ADVERTISEMENT

ಬಂದ್ ಆಗಿದ್ದ ಸೇತುವೆ ಮೇಲೆ ಆಂಬುಲೆನ್ಸ್‌ಗೆ ದಾರಿ ಇಲ್ಲ, MLA ಕಾರು ಹೋಗಲು ಅವಕಾಶ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2025, 8:02 IST
Last Updated 30 ಜೂನ್ 2025, 8:02 IST
<div class="paragraphs"><p>ಉತ್ತರ ಪ್ರದೇಶದ ಹಮೀರ್‌ಪುರದ ಬಳಿ ಯಮುನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ನಡೆದ ಘಟನೆ</p></div>

ಉತ್ತರ ಪ್ರದೇಶದ ಹಮೀರ್‌ಪುರದ ಬಳಿ ಯಮುನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ನಡೆದ ಘಟನೆ

   

ಬೆಂಗಳೂರು: ಕೆಲ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಿಗೆ ಸಲಾಂ ಹೊಡೆದು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುವುದು ನಡೆಯುತ್ತಲೇ ಇರುತ್ತದೆ.

ಇದೀಗ ಇಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಅಧಿಕಾರಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ADVERTISEMENT

ಉತ್ತರ ಪ್ರದೇಶದ ಹಮೀರ್‌ಪುರದ ಬಳಿ ಯಮುನಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ದುರಸ್ಥಿಗಾಗಿ ಹೆದ್ದಾರಿ ಪ್ರಾಧಿಕಾರದವರು ಆ ಸೇತುವೆ ಮೇಲಿನ ವಾಹನ ಸಂಚಾರವನ್ನು ಕಳೆದ ಕೆಲ ದಿನಗಳಿಂದ ನಿರ್ಬಂದಿಸಿದ್ದರು. ಇದು ಕಾನ್ಪುರ ಹಾಗೂ ಮಧ್ಯಪ್ರದೇಶದ ಸಾಗರ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ.

ಸೇತುವೆ ಬಂದ್ ಆಗಿರುವುದರಿಂದ ಸಾರ್ವಜನಿಕರು ಕಷ್ಟಪಟ್ಟು ಬದಲಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಹೆದ್ದಾರಿ ಪ‍್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ತಮಗೆ ಬೇಕಾದವರಿಗೆ ವಾಹನ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಆದರೆ ಇದೇ ಸೇತುವೆ ದಾಟಲು ಬಂದಿದ್ದ ಆಂಬುಲೆನ್ಸ್ ಒಂದಕ್ಕೆ ಅಧಿಕಾರಿಗಳು ದಾರಿ ಮಾಡಿ ಕೊಟ್ಟಿರಲಿಲ್ಲ. ಯುವಕನೊಬ್ಬ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತನ್ನ ತಾಯಿಯನ್ನು ತುರ್ತಾಗಿ ಸಾಗರ್ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುತ್ತಿದ್ದ. ಆದರೆ, ಅಲ್ಲಿನ ಅಧಿಕಾರಿಗಳು ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲಿಲ್ಲ. ಇದರಿಂದ ಸೇತುವೆಯ ಆಚೆ ಇನ್ನೊಂದು ವಾಹನದ ವ್ಯವಸ್ಥೆ ಮಾಡಿ ಸುಮಾರು ಅರ್ಧ ಕಿ.ಮೀ ದೂರ ಅನಾರೋಗ್ಯ ಪೀಡಿತ ತಾಯಿಯನ್ನು ಸ್ಟೆಚ್ಚರ್‌ನಲ್ಲಿಯೇ ನಾಲ್ಕು ಜನ ಹಿಡಿದುಕೊಂಡು ಸಾಗಿದ್ದಾರೆ.

ಇವರ ಹಿಂದೆಯೇ ಬಂದ ಉತ್ತರ ಪ್ರದೇಶ ಬಿಜೆಪಿ ಶಾಸಕ ಮನೋಜ್ ಪ್ರಜಾಪತಿ ಅವರ ಕಾರು ಇದೇ ಸೇತುವೆ ಮಾರ್ಗ ಬಳಸಿ ಹೋಗಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಘಟನೆ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು ಅಧಿಕಾರಿಗಳ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.