ADVERTISEMENT

40 ಭಾಷೆಗಳ ಅನುವಾದಕ ಸಾಧನ

ಸಂಗೀತಾ ಗೋಂಧಳೆ
Published 31 ಜುಲೈ 2019, 19:30 IST
Last Updated 31 ಜುಲೈ 2019, 19:30 IST
ಮುವಾಮಾ ಎನಾನ್ಸ್
ಮುವಾಮಾ ಎನಾನ್ಸ್   

ನೀವು ವಿದೇಶಗಳಿಗೆ ಹೋಗುತ್ತೀರಿ. ಅಲ್ಲಿಯವರೊಂದಿಗೆ ಮಾತನಾಡಲು ವಿವಿಧ ಭಾಷೆಗಳನ್ನು ಕಲಿಯಬೇಕು. ಮಾತನಾಡದಿದ್ದರೆ, ಸಂವಹನದ ಕೊರತೆಯಿಂದಾಗಿ ಎಷ್ಟೋ ವಿಚಾರಗಳು ತಿಳಿಯುವುದಿಲ್ಲ.

ಒಂದೊಮ್ಮೆ ಭಾಷೆ ಬಾರದಿದ್ದರೆ ಅನುವಾದಕರನ್ನು ಜತೆಗೆ ಕರೆದೊಯ್ಯಬೇಕು. ಒಂದು ಭಾಷೆಯಾದರೆ ಈ ವಿಧಾನ ಸರಿ. ಆದರೆ, ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವ ಮತ್ತು ಕೇಳಿಸಿಕೊಳ್ಳುವ ಸಮಯ ಒದಗಿ ಬಂದಾಗ ಏನು ಮಾಡುಬೇಕು?

ಪ್ರವಾಸಕ್ಕೆ ಹೋಗುವ ಮುನ್ನ ಹಣ ಕೊಟ್ಟು, ಗಂಟೆಗಟ್ಟಲೆ ತರಗತಿಗಳಲ್ಲಿ ಕುಳಿತು ಭಾಷೆಗಳನ್ನು ಕಲಿಯುಬೇಕಾ?

ADVERTISEMENT

ಹೀಗೆಲ್ಲ ಏನೇನೋ ಯೋಚನೆಗಳು ಬರುತ್ತವೆ. ಹೀಗೆ ಭಾಷಾ ಸಮಸ್ಯೆ ಎದುರಿಸುತ್ತಿರುವವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಜಪಾನ್‌ ಮೂಲದ ಸಂಸ್ಥೆಯೊಂದು ಪರಿಹಾರ ಕಂಡು ಹಿಡಿದಿದೆ. ಅದಕ್ಕಾಗಿ ವಿಶೇಷ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಅದರ ಹೆಸರು ‘ಮುವಾಮಾ ಎನೆನ್ಸ್‌’. ಈ ಸಾಧನ ಸುಮಾರು 40 ಭಾಷೆಗಳನ್ನು ಭಾಷಾಂತರಿಸುತ್ತದೆ.

ಏನಿದು ಮುವಾಮಾ?

ನಾವು ಮಾತನಾಡುವ ಭಾಷೆ ಗೊತ್ತಿರದ ವ್ಯಕ್ತಿಗಳ ಬಳಿ ನಮ್ಮ ಮಾತುಗಳನ್ನು ಅವರ ಭಾಷೆಯಲ್ಲಿ ಅರ್ಥವಾಗುವಂತೆ ತಿಳಿಸುವ ಸಾಧನವಿದು. ವಿಶ್ವದಲ್ಲಿ ಅತಿ ಹೆಚ್ಚು ಜನರು ಮಾತನಾಡುವ 40 ಭಾಷೆಗಳನ್ನು ಈ ಸಾಧನ ಭಾಷಾಂತರಿಸುತ್ತದೆ. ಕೇವಲ 30 ಸೆಕೆಂಡ್‌ಗಳಲ್ಲಿ ಮಾತುಗಳನ್ನು ಗ್ರಹಿಸಿ, ವಾಕ್ಯ ಮಾಡಿ ಭಾಷಾಂತರಿಸುವ ವಿಶೇಷ ಸಾಧನವಿದು.

ಪ್ರವಾಸಕ್ಕೆ ಹೋದಾಗ, ವ್ಯಾಪಾರ–ವಾಣಿಜ್ಯ ಸಭೆಗಳಲ್ಲಿ ಭಾಗವಹಿಸಿದಾಗ ಭಾಷೆ ಗೊತ್ತಿರದಿದ್ದವರು ಈ ಸಾಧನವನ್ನು ಬಳಸುವುದರಿಂದ ಮುಂದೆ ಎದುರಾಗುವ ‘ಸಂವಹನದ ನಷ್ಟ’ವನ್ನು ಸರಿಪಡಿಸಿಕೊಳ್ಳಬಹುದು ಎನ್ನುವುದು ಈ ಸಾಧನ ತಯಾರಿಸಿದ ತಂತ್ರಜ್ಞರ ಅಭಿಪ್ರಾಯ.

ಹೇಗೆ ಕೆಲಸ ಮಾಡುತ್ತದೆ?

ಕಿಸೆಯಲ್ಲಿ ಹಿಡಿಸುವಷ್ಟು ಪುಟ್ಟಗಾತ್ರದ ಡಾಂಗಲ್ ರೀತಿಯ ಸಾಧನವಿದು. ಚಾರ್ಜ್‌ ಮಾಡಿ ಬಳಸಿಕೊಳ್ಳಬಹುದು. ನಮ್ಮ ಭಾಷೆ ಗೊತ್ತಿರದ ವ್ಯಕ್ತಿಗಳ ಮುಂದೆ ಈ ಸಾಧನವನ್ನು ಇಟ್ಟು ನಾವು ಹೇಳಬೇಕೆಂದಿರುವ ವಿಷಯವನ್ನು ಈ ಸಾಧನದ ಮುಂದೆ ಹೇಳಿದರೆ ಅದು ಕೂಡಲೇ ಭಾಷಂತರಿಸಿ ಅವರ ಭಾಷೆಯಲ್ಲಿ ಉಚ್ಛರಿಸುತ್ತದೆ. ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೀರ್ಘ ವಾಕ್ಯಗಳನ್ನೂ ಈ ಸಾಧನ ಭಾಷಾಂತರಿಸುತ್ತದೆ.

ಕೆಲವು ಸಂಶೋಧನೆಗಳ ಪ್ರಕಾರ, ಭಾಷಾ ಕಲಿಕಾ ಕೇಂದ್ರಗಳಲ್ಲಿ ಭಾಷೆ ಕಲಿಯುವವರ ಪೈಕಿ ಶೇ 86ರಷ್ಟು ಮಂದಿ ಮಾತ್ರ ಭಾಷೆ ಕಲಿಯುವವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಆನ್‌ಲೈನ್‌ ತರಗತಿಗಳಲ್ಲಿ ಭಾಷೆ ಕಲಿಯುವ ಪ್ರತಿ 10 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಈ ಸಾಧನವು ನೆರವಾಗುತ್ತದೆ ಎನ್ನುತ್ತಿದ್ದಾರೆ ಮುವಾಮಾ ಎನಾನ್ಸ್ ತಂತ್ರಜ್ಞರು.

ಚೀನಿ, ಫ್ರೆಂಚ್‌, ಜಪಾನೀಸ್‌, ಇಂಗ್ಲಿಷ್‌, ಅರೇಬಿಕ್, ಸ್ಪ್ಯಾನಿಷ್‌, ಪೋರ್ಚುಗೀಸ್‌, ಡಚ್, ರಷ್ಯನ್, ಜರ್ಮನ್, ಥಾಯ್, ಸ್ವೀಡಿಶ್‌, ಇಟಾಲಿಯನ್, ಡ್ಯಾನಿಷ್‌, ಪೊಲಿಶ್‌, ಗ್ರೀಕ್‌, ಜೆಕ್, ಇಂಡೊನೇಷ್ಯನ್, ಬಲ್ಗೇರಿಯನ್, ಮಲೇಷ್ಯನ್, ಹೀಬ್ರೂ, ಕ್ರೊವೇಷ್ಯನ್, ನಾರ್ವೆಯನ್, ರುಮೇನಿಯನ್, ಟರ್ಕಿಶ್‌, ಹಿಂದಿ ಭಾಷೆಗಳು ಸೇರಿದಂತೆ ಇನ್ನೂ ಕೆಲವು ಪ್ರಮುಖ ಭಾಷೆಗಳನ್ನು ಈ ಸಾಧನ ಭಾಷಾಂತರಿಸುತ್ತದೆ.

ಈ ಸಾಧನ ಅಮೇಜಾನ್‌ ಸೇರಿದಂತೆ ಕೆಲವು ಆನ್‌ಲೈನ್‌ ತಾಣಗಳಲ್ಲಿ ಸಿಗುತ್ತದೆ. ಇದರ ಬೆಲೆ ಅಂದಾಜು ₹6,000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.