ADVERTISEMENT

ಗೂಗಲ್ ಪ್ಲಸ್: ಬಳಕೆದಾರರಿಗೆ ಮೈನಸ್!

ಹೇಮಂತ್ ಕುಮಾರ್ ಎಸ್.
Published 12 ಜುಲೈ 2019, 11:25 IST
Last Updated 12 ಜುಲೈ 2019, 11:25 IST
   

ಜಿಮೇಲ್‌ ಆರಂಭವಾದ ನಂತರ 2004ರಲ್ಲಿ ಆರ್ಕೂಟ್‌ ಬಂತು. ನಂತರ ಬ್ಲಾಗ್‌ ಆರಂಭವಾಯಿತು. ಫೇಸ್‌ಬುಕ್‌ ಜತೆಯಾಯಿತು. ಆರ್ಕೂಟ್ ನಲ್ಲಿ ಫೇಕ್ ಅಕೌಂಟ್‌ಗಳು ಸೃಷ್ಟಿಯಾಗುತ್ತಿವೆಂಬ ಚರ್ಚೆ ಶುರುವಾಯಿತು. ಎಲ್ಲವೂ ಅತಿ ಎನ್ನಿಸುವಷ್ಟಾಯಿತು. ಈ ನಡುವೆ ಫೇಸ್‌ಬುಕ್‌ ತನ್ನ ಖಾತೆದಾರರನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಈ ಸ್ಪರ್ಧೆಯಲ್ಲಿ ಪರಿಣಾಮಕಾರಿ ಹಾಗೂ ಸುರಕ್ಷಿತ ಸಾಮಾಜಿಕ ಸಂಪರ್ಕ ತಾಣವಾಗಿ ಗೂಗಲ್‌ ಸಂಸ್ಥೆ 2011ರಲ್ಲಿ 'ಗೂಗಲ್ ಪ್ಲಸ್ (ಜಿ+)' ಅನ್ನು ಪರಿಚಯಿಸಿತು. ಫೇಸ್‌ಬುಕ್‌ಗೆ ಪೈಪೋಟಿ ನೀಡುವ ನಿರೀಕ್ಷೆಯೊಂದಿಗೆ ಗೂಗಲ್ ಆಗಿನ ಸಿಇಒ ಲ್ಯಾರಿ ಪೇಜ್ ‘ಗೂಗಲ್ ಪ್ಲಸ್’ ಹೊರತಂದರು. ಜಿ+ ಆರಂಭವಾಗಿ ಎರಡು ವಾರಗಳಲ್ಲಿ 10 ಕೋಟಿ ಬಳಕೆದಾರರನ್ನು ತನ್ನದಾಗಿಸಿಕೊಳ್ಳುವ ಮೂಲಕ 'ಗೂಗಲ್ ' ತನ್ನ ಬಳಕೆದಾರರ ಶಕ್ತಿಯನ್ನು ಜಗತ್ತಿಗೆ ತೋರಿತು.

ಗ್ರಾಹಕರ ಅಗತ್ಯ, ತಂತ್ರಜ್ಞಾನದ ನಾವಿನ್ಯತೆ ವೇಗವನ್ನು ಗಮನಿಸಲಾರದೆ ಕೆಲವೇ ತಿಂಗಳಲ್ಲಿ ಗೂಗಲ್ ಪ್ಲಸ್ ಮುಗ್ಗರಿಸಿತು. ಆ ತಾಣದಲ್ಲಿ ಫೋಟೋ, ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳುವುದನ್ನೇ ಬಳಕೆದಾರರು ಮರೆತರು. ಬ್ಲಾಗ್‌ಗಳು ಹಾಗೂ ಸುದ್ದಿ ತಾಣಗಳು ಶೇರ್ ಆಯ್ಕೆಯಲ್ಲಿ ಗೂಗಲ್ ಪ್ಲಸ್ ಕೈಬಿಟ್ಟವು. ಇದೀಗ ಲಕ್ಷಾಂತರ ಬಳಕೆದಾರರ ಖಾಸಗಿ ಮಾಹಿತಿ ಬಹಿರಂಗಗೊಂಡಿರುವ ಆರೋಪ ಹೊತ್ತಿರುವ ಗೂಗಲ್ ಪ್ಲಸ್ ತನ್ನ ತಾಣದ ಕಾರ್ಯ ಸ್ಥಗಿತಗೊಳಿಸುತ್ತಿದೆ.

ಗೂಗಲ್ + ವೃತ್ತಾಂತ

ADVERTISEMENT

ಗೂಗಲ್ ಖಾತೆಗೆ ಲಾಗಿನ್ ಆಗುತ್ತಿದ್ದಂತೆ ಗೂಗಲ್ ಎಲ್ಲ ಸೇವೆಗಳೊಂದಿಗೆ 'ಗೂಗಲ್ +' ಮೆನು ಕಾಣಿಸಿಕೊಳ್ಳುತ್ತದೆ. ಗೂಗಲ್ ಸರ್ಚ್ ಎಂಜಿನ್, ಗೂಗಲ್ ಪ್ರೊಫೈಲ್ ನೊಂದಿಗೆ ಸಂಪರ್ಕ ಹೊಂದಿರುವ ಗೂಗಲ್ + ಫೋಟೊ ಹಂಚಿಕೆ, ಸ್ನೇಹಿತರನ್ನು ಹುಡುಕುವುದು, ಚಾಟಿಂಗ್ ಎಲ್ಲವನ್ನೂ ಒಳಗೊಂಡಿದೆ.

ಗೂಗಲ್ +, ‘ಗೂಗಲ್ ಸರ್ಕಲ್ಸ್’, ‘ಹ್ಯಾಂಗ್ ಔಟ್’ ನಂತಹ ಎಲಿಮೆಂಟ್‌ಗಳನ್ನೊಳಗೊಂಡಿತು. ಪ್ರಾರಂಭದಲ್ಲಿ ಇದಕ್ಕೆ ಸಹಕಾರಿಯಾಗಿ ಅಭಿವೃದ್ಧಿಯಾಗಿದ್ದ ‘ಗೂಗಲ್ ಫೋಟೊ’ ಈಗ ಪ್ರತ್ಯೇಕಗೊಂಡು ಎಡಿಟಿಂಗ್, ವಿಡಿಯೊ ಮೇಕಿಂಗ್ ರೀತಿಯ ಮತ್ತಷ್ಟು ಆಯ್ಕೆಗಳನ್ನು ಒಡಲಲ್ಲಿ ತುಂಬಿಕೊಂಡಿದೆ.

ಸ್ಟಾರ್ಟ್ ಅಪ್ ಗಳ ಹೊಸ ತಲೆಮಾರಿನ ಯೋಚನೆಗಳ ಮುಂದೆ ಗೂಗಲ್ + ಏಳಿಗೆ ಕಾಣಲಿಲ್ಲ. ಆಗಿನ ಗೂಗಲ್ ಸಂಸ್ಥೆಯಲ್ಲಿದ್ದ ಅನೇಕ ಉದ್ಯೋಗಿಗಳು ಸಂಸ್ಥೆಯಿಂದ ಹೊರಬಂದರು. ಇದೂ ಸಹ ಗೂಗಲ್ + ಮೇಲೆ ಪರಿಣಾಮ ಬೀರಿತು.

ಸುರಕ್ಷತಾ ದೋಷ

ಗೂಗಲ್‌ ಪ್ಲಸ್‌ನಲ್ಲಿ ಕಂಡುಬಂದ ಸುರಕ್ಷತಾ ದೋಷದಿಂದ 5 ಲಕ್ಷಕ್ಕೂ ಹೆಚ್ಚು ಬಳಕೆದಾರರ ಖಾತೆಗಳಲ್ಲಿನ ಖಾಸಗಿ ದತ್ತಾಂಶ ಬಹಿರಂಗವಾಗಿದೆ. 2015ರಿಂದ ಮಾರ್ಚ್‌ 2018ರ ವರೆಗೂ ಗ್ರಾಹಕರ ದತ್ತಾಂಶ ಬಹಿರಂಗಗೊಂಡಿದೆ. ಆದರೆ, ಆ ದತ್ತಾಂಶಗಳ ದುರುಪಯೋಗ ಆಗಿಲ್ಲ ಎಂದು ಗೂಗಲ್‌ ಹೇಳಿದೆ.

ಗೂಗಲ್‌ ಪ್ಲಸ್‌ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸೋತಿರುವುದು, ನಿರೀಕ್ಷಿತ ಬಳಕೆದಾರರನ್ನು ತಲುಪುವಲ್ಲಿ ವಿಫಲರಾಗಿರುವುದರಿಂದ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. 2018ರ ಮಾರ್ಚ್‌ನಲ್ಲಿ ’ಬಗ್‌’ ಇರುವುದನ್ನು ಗೂಗಲ್‌ ಗಮನಿಸಿ ಸರಿಪಡಿಸಿತ್ತಾದರೂ, ಬಹಿರಂಗ ಪಡಿಸಿರಲಿಲ್ಲ.

ಏನೆಲ್ಲ ಮಾಹಿತಿ ಬಹಿರಂಗ?
ಸುರಕ್ಷತಾ ದೋಷದಿಂದಾಗಿ ಹ್ಯಾಕರ್‌ಗಳಿಗೆ ಗೂಗಲ್‌ ಪ್ಲಸ್‌ ಬಳಕೆದಾರರ ಖಾಸಗಿ ದತ್ತಾಂಶ ಸುಲಭವಾಗಿ ದೊರೆತಿರುತ್ತದೆ. ಹೆಸರು, ಬಳಕೆದಾರ ಲಿಂಗತ್ವದ ಮಾಹಿತಿ, ಇ–ಮೇಲ್‌ ವಿಳಾಸ, ಉದ್ಯೋಗ ಮಾಹಿತಿ ಇತ್ತಯಾದಿ.

ಗೂಗಲ್‌ ಖಾತೆ ಮತ್ತು ಆಂಡ್ರಾಯ್ಡ್ ವ್ಯವಸ್ಥೆಯನ್ನು ಒಳಗೊಂಡಿರುವ ಸಾಧನಗಳಲ್ಲಿ ಬಳಕೆದಾರರ ದತ್ತಾಂಶಕ್ಕೆ ಕನ್ನ ಹಾಕುವುದನ್ನು ಪತ್ತೆ ಮಾಡಲು ಗೂಗಲ್‌ ಯೋಜನೆಯೊಂದನ್ನು ಪ್ರಾರಂಭಿಸಿತ್ತು. ಆಂಡ್ರಾಯ್ಡ್‌ ಸಾಧನಗಳಲ್ಲಿ ಆ್ಯ‍ಪ್‌ಗಳ ಮೂಲಕ ಬಳಕೆದಾರರ ಮಾಹಿತಿ ಜಾಲಾಡುತ್ತಿರುವುದರ ಪತ್ತೆಗೆ ’ಪ್ರಾಜೆಕ್ಟ್‌ ಸ್ಟ್ರೋಬ್‌’ ನಿಗಾವಹಿಸಲಾಯಿತು. ಈ ಮೂಲಕ 2018ರಲ್ಲಿ ದತ್ತಾಂಶಕ್ಕೆ ತೊಂದರೆ ಮಾಡುವಂತಹ ‘ಬಗ್‌’ ಇರುವುದನ್ನು ಕಂಡುಕೊಂಡಿತ್ತು. ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಬಳಿಕ ಈ ಸಂಗತಿ ಹೊರಬಂದಿದೆ.

ಮುಂದಿನ 10 ತಿಂಗಳಲ್ಲಿ ಗೂಗಲ್‌ + ಗ್ರಾಹಕರಿಗೆ ಅಲಭ್ಯವಾಗಲಿದೆ. ಈ ಸಾಮಾಜಿಕ ತಾಣ ಅತಿ ಕಡಿಮೆ ಗ್ರಾಹಕರನ್ನು ಸೆಳೆಯುತ್ತಿದ್ದು, ಶೇ 90ರಷ್ಟು ಗೂಗಲ್‌ + ಬಳಕೆದಾರರು 5 ಸೆಕೆಂಡ್‌ಗಳಿಗೂ ಕಡಿಮೆ ಅವಧಿಯನ್ನು ಈ ಸೌಲಭ್ಯವನ್ನು ಬಳಸುತ್ತಾರೆಂದು ಗುರುತಿಸಲಾಗಿದೆ. ಹಾಗಾಗಿಯೇ ಇದನ್ನು ಸ್ಥಗಿತಗೊಳಿಸುವ ನಿರ್ಧಾರ ಎಂದಿದೆ ಗೂಗಲ್.

ಬದಲಾಗಿರುವ ತಾಣ..
ಆರ್ಕೂಟ್ ರೂಪಿಸಿದ್ದ ಗೂಗಲ್ ನ ಟರ್ಕಿಶ್ ಎಂಜಿನಿಯರ್ ಆರ್ಕೂಟ್ ಬುಯುಕ್ಕೊಕ್ಟೆನ್, ಗೂಗಲ್ + ರುವಾರಿ ವಿಕ್ ಗಂದೊತ್ರಾ ಈ ಇಬ್ಬರೂ ಹಿಂದೆಯೇ ಗೂಗಲ್ ತೊರೆದಿದ್ದಾರೆ. ಆರ್ಕೂಟ್ ಪ್ರಸ್ತುತ ’ಹಲೋ’ ಸಾಮಾಜಿಕ ಸಂಪರ್ಕ ತಾಣವನ್ನು ಪ್ರಚುರಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಲ್ಲಿಯೂ ಈ ಸಾಮಾಜಿಕ ಸಂಪರ್ಕ ತಾಣ ಕಾರ್ಯಾರಂಭಿಸಿದೆ.

ಜಿ+ ನಿಂದ ಹೊರಬರುವುದು ಹೇಗೆ?
ಗೂಗಲ್ + ನಲ್ಲಿ ಹಂಚಿಕೊಂಡಿರುವ ಮಾಹಿತಿ, ಫೋಟೊಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಇಲ್ಲವೇ ಮಾಹಿತಿಯನ್ನು ಅಳಿಸಿ, ಗೂಗಲ್ ನಿಂದ ಹೊರಬರಲು ಅವಕಾಶವಿದೆ. ಅದಕ್ಕೆ ಹೀಗೆ ಮಾಡಿ; ಮೊದಲು ಗೂಗಲ್ + ತಾಣಕ್ಕೆ ಲಾಗಿನ್ ಆಗಿ ರಿಮೂಲ್ ಆಕ್ಟೀವ್ ಅಕೌಂಟ್ ಆಯ್ಕೆ ಒತ್ತಿ. ಆ್ಯಪ್ ನಲ್ಲಿ ಡಾಟಾ ಕ್ಲಿಯರ್ ಮಾಡಿ, ಆ್ಯಪ್ ಅನ್ ಇನ್ಸ್ಟಾಲ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.