ADVERTISEMENT

ಬಿಟಿಎಸ್‌: ತಂತ್ರಜ್ಞಾನ ಮೇಳ ಇಂದಿನಿಂದ

ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 21:03 IST
Last Updated 18 ನವೆಂಬರ್ 2020, 21:03 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ಬೆಂಗಳೂರು: ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್ ಸಮಿಟ್-2020’ಗೆ (ಬಿಟಿಎಸ್‌) ಕ್ಷಣಗಣನೆ ಆರಂಭವಾಗಿದೆ. ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಗುರುವಾರ ಬೆಳಿಗ್ಗೆೆ 10ಕ್ಕೆ ಪ್ರಧಾನ ನರೇಂದ್ರ ಮೋದಿ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಲಿದ್ದಾರೆ.

ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಜ್ ಗಣರಾಜ್ಯದ ಉಪಾಧ್ಯಕ್ಷ ಗೈ ಪರ್ಮೆಲಿನ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜಗದೀಶ್ ಶೆಟ್ಟರ್ ಮೇಳದ 23ನೇ ಆವೃತ್ತಿಗೆ ಸಾಕ್ಷಿಯಾಗಲಿದ್ದಾರೆ.

ನ. 19ರಿಂದ 21ರವರೆಗೆ ನಡೆಯುವ ಮೇಳದಲ್ಲಿ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. 270 ತಂತ್ರಜ್ಞರು ಹಾಗೂ 250 ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಆರೋಗ್ಯ, ಕೃಷಿ, ವಿಪತ್ತು ನಿರ್ವಹಣೆಗೆ ಡ್ರೋನ್‌ ಮತ್ತು ರೋಬೊಟಿಕ್‌ ತಂತ್ರಜ್ಞಾನದ ಮೂಲಕ ಪರಿಹಾರ, ಡಿಜಿಟಲ್ ಹೆಲ್ತ್‌ಕೇರ್‌, ಸಾರ್ವಜನಿಕ ಸಾರಿಗೆಯಲ್ಲಿ ತಂತ್ರಜ್ಞಾನ, ಕೃಷಿ ಉದ್ಯಮ, ಸೈಬರ್ ಭದ್ರತೆ, ಉಪಗ್ರಹ ಮತ್ತು ಸಮಾಜ ಸೇರಿದಂತೆ 70ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ.

ADVERTISEMENT

‘ನೆಕ್ಸ್ಟ್‌ ಈಸ್ ನೌ’ ಶೀರ್ಷಿಕೆ ಅಡಿ ‘ಭವಿಷ್ಯವನ್ನು ಈಗಲೇ ಕಂಡುಕೊಳ್ಳುವ’ ಪ್ರಯತ್ನ ಈ ಮೇಳದಲ್ಲಿ ನಡೆಯಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ವಿವಿಧ ದೇಶಗಳ ರಾಯಭಾರಿಗಳು ಭೌತಿಕವಾಗಿ ಹಾಗೂ ಕೆಲವರು ವರ್ಚುವಲ್ ಆಗಿ ಪಾಲ್ಗೊಳ್ಳಲಿದ್ದಾಾರೆ.

ಕಳೆದ ಬಾರಿ ತಂತ್ರಜ್ಙಾನ ಮೇಳವು 18-20 ದೇಶಗಳಿಗೆ ಸೀಮಿತವಾಗಿತ್ತು. ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ವಿದ್ಯುತ್‌ಚಾಲಿತ ವಾಹನಗಳು, ಕೃಷಿ, ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ತಜ್ಞರು ಚರ್ಚೆ ನಡೆಸಲಿದ್ದಾರೆ.

ಮೇಳವು ಮೂರು ದಿನಗಳಿಗೆ ಸೀಮಿತವಾಗಿದ್ದರೂ, ‘ಬಿ2ಬಿ’ ವೇದಿಕೆ ತಿಂಗಳವರೆಗೆ ಮುಕ್ತವಾಗಿರಲಿದೆ. ಸರ್ಕಾರ ಮತ್ತು ವಿವಿಧ ಕಂಪನಿಗಳ ನಡುವೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಭೆಗಳು ಈ ಅವಧಿಯಲ್ಲಿ ನಿರಂತರವಾಗಿ ನಡೆಯಲಿವೆ.

www.bengalurutech-summit.com ನೋಂದಣಿ ಮಾಡಿಕೊಳ್ಳಬಹುದು. ಪ್ರದರ್ಶಕರು ವರ್ಚುವಲ್ ಆಗಿ ತಮ್ಮ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.