ADVERTISEMENT

PV Web Exclusive | ಆನ್‌ಲೈನ್‌ ಪ್ರಣಯ ಎನ್ನುವ ಮೋಸದ ಜಾಲ!

ವಿಶ್ವನಾಥ ಎಸ್.
Published 7 ನವೆಂಬರ್ 2020, 12:12 IST
Last Updated 7 ನವೆಂಬರ್ 2020, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಖ ನೋಡಿ ಯಾರನ್ನೂ ಅಳೆಯಲು ಆಗುವುದಿಲ್ಲ. ಹೀಗಿರುವಾಗ ಆನ್‌ಲೈನ್‌ನಲ್ಲಿ, ಡೇಟಿಂಗ್‌ ಆ್ಯಪ್‌ಗಳ ಮೂಲಕ ಏರ್ಪಡುವ ಬಾಂಧವ್ಯವನ್ನು ನಂಬುವುದಾದರೂ ಹೇಗೆ ಅಲ್ಲವೇ? ಆದರೆ, ಇಂತಹ ಸಂಬಂಧಗಳನ್ನು ನಂಬಿಕೊಂಡು ಮೋಸ ಹೋಗುವವರಿಗೇನೂ ಕಮ್ಮಿ ಇಲ್ಲ. ಮುಖಾಮುಖಿ ಆಗದೇ ಎಲ್ಲವೂ ಇಂಟರ್‌ನೆಟ್‌ನಲ್ಲಿಯೇ ನಡೆಯುವುದರಿಂದ ಮೋಸ ಮಾಡಲು ಅವಕಾಶಗಳು ಸಾಕಷ್ಟಿರುತ್ತವೆ!

ಘಟನೆ 1: ಸ್ನೇಹಿತನೊಬ್ಬ ಟೈಂಪಾಸ್‌ಗೆಂದು ಡೇಟಿಂಗ್‌ ಆ್ಯಪ್‌ ಬಳಸಲು ಶುರುಮಾಡಿದ. ನಾವು ಅಗಾಗ್ಗೆ ಭೇಟಿ ಮಾಡುತ್ತಿದ್ದಾಗಲೂ ಅದರಲ್ಲಿ ಚಾಟ್‌ ಮಾಡುತ್ತಲೆ ಇರುತ್ತಿದ್ದ. ಏನೋ ಮುಳ್ಗಿ ಹೋಗಿದ್ಯಾ ಅಂತ ಕೇಳಿದ್ರೆ, ಡೇಟಿಂಗ್‌ ಆ್ಯಪ್‌ನಲ್ಲಿ ಟೈಂಪಾಸ್‌ ಮಗಾ, ಚಾಟ್‌ ಮಾಡ್ತಿದೀನಿ ಎನ್ನುತ್ತಿದ್ದ. ಸುಮಾರು ಆರು ತಿಂಗಳು ಆಗಿತ್ತು ಅನ್ಸುತ್ತೆ, ಒಂದಿನ ಬಹಳ ಟೆನ್ಶನ್‌ನಲ್ಲಿ ಇದ್ದಂತೆ ಕಂಡ. ಏನಾಯ್ತೊ ಅಂತ ಕೇಳಿದ್ರೆ, ‘ಚಾಟ್‌ ಮಾಡ್ತಿದ್ನಲಾ ಅವ್ಳ ಐಫೋನ್‌ ಹಾಳಾಗಿದ್ಯಂತೆ. ಅದ್ನ ಸರಿ ಮಾಡ್ಸಕ್ಕೆ ದುಡ್ಡಿಲ್ಲ ಹೆಲ್ಪ್‌ ಮಾಡ್ತ್ಯಾ ಅಂದ್ಲು, ಎಷ್ಟು ಅಂತ ಕೇಳಿದ್ರೆ 100 ಡಾಲರ್‌ (₹ 7,500) ಆಗತ್ತೆ, ನನ್ ಹತ್ರ ₹4,000 ಮಾತ್ರ ಇದೆ ಉಳ್ದಿದ್ದು ನೀನು ಕೊಡ್ತ್ಯಾ ಅಂದ್ಲು. ನಾನು ಈಗ ಸೈಬರ್‌ ಕೆಫೆಗೆ ಬಂದು ಮೆಸೆಜ್ ಮಾಡ್ತಿದೀನಿ. ನೀನು ಹೆಲ್ಪ್‌ ಮಾಡಿದ್ರೆ ಮಾತ್ರ ನಾನು ಮೆಸೇಜ್‌ ಮಾಡ್ತಿನಿ. ಇಲ್ಲಾಂದ್ರೆ ಇವತ್ತಿಂದ ಚಾಟ್‌ ಮಾಡಲ್ಲ ಅಂತ ಹೇಳ್ತಿದಾಳೆ...’ ಅಂತಂದ. ಹಾಗಾದ್ರೆ ಏನ್‌ ಮಾಡ್ಬೇಕು ಅಂತಿದ್ಯಾ ಅಂತ ಕೇಳಿದೆ. ಬರೋ ಸಂಬಳದಲ್ಲಿ ಮನೆಗೂ ಕಳಿಸಿ, ಉಳಿದಿದ್ದರಲ್ಲಿ ಹೇಗೋ ನನ್ ಖರ್ಚು ಕಳಿತಿದೆ. ಇಂತದ್ರಲ್ಲಿ ₹ 3,500 ಕೊಡೋದು ಹೇಗೆ ಅಂತ ಯೋಚ್ನೆ ಮಾಡ್ತಿದೀನಿ ಅಂದ’.

ಹುಡ್ಗಿ ಯಾವೂರು ಹೆಸ್ರೇನು ಅಂತ ಕೇಳಿದ್ಕೆ, ಫ್ಲೋರಿಡಾದಲ್ಲಿ ಇರೋಳು ರಿಯಾನಾ ಅಂತ ಹೆಸ್ರು ಅಂತ ಆಕೆಯ ವಿವರ ನೀಡಿದ. ಒಂದೇ ಊರಲ್ಲಿ ಇದ್ದೋರ್ನೇ ನಂಬೋದು ಕಷ್ಟ ಆಗಿರೋವಾಗ, ಬೇರೆ ದೇಶದೋಳು ಅಂತಿಯಾ, ಬಿಟ್ಹಾಕು ಇಲ್ಲಿಗೆ ಅಂದೆ. ಮಾರನೇ ದಿನ ಸಿಕ್ಕಾಗ ಏನಾಯ್ತಪ್ಪಾ ಫ್ಲೋರಿಡಾ ಕತೆ ಅಂತ ಕೇಳಿದ್ರೆ? ಮತ್ತೆ ಎರಡು ಸಲ ಕೇಳಿದ್ಲು ಹೆಲ್ಪ್‌ ಮಾಡಲ್ವಾ ಅಂತ. ಇಲ್ಲ ಅಡ್ಜೆಸ್ಟ್‌ ಆಗ್ತಿಲ್ಲ ಅಂದೆ. ಆಗಿಂದ ನನ್ನ ಬ್ಲಾಕ್‌ ಮಾಡಿದಾಳೆ ಅಂತ ಹೇಳಿದ. ಒಳ್ಳೇದಾಯ್ತು, ಸಾಲ ಗೀಲ ಮಾಡಿ ಕೊಡ್ತಿ ಅಂತಾದ್ರೆ ಅಮ್ಮಂಗೆ ಫೋನ್‌ ಮಾಡಿ ಹೇಳ್ತಿನಿ ಅಂತ ಹೆದ್ರಿಸಿದ್ಕೆ, ಇಲ್ಲ ಮಾರಾಯ ಹಂಗೇನೂ ಮಾಡಲ್ಲ ಅಂತಂದ.

ADVERTISEMENT

ಘಟನೆ 2: ಸ್ನೇಹಿತನ ವಿಷಯದಲ್ಲಿ ಅದು ಸುಖಾಂತ್ಯ. ಆದರೆ ಇನ್ನೊಂದು ಪ್ರಕರಣದಲ್ಲಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದವರೊಬ್ಬರು ತಮ್ಮ ಕ್ರೆಡಿಟ್‌ ಕಾರ್ಡ್‌ನಿಂದ ತಿಂಗಳಿಗೆ ₹ 3,500ರಂತೆ ಮೂರು ತಿಂಗಳಿನಲ್ಲಿ ₹ 10,500 ಕಳೆದುಕೊಂಡರು. ಆಗಿದ್ದಿಷ್ಟು. ಅವರಿಗೆ 40 ವರ್ಷ. ಬಹಳ ಬೇಗನೇ ಹೆಂಡತಿಯನ್ನು ಕಳೆದುಕೊಂಡಿದ್ದರು. ಹಾಗಂತಾ ಅವರು ಎರಡನೇ ಮದುವೆಯ ಮನಸ್ಸು ಮಾಡಿರಲಿಲ್ಲ. ಆದರೆ, ಯಾರೋ ಹೇಳಿದ್ದು ಕೇಳಿ ಡೇಟಿಂಗ್‌ ವೆಬ್‌ಸೈಟ್‌ ಒಂದಕ್ಕೆ ಲಾಗಿನ್‌ ಆದರು. ಅವರ ಇನ್‌ಬಾಕ್ಸ್‌ಗೆ ಹಲವು ಮೆಸೇಜ್‌ಗಳು ಬರತೊಡಗಿದವು. ಅದೇನೆಂದು ಓದೋಣ ಎಂದರೆ ನೀವು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ನೀಡಿ ಲಾಗಿನ್‌ ಆಗಬೇಕು. 7 ದಿನದ ಒಳಗಾಗಿ ಯಾವುದೇ ಹಣ ಕಟ್‌ ಆಗುವುದಿಲ್ಲ. ಅಷ್ಟರೊಳಗೆ ನೀವು ಅನ್‌ಸಬ್‌ಸ್ಕ್ರೈಬ್‌ ಆಗದೇ ಇದ್ದರೆ ನಿಮ್ಮ ಖಾತೆಯಿಂದ ತಿಂಗಳಿಗೆ ₹ 3,500 ಹಣ ಕಟ್ ಆಗಲಿದೆ ಎನ್ನುವ ಷರತ್ತು ಇತ್ತು.

ಹೇಗೂ 7 ದಿನ ಸಮಯ ಇದ್ಯಲಾ ಅಂತ ಅವರು ಕ್ರೆಡಿಟ್‌ ಕಾರ್ಡ್‌ ಮಾಹಿತಿ ನೀಡಿ ಲಾಗಿನ್‌ ಆಗುತ್ತಿದ್ದಂತೆಯೇ ಅವರ ಖಾತೆಯಿಂದ ₹ 3,500 ಕಟ್ ಆಯಿತು. ಆದೇ ವೇಳೆ, ಇನ್‌ಬಾಕ್ಸ್‌ಗೆ ಬಂದಿದ್ದ ಮೆಸೇಜ್‌ ಓದೋಣ ಅಂತ ನೋಡಿದರೆ, ಮತ್ತದೇ ಷರತ್ತಿದ್ದ ವಿಂಡೊ ತೆರೆದುಕೊಂಡಿತು. ಇದೇನಿದು ದುಡ್‌ ಕಟ್ ಆದ್ರೂ ಮೆಸೇಜ್‌ ಓದೋಕೆ ಬರ್ತಿಲ್ಲ ಅಂತ ತಲೆಕೆಡಿಸಿಕೊಂಡ್ರು. ತಕ್ಷಣ ಅನ್‌ಸಬ್‌ಸ್ಕ್ರೈಬ್‌ ಮಾಡಿದರು. ಅದು ಯಶಸ್ವಿಯಾಗಿದೆ ಅಂತ ಮೇಲ್‌ ಸಹ ಬಂತು. ಆದರೆ ಮುಂದಿನ ತಿಂಗಳು ಅದೇ ದಿನ ಮತ್ತೆ ₹ 3,500 ಕಟ್ ಆಯಿತು. ವೆಬ್‌ಸೈಟ್‌ನ ಕಸ್ಟಮರ್‌ ಕೇರ್‌ಗೆ ಕಾಲ್‌ ಮಾಡಿದರೆ ಕನೆಕ್ಟ್‌ ಆಗುತ್ತಲೇ ಇರಲಿಲ್ಲ. ಮೇಲ್‌ನಲ್ಲಿ ಸಮಸ್ಯೆ ಹೇಳಿಕೊಂಡಾಗ, ನೀವು ಸರಿಯಾಗಿ ಅನ್‌ಸಬ್‌ಸ್ಕ್ರೈಬ್‌ ಆಗಿಲ್ಲ ಅಂತ ಪ್ರತಿಕ್ರಿಯೆ ಬಂತು. ಮೇಲ್‌ನಲ್ಲಿ ತಿಳಿಸಿದಂತೆಯೇ ಮತ್ತೆ ಅನ್‌ಸಬ್‌ಸ್ಕ್ರೈಬ್‌ ಮಾಡಿದರು. ಆದರೆ, ಮೂರನೇ ತಿಂಗಳಿನಲ್ಲಿಯೂ ಅದೇ ರೀತಿ ದುಡ್ಡು ಕಟ್‌ ಆಯಿತು. ಆಗ ಗೂಗಲ್‌ನಲ್ಲಿ ಆ ಕುರಿತು ಹುಡುಕಾಡಿದಾಗ, ಅವರಂತೆಯೇ ಅದೆಷ್ಟೋ ಮಂದಿ ಆ ವೆಬ್‌ಸೈಟ್‌ನಲ್ಲಿ ದುಡ್ಡು ಕಳೆದುಕೊಂಡಿದ್ದು ತಿಳಿಯಿತು. ಕೊನೆಗೆ ಬ್ಯಾಂಕ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಕಂಪ್ಲೇಂಟ್ ಸಹ ದಾಖಲಿಸಿದರು. ಕ್ರೆಡಿಟ್‌ ಕಾರ್ಡ್‌ ಅನ್ನೂ ಕ್ಯಾನ್ಸಲ್‌ ಮಾಡಿಸಿದರು.

ಆನ್‌ಲೈನ್‌ ಜಗತ್ತಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿರುವುದರಿಂದ ಹೊಸ ಸ್ವರೂಪದ ವಂಚನೆಗಳು ನಡೆಯುತ್ತಿವೆ. ಆನ್‌ಲೈನ್‌ ಪ್ರಣಯದ ಹೆಸರಿನಲ್ಲಿ ಆಧುನಿಕ ಸ್ವರೂಪದ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಇಂತಹ ಪ್ರಕರಣಗಳು ನಡೆಯಲು ಸುಲಭವಾಗುತ್ತಿದೆ ಎನ್ನುತ್ತವೆ ಸಂಶೋಧನಾ ವರದಿಗಳು.

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಪ್ರೀತಿಸುವುದಾಗಿ ಹೇಳಿ ದುಡ್ಡು ಪಡೆದು ಪರಾರಿಯಾಗಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಸಾಮಾಜಿಕ ಜಾಲತಾಣಗಳಾಚೆಗೆ ಆನ್‌ಲೈನ್‌ ಡೇಟಿಂಗ್‌ ಎನ್ನುವ ಒಂದು ಜಗತ್ತಿದೆ. ಅದರಲ್ಲಿ ಇಂತಹ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿರುತ್ತವೆ. ಹೇಳಿಕೊಂಡರೆ ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ವಿಷಯವನ್ನು ಮುಚ್ಚಿಡುತ್ತಿದ್ದಾರಷ್ಟೆ.

ವಂಚಕರು ನಕಲಿ ಪ್ರೊಫೈಲ್‌ ಸೃಷ್ಟಿಸಿ 6 ರಿಂದ 8 ತಿಂಗಳ ಒಳಗಾಗಿ ಹುಡುಗ/ಹುಡುಗಿಯೊಂದಿಗೆ ಪ್ರೇಮ ಸಂಬಂಧ ಬೆಳೆಸುತ್ತಾರೆ. ಭಾವನಾತ್ಮಕವಾಗಿ ಸಂಬಂಧ ಬೆಸೆಯುವಂತೆ ಮಾಡಿ ಬಳಿಕ ಹಲವು ರೀತಿಯಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಮಹಿಳೆಯರು, ಮಧ್ಯಮ ವಯಸ್ಕರು ಹಾಗೂ ತಕ್ಷಣವೇ ಉದ್ವೇಗಕ್ಕೆ ಒಳಗಾಗುವವರು ಬಹಳ ಬೇಗ ಇಂತಹ ವಂಚನೆಯ ಜಾಲಕ್ಕೆ ಬೀಳುತ್ತಾರೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ಕನಿಷ್ಠ ಒಂದು ಬಾರಿಯಾದರೂ ಈ ಸ್ವರೂಪದ ವಂಚನೆಗೆ ಒಳಗಾಗಿರುತ್ತಾರೆ ಎನ್ನುವುದು ಸಂಶೋಧನಾ ವರದಿಗಳಿಂದ ತಿಳಿದುಬಂದಿದೆ.

ಮನುಷ್ಯನ ಗುಣ ಇದ್ದು ನೋಡು, ಮದ್ದಿನ ಗುಣ ಮೆದ್ದು ನೋಡು ಎನ್ನುವುದು ನಾಣ್ಣುಡಿ. ಆದರೆ, ವರ್ಷಾನುಗಟ್ಟಲೇ ಒಟ್ಟಿಗೆ ಇದ್ದವರೇ ಹಣ, ಆಸ್ತಿಯ ಆಸೆಗೆ ಬೆನ್ನಿಗೆ ಚೂರಿ ಇರಿಯುವಾಗ, ಆನ್‌ಲೈನ್‌ನಲ್ಲಿ ಪರಿಚಯ ಆದವರನ್ನು ಹೇಗೆ ನಂಬುವುದು! ಎಲ್ಲೋ ಲಕ್ಷಕ್ಕೆ ಒಂದು ಆನ್‌ಲೈನ್‌ ಡೇಟಿಂಗ್‌ ಯಶಸ್ಸು ಕಂಡಿರಬಹುದೇನೋ. ಆದರೆ ಮೋಸ ಹೋಗಿರುವವರೇ ಹೆಚ್ಚಿಗೆ ಇದ್ದಾರೆ. ಹಾಗಾಗಿ ಇಂತಹ ಆನ್‌ಲೈನ್‌ ಡೇಟಿಂಗ್‌ ವೆಬ್‌ಸೈಟ್‌/ಆ್ಯಪ್‌ಗಳ ಗೊಡವೆಗೆ ಹೋಗದೇ ಇರುವುದೇ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.