ADVERTISEMENT

ಫಿಟ್‌ನೆಸ್‌ಗೆ ಆ್ಯಪ್‌ ತಂತ್ರ

ಪೃಥ್ವಿರಾಜ್ ಎಂ ಎಚ್
Published 23 ಡಿಸೆಂಬರ್ 2018, 19:45 IST
Last Updated 23 ಡಿಸೆಂಬರ್ 2018, 19:45 IST
   

ಸ್ಮಾರ್ಟ್‌ಫೋನ್‌ ಇದ್ದರೆ ಸಾಕು, ಕಿರುತಂತ್ರಾಂಶವೊಂದು ತರಬೇತುದಾರನಾಗಿ ಮಾರ್ಗದರ್ಶನ ಮಾಡುತ್ತದೆ. ಇನ್ನೊಂದು ಆ್ಯಪ್‌ ಪೋಷಕಾಂಶ ತಜ್ಞನಾಗಿ ಸೂಚನೆ ನೀಡುತ್ತದೆ. ಮತ್ತೊಂದು ಆ್ಯಪ್‌ ಉತ್ಸಾಹ ತುಂಬುವ ಗುರುವಾಗಿ ಸಾಧಿಸುವ ಛಲ ಮೂಡಿಸುತ್ತದೆ. ಇನ್ನು ಫಿಟ್‌ನೆಸ್ ಬ್ಯಾಂಡ್‌, ಸ್ಮಾರ್ಟ್‌ ವಾಚ್‌ಗಳ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಮಣಿಕಟ್ಟಿನ ಮೇಲೆ ಒದಗಿ, ನಾಡಿ ಮಿಡಿತವನ್ನು ಪರೀಕ್ಷಿಸುತ್ತಾ ‘ನಿಮ್ಮ ಆರೋಗ್ಯವೇ ನಮ್ಮ ಕರ್ತವ್ಯ’ ಎಂಬಂತೆ ಕೆಲಸ ಮಾಡುತ್ತವೆ. ಹೀಗೆ ಫಿಟ್‌ನೆಸ್ ಪ್ರಿಯರನ್ನು ಮೆಚ್ಚಿಸುತ್ತಿರುವ ಕೆಲವು ತಂತ್ರಾಂಶ ಮತ್ತು ಸಾಧನಗಳು ಇಲ್ಲಿವೆ.

ಫಿಟ್ಟರ್‌ (Fitter): ಇದೊಂದು ಸೋಷಿಯಲ್ ಕಮ್ಯುನಿಟಿ ಆ್ಯಪ್. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಫಿಟ್‌ನೆಸ್ ಪ್ರಿಯರ ಅಡ್ಡ. ತೂಕ ಇಳಿಸಿಕೊಳ್ಳಬೇಕು, ಫಿಟ್‌ನೆಸ್‌ ವೃತ್ತಿಪರರಾಗಿ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿರುವವರು, ಸಮುದಾಯ ರಚಿಸಿಕೊಂಡು, ‘ಆರೋಗ್ಯವೇ ಮಹಾ ಭಾಗ್ಯ’ ಎಂಬ ನಿನಾದದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಫಿಟ್ಟರ್‌ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಿಕೊಂಡು, ಜನರ ನಡುವೆ ಸಂಪರ್ಕ ಮೂಡಿಸುತ್ತಿದ್ದಾರೆ. ಈ ಆ್ಯಪ್‌ ಮೂಲಕ ಸದಸ್ಯತ್ವ ಪಡೆದು ನಿಮಗೆ ಇಷ್ಟವಾಗುವವರ ಜತೆ ಸ್ನೇಹ ಬೆಳೆಸಿಕೊಂಡು ಫಿಟ್‌ನೆಸ್ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಬಹುದು. ಆರೋಗ್ಯವಾಗಿರಬಹುದು.

ಹೆಲ್ದಿಫೈಮೀ (Helathifyme): ಈ ತಂತ್ರಾಂಶ ನಿಮ್ಮ ಬಳಿ ಇದ್ದರೆ, ಫಿಟ್‌ನೆಸ್‌ ಕೋಚ್ ಇದ್ದಂತೆಯೇ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸುತ್ತಿರುವ ಹಲವರು, ಊಟ ಮಾಡುವುದಿರಲಿ, ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದನ್ನೂ ಮರೆಯುತ್ತಿದ್ದಾರೆ. ಕುರ್ಚಿ ಮೇಲೆ ಕುಳಿತರೆ ಏಳುವುದನ್ನೇ ಮರೆಯುತ್ತಿದ್ದಾರೆ. ಇಂಥವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನೆರವಾಗುತ್ತಿದೆ ಈ ತಂತ್ರಾಂಶ. ನಿಮ್ಮ ವೃತ್ತಿ, ಪ್ರವೃತ್ತಿಗಳನ್ನು ಅಧ್ಯಯನ ಮಾಡುತ್ತಾ ಸೂಕ್ತ ಸಲಹೆಗಳನ್ನು ಸೂಚಿಸುತ್ತದೆ. ಇದರ ಸಹಾಯದಿಂದ ರಿಮೈಂಡರ್‌ಗಳನ್ನು ಇಟ್ಟುಕೊಳ್ಳಬಹುದು, ಡೈರಿ ಕೂಡ ಬರೆದುಕೊಳ್ಳಬಹುದು.

ಫಿಟ್ ಪಾಸ್‌ (Fitpass): ಇದು ಜಿಮ್‌ಗಳ ಅಡ್ಡ. ನಿತ್ಯ ಜಿಮ್‌ನಲ್ಲಿ ಬೆವರು ಹರಿಸುವವರು ಓದುವುದಕ್ಕಾಗಿಯೋ ಅಥವಾ ಕೆಲಸದ ನಿಮಿತ್ತವೋ ಬೇರೆ ಊರುಗಳಿಗೆ ಹೋದರೆ, ಮೈ–ಕೈ ನೋವು ಎದುರಿಸಬೇಕು. ಹೋದ ಪ್ರದೇಶದಲ್ಲಿ ಎಲ್ಲೆಲ್ಲಿ ಜಿಮ್‌ ಲಭ್ಯವಿದೆ ಎಂಬ ಮಾಹಿತಿ ದೊರೆತರೆ ಈ ಸಮಸ್ಯೆ ಇರುವುದಿಲ್ಲ. ಇಂತಹ ಮಾಹಿತಿಯನ್ನು ನೀಡುತ್ತದೆ ಫಿಟ್‌ಪಾಸ್ ತಂತ್ರಾಂಶ. ಇದರ ಮೂಲಕ ನೀವಿರುವ ಪ್ರದೇಶದ ಸುತ್ತಮುತ್ತ ಎಲ್ಲೆಲ್ಲಿ ಜಿಮ್‌ ಕೇಂದ್ರಗಳಿವೆ ಎಂಬ ಮಾಹಿತಿ ಸಿಗುತ್ತದೆ. ವರ್ಷಕ್ಕೊಮ್ಮೆ ಹಣ ಪಾವತಿಸಿ ಈ ಆ್ಯಪ್ ಬಳಸಬಹುದು.

ಫಿಟ್‌ಸೊ (Fitso): ಈ ಕಿರು ತಂತ್ರಾಂಶದ ಮೂಲಕ ಉಚಿತ ವಿಡಿಯೊ ತರಗತಿಗಳನ್ನು ನೋಡಬಹುದು. ನಿಮ್ಮ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್‌) ಪರೀಕ್ಷಿಸಿದ ನಂತರ, ಇದು ಕೆಲಸ ಮಾಡಲು ಆರಂಭಿಸುತ್ತದೆ. ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕ ಇದ್ದೀರೊ, ಇಲ್ಲವೋ ಎಂಬುದನ್ನು ತಿಳಿಸುತ್ತದೆ. ತೂಕ ಹೆಚ್ಚಿದ್ದರೆ, ಎಷ್ಟು ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಬೇಕು, ಇದಕ್ಕಾಗಿ ಎಂತಹ ಡೈಯಟ್‌ ಪಾಲಿಸಬೇಕು ಇತ್ಯಾದಿ ವಿಷಯಗಳನ್ನು ತಿಳಿಸುತ್ತದೆ. ವಿಡಿಯೊಗಳನ್ನು ನೋಡಿ ಕಸರತ್ತು ಮಾಡಬಹುದು. ಸ್ವಲ್ಪ ಹಣ ಖರ್ಚು ಮಾಡಿದರೆ ವೈಯಕ್ತಿಕ ತರಬೇತುದಾರರನ್ನೂ ಹುಡುಕಿಕೊಡುತ್ತದೆ ಈ ಆ್ಯಪ್

ಫಿಟ್‌ನೆಸ್ ಬ್ಯಾಂಡ್‌ಗಳು

ಕೈಗೆಟುಕುವ ಬೆಲೆಯಿಂದ ಹಿಡಿದು, ದುಬಾರಿ ಎನಿಸುವ ಫಿಟ್‌ನೆಸ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಹಲವು ಇವೆ. ಕಡಿಮೆ ಬೆಲೆಗೆ ಸಿಗುವ ಕೆಲವು ಬ್ಯಾಂಡ್‌ಗಳು ಇಲ್ಲಿವೆ.

ಮಿ ಬ್ಯಾಂಡ್ 3: ಇದು ನಿಮ್ಮ ಎದೆ ಬಡಿತ, ನಾಡಿ ಮಿಡಿತ, ನಡೆದ ಹೆಜ್ಜೆಗಳು, ನಿದ್ರಿಸಿದ ಅವಧಿ ಹೀಗೆ ಹಲವು ಮಾಹಿತಿಯನ್ನು ನೀಡುತ್ತದೆ. ಈಜುವಾಗಲೂ ಇದನ್ನು ಬಳಸಬಹುದು. ಒಎಲ್‌ಡಿ, ಟಚ್‌ ಸ್ಕ್ರೀನ್‌ ಸೌಲಭ್ಯ ಇರುವುದರಿಂದ ಫೋನ್‌, ಮೆಸೇಜ್‌ಗಳನ್ನೂ ನೋಡಬಹುದು. ವಾಟ್ಸ್‌ಆ್ಯಪ್‌ಗೆ ಬರುವ ಸಂದೇಶಗಳನ್ನು ಇದರಲ್ಲೂ ನೋಡುವ ಹಾಗೆ ಜೋಡಿಸಿಕೊಳ್ಳಬಹುದು. ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 20 ದಿನಗಳ ವರಗೆ ಬಳಸಬಹುದು ಇದರ ಬೆಲೆ ₹1,999

ಜಿಒಕ್ಯುಐಐ ವಿಟಲ್‌: ಇದು ಫಿಟ್‌ನೆಸ್‌ ಮೇಲೆ ಗಮನ ಕೇಂದ್ರಿಕರಿಸಲು ನೆರವಾಗುವ ಸ್ಮಾರ್ಟ್‌ವಾಚ್‌. ಆಗಾಗ್ಗೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬಹುದು. ಎದೆಬಡಿತದ ವೇಗವನ್ನು ಟ್ರ್ಯಾಕ್ ಮಾಡಿ ತಿಳಿಸುತ್ತದೆ. ಕಸರತ್ತು ನಡೆಸಿದ ನಂತರ ಎಷ್ಟು ಕ್ಯಾಲರಿ ಖರ್ಚಾಗಿವೆ ಎಂಬುದನ್ನು ತೋರಿಸುತ್ತದೆ. ಎಷ್ಟು ದೂರ ನಡೆದಿದ್ದೀರಿ, ಎಷ್ಟು ಮೆಟ್ಟಿಲು ಹತ್ತಿದ್ದೀರಿ ಎಂಬ ಮಾಹಿತಿಯೂ ಸಿಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಏಳು ದಿನಗಳ ವರೆಗೆ ಬಳಸಬಹುದು. ಇದರ ಬೆಲೆ ₹2,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.