ADVERTISEMENT

ಆನ್‌ಲೈನ್‌ ವಂಚಕರಿಗೆ ಕೊರೊನಾ ಕಾಲವೂ ಇಷ್ಟ!

ಕೃಷ್ಣಿ ಶಿರೂರ
Published 19 ಆಗಸ್ಟ್ 2020, 14:22 IST
Last Updated 19 ಆಗಸ್ಟ್ 2020, 14:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಆನ್‌ಲೈನ್‌ ವಂಚಕರ ಕಥೆ ಗೊತ್ತೇ ಇದೆ. ವಂಚಕರ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಂಡವರಿಗೆ ಲೆಕ್ಕವಿಲ್ಲ. ಅಂತಹ ವಂಚಕರು ಈಗ ಕೊರೊನಾವನ್ನೂ ನೆಪ ಮಾಡಿಕೊಂಡು ವಂಚನೆಗೆ ಹೊಂಚು ಹಾಕುತ್ತಿದ್ದಾರೆ. ಹೇಗೆಲ್ಲಾ ಯಾಮಾರಿಸಿದ್ದಾರೆಂದು ತಿಳಿಯಲು ಕೆಲವು ಉದಾಹರಣೆಗಳು ಸಾಕು.

‘ನನ್ನ ತಂದೆಗೆ ನಾನೊಬ್ಬಳೇ ವಾರಸುದಾರಳು. ಅವರು ಮಾಡಿಟ್ಟ ಆಸ್ತಿ ₹6.5 ಕೋಟಿ ಇದೆ. ಆದರೆ ನಾನೀಗ ಕೋವಿಡ್‌ನಿಂದ ಬಳಲುತ್ತಿದ್ದು, ಸಾವಿಗೆ ಹತ್ತಿರವಿದ್ದೇನೆ. ಒಂದಿಷ್ಟು ಹಣವನ್ನು ಭಾರತದ ಬಡವರಿಗೆ ನೀಡಲು ನಿರ್ಧರಿಸಿರುವೆ. ಆದರೆ ಈ ಹಣವನ್ನು ಭಾರತದಲ್ಲಿ ‘ವೆಲ್‌ಫೇರ್‌ & ಚಾರಿಟೆಬಲ್‌ ಆರ್ಗನೈಜೇಷನ್‌’ ಹೆಸರಲ್ಲಿ ಬಡವರಿಗೆ ಹಂಚಿಕೆ ಮಾಡಿ. ₹4 ಕೋಟಿಯನ್ನು ನಿಮ್ಮ ವಿಳಾಸಕ್ಕೆ ಕೋರಿಯರ್‌ ಮೂಲಕ ಕಳುಹಿಸಿಕೊಡುವೆ. ನಿಮ್ಮ ಒಪ್ಪಿಗೆ ಬೇಕಿದೆ. ಯೆಸ್‌ ಆರ್‌ ನೋ’.

ಈ ಒಂದು ವಿನಂತಿಗೆ ನೀವು ಯೆಸ್‌ ಎಂದು ನಿಮ್ಮ ವಿಳಾಸವನ್ನು ಕಳುಹಿಸಿದಲ್ಲಿ ನೀವು ಖಂಡಿತ ವಂಚನೆಗೊಳಗಾಗುತ್ತಿರಿ ಎಂದೇ ಅರ್ಥ.

ADVERTISEMENT

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ವೈದ್ಯರೊಬ್ಬರಿಗೆ ವಿದೇಶದಿಂದ ಅನಾಮಧೇಯ ವ್ಯಕ್ತಿಯಿಂದ ಕರೆ ಬರುತ್ತದೆ. ‘ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತಕ್ಕೆ ಪಿಪಿಇ ಕಿಟ್‌ ಕೊಡುವ ಯೋಜನೆಯಿದ್ದು, ನಿಮ್ಮ ವಿಳಾಸ ನೀಡಿದಲ್ಲಿ ಕೊರಿಯರ್‌ ಮೂಲಕ ಕಳುಹಿಸಿ ಕೊಡಲಾಗುವುದು’. ವೈದ್ಯರು, ಓಕೆ ಎಂದು ವಿಳಾಸವನ್ನೂ ಕೊಟ್ಟು ಬಿಟ್ಟರು. ಮಾರನೇ ದಿನವೇ ಮತ್ತೆ ವೈದ್ಯರಿಗೆ ‘ನಿಮ್ಮ ಹೆಸರಲ್ಲಿ ಪಾರ್ಸೆಲ್‌ ಇದೆ. ಅದನ್ನು ಬಿಡಿಸಿಕೊಳ್ಳಲು ಅರ್ಜೆಂಟಾಗಿ ಹಣ ಕಟ್ಟಿ’ ಎಂದು ಹೇಳಿ ಅಕೌಂಟ್‌ ನಂಬರ್‌ ಅನ್ನೂ ಕೊಡುತ್ತಾರೆ. ಅದನ್ನು ನಂಬಿದ ವೈದ್ಯ, ಅವರು ಕೊಟ್ಟ ಖಾತೆಗೆ ₹25 ಸಾವಿರ ತುಂಬುತ್ತಾರೆ. ಪಿಪಿಇ ಕಿಟ್‌ ಕೂಡ ಇಲ್ಲ, ಹಣವೂ ಹೋಯಿತು.

ಇವು ಕೆಲವು ಉದಾಹರಣೆಗಳಷ್ಟೆ. ಇಂಥ ವಂಚನೆಗಳು ಹಲವು ಮಜಲುಗಳಲ್ಲಿ ನಡೆಯುತ್ತಿವೆ. ಕೆಲವೇ ಪ್ರಕರಣಗಳು ಸೈಬರ್‌ ಕ್ರೈಂನಲ್ಲಿ ದಾಖಲಾಗಬಹುದು. ಆದರೆ ಹೆಚ್ಚಿನ ಪ್ರಕರಣಗಳು ಮರ್ಯಾದೆಗೆ ಅಂಜಿ ದಾಖಲಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ವಂಚಕರ ಬಲೆಗೆ ಸುಲಭವಾಗಿ ಬೀಳುವುದಕ್ಕಿಂತ ಜಾಗೃತರಾಗಿರುವುದೇ ಲೇಸು.

ಲಿಂಕ್‌ಗಳನ್ನು ಒತ್ತಲೇ ಬೇಡಿ

ಆರೋಗ್ಯ ಸೇತು ಹೆಸರಲ್ಲಿ ಫೇಕ್‌‌ ಆ್ಯಪ್‌, ಸ್ಮಿಶಿಂಗ್‌ (ಎಸ್‌ಎಂಎಸ್‌), ವಿಶಿಂಗ್‌ (ಕರೆ), ಓಎಲ್‌ಎಕ್ಸ್, ಫಿಶಿಂಗ್‌(ಎಮೋಷನ್‌ ಚೀಟಿಂಗ್‌), ಐಟಿಎನ್‌ (ಕೊರೊನಾ ಹೆಸರಲ್ಲಿ ಬೇರೆ ಬೇರೆ ವೆಬ್‌ಸೈಟ್)‌, ಫೇಕ್‌ ಆ್ಯಪ್‌ ಮೂಲಕಸೈಬರ್‌ ಕ್ರೈಂ ನಡೆಯುತ್ತಿದೆ ಎನ್ನುತ್ತಾರೆ ಸೈಬರ್‌ ಸೆಕ್ರೆಟರಿ ಆ್ಯಂಡ್‌ ಲಾ ಟ್ರೈನರ್‌‌ ಆಗಿರುವ ಮಂಗಳೂರಿನ ಡಾ.ಅನಂತ ಪ್ರಭು. ‘ಯಾವುದೇ ಕಾರಣಕ್ಕೂ ಎಸ್‌ಎಂಎಸ್‌ ಮೂಲಕ ಬರುವ ಲಿಂಕ್‌ಗಳನ್ನು ಒತ್ತಲೇ ಬೇಡಿ. ಒತ್ತಿದರೆ ನಿಮ್ಮ ದಾಖಲೆಗಳೆಲ್ಲ ಸುಲಭವಾಗಿ ಆನ್‌ಲೈನ್‌ ವಂಚಕರ ಕೈ ಸೇರಲಿದೆ. ವಿಡಿಯೊ ಚಾಟ್‌ ಮಾಡಲೇಬೇಡಿ’ ಎಂಬುದು ಅವರು ನೀಡುವ ಸಲಹೆ.

ಸೈಬರ್‌ ಕ್ರೈಂನಿಂದ ದೂರವಿರಲು ಹೀಗೆ ಮಾಡಿ

*ಫೇಸ್‌ಬುಕ್/ ಇನ್‌ಸ್ಟಾಗ್ರಾಂ‌ನಲ್ಲಿ ಬರುವ ‘ಫಾರಿನ್‌ ಫ್ರೆಂಡ್ಸ್ ರಿಕ್ವೆಸ್ಟ್‌’ ಸ್ವೀಕರಿಸಬೇಡಿ/ಫಾಲೋ ಮಾಡಬೇಡಿ.

*ಫೇಸ್‌ಬುಕ್‌ನಲ್ಲಿ ನಿಮ್ಮ ಮೊಬೈಲ್‌ ಫೋನ್‌ ಸಂಖ್ಯೆ ಸಿಗದಂತೆ ಎಚ್ಚರ ವಹಿಸಿ.

*ಲಾಟರಿ, ಬಹುಮಾನ, ಕೊರೊನಾ ಸಂಕಷ್ಟದಲ್ಲಿ ಸರ್ಕಾರದ ಸಹಾಯಧನವನ್ನು ಪಡೆಯದು ಲಿಂಕ್‌ ಅನ್ನು ಒತ್ತಿ ಎಂದು ನಿಮ್ಮ ಮೊಬೈಲ್‌ ಸಂಖ್ಯೆಗೆ ಬರುವ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ಒತ್ತಲೇಬೇಡಿ.

*ಬ್ಯಾಂಕ್‌ ಅಕೌಂಟ್‌ ಡಿಟೈಲ್‌, ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಬೇಡಿ.

*ಫೋನ್‌ ಪೇ, ಗೂಗಲ್‌ ಪೇ ಬಳಕೆಯಲ್ಲೂ ಎಚ್ಚರವಿರಲಿ.

*ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ಕಾರಣಕ್ಕೂ ವಿಡಿಯೊ ಚಾಟ್‌ ಮಾಡದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.