ADVERTISEMENT

‘ಸ್ಯಾಮ್ಸಂಗ್ ಫೋಲ್ಡ್’ ಬರೋದು ಯಾವಾಗ?

ವಿಶ್ವನಾಥ ಎಸ್.
Published 24 ಏಪ್ರಿಲ್ 2019, 19:31 IST
Last Updated 24 ಏಪ್ರಿಲ್ 2019, 19:31 IST
Samsung folding phone
Samsung folding phone   

‘ಸ್ಯಾಮ್ಸಂಗ್ಫೋಲ್ಡ್’ಬರೋದುಯಾವಾಗ?
ಜಾಲತಾಣ, ಸುದ್ದಿ ಸಂಸ್ಥೆಗಳು, ಟ್ವಿಟರ್, ಫೇಸ್ ಬುಕ್ ... ಹೀಗೆ ಎಲ್ಲಿ ನೋಡಿದರೂಸ್ಯಾಮ್ಸಂಗ್ಫೋಲ್ಡ್ಮೊಬೈಲ್‌ ಫೋನ್‌ನದ್ದೇ ಸುದ್ದಿ. ’ಈ ಫೋನ್‌ನ ಸ್ಕ್ರೀನ್‌ನಲ್ಲಿ ದೋಷ ಕಂಡುಬಂದಿದೆ. ದುಬಾರಿ ಫೋನ್ ತಯಾರಿಸುವಾಗ ಕಂಪನಿ ಸೂಕ್ಷ್ಮ ಅಂಶಗಳ ಕಡೆಗೆ ಗಮನ ನೀಡಬೇಕಿತ್ತು. ಕಂಪನಿಯ ಭವಿಷ್ಯದ ಬಗ್ಗೆ ಆತಂಕ ಎನಿಸುತ್ತಿದೆ.ಸ್ಯಾಮ್ಸಂಗ್ಜನರ ಮೇಲೆ ಪ್ರಯೋಗ ಮಾಡುವುದು ಇದೇನೂ ಹೊಸತಲ್ಲ ಬಿಡಿ’ ಎಂಬಿತ್ಯಾದಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸ್ಯಾಮ್ಸಂಗ್ಕಂಪನಿಯ ಪ್ರತಿಷ್ಠೆಯ ಕೂಸು ಎಂದೇ ಹೇಳಬಹುದಾದ ಗ್ಯಾಲಕ್ಸಿಫೋಲ್ಡ್ಫೋನ್ ಪೂರ್ವನಿಗದಿಯಂತೆ ನಾಳೆ ಶುಕ್ರವಾರ ಜಾಗತಿಕ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ಸದ್ಯದ ಮಟ್ಟಿಗೆ ಫೋನ್ ಬಿಡುಗಡೆ ದಿನ ಮುಂದೂಡಲಾಗಿದೆ.

‘ಗ್ಯಾಲಕ್ಸಿಫೋಲ್ಡ್’ ಬಿಡುಗಡೆಯ ದಿನವನ್ನು ಜಗತ್ತೇ ಕಾತರದಿಂದ ಎದುರು ನೋಡುತ್ತಿತ್ತು. ಏಕೆಂದರೆ 5ನೇ ತಲೆಮಾರಿನ (5ಜಿ), ಮಡಚಬಹುದಾದ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. ‘ಇದು ಸ್ಮಾರ್ಟ್ ಫೋನ್ ಮಾದರಿಗಳಲ್ಲಿ ಒಂದಾಗಿರುವುದಿಲ್ಲ. ಸ್ಮಾರ್ಟ್ ಫೋನ್‌ಗಳಿಗೆ ಇದೇ ಒಂದು ಮಾದರಿಯಾಗಲಿದೆ’ ಎಂದು ಫೋನ್ ಪರಿಚಯಿಸುವ ಸಂದರ್ಭದಲ್ಲಿ ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿತ್ತು.
5ಜಿ ಇರುವ ಫೋಲ್ಡಿಂಗ್ ಹ್ಯಾಂಡ್ ಸೆಟ್‌ಗಳೇ ಭವಿಷ್ಯದ ಸ್ಮಾರ್ಟ್ ಫೋನ್‌ಗಳು ಎಂದು ಹೇಳಲಾಗುತ್ತಿದೆ. ಇಂತಹ ಫೋನ್ ಖರೀದಿಸಿ, ಬಳಸುವ ಮಜಾ ಅನುಭವಿಸಬೇಕು ಎಂದು ಕಾತರದಿಂದ ಕಾಯುತ್ತಿದ್ದವರಿಗೆ ಬಿಡುಗಡೆ ವಿಳಂಬವಾಗಿರುವುದು ತೀವ್ರ ನಿರಾಸೆ ಮೂಡಿಸಿದೆ.

ADVERTISEMENT

ಸಮಸ್ಯೆ ಏನು?:ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ಒಂದಷ್ಟು ಹ್ಯಾಂಡ್ ಸೆಟ್‌ಗಳನ್ನು ವಿಮರ್ಶೆಗಾಗಿ ಮಾಧ್ಯಮದವರಿಗೆ ನೀಡಲಾಗಿತ್ತು. ಅವರು ಅದನ್ನು ಬಳಸಲು ಆರಂಭಿಸಿದ ಎರಡೇ ದಿನಗಳಲ್ಲಿ ಫೋನ್ ಪರದೆಯ ಬಗ್ಗೆ ಸಮಸ್ಯೆ ಕಾಣಿಸಿಕೊಂಡಿತು. ಬಳಸಿ ನೋಡಿದವರು ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಪ್ರೊಟೆಕ್ಟಿವ್ ಲೇಯರ್:ಫೋನ್ ಪರದೆಗೆ ಪ್ರೊಟೆಕ್ಟಿವ್ ಲೇಯರ್ ಒಂದನ್ನು ಅಳವಡಿಸಲಾಗಿದೆ. ಆದರೆ, ಫೋನ್ ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಅದು ಕಿತ್ತುಬರುತ್ತಿದೆ. ಅಂದರೆ ಸ್ಕ್ರೀನ್ ಗಾರ್ಡ್ ಹಾಕಿಸಿದ ಬಳಿಕ ಹೆಚ್ಚು ದಿನ ಕಳೆದಂತೆ ಅದು ಒಂದು ಬದಿಯಿಂದ ಕಿತ್ತುಕೊಂಡು ಬರುತ್ತದಲ್ಲಾ ಹಾಗೆ. ಅದರಲ್ಲಿಯೂ ಫೋನ್ ಬಿಡಿಸಿದಾಗ ಎರಡೂ ಪರದೆಗಳನ್ನು ಮಡಚುವ ಜಾಗದಿಂದ ಹೀಗೆ ಆ ಪ್ರೊಟೆಕ್ಟಿವ್ ಲೇಯರ್ ಸ್ವಲ್ಪವೇ ಕಿತ್ತು ಬರುವಂತೆ ಆಗಿತ್ತು. ಹಾಗಾಗಿ ಅದನ್ನು ತೆಗೆಯಲಾಗಿದೆ. ಇದರಿಂದ ಪರದೆಗೆ ಹಾನಿಯಾಗಿದೆ.
ಫೋನ್ ಬಳಸಲು ಆರಂಭಿಸಿದ ಎರಡೇ ದಿನಗಳಲ್ಲಿ ಪರದೆ ಸಂಪೂರ್ಣವಾಗಿ ಹಾಳಾಗಿದೆ. ಎರಡು ಪರದೆಗಳು ಸೇರಿಸಿರುವ ಅಥವಾ ಎರಡು ಪರದೆಗಳು ಮಡಚುವ ಜಾಗದಲ್ಲಿ ಸಮಸ್ಯೆ ಇದೆ ಎಂದು ಇನ್ನೊಬ್ಬರು ಪತ್ರಕರ್ತರು ಹೇಳಿದ್ದಾರೆ.

ಪರಿಶೀಲನೆಗೆ ಮುಂದಾದ ಕಂಪನಿ
‘ರಿವ್ಯೂಗೆ ಕೊಟ್ಟ ಹ್ಯಾಂಡ್ ಸೆಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅದರ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ಫೋನ್‌ ಅನ್ನು ಸದ್ಯಕ್ಕೆ ಮಾರುಕಟ್ಟೆಗೆ ಬಿಡದೇ ಇರಲು ನಿರ್ಧರಿಸಿ ದ್ದೇವೆ’ ಎಂದು ಕಂಪನಿ ಹೇಳಿಕೊಂಡಿದೆ.

‘ಫೋಲ್ಡಿಂಗ್ ಫೋನ್ ಬಳಸುವುದು ಹೇಗೆ ಎಂದು ಜನರಿಗೆ ಕೈಪಿಡಿ ನೀಡಲಾಗುವುದು’ ಎಂದು ಕಂಪನಿ ತಿಳಿಸಿದೆ. ‘ಪ್ರೊಟೆಕ್ಟಿವ್ ಲೇಯರ್ ತೆಗೆದಿದ್ದರಿಂದಲೇ ಕೆಲವು ಫೋನ್‌ಗಳ ಪರದೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ಅದನ್ನು ತೆಗೆಯದೇ ಇರುವಂತೆ ಎಚ್ಚರಿಕೆ ಸಂದೇಶವನ್ನೂ ನೀಡಲಾಗುವುದು’ ಎಂದಿದೆ.

ಆದರೆ, ಪ್ರೊಟೆಕ್ಟಿವ್ ಲೇಯರ್ ತೆಗೆಯದೇ ಇರುವ ಫೋನ್ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಬಂದಿರುವುದರಿಂದ ಪರದೆಯ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ಎರಡು ಪರದೆ ಜೋಡಣೆ ಸರಿಯಾಗಿ ಆಗಿಲ್ಲ. ಅದರಿಂದಾಗಿ ಪರದೆ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಹಾರ್ಡ್ ವೇರ್ ಮರುಹೊಂದಾಣಿಕೆ ಮಾಡಿ ಸರಿಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.

‘ಸ್ಯಾಮ್ಸಂಗ್ಕಂಪನಿ ಸದಾ ತನ್ನ ಗ್ರಾಹಕರ ಮೇಲೆ ಪ್ರಯೋಗ ಮಾಡುತ್ತದೆ’ ಎನ್ನುವ ದೂರು ಗ್ರಾಹಕರಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಸಾಧಕ ಬಾಧಕಗಳನ್ನು ಆರ್ ಅಂಡ್‌ ಡಿ ಯಲ್ಲಿ ಪರೀಕ್ಷೆ ನಡೆಸಿದ ಬಳಿಕ ಗ್ರಾಹಕರಿಗೆ ನೀಡುವ ಜಾಯಮಾನ ಇಲ್ಲ ಎನ್ನುವುದೂ ಕೆಲವು ತಜ್ಞರ ವಾದ.

ಈ ದುಬಾರಿ ಫೋನ್ ಕುರಿತಾದ ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಒಂದು ಕ್ಷಣಕ್ಕಾದರೂ ಈ ದೂರು, ವಾದಗಳು ಸರಿ ಎನ್ನಿಸದೇ ಇರದು. ಆದರೆ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ,ಸ್ಯಾಮ್ಸಂಗ್ಮುಂಚೂಣಿಯಲ್ಲಿದೆ. ಹಾಗಾಗಿ ಇದನ್ನು ಇಲ್ಲಿಗೆ ಬಿಟ್ಟು ನೋಡುವುದಾದರೆ, ಬಹು ನಿರೀಕ್ಷಿತ, ದುಬಾರಿ ಫೋನ್ ಬಿಡುಗಡೆ ಮಾಡಿರುವ ಕಂಪನಿ ಅದರ ಬಾಳಿಕೆ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳಿತು. ಏಕೆಂದರೆ ಹುವಾವೆ ಕಂಪನಿಯ ಮೇಟ್ ಎಕ್ಸ್ ಫೋಲ್ಡಿಂಗ್ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇನ್ನು ಮೊಟೊರೊಲಾ ಕಂಪನಿ ಸಹ ಮಡಚಬಹುದಾದ ‘ರೇಜರ್’ (RAZR) ಫೋನ್ ತಯಾರಿಕೆಯಲ್ಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಮತ್ತು ಪ್ರತಿಷ್ಠೆ ಕಾಯ್ದುಕೊಳ್ಳಲು ಕಂಪನಿ ಸೂಕ್ಷ್ಮ ವಿಷಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಮತ್ತು ಅನಿವಾರ್ಯ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.