ADVERTISEMENT

ಅರ್ಧ ಕೊಳಗದ ಹುಡುಗಿ

ಪ್ರಬಂಧ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST
ಅರ್ಧ ಕೊಳಗದ ಹುಡುಗಿ
ಅರ್ಧ ಕೊಳಗದ ಹುಡುಗಿ   

ಮಲೆನಾಡೆಂದರೆ ಅಡಿಕೆ ಬೆಳೆಗೆ ಪ್ರಸಿದ್ಧಿ. ಮಳೆಗಾಲ ಮುಗಿದು ದೀಪಾವಳಿಯ ಆಸುಪಾಸಿನಲ್ಲಿ ಸಮೃದ್ಧವಾಗಿ ಮುಗಿಲೆತ್ತರದ ಮರಗಳಲ್ಲಿ ದ್ರಾಕ್ಷಿ ಗೊಂಚಲಿನಂತೆ ಹಳದಿ, ಹಸಿರು, ಕೆಂಪು ಬಣ್ಣಗಳಲ್ಲಿ ಅಡಿಕೆಗಳು ತೂಗುತ್ತಿರುತ್ತವೆ. ಏಲಕ್ಕಿ, ಕಾಳುಮೆಣಸು, ಕಾಫಿಯ ಸುವಾಸನೆಯೊಂದಿಗೆ ಎಂತಹ ಅರಸಿಕನನ್ನೂ ಮೈ ಮರೆಸುವಂತಹ ಶಕ್ತಿ ಆ ಸಮಯದಲ್ಲಿ ಅಡಿಕೆ ತೋಟಕ್ಕಿರುತ್ತದೆ.

ಆದರೆ ಇಂತಹ ತೋಟಗಳನ್ನು ತಮ್ಮದಾಗಿಸಿಕೊಳ್ಳುವ ಸೌಭಾಗ್ಯ ನನ್ನೂರಿನ ದಲಿತರಿಗಿಲ್ಲ. ಏಕೆಂದರೆ ಸಮಸ್ತ ತೋಟಗಳೂ ಇರುವುದು ಬ್ರಾಹ್ಮಣರ ಅಗ್ರಹಾರದಲ್ಲಿ. ಆ ತೋಟಗಳ ದುಡಿಮೆ ಮಾತ್ರ ನಮ್ಮ ಪಾಲಿನದು. ತೋಟ ಮಾಡುವುದು ಹಿಂದೆ ಕಷ್ಟದ ವಿಷಯವಾಗಿರಲಿಲ್ಲ. ಆದರೆ ಶ್ರೀಮಂತರ ಮನೆಯ ಹಿಡಿ ಕೂಳಿಗಾಗಿ ದುಡಿಯುವುದೇ ತಮ್ಮ ಕರ್ತವ್ಯ ಎಂಬ ಭಾವನೆಯಿಂದ; ಸೋಮಾರಿತನ ಎಂಬ ಮಾರಿ ನನ್ನ ಜನಾಂಗಕ್ಕೆ ಅಂಟಿದ ಜಾಡ್ಯದಿಂದ ಬಹುತೇಕರು ಇಂದಿಗೂ ಚೋಮನಂತೆ ಜೀವಿಸುತ್ತಿದ್ದಾರೆ.

ಹಿಂದೆಲ್ಲ ಅಡಿಕೆ ಕೊಯ್ಲು, ಅಡಿಕೆ ಸುಲ್ತ ಎಂದು ಕರೆಯುವ ಕೆಲಸಕ್ಕೆ ದಲಿತ ಕೇರಿಯಲ್ಲಿ ಎಲ್ಲಿಲ್ಲದ ಸಡಗರ. ಏಕೆಂದರೆ ರಾತ್ರಿ ಹೊತ್ತಿನಲ್ಲಿ ನಡೆಯುವ ಆ ಕೆಲಸಕ್ಕೆ ಒಂದು ಮನೆ ಅಡಿಕೆ ಸುಲ್ತಕ್ಕೆ ಹತ್ತಾರು ಜನ ಸೇರುತ್ತಾರೆ. ಟಿ.ವಿ. ನೋಡಬಹುದು, ನೀರು ಬೆರಸದ ಗಟ್ಟಿ ಹಾಲಿನ ಕಾಫಿ- ತಿಂಡಿ ಸಿಗುತ್ತದೆ. ತಿಂಡಿ ಎಂದರೆ ಅವಲಕ್ಕಿ, ಇಡ್ಲಿ, ದೋಸೆಗೆ ಮಾವಿನ ಮಿಡಿ ಉಪ್ಪಿನಕಾಯಿಯ ರಸ, ಚಿತ್ರಾನ್ನ ಇತ್ಯಾದಿ.

ಕೆಲವರ ಮನೆಗಳಲ್ಲಿ ರುಚಿಕರವಾಗಿ ಮಾಡಿಕೊಟ್ಟರೆ, ಇನ್ನು ಕೆಲವರ ಮನೆಗಳಲ್ಲಿ ಇವರಿಗಾಗಿ ಅಷ್ಟೊಂದು ಎಣ್ಣೆ-ಬೆಣ್ಣೆ ಏಕೆಂದು ಒಣ ಅವಲಕ್ಕಿಗೆ ಉಪ್ಪಿನಕಾಯಿಯ ರಸ ಸೇರಿಸಿ ಕೊಡುತ್ತಿದ್ದರು. ಅದನ್ನೇ ಮೃಷ್ಟಾನ್ನ ಎಂದು ಹಾತೊರೆಯುವ ನನ್ನಂತಹ ಮಕ್ಕಳು ಆ ದಿನಗಳಿಗಾಗಿಯೇ ಕಾಯುತ್ತಿದ್ದೆವು.

ಮಾಗಿಯ ಚಳಿ ಆರಂಭವಾದಂತೆ ದೀಪಾವಳಿಯ ಆಸುಪಾಸಿನಲ್ಲಿ ಪ್ರಾರಂಭವಾದ ಅಡಿಕೆ ಸುಲ್ತ ಶಿವರಾತ್ರಿಯ ಸಂದರ್ಭದಲ್ಲಿ ಮುಕ್ತಾಯವಾಗುತ್ತದೆ. ಆ ಅಷ್ಟೂ ದಿನಗಳಲ್ಲಿ ದಲಿತ ಕೇರಿಯ ದಿನಚರಿ ಸಂಪೂರ್ಣ ಬದಲು. ಶಾಲೆಯಿಂದ ನಾವು ಸಂಜೆ ಮನೆಗೆ ಬರುತ್ತಿದ್ದಂತೆ ನೀರು ಹೊತ್ತು ತುಂಬಿಸಿ, ಹಂಡೆ ಒಲೆಗೆ ಬೆಂಕಿ ಹಾಕಿ ಸ್ನಾನ ಮಾಡಿಕೊಂಡು, ನೀರಿಳಿಯುವ ಕೂದಲನ್ನು ಹಾಗೇ ಕಟ್ಟಿಕೊಂಡು, ತಲೆಯಿಂದ ಕಿವಿಯವರೆಗೂ ಎಳೆದು ಕಟ್ಟುವ ಹತ್ತಿಯ ಬಟ್ಟೆ, ಮೈ ಬೆಚ್ಚಗಾಗಿಸುವ ಸ್ವೆಟರ್ ಹಾಕಿಕೊಂಡು ಮನೆ ಹಿಂದಿನ ಕೆರೆಯ ಏರಿ ಮೇಲೆ ಹುಡುಗಿಯರ ಗುಂಪು ಸಾಗುತ್ತಿತ್ತು.

ಯಾರಾದರೂ ಬರುವುದು ತಡವಾದರೆ ಕೂವುವುವು... ಎಂದು ಕೂಗು ಹಾಕಿದೊಡನೆ ಆ ಧ್ವನಿಯಿಂದಲೇ ಕೂಗಿದವರನ್ನು ಗುರುತಿಸಿ ಇವರೂ ಅದೇ ಶೈಲಿಯಲ್ಲಿ ಕೂಗು ಹಾಕುತ್ತಿದ್ದರು. ಆ ಕೂಗಿನ ಗತಿಯನ್ನು ಗಮನಿಸಿದರೆ `ಕಾಯುತ್ತಿರಿ' ಅಥವಾ `ನೀವು ಹೋಗಿರಿ' ಎಂಬ ಸಂದೇಶಗಳು ತಿಳಿದುಬಿಡುತ್ತಿದ್ದವು. ಮನೆ ದೂರ ಇದ್ದವರು ಬೇಗ ಹೋಗುವ ಸಂದರ್ಭ ಬಂದರೆ ಅಲ್ಲೇ ಇದ್ದ ನೇರಳೆ, ಲಂಟಾನ, ಮತ್ತಿಯಂತಹ ಸೊಪ್ಪನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಹೋಗುತ್ತಿದ್ದರು. ಅದರ ಮುನ್ಸೂಚನೆಯಂತೆ ನಾವು ಹೋಗುತ್ತಿದ್ದೆವು. ಈ ಎಲ್ಲ ಘಟನೆಗಳು ನನಗೆ ಬುದ್ಧಿ ತಿಳಿದಾಗಿನಿಂದ ಇಂದಿನವರೆಗೂ ನಿರಂತರವಾಗಿ ನಡೆಯುತ್ತಲೇ ಇವೆ.

ನಾನು ಚಿಕ್ಕವಳಿದ್ದಾಗ ಕಾಯಂ ಆಗಿ ನಮ್ಮೂರಿನ ರಘುಮೂರ್ತಿ ಭಟ್ಟರ ಮನೆಯ ಅಡಿಕೆ ಸುಲ್ತ ಮತ್ತು ಅವರ ಮನೆಯ ಕೂಲಿ ಕೆಲಸವನ್ನು ನನ್ನ ತಂದೆ- ತಾಯಿ ಮಾಡುತ್ತಿದ್ದರು. ಹಾಗಾಗಿ ನಾನು ಅನೇಕ ಸಾರಿ ನನ್ನ ಅಮ್ಮನೊಂದಿಗೆ ಹೋಗುತ್ತಿದ್ದೆ. ಅವರ ಮನೆಗೆ ಹಿಂದಿನಿಂದ ಹೋಗುವ ದಾರಿಯಲ್ಲಿ ದೊಡ್ಡ ಧರೆ ಸಿಗುತ್ತದೆ. ಧರೆಯನ್ನು ಇಳಿಯಲು ಯಾವುದೇ ರಸ್ತೆಯಿಲ್ಲ. ಮರದ ಬೇರಿನ ಸಹಾಯದಿಂದಲೇ ಇಳಿದು ಕೆಳಗೆ ಬರಬೇಕು.

ಪ್ರತಿದಿನ ನನ್ನಮ್ಮ ತಲೆಯ ಮೇಲೆ ದರಗಿನ ಜಲ್ಲೆ ಹೊತ್ತುಕೊಂಡು ಕುಳಿತು ಹೆಜ್ಜೆ ಇಡುತ್ತಾ ಇದೇ ಜಾಗದಿಂದ ಇಳಿಯಬೇಕು. ಆ ಮನೆಯ ಹಿಂಭಾಗ ಮತ್ತು ಮುಂಭಾಗದಲ್ಲಿ ಸದಾ ನೀರು ಹರಿಯುತ್ತಿರುವ ಹಳ್ಳ. ಆ ಹಳ್ಳಕ್ಕೆ ನನ್ನಪ್ಪ ದೊಡ್ಡ ಉದ್ದನೆಯ ಮರಗಳನ್ನು ಕತ್ತರಿಸಿ ಹಾಕಿ ಅಡಿಕೆ ಮರದ ದಬ್ಬೆಗಳನ್ನು ಮಧ್ಯದಲ್ಲಿ ಸೇರಿಸಿ, ಅದರ ಮೇಲೆ ಧರೆಯ ಅಂಟು ಮಣ್ಣನ್ನು ಸೇರಿಸಿ ಗಟ್ಟಿಗೊಳಿಸಿರುತ್ತಿದ್ದ.

ಹಾಗಾಗಿ ನಾವು ಧೈರ್ಯದಿಂದ ಅದನ್ನು ದಾಟುತ್ತಿದ್ದೆವು. ಹಾಗೇ ಮುಂದೆ ಹೋದಂತೆ ಆ ಮನೆಯ ಆಳೆತ್ತರದ ದನಗಳ ಕೊಟ್ಟಿಗೆ, ಅದರ ಪಕ್ಕದಲ್ಲೇ ದನಗಳಿಗಾಗಿ ದರಗು ತುಂಬಿಡುತ್ತಿದ್ದ ಒಡ್ಡಿ. ಪ್ರತಿ ದಿನ ನನ್ನಮ್ಮ ನಮ್ಮ ಮನೆಯ ಮುಂದಿನ ಅಕೇಶಿಯ ದರಗನ್ನು ಒಂದು ಚಿಕ್ಕ ಕಡ್ಡಿಯೂ ಇಲ್ಲದಂತೆ ಒಣಗಿದ ಎಲೆಗಳನ್ನು ಗುಡಿಸಿ ರಾಶಿ ಮಾಡಿ, ಜಲ್ಲೆಗೆ ತುಂಬಿಸಿ ಹೊತ್ತು ತಂದು ತುಂಬಿಸಿದ ಒಡ್ಡಿ ಅದು. ಕೆಲವೊಮ್ಮೆ ಆ ದರಗನ್ನು ಖಾಲಿ ಮಾಡುವಾಗ ನಾನು ಜೊತೆಯಲ್ಲಿದ್ದರೆ ಆ ದರಗಿನ ರಾಶಿಯ ಮೇಲೆ ಬಿದ್ದು ಹೊರಳಾಡಿ `ಹಂಸ ತೂಲಿಕಾತಲ್ಪ'ದ ಮೇಲೆ ಸುಖಿಸಿದ ಆನಂದ ಅನುಭವಿಸುತ್ತಿದ್ದೆ.

ಆ ಮನೆಯ ಹಿಂಬಾಗಿಲು ದಾಟುತ್ತಿದ್ದಂತೆ ದೊಡ್ಡ `ಪಣತ'. ಅದರಲ್ಲಿ ಭತ್ತ ತುಂಬಿಡುತ್ತಿದ್ದರು. ಅದರ ಪಕ್ಕದಲ್ಲೇ ಅಡಿಕೆಯ ವೃತ್ತಾಕಾರದ ಕುತ್ರೇ (ಅಡಿಕೆ ಕೊನೆಯನ್ನು ವೃತ್ತಾಕಾರದಲ್ಲಿ ಒಪ್ಪವಾಗಿ ಜೋಡಿಸಿ ಇಡುವುದು) ಹಾಕಿರುತ್ತಿದ್ದರು. ಎಲ್ಲರಿಗೂ ಪ್ರತಿ ವರ್ಷದಂತೆ ನಿಗದಿತ ಜಾಗ. ನನ್ನಮ್ಮ ಆ ಪಣತಕ್ಕೆ ಆತು ಕುಳಿತುಕೊಂಡರೆ ನನ್ನೂರಿನ ಇತರ ಯುವತಿಯರು ಮುಂದೆ ಕೂರುತ್ತಿದ್ದರು. ಏಕೆಂದರೆ ಅಡಿಕೆ ಸುಲ್ತದ ಸಮಯದಲ್ಲಿ ಟಿ.ವಿ. ಹೊರತಂದು ಇಡುತ್ತಿದ್ದರು. ಆಗೆಲ್ಲ ತೀರಾ ಹತ್ತಿರದಿಂದ ಟಿ.ವಿ. ವೀಕ್ಷಿಸಬಹುದಿತ್ತು. ಗಂಡಸರೆಲ್ಲ ಅಡಿಕೆ ಕೊಟ್ಟಿಗೆಯ ಹಿಂದಿನ ಗೋಡೆಗೆ ಬೆನ್ನು ತಗುಲಿಸಿಕೊಂಡು ಕುಳಿತಿರುತ್ತಿದ್ದರು.

ನಾನು ಚಿಕ್ಕ ಹುಡುಗಿ ಆದ ಕಾರಣ ಕತ್ತಿಯಿಂದ ಅಡಿಕೆ ಸುಲಿಯಲು ಬರುತ್ತಿರಲಿಲ್ಲ. ನನ್ನಮ್ಮನ ಪಾಲಿನ ಅಡಿಕೆ ಕೊನೆಯ ಕಾಯಿಗಳನ್ನು ಬಿಡಿಸುತ್ತಾ, ಬೇಸರವಾದರೆ ಅದೇ ದೊಡ್ಡ ಪಣತದ ಅಡಿಯಲ್ಲಿ ಹಾಸಿದ ಗೋಣಿಚೀಲದ ಮೇಲೆ ನನ್ನ ಶಯನ, ಟಿ.ವಿ. ನೋಡುವುದು, ಕಾಫಿ ತಿಂಡಿಯ ಸಮಯದಲ್ಲಿ ತಿನ್ನುವುದು, ಉಳಿದಂತೆ ಮಲಗುವುದು.

ಟಿ.ವಿ.ಯಲ್ಲಿ ವಾರ್ತಾ ಪ್ರಸಾರ ಪ್ರಾರಂಭವಾದರೆ ಯುವತಿಯರು ಒಬ್ಬರಿಗೊಬ್ಬರು ಅಡಿಕೆ ಸಿಪ್ಪೆಯಲ್ಲಿ ಹೊಡೆದುಕೊಂಡು ಎಚ್ಚರಿಸಿ ಕತ್ತಿ ಮಣೆಯನ್ನು ಅಡ್ಡಲಾಗಿ ಮಲಗಿಸಿ, ಮೂತ್ರ ವಿಸರ್ಜನೆಗೆಂದು ಮನೆ ಮುಂದಿನ ಅಡಿಕೆ ತೋಟಕ್ಕೆ ಹೋಗುತ್ತಿದ್ದರು. ಕೈಯಲ್ಲಿ ಬೆಳಕಿಲ್ಲದಿದ್ದರೂ ಒಬ್ಬರನ್ನೊಬ್ಬರು ಹಿಂಬಾಲಿಸಿ ಹಗಲಿನಂತೆ ಎಲ್ಲಿಯೂ ಏಳದೆ, ಬೀಳದೆ ನಾವು ಆಯ್ದುಕೊಂಡ ಮರಗಳಿಗೆ ನೀರುಣಿಸುವ ಕೆಲಸವಾಗುತ್ತಿತ್ತು. ಅದೇ ದಾರಿಯಲ್ಲಿ ತೋಟದ ಆಚೆಯ ಮನೆಯವರು ಯಾರಾದರೂ ಬಂದರೆ ನಮ್ಮ ಕಷ್ಟ ಯಾರಿಗೂ ಬೇಡ. ಕೆಲವರು ಅರ್ಧಕ್ಕೇ ಭಯ, ನಾಚಿಕೆಯಿಂದ ಎದ್ದು ನಿಲ್ಲುತ್ತಿದ್ದರು. ಬಂದವರು ಯಾರೆಂದು ಗುರುತಿಸಿ `ಸಣ್ಣಯ್ಯರಿಗೆ ನಾನು ಅಂತಾ ಗೊತ್ತಾತೇನೇ ಮಾರಾಯ್ತಿ' ಎನ್ನುತ್ತಲೇ ಅಂಜಿಕೆಯಿಂದ ಬರುತ್ತಿದ್ದೆವು.

ಹೀಗೆ ಒಮ್ಮೆ ಒಂದು ಹುಡುಗಿ ತೋಟದಲ್ಲಿ ಇದ್ದ ತೆಂಗಿನ ಮರದ ಬುಡದಲ್ಲಿ ಮೂತ್ರ ವಿಸರ್ಜಿಸುವಾಗ, ಮೇಲಿಂದ ತೆಂಗಿನಕಾಯಿ ಆಕೆಯ ಸೊಂಟದ ಮೇಲೆ ಬಿದ್ದು ಸೊಂಟ ಮುರಿದ ಪ್ರಸಂಗ ತೀರಾ ಈಚಿನದು. ಅವರೆಲ್ಲರ ಅಡಿಕೆ ಸುಲ್ತ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು. ನನ್ನ ನಿದ್ದೆಯೂ ಹಾಗೇ ಸಾಗುತ್ತಿತ್ತು.

ನನ್ನಮ್ಮನಿಗೆ ಪ್ರತಿ ದಿನ ಕಾಫಿ ಕುಡಿದ ಹಿತ್ತಾಳೆಯ ದೊಡ್ಡ ಲೋಟಗಳು ಮತ್ತು ಇತರ ಪಾತ್ರೆಗಳನ್ನು ಮನೆ ಮುಂದೆ ಹರಿಯುವ ಹಳ್ಳದಲ್ಲಿ ತೊಳೆಯುವ ಕೆಲಸ. ಹೀಗೆ ತೊಳೆದ ಪಾತ್ರೆಗಳನ್ನು ಪಣತದ ಕಂಬದ ಮೇಲೆ ಕವುಚಿ ಇಡಬೇಕು. ಮರುದಿನ ಯಾರಾದರೂ ಆ ಮನೆಯ ಹೆಂಗಸರು ಅಲ್ಲಿ ಬಂದರೆ ಕರೆದು `ಗೊತ್ತಾಗಲ್ವೇನೇ ನನಗೆ ಮೈಲಿಗೆ ಆಗುತ್ತೆ ಅಂತ, ದೂರ ಇಡಿ' ಎನ್ನುವ ವಾಡಿಕೆಯ ಮಾತಿಗೆ ಅಂಜಿ ಜಾಗರೂಕತೆಯಿಂದ ಲೋಟವನ್ನು ಇಡುತ್ತಿದ್ದರು.

ಸುಲಿದ ಅಡಿಕೆಯನ್ನು ಅಳೆದು ಎಲ್ಲಾರೂ ಲೆಕ್ಕ ಬರೆಸಿ ಸಿಪ್ಪೆಯನ್ನು ಮನೆಯ ಹಿಂದಿನ ಸಿಪ್ಪೆ ರಾಶಿಗೆ ಹಾಕಿ ಉದ್ದನೆಯ ಪೊರಕೆಯಿಂದ ಇಡೀ ಪಣತ ಗುಡಿಸಿ, ನೀರು ಚಿಮುಕಿಸಿ ಸ್ಥಳದಲ್ಲಿ ಅಡಿಕೆ ಸುಲ್ತವಾದ ಯಾವುದೇ ಕುರುಹುಗಳೂ ಇಲ್ಲದಂತೆ ಸ್ವಚ್ಛಗೊಳಿಸುವ ಕೆಲಸ ಹೆಂಗಸರದಾದರೆ; ಗಂಡಸರು ಅಡಿಕೆ ದಬ್ಬೆಗಳನ್ನು ಸೀಳಾಗಿಸಿ ಕಟ್ಟುಗಳನ್ನು ಹಾಕಿ ದೊಂದಿ ತಯಾರಿಸಿ ಚಿಮಣಿ ದೀಪದಿಂದ ಬೆಂಕಿ ಹಚ್ಚಿ, ಹೊರಡಲು ತಯಾರಾಗುತ್ತಿದ್ದರು.

ಕೆಲವೊಮ್ಮೆ ನಾನೇ ನಡೆದು ಹೋಗುತ್ತಿದ್ದೆ. ನಡೆಯಲು ಕಳ್ಳತನವಾದರೆ ನನ್ನಣ್ಣನೋ, ಅಪ್ಪನೋ ಹೆಗಲ ಮೇಲೆ ಮಲಗಿಸಿಕೊಂಡು ಬರುತ್ತಿದ್ದರು. ನಾನು ಎಚ್ಚರವಿದ್ದು ನನ್ನನ್ನು ಹೊತ್ತುಕೊಂಡವರು ಎಲ್ಲರಿಗಿಂತ ಹಿಂದೆ ಇದ್ದರೆ ನನಗೆ ವಿಪರೀತ ಭಯ. ಕಣ್ಣು ತೆರೆದರೆ ಸುತ್ತಲೂ ಜೀರುಂಡೆ, ಕಪ್ಪೆಗಳ ಶಬ್ದದ ನಡುವೆ, ಕೊನೆಯಲ್ಲಿದ್ದ ನನಗೆ ದೆವ್ವಗಳು ಕಾಣಿಸಿಕೊಳ್ಳಬಹುದೇನೋ ಎಂಬ ಭಯದಿಂದ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಿದ್ದೆ. ಹೇಗೋ ಆ ಧರೆಯಲ್ಲೂ ನನ್ನನ್ನು ಕೆಳಗಿಳಿಸದೆ ಮನೆಗೆ ಹೊತ್ತು ತಂದು ಮಲಗಿಸುತ್ತಿದ್ದರು.

ಹೀಗೆ ಕೆಲವು ವರ್ಷಗಳು ಕಳೆಯುತ್ತಿದ್ದಂತೆ ನನಗಾಗ ಹತ್ತು ವರ್ಷ ಇರಬಹುದು. ಅದೇ ರಘುಮೂರ್ತಿ ಭಟ್ಟರ ಮನೆಯಲ್ಲಿ ಅಡಿಕೆ ಕೊಯ್ಲು. ಪ್ರತಿ ವರ್ಷವೂ ಕತ್ತಿಯನ್ನು ಕುಲುಮೆಯಲ್ಲಿ ಹದ ಹಾಕಿಸುತ್ತಿದ್ದರು. ಉದ್ದನೆಯ ನೇರವಾದ ಕತ್ತಿ, ಮೇಲ್ಭಾಗದಲ್ಲಿ ಅಗಲವಾಗಿರುತ್ತಿತ್ತು. ಅಂತಹ ಹೊಳೆಯುವ ಕತ್ತಿಯನ್ನು ನನಗಾಗಿ ಚಿಕ್ಕ ಗಾತ್ರದಲ್ಲಿ ಆ ವರ್ಷ ತಯಾರಿಸಿದ್ದರು. ಇದರೊಂದಿಗೆ ಸುಳಬೆಳೆಯನ್ನು (ಕಾಯಿ ಸುಲಿದ ನಂತರ ಅದರ ಒಳ ತಿರುಳನ್ನು ಸುಳಬೆಳೆ ಎನ್ನುತ್ತಾರೆ) ಹಾಕಲು ಒಂದು ಬುಟ್ಟಿ, ಹಸಿಕಾಯಿ ತುಂಬಲು ಇನ್ನೊಂದು ಬುಟ್ಟಿ, ಅಡಿಕೆ ಕೊನೆಯಿಂದ ಕಾಯಿಗಳನ್ನು ಬಿಡಿಸಲು ಬಳಸುತ್ತಿದ್ದ ಬಾಣಾಕಾರದ ಮರದ ಹತಾರಿ, ಒಂದು ಗೋಣಿ ಚೀಲವನ್ನು ಚಗರು ಬಟ್ಟೆಗೆ ಅಂಟದಂತೆ, ಕಾಲುಗಳನ್ನು ಬೆಚ್ಚಗಿಡಲು ಉಳಿಸುತ್ತಿದ್ದರು.

ಈ ಎಲ್ಲ ಪರಿಕರಗಳನ್ನೂ ಚಿಕ್ಕ ಗಾತ್ರದಲ್ಲಿ ತಯಾರಿಸಿ ಹೇಗಾದರೂ ಮಾಡಿ ನನಗೂ ಅಡಿಕೆ ಸುಲ್ತ ಕಲಿಸುವ ತಯಾರಿ ನಡೆಸಿದ್ದರು. ನನ್ನ ಆ ಅಡಿಕೆ ಸುಲ್ತದ ಪ್ರಯತ್ನದಲ್ಲಿ ಒಂದೆರಡು ಸಾರಿ ಕೈ ಕೊಯ್ದು ರಕ್ತ ಬಂದರೂ ಕೆಲವೇ ದಿನಗಳಲ್ಲಿ ಗುಣವಾಗುತ್ತಿತ್ತು. ಸಂಜೆ ಆರು ಗಂಟೆಯಿಂದ ರಾತ್ರಿ ಒಂದು ಗಂಟೆಯವರೆಗೂ ನಿರಂತರ ಅಡಿಕೆ ಸುಲ್ತ ನಡೆದರೆ ಎಲ್ಲರದೂ ದೊಡ್ಡ ಪ್ರಮಾಣದಲ್ಲಿ ಎರಡು-ಮೂರು ಬುಟ್ಟಿ ಸುಲಿದಾಗಿರುತ್ತಿತ್ತು.

ಆದರೆ ನಾನು ಮಾತ್ರ ದೊಡ್ಡ ಕೊನೆಯಲ್ಲಿನ ನೂರರಿಂದ ನೂರಿಪ್ಪತ್ತು ಕಾಯಿಗಳನ್ನು ಸುಲಿಯುತ್ತಿದ್ದುದರಿಂದ ಅದು ಕೊಳಗದ ತಳವನ್ನೂ ತುಂಬಿಸುತ್ತಿರಲಿಲ್ಲ. ಆಗೆಲ್ಲ ನನ್ನನ್ನು ಎಲ್ಲರೂ `ಅರ್ಧ ಕೊಳಗದ ಹುಡುಗಿ' ಎಂದು ರೇಗಿಸುತ್ತಿದ್ದರು. ನನಗೂ ಬುದ್ಧಿ ಬಂದಂತೆ ಪ್ರತಿ ವರ್ಷವೂ ಅಡಿಕೆ ಸುಲ್ತದಲ್ಲಿ ಏರಿಳಿತವಾಗುತ್ತಾ ಅರ್ಧದಿಂದ ಒಂದು, ಒಂದರಿಂದ ಎರಡು ಕೊನೆಗೆ, ಮೂರು ನಾಲ್ಕು ಕೊಳಗದವರೆಗೂ ಅಡಿಕೆ ಸುಲಿದು ಆ ಕಲೆಯನ್ನು ಕರಗತ ಮಾಡಿಕೊಂಡೆ. ಗೋಣಿಚೀಲದ ಒಳಗೆ ಕಾಲುಗಳನ್ನು ಹಾಕಿ ಸೊಂಟ ಬಗ್ಗಿಸಿ ಅಡಿಕೆ ಸುಲಿಯುತ್ತಿದ್ದುದರಿಂದ ಚಿಕ್ಕ ಪ್ರಾಯದಲ್ಲೇ ವಿಪರೀತ ಸೊಂಟ ನೋವು ಅನುಭವಿಸಿದ್ದೆ.

ಅಡಿಕೆ ಸುಲಿದು ಮನೆಗೆ ಬಂದು ಸಂಜೆ ಮಾಡಿಟ್ಟಿದ್ದ ತಣ್ಣನೆಯ ಊಟ ಮಾಡಿ ಮಲಗಿದರೆ ಬೆಳಿಗ್ಗೆ ಯಾಕಾದರೂ ಸೂರ್ಯ ಬರುತ್ತಾನೋ ಎಂಬ ಬೇಸರದಿಂದಲೇ ಒಲ್ಲದ ಮನಸ್ಸಿನಿಂದ ಶಾಲೆಗೆ ಹೋಗುತ್ತಿದ್ದೆವು. ಆಟವಾಡುವಾಗ ಯಾವ ತೊಂದರೆಯೂ ಇಲ್ಲದ ನಮಗೆ, ಮೇಷ್ಟ್ರು ಪಾಠ ಮಾಡಲು ಪ್ರಾರಂಭಿಸಿದ ತಕ್ಷಣ, ಅಲ್ಲಿಯವರೆಗೂ ನಮ್ಮಿಂದ ದೂರವಿರುತ್ತಿದ್ದ ನಿದ್ರಾದೇವಿ ಬಂದು ಬರಸೆಳೆದು ಅಪ್ಪಿಕೊಳ್ಳುತ್ತಿದ್ದಳು. ನಾವು ಅವಳ ಮಡಿಲಿನಲ್ಲಿ ಲೀನವಾದಂತೆ ಮೇಷ್ಟ್ರು ಬೆತ್ತದ ರುಚಿ ತೋರಿಸಿ ಕಣ್ಣು ಬಿಡಿಸುತ್ತಿದ್ದರು. ಬಹಳ ಕಷ್ಟದಿಂದ ಅರ್ಧ ಕಣ್ಣು ತೆರೆದು ನೋಡಿ ಮತ್ತೆ ನಿದ್ರೆಗೆ ಜಾರುತ್ತಿದ್ದೆವು. ಇದು ಅಡಿಕೆ ಕೊಯ್ಲು ಮುಗಿಯುವರೆಗೂ ನಿರಂತರವಾಗಿ ನಡೆಯುತ್ತಿತ್ತು.

ಇದನ್ನು ಕಂಡು ನಮ್ಮ ಶಾಲೆಯ ಬಯಲುಸೀಮೆಯ ಮೇಷ್ಟರೊಬ್ಬರು `ಈ ಹುಡುಗರಿಗೆ ಏನಾಗಿದೆ? ಎರಡು ಮೂರು ರೂಪಾಯಿಗಾಗಿ ರಾತ್ರಿಯೆಲ್ಲ ನಿದ್ದೆಬಿಟ್ಟು ಶಾಲೆಗೆ ಬಂದು ನಮ್ಮ ಪ್ರಾಣ ತಿನ್ನುತ್ತವೆ. ಜೀವನದಲ್ಲಿ ಎಲ್ಲಿ, ಯಾರಿಗೆ ಬೇಕಾದರೂ ಪಾಠ ಮಾಡ್ತೀವಿ. ಆದ್ರೆ ಈ ಮಲೆನಾಡ ಮಕ್ಕಳಿಗೆ ಅಡಿಕೆ ಸುಲ್ತದ ಸಮಯದಲ್ಲಿ ಪಾಠ ಮಾಡುವ ಕರ್ಮ ಮಾತ್ರ ಯಾವನಿಗೂ ಬೇಡ. ಪಾಠದ ಮನೆ ಹಾಳಾಗ್ಲಿ, ಇವರನ್ನು ನಿದ್ದೆಯಿಂದ ಏಳ್ಸೋದೇ ನಮ್ಮ ಕೆಲಸ ಆಗೋಯ್ತು' ಎಂದು ಎಲ್ಲರೆದುರೂ ಅಂದು ಕೋಪ ತೀರಿಸಿಕೊಳ್ಳುತ್ತಿದ್ದರು. ಹೊಡೆಯಲಿ, ಬಡಿಯಲಿ, ಏನೇ ಮಾಡಲಿ ನಮಗೆ ಮಾತ್ರ ಆ ದಿನಗಳಲ್ಲಿ ಅಡಿಕೆ ಸುಲ್ತ ಆಪ್ಯಾಯಮಾನ ಆಗಿರುತ್ತಿತ್ತು.

ಅಡಿಕೆ ಸುಲ್ತದ ಕೊನೆಯ ದಿನವನ್ನು `ಕಡೆಕಟ್ಲು' ಎಂದು ಕರೆಯುತ್ತಾರೆ. ಆ ದಿನ ಸಿಹಿ ತಿಂಡಿ, ಪಾಯಸ ಕೊಡುತ್ತಿದ್ದರು. ನಮಗೆಲ್ಲ ತಿಂಡಿ ಸಿಗುವ ಸಂತೋಷ ಒಂದೆಡೆಯಾದರೆ, ಈ ವರ್ಷದ ಸುಲ್ತ ಮುಗಿದೇಹೋಯಿತಲ್ಲ ಎಂಬ ವೇದನೆ ಮತ್ತೊಂದೆಡೆ. ಒಟ್ಟಿನಲ್ಲಿ ಬಾಲ್ಯದಲ್ಲಿ ನಾನು ಆನಂದಿಸುತ್ತಿದ್ದ ಅಡಿಕೆ ಕೊಯ್ಲಿನ ಆ ಸಂತಸವನ್ನು, ಈಗ ಒಳ್ಳೆಯ ಹುದ್ದೆಯಲ್ಲಿರುವ ನಾನು ನೆನಪಿಸಿಕೊಳ್ಳುತ್ತಾ ಆಗಾಗ್ಗೆ ಬಾಲ್ಯದ ನೆನಪುಗಳಿಗೆ ಜಾರುತ್ತಲೇ ಇರುತ್ತೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.