ADVERTISEMENT

ಸುಸ್ಥಿರ ಭವಿಷ್ಯಕ್ಕೆ ಬೇಕು ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:00 IST
Last Updated 9 ಅಕ್ಟೋಬರ್ 2018, 20:00 IST
   

ವಿಶ್ವಸಂಸ್ಥೆಯ ಆಶಯದಂತೆ, ಸುಸ್ಥಿರ ಅಭಿವೃದ್ಧಿಗಾಗಿ ನೀತಿ ಆಯೋಗ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಪರಸ್ಪರ ಸಹಕರಿಸುವ ನಿರ್ಧಾರಕ್ಕೆ ಬಂದಿವೆ. ಸುಸ್ಥಿರ ಅಭಿವೃದ್ಧಿ ಸಾಧಿಸಲು ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಹಣ ತೊಡಗಿಸಬೇಕಾಗುತ್ತದೆ. ಈ ವಿಷಯದಲ್ಲಿ ಸದ್ಯಕ್ಕೆ ಭಾರತದ ಸಾಧನೆ ಕಳಪೆ ಮಟ್ಟದಲ್ಲಿ ಇದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದೆಯೂ ಬಿದ್ದಿದೆ.

ಇತ್ತೀಚಿನ ವರ್ಷಗಳಲ್ಲಿ ಈ ವಿಷಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದರೂ, ದೇಶಿ ಕೈಗಾರಿಕಾ ವಲಯವು ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ನಿಧಾನ ಧೋರಣೆ ಅನುಸರಿಸುತ್ತಿದೆ. ಇತ್ತೀಚಿನವರೆಗೆ ಕಾರ್ಪೊರೇಟ್‌ ಸಂಸ್ಥೆಗಳೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಅಮೆರಿಕದ ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ 1985ರಲ್ಲಿಯೇ ಬೆಂಗಳೂರಿನಲ್ಲಿ ‘ಆರ್‌ಆ್ಯಂಡ್‌ಡಿ’ ಕೇಂದ್ರ ಆರಂಭಿಸಿತ್ತು. 2000 ಇಸ್ವಿವರೆಗೆ ಈ ಕ್ಷೇತ್ರದಲ್ಲಿ ಗಮನಾರ್ಹ ಎನ್ನಬಹುದಾದ ಯಾವುದೇ ಚಟುವಟಿಕೆಗಳೂ ಕಂಡು ಬಂದಿರಲಿಲ್ಲ. ‘ಜಿಇ’ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಸಂಶೋಧನಾ ಕೇಂದ್ರ ಆರಂಭಿಸಿದ ನಂತರವೇ ಉಳಿದವರೆಲ್ಲ ಎಚ್ಚೆತ್ತುಕೊಂಡರು.

ADVERTISEMENT

ನಂತರದ ವರ್ಷಗಳಲ್ಲಿ ವಿಶ್ವದಾದ್ಯಂತ ‘ಆರ್‌ಆ್ಯಂಡ್‌ಟಿ’ ಕೇಂದ್ರಗಳು ನಾಯಿಕೊಡೆಗಳಂತೆ ಸ್ಥಾಪನೆಗೊಂಡವು. ಎಲ್ಲೆಡೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯ ಭರಾಟೆ ನಡೆದರೂ, ದೇಶಿ ಕಾರ್ಪೊರೇಟ್‌ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ತೋರಲಿಲ್ಲ. ‘ಆರ್‌ಆ್ಯಂಡ್‌ಡಿ’ ಬಗ್ಗೆ ತಮ್ಮ ಈ ಮೊದಲಿನ ಉದಾಸೀನ ಧೋರಣೆಯನ್ನೇ ಮುಂದುವರೆಸಿದವು.

ನಮ್ಮಲ್ಲಿ ಒಟ್ಟು ಆಂತರಿಕ ಉತ್ಪನ್ನದ ಶೇ 0.6 ರಿಂದ ಶೇ 0.7ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಅಮೆರಿಕ (ಶೇ 2.8), ಚೀನಾ (ಶೇ 2.1), ಇಸ್ರೇಲ್‌ (ಶೇ 4.3) ಮತ್ತು ದಕ್ಷಿಣ ಕೊರಿಯಾಗಳಲ್ಲಿನ (ಶೇ 4.2) ವೆಚ್ಚಕ್ಕೆ ಹೋಲಿಸಿದರೆ ನಮ್ಮಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ವೆಚ್ಚ ಮಾಡಲಾಗುತ್ತಿದೆ.

ವಿಶ್ವದ ಬಹುತೇಕ ದೇಶಗಳಲ್ಲಿ ಖಾಸಗಿ ವಲಯವು ಗರಿಷ್ಠ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿದೆ. ಆದರೆ, ನಮ್ಮಲ್ಲಿ ಸರ್ಕಾರಿ ವೆಚ್ಚಕ್ಕೆ ಹೋಲಿಸಿದರೆ ಖಾಸಗಿ ಸಂಸ್ಥೆಗಳ ಹೂಡಿಕೆಯೂ ಕಡಿಮೆ ಮಟ್ಟದಲ್ಲಿ ಇದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಮಾಡುವ ವೆಚ್ಚದಲ್ಲಿನ ಬಹುತೇಕ ಭಾಗವು (3/5) ಅಣು ಇಂಧನ, ಬಾಹ್ಯಾಕಾಶ, ವಿಜ್ಞಾನ – ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಮೀಸಲಾಗಿದೆ. ಖಾಸಗಿ ವಲಯದ ಸಂಸ್ಥೆಗಳು ಈ ವಿಷಯದಲ್ಲಿ ಮೈಕೊಡವಿಕೊಂಡು ಮುನ್ನಡೆಯಬೇಕಾದ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ.

-ಡಾ. ಮುಕುಲ್‌ ಸಕ್ಸೇನಾ,(ಹ್ಯಾವೆಲ್ಸ್ ಇಂಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.