ADVERTISEMENT

ಅಸುರಕ್ಷತೆಯ ಭಾವ...

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

“ನಡುರಾತ್ರಿಯಲ್ಲಿ ಸ್ವತಂತ್ರವಾಗಿ, ನಿರ್ಭಯವಾಗಿ, ಒಬ್ಬಂಟಿಯಾಗಿ ಮಹಿಳೆ ಯಾವಾಗ ಸಂಚರಿಸಬಲ್ಲಳೋ ಆಗ ರಾಮರಾಜ್ಯ ನಿರ್ಮಾಣವಾದಂತೆ” ಎಂದು ಗಾಂಧೀಜಿ ಹೇಳಿದ್ದಾರೆ.

ಆದರೆ ಮಧ್ಯರಾತ್ರಿಯ ಮಾತು ಹಾಗಿರಲಿ, ಹಾಡು-ಹಗಲಿನಲ್ಲಿಯೇ ಸ್ತ್ರೀಯರನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆ ಮಾಡುವ ಭೂಪರು ನಮ್ಮ ಸಮಾಜದಲ್ಲಿದ್ದಾರೆ. ಒಮ್ಮಮ್ಮೆ ಬಸ್, ಆಟೋ, ಅಂಗಡಿ, ಆಫೀಸ್, ಸಾರ್ವಜನಿಕ ಸ್ಥಳಗಳೂ ಅಸುರಕ್ಷತೆಯ ಭಾವ ಸೃಷ್ಟಿಸುವುದು ಸುಳ್ಳಲ್ಲ. ನಿಶಾ ಸಮಯಗಳಲ್ಲಂತೂ ನಶೆಯ ಅಮಲು. ಮತ್ತಿನ್ನೊಂದಿಷ್ಟು  ಕಿರುಕುಳಗಳ ಭೀತಿ.

ವಸುಧಾ ವಿದ್ಯಾವಂತೆ, ರೂಪವಂತೆ, ಗುಣವಂತೆ. ಎರಡು ಮಕ್ಕಳ ತಾಯಿಯಾಗಿರುವ ಬಡ ಕುಟುಂಬದ ಗೃಹಲಕ್ಷ್ಮಿ. ವಿಧಿಯ ಕರಾಳಮುಷ್ಟಿಗೆ ಸಿಲುಕಿ ತನ್ನ ಗಂಡನನ್ನು ಕಳೆದುಕೊಂಡವಳು. ಆದರೂ ತನ್ನ ಮಕ್ಕಳಿಗಾಗಿ ತನ್ನ ಜೀವವನ್ನು ಹಿಡಿದುಕೊಂಡು, ಧೈರ್ಯವಹಿಸಿ, ತನಗೆ ತಾನೇ ಸಮಾಧಾನ ಹೇಳಿಕೊಂಡು ಕೆಲಸ ಕೇಳಲು ಹೋದರೆ, ಸಮಾಜದ ಪ್ರತಿಷ್ಠಿತ, ವಿದ್ಯಾವಂತ ಮೇಲಧಿಕಾರಿ “ನಿನ್ನ ಅವಶ್ಯಕತೆಗಳನ್ನು ನಾನು ಪೂರೈಸುತ್ತೇನೆ. ನನ್ನ ಅವಶ್ಯಕತೆಗಳನ್ನು ನೀನು ಪೂರೈಸುವೆಯಾ”? ಎಂದು ಕೇಳುತ್ತಾನೆ.

 ಮೈ-ಕೈ ಮುಟ್ಟಿ ಮಾತನಾಡಿಸುವ ಅಧ್ಯಾಪಕರುಗಳಿಂದಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಾಗೂ ಹಲವು ನೆಲೆಗಳಲ್ಲಿ ಅಸುರಕ್ಷತೆ ಅನುಭವಿಸುವ ಮಹಿಳಾ ಬಸ್ ನಿರ್ವಾಹಕರು, ನರ್ಸ್‌ಗಳ ಕಥೆಗಳು ನೂರಾರು. ಇಂದಿನ ದಿನಗಳಲ್ಲಿ ಎಂ.ಎಂ.ಎಸ್, ಇ-ಮೇಲ್ ತಂತ್ರಜ್ಞಾನಗಳ ಮೂಲಕ ಸ್ತ್ರೀಯರ ನಗ್ನ ಚಿತ್ರಗಳನ್ನು ರವಾನಿಸುವ ಜಾಲ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.

ಮೈ ತುಂಬ ಬಟ್ಟೆ ಧರಿಸಿದ `ಗೌರಮ್ಮ~ಗಳಿಗೆ ಕಿರುಕುಳ ಇಲ್ಲವೆಂದೇನೂ ಇಲ್ಲ. ಅರೆಬೆತ್ತಲಾಗಿರುವ ಸ್ತ್ರೀಯರನ್ನು ಕಾಡಿಸುವುದಕ್ಕಿಂತ ಹೆಚ್ಚಾಗಿಯೆ ಗೌರವಸ್ತ ಮನೆತನದ ಹೆಣ್ಣು ಮಕ್ಕಳನ್ನು ಪೀಡಿಸುತ್ತಾರೆ.

ಇವೆಲ್ಲಾ ಕಷ್ಟಗಳು ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟು ಮನೆಯಿಂದ ಹೊರಗೆ ಲಗ್ಗೆಯಿಟ್ಟ ಲಲನಾಮಣಿಯರಿಗೆ. ಆಮರಣಾಂತ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಹೆಣ್ಣಿಗೆ ಭಾವ, ಮಾವ, ಮೈದುನ ಮತ್ತಿತರ ಸದಸ್ಯರುಗಳಿಂದ ಉಂಟಾಗುವ ದೈಹಿಕ ಕಿರುಕುಳಗಳೂ ಇವೆ. ಅದು ಅನುಭವಿಸಿದವರಿಗೇ ಗೊತ್ತಾಗಬೇಕು!!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.