖನಿಜಗಳ ಮಾಹಿತಿ ಸಂಗ್ರಹ ಮತ್ತು ನೀರು–ಮಂಜುಗಡ್ಡೆ ಅಸ್ತಿತ್ವ ದೃಢೀಕರಣ
* ಸಿಂಥೆಟಿಕ್ ಅಪಾರ್ಚರ್ ರೇಡಾರ್ ಎಲ್‌ ಎಂಡ್‌ ಎಸ್‌ ಬ್ಯಾಂಡ್: ಧ್ರುವ ಪ್ರದೇಶಗಳ ಮಾಹಿತಿ ಸಂಗ್ರಹ ಮತ್ತು ಮೇಲ್ಮೈಗಿಂತ ಕೆಳಗಿನ ಸ್ತರದ ನೀರು–ಮಂಜುಗಡ್ಡೆ ಅಸ್ತಿತ್ವದ ದೃಢೀಕರಣ
* ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾ: ಸ್ಥಳಗಳ ಉನ್ನತ ಗುಣಮಟ್ಟದ ಚಿತ್ರ ಸಂಗ್ರಹ
* ಆಲ್ಫಾ ಪಾರ್ಟಿಕಲ್ ಎಕ್ಸ್–ರೇ ಸ್ಪೆಕ್ಟ್ರೋಮೀಟರ್ ಎಂಡ್‌ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಮೀಟರ್: ನಿರ್ದಿಷ್ಟ ಸ್ಥಳದ ಧಾತುಗಳ ವಿಶ್ಲೇಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.