ADVERTISEMENT

ಗುಣಮಟ್ಟದಲ್ಲಿ ರಾಜಿ ಇಲ್ಲ: ರೆಡ್‌ಮಿ 7ಎ

ವಿಶ್ವನಾಥ ಎಸ್.
Published 7 ಆಗಸ್ಟ್ 2019, 19:30 IST
Last Updated 7 ಆಗಸ್ಟ್ 2019, 19:30 IST
   

ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌ಪೋನ್‌ ಗಳನ್ನು ನೀಡುವುದರಲ್ಲಿ ಶಿಯೋಮಿ ಕಂಪನಿ ಮುಂಚೂಣಿಯಲ್ಲಿದೆ. ರೆಡ್‌ಮಿ ಫೋನ್‌, ದೀರ್ಘಾವಧಿಯವರೆಗೆ ಬಾಳಿಕೆ ಬರಬೇಕು ಎಂದು ಬಯಸುವವರ ಸಂಖ್ಯೆ ಈಚೆಗೆ ವಿರಳ. ಈ ದೃಷ್ಟಿಯಿಂದ ನೋಡಿದರೂ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲದೇ ಬಳಸಬಹುದಾದ, ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುವುದರಲ್ಲಿ ಕಂಪನಿ ಜನಮೆಚ್ಚುಗೆ ಪಡೆದುಕೊಂಡಿದೆ.

ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಫೋನ್‌ ತಯಾರಿಸುವ ಶಿಯೋಮಿ, 10 ಸಾವಿರದ ಬೆಲೆಯ ಒಳಗಿನ ಹ್ಯಾಂಡ್‌ಸೆಟ್‌ಗಳಲ್ಲಿಯೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಇತ್ತೀಚೆಗೆ ರೆಡ್‌ಮಿ 7ಎ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹ 6,499 ಇದೆ.

ದೊಡ್ಡ ಗಾತ್ರದ ಪರದೆ, ಫಿಂಗರ್‌ಪ್ರಿಂಟ್‌ ಆಯ್ಕೆ ಬಯಸುವ ಮತ್ತು ಗೇಮಿಂಗ್‌ ಪ್ರಿಯರಿಗೆ ಇದು ಅಷ್ಟಾಗಿ ಹಿಡಿಸುವುದಿಲ್ಲ. ಏಕೆಂದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಇದರ ಪರದೆ 5.45 ಇಂಚಿನದ್ದಾಗಿದೆ. ಗುಣಮಟ್ಟ, ದೀರ್ಘ ಬಾಳಿಕೆಯ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾ ಇದರ ಸಕಾರಾತ್ಮಕ ಅಂಶಗಳಾಗಿವೆ. ಇದೇ ಬೆಲೆಗೆ ಬೇರೆ ಬ್ರ್ಯಾಂಡ್‌ನ ಫೋನ್‌ಗಳಿಗೆ ಹೋಲಿಸಿದರೆ ಸಹಜ ಮತ್ತು ಮಂದ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.

ADVERTISEMENT

ಕಣ್ಣಿಗೆ ಹಾನಿ ಆಗುವುದನ್ನು ತಪ್ಪಿಸಲು ಬ್ಲೂ ಲೈಟ್‌ ಪ್ರಮಾಣ ತಗ್ಗಿಸಲಾಗಿದೆ. ಸನ್‌ ಲೈಟ್‌, ನೈಟ್‌ ಮೋಡ್, ರೀಡಿಂಗ್‌ ಮೋಡ್‌, ಕಲರ್ ಟೆಂಪರೇಚರ್‌ ಅಡ್ಜೆಸ್ಟ್‌ಮೆಂಟ್‌ ಮತ್ತು ಸ್ಟ್ಯಾಂಡರ್ಡ್‌ ಮೋಡ್‌ ಆಯ್ಕೆಗಳಿವೆ.

ವೈರ್‌ಲೆಸ್‌ ಎಫ್‌ಎಂ: ಎಫ್‌ಎಂ ಕೇಳುವ ಹವ್ಯಾಸ ರೂಢಿಸಿಕೊಂಡಿರುವವರಿಗೆ ಈ ಹ್ಯಾಂಡ್‌ಸೆಟ್‌ ಇಷ್ಟವಾಗಲಿದೆ. ಏಕೆಂದರೆ ಇದರಲ್ಲಿ ವೈರ್‌ಲೆಸ್‌ ಎಫ್‌ಎಂ ರೇಡಿಯೊ ಆಯ್ಕೆ ಇದೆ. ಇಂದಿನ ಬಹುತೇಕ ಫೋನ್‌ಗಳಲ್ಲಿ ಈ ಆಯ್ಕೆ ಇಲ್ಲ. ಇದರಲ್ಲಿ ಇನ್‌ಬಿಲ್ಟ್‌ ಆಂಟೆನಾ ಅಳವಡಿಸಿರುವುದರಿಂದ ಇಯರ್‌ಫೋನ್‌ ಸಿಕ್ಕಿಸುವ ಕಿರಿಕಿರಿ ಇಲ್ಲದೇ ಫೋನನ್ನು ಒಂದು ಕಡೆ ಇಟ್ಟು ಎಫ್‌ಎಂ ಪ್ಲೇ ಮಾಡಬಹುದು.

ಫೋನ್‌ನ ಆಡಿಯೊ ಮತ್ತು ವಿಡಿಯೊ ಗುಣಮಟ್ಟ ಉತ್ತಮವಾಗಿವೆ. 4ಕೆ ವಿಡಿಯೊಗಳನ್ನೂ ಯಾವುದೇ ತೊಡಕಿಲ್ಲದೆ ನೋಡಬಹುದು. ವಿಡಿಯೊ ಚಿತ್ರೀಕರಣ ಮಾಡುವಾಗ ಚಿತ್ರ ಮತ್ತು ಧ್ವನಿ ಬಹಳ ಸ್ಪಷ್ಟವಾಗಿ ದಾಖಲಾಗುತ್ತದೆ.

4000 ಎಂಎಎಚ್‌ ಬ್ಯಾಟರಿ ಎರಡು ದಿನಗಳವರೆಗೆ ಬಾಳಿಕೆ ಬರುತ್ತದೆ. 10ಡಬ್ಲ್ಯು ಚಾರ್ಜಿಂಗ್‌ ಇರುವುದರಿಂದ ಬಹಳ ಬೇಗ ಬ್ಯಾಟರಿ ಚಾರ್ಜ್‌ ಆಗುತ್ತದೆ. ಬ್ಯಾಟರಿ ಬಾಳಿಕ ಅವಧಿ ಕಾಪಾಡಿಕೊಳ್ಳಲು ಆಪ್ಟಿಮೈಸೇಷನ್‌ ಆಯ್ಕೆ ನೆರವಾಗುತ್ತದೆ.

ಕೊರತೆ: ಫಿಂಗರ್‌ಪ್ರಿಂಟ್‌ ಸೆನ್ಸರ್‌ ಆಯ್ಕೆ ಇಲ್ಲದೇ ಇರುವುದು ತುಸು ಬೇಸರ ಮೂಡಿಸುತ್ತದೆ. ಫೇಸ್‌ ರೆಕಗ್ನಿಷನ್‌ ಆಯ್ಕೆ ಇದೆಯಾದರೂ ಮಂದಬೆಳಕಿನಲ್ಲಿ ತೃಪ್ತಿದಾಯಕವಾಗಿ ಕೆಲಸ ಮಾಡುವುದಿಲ್ಲ.

ಆಂತರಿಕ ಸಾಮರ್ಥ್ಯ 16 ಜಿಬಿ ಇದ್ದರೂ, ಅದರಲ್ಲಿ ಇನ್‌ಬಿಲ್ಟ್‌ ಅಪ್ಲಿಕೇಷನ್‌ಗಳಿಗಾಗಿಯೇ (ಆ್ಯಪ್‌) 11.01 ಜಿಬಿ ಬಳಕೆಯಾಗಿದೆ. ಇದರಿಂದಾಗಿ 4.99 ಜಿಬಿ ಜಾಗ ಖಾಲಿ ಸಿಗುತ್ತದೆ. ಅನಗತ್ಯವಾದ ಆ್ಯಪ್‌ಗಳನ್ನು ಇನ್‌ಬಿಲ್ಟ್‌ ಆಗಿ ನೀಡಿರುವುದರಿಂದ ಜಾಗ ವ್ಯರ್ಥವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.