ADVERTISEMENT

ಉರುಳಾಗದಿರಲಿ ಪ್ರೀತಿ

ಸುಶೀಲಾ ಡೋಣೂರ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಘಟನೆ-1
ಪಾಲಕರ ಜಾತಿಯ ವ್ಯಾಮೋಹಕ್ಕೆ ಸೋತ ಪ್ರೇಮಿಗಳಿಬ್ಬರು ಹರಿಯಾಣದಲ್ಲಿ  ರೈಲಿಗೆ ತಲೆ ಕೊಟ್ಟರು (ದೀಪಕ್ ಮತ್ತು ಟೀನಾ).

ಘಟನೆ-2
ದಕ್ಷಿಣ ತಮಿಳುನಾಡಿನಲ್ಲಿಯೂ ಇಂಥದ್ದೇ ಒಂದು ಘಟನೆ. ಸ್ವಗೋತ್ರಕ್ಕೆ ಸೇರಿದ್ದರೆನ್ನಲಾದ ಜೋಡಿಗಳು ಮನೆಯವರ ಗೊಡ್ಡು ಸಂಪ್ರದಾಯವನ್ನು ಧಿಕ್ಕರಿಸಿ ಮದುವೆಯಾದ ತಪ್ಪಿಗೆ ಹೆಣವಾದರು.

ಘಟನೆ-3
ಪ್ರೀತಿಗೆ ಜಾತಿ ಅಡ್ಡಿಯಾದ ಕಾರಣ ಕೊಳ್ಳೇಗಾಲ ತಾಲ್ಲೂಕಿನ ಪ್ರೇಮಿಗಳಿಬ್ಬರು ಚಾಮುಂಡಿ ಬೆಟ್ಟದಲ್ಲಿ ವಿಷ ಸೇವಿಸಿದರು (ಕುಮಾರ್-ಪಾರ್ವತಿ)

ಘಟನೆ-4
ಸೌಮ್ಯ-ನಂಜುಂಡಿ ಎಂಬ ಪ್ರೇಮಿಗಳು ಮನೆಯವರನ್ನು ಎದುರಿಸಲಾಗದೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು...

ಪ್ರೀತಿಸಿದ ತಪ್ಪಿಗಾಗಿ ಸಾವಿಗೆ ಸೋಲುವ ಇಂತಹ ಯುವ ಜೋಡಿಗಳ ಸಾಲು ಹೆಚ್ಚುತ್ತಿದೆ. ಕಾರಣ ಮಾತ್ರ ಒಂದೇ. ಜಾತಿ, ಸಂಪ್ರದಾಯ ಅಥವಾ ಪ್ರತಿಷ್ಠೆ.

ಅಂಥದ್ದೇ ಮತ್ತೊಂದು ಪ್ರಕರಣ. ಮದುವೆಯಾದ ಎರಡೇ ತಿಂಗಳಿಗೆ ಹೆಣವಾಗಿ ಬಿದ್ದಿದ್ದ ಪ್ರಿಯಾಳದ್ದು. ಕೈಯಲ್ಲಿನ ಹಸಿರುಗಾಜಿನ ಬಳೆಗಳು ಇನ್ನೂ ಹೊಳೆಯುತ್ತಿದ್ದರೂ, ಮುಖದ ಮೇಲೆ ಬದುಕನ್ನು ಕಳೆದುಕೊಂಡಿದ್ದರ ಬಗ್ಗೆ ಹಳಹಳಿ! ಅವಳು ಬದುಕನ್ನು ಕಳೆದುಕೊಂಡಿದ್ದು ಸಾವಿನಿಂದಲ್ಲ, ಮದುವೆಯಿಂದ...

`ನಾನು ಮನಸ್ಸಿಲ್ಲದ ಮನಸ್ಸಿನಿಂದ ಮದುವೆಯಾಗುತ್ತಿದ್ದೇನೆ. ನನ್ನ ಬದುಕು ಹಾಳಾಗುತ್ತಿರುವ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನೀವ್ಯಾರೂ ಬರುವುದು ಬೇಡ~ ಎಂದು ತನ್ನ ಗೆಳತಿಯರಿಗೆ ಹೇಳಿದ್ದಳು.

`ಆದದ್ದು ಆಯ್ತು, ಹಿಂದಿನದೆಲ್ಲ ಕನಸೆಂದು ಮರೆತು ಬಿಡು ಆಮೇಲೆ ಎಲ್ಲವೂ ಸರಿ ಹೋಗುತ್ತೆ~ ಎಂದರು ಅನೇಕರು. `ನಾವೆಲ್ಲ ನಿನ್ನ ಜೊತೆಗಿದ್ದೇವೆ. ಇವತ್ತೇ ಮನೆಯಿಂದ ಹೊರಟು ಬಾ, ನಿಮ್ಮಿಬ್ಬರಿಗೂ ನಾವೇ ಮದುವೆ ಮಾಡುತ್ತೇವೆ, ಆ ಮೇಲೆ ಎಲ್ಲವೂ ತಾನೇ ಸರಿ ಹೋಗುತ್ತೆ~ ಎಂದೂ ಕೆಲವರು ಕೇಳಿದರು.

ಇನ್ನೂ ಕೆಲವರು ಯಾವುದಾದರೂ ಸಂಘಟನೆಯ ಸಹಾಯ ಪಡೆಯುವಂತೆಯೂ ಸಲಹೆ ನೀಡಿದರು. ಆದರೆ ಮದುವೆ ಎನ್ನುವುದು ಹೋರಾಟವಲ್ಲ, ಪುರೋಹಿತರಿರುವ ಜಾಗದಲ್ಲಿ ಪೊಲೀಸರಿರುವುದು, ಮನೆಯ ಹಿರಿಯರ ಸ್ಥಾನದಲ್ಲಿ ಅದ್ಯಾರೊ ಗೊತ್ತೇ ಇಲ್ಲದ ಸಂಘಟನೆಯವರಿರುವುದು... ನಾಚಿಕೆಗೇಡಿತನ.

ಇದು ಪ್ರಿಯಾಗೆ ಮನಸ್ಸಿರಲಿಲ್ಲ. ಆದರೆ ಮನೆಯವರೆಲ್ಲ ಮುಂದೆ ನಿಂತು ತಾನು ಮೆಚ್ಚಿದ ಹುಡುಗನಿಗೇ ತನ್ನನ್ನು ಧಾರೆ ಎರೆದು ಕೊಟ್ಟಾರು ಎಂಬ ಅವಳ ಭರವಸೆ ಕಳಚಿ ಬಿದ್ದಿತ್ತು. ಅದಂತೂ ಆಗಲಿಲ್ಲ, ಭಾವಗಳೇ ಇಲ್ಲದ ಶಿಲೆಯಂತೆ ಅವರು ತೋರಿಸಿದ ಹುಡುಗನಿಗೆ ಕತ್ತು ನೀಡಿದ್ದಳು ಹುಡುಗಿ. ಆದರೆ ಮನಸ್ಸು ನೀಡಲು ಬಹುಶಃ ಅವಳಿಗೆ ಸಾಧ್ಯವೇ ಆಗಲಿಲ್ಲವೇನೊ...

ಮದುವೆ ಅಂತಾದರೆ ಸಾಕೆ?

`ನಾಲ್ಕು ದಿನಗಳು ಕಳೆದರೆ ಎಲ್ಲಾ ಮರೀತಾಳೆ, ಮುಂದೆ ಎಲ್ಲ ತಾನೇ ಸರಿ ಹೋಗುತ್ತೆ~ ಎಂದುಕೊಳ್ಳುತ್ತಲೇ ಅವಳನ್ನು, ಅವಳ ಮನಸ್ಸನ್ನು ಲೆಕ್ಕಿಸದೇ ಆಣೆ, ಪ್ರಮಾಣ, ಬೆದರಿಕೆಗಳ ಮೂಲಕ ಅವಳಿಗೊಂದು ಮದುವೆ ಮಾಡಿ ಗೆದ್ದಂತೆ ಭ್ರಮಿಸುತ್ತಾರೆ ಹೆತ್ತವರು.
ಮುಂದೆ ಎಲ್ಲವೂ ಸರಿ ಹೋದರೆ ಒಳಿತೇ ಆಯಿತು. ಆದರೆ ಒಂದು ವೇಳೆ ಏನೂ ಸರಿ ಹೋಗಲೇ ಇಲ್ಲ ಎಂದಾದರೆ! ಎಲ್ಲರ ಮನಸ್ಸೂ ಅಷ್ಟು ಗಟ್ಟಿಯಾಗಿರುವುದೇ? ಹಿಂದಿನದೆಲ್ಲ ಕನಸೆಂದು ಮರೆಯಲು ಸಾಧ್ಯವೆ?  ಇವನನ್ನೇ ಅವನೆಂದುಕೊಂಡು ಬದುಕನ್ನು ಭ್ರಮಿಸುವುದು ಅದೆಷ್ಟು ದಿನ ನಡಿದೀತು! ಈ ಭ್ರಮೆ ಸಾಕಿನ್ನು ಎನ್ನಿಸಿದ ದಿನ ತಾವೇ ಜನ್ಮ ಕೊಟ್ಟು, ಸಲುಹಿದ ಮಗಳು ತಮ್ಮ ಮುಂದೇ ಹೀಗೆ ಕಳೆದುಹೋದರೆ ಪಾಲಕರಿಗಿದು ಸಹ್ಯವೇ?

ತಮ್ಮ ಪ್ರತಿಷ್ಠೆ, ಜಾತಿಗಾಗಿ ಮಕ್ಕಳಿಂದ ಅವರ ಪ್ರೀತಿಯ ತ್ಯಾಗ ಕೇಳುವ ಮೊದಲು ಪಾಲಕರು ಒಂದೇ ಒಂದು ಕ್ಷಣ ತಮ್ಮ ಮನಸ್ಸನ್ನು ಮಾತಿಗೆಳೆದು ನೋಡಬೇಕು. ತಮ್ಮ ಮಗಳು/ಮಗ, ಅವರನ್ನು ಪ್ರೀತಿಸಿದ ಆ ಎರಡನೇ ಜೀವ ಮತ್ತು ವರಿಸಲು ಬಂದ ಆ ಮೂರನೇ ಬಾಳು. ಈ ಮೂರೂ ಜನರ ಬದುಕನ್ನು ಪರಸ್ಪರ ಕತ್ತಲೆಯಲ್ಲಿಟ್ಟು ಹೇಗೊ ಮದುವೆ ಅಂತಾದರೆ ಸಾಕು ಅನ್ನುವಷ್ಟು ನಿಷ್ಕಾಳಜಿ... ಅದೂ ಮದುವೆಯಂತಹ ಮಹತ್ವದ ವಿಷಯದಲ್ಲಿ... ಎಷ್ಟು ಸರಿ?

ಮುಂದೊಂದು ದಿನ ಅವಳ ಪ್ರೀತಿಯ ವಿಷಯ ಕಟ್ಟಿಕೊಂಡವನಿಗೆ ಗೊತ್ತಾಗಿ ಹೊತ್ತೇರುತ್ತಿದ್ದಂತೆ ಬಿರುಕು ಬಿಟ್ಟುಕೊಳ್ಳುವ ಮನಸ್ಸುಗಳು ಮತ್ತೆಂದೂ ಕೂಡದಂತೆ ಒಡೆದು ಹೋದರೆ ಅಥವಾ ಎತ್ತಿ ಆಡಿಸಿದ ಕರುಳ ಕುಡಿ ಕಣ್ಣ ಮುಂದೆಯೇ ಕಳೆದು ಹೋದರೆ... ಇದಕ್ಕೆಲ್ಲ ಯಾರನ್ನು ಹೊಣೆಯಾಗಿಸುವುದು?

ಇದು ಕೇವಲ ಪ್ರಿಯಾಳ ಕತೆಯಲ್ಲ. ಇಂತಹ ಕೆಲ ಪ್ರಕರಣಗಳು ಬೆಳಕಿಗೆ ಬಾರದೇ ಹೋಗಬಹುದು. ಆದರೆ ಅದೆಷ್ಟೊ ಸಂಗತಿಗಳನ್ನು ನಾವು ದಿನನಿತ್ಯ ಟಿವಿ -ಪೇಪರುಗಳಲ್ಲಿ ನೋಡಿ ತಿಳಿಯುತ್ತೇವೆ. ಆದರೂ ಮತ್ತದೇ ತಪ್ಪುಗಳು, ಅದೇ ಮಾದರಿಯ ಸಾವುಗಳ ಸಾಲು ಸಾಲು...

ಹುಡುಗಾಟಕ್ಕೂ ಪ್ರೀತಿಗೂ ವ್ಯತ್ಯಾಸವಿದೆ
ದೊಡ್ಡವರು ಎಲ್ಲವನ್ನೂ ಹುಡುಗಾಟ ಎಂದುಕೊಳ್ಳುತ್ತಾರೆ, ಚಿಕ್ಕವರು ಎಲ್ಲವನ್ನು ಪ್ರೀತಿ ಎಂದುಕೊಳ್ಳುತ್ತಾರೆ. ಯಾವುದು ನಿಜವಾದ ಪ್ರೀತಿ, ಯಾವುದಲ್ಲ ಎಂಬುದನ್ನು ಸ್ಪಷ್ಟವಾಗಿ ಗ್ರಹಿಸುವಲ್ಲಿ, ಒಬ್ಬರಿಗೊಬ್ಬರು ಮನವರಿಕೆ ಮಾಡಿಕೊಡುವಲ್ಲಿ ಇಬ್ಬರೂ ಎಡುವುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಹೀಗೆ ನಿಜವಾದ ಪ್ರೇಮವನ್ನು ಹುಡುಗಾಟ ಎಂದುಕೊಂಡು ಅನಾಹುತಗಳು ಸಂಭವಿಸುತ್ತವೆ. ಮಕ್ಕಳು ಪ್ರೀತಿಸಿದ್ದಾರೆ ಎಂದಾಕ್ಷಣ ಮಹಾಪರಾಧ ಮಾಡಿದ್ದಾರೆ ಎಂದೇ ದೊಡ್ಡವರ ಭಾವನೆ.
 
ಅಂತೆಯೇ ಆ ಹುಡುಗ/ಹುಡುಗಿ ಎಂಥವರು? ಪ್ರೀತಿಗೆ ಅವರು ಅರ್ಹರೆ? ಎಂಬುದನ್ನೂ ಯೋಚಿಸದೇ ಪ್ರೀತಿಯನ್ನು ಕೊನೆಗಾಣಿಸಲು ಅವಸರಿಸುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕಿರಿಯರು ತಮ್ಮ ಪ್ರೀತಿಯನ್ನು ಸರಿಯಾಗಿ ಗುರುತಿಸದೇ ತಾವೇ ಜಾರಿ ಬಿದ್ದು ನರಳುತ್ತಾರೆ.

ಜಾತಿ-ಪ್ರತಿಷ್ಠೆಯ ಮಾತನ್ನು ಬದಿಗೊತ್ತಿ ಮಕ್ಕಳ ಪ್ರೀತಿ ಎಂಥದ್ದು, ಮುಂದೆ ಇಬ್ಬರೂ ಒಲವಿನ ತೇರನ್ನು ಎಳೆದೊಯ್ಯಬಲ್ಲರೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತಳಿಯಬೇಕಾದುದು ಪಾಲಕರ ಕರ್ತವ್ಯ.
 
ಆ ಪ್ರೀತಿ ಗಟ್ಟಿಯಲ್ಲ ಎಂದು ತಿಳಿದರೆ ಅದನ್ನು ಕುಳಿತು ಮಾತನಾಡಿ ಮಕ್ಕಳ ಮನವೋಲಿಸಬೇಕು. ಆದರೆ ಎಲ್ಲರ ಪ್ರೀತಿಯನ್ನೂ ಸಂಶಯದಿಂದ ನೋಡಿ ಕೆಡಿಸಲು ಹೋದರೆ ಇಂತಹ ಅನಾಹುತಗಳು ತಪ್ಪಿದ್ದಲ್ಲ.
ಅನೇಕರು ಹೀಗೂ ಇರಬಹುದು...

ತನಗೆ ಸಿಗದ ಪ್ರೀತಿ ತನ್ನದಲ್ಲ ಎಂದುಕೊಂಡು ಪಾಲಿಗೆ ಬಂದುದೇ ಪರಮ ಶ್ರೇಷ್ಠವೆನ್ನುವಂತೆ ಜೀವಿಸುತ್ತಾರೆ. ಹೇಗೂ ಸಂಸಾರವಂತೂ ನಡೆಯುತ್ತದೆ. ಮಕ್ಕಳೂ ಹುಟ್ಟಿ ಬಿಡುತ್ತವೆ. ಮುಂದೆ ಮಕ್ಕಳಿಗಾಗಿ ಬದುಕು, ಅವರಿಗಾಗಿ ತ್ಯಾಗ... ಹೀಗೇ ತನ್ನಷ್ಟಕ್ಕೆ ತಾನು ಸಾಗಿಕೊಂಡು ಹೋಗುವ ಬದುಕಿನಲ್ಲಿ ತಾವೇ ಅನಾಮಿಕರಂತೆ ಬದುಕಿ ಬಿಡುತ್ತಾರೆ ಅನೇಕರು.

ಆದರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ, ಯಾವುದೊ ಒತ್ತಡಗಳಿಗೆ, ಅನಿವಾರ್ಯತೆಗಳಿಗೆ ಕಟ್ಟು ಬಿದ್ದು ಮಾಡಿಕೊಳ್ಳುವ ಒಂದು `ರಾಜಿ~ ಮುಂದೊಂದು ದಿನ ದೊಡ್ಡ ಮೊತ್ತದ ಬೆಲೆ ಕೇಳಿ ಬಿಡುತ್ತದೆ.

ಹೆಜ್ಜೆ-ಹೆಜ್ಜೆಗೂ ನೆನಪಾಗುವ ಅವನ ಮಾತು... ಅವನೊಂದಿಗೆ ಕಳೆದ ಆ ಕ್ಷಣಗಳು... ಮರೆಯಬೇಕೆಂದುಕೊಂಡಷ್ಟೇ ಆಳವಾಗಿ ಮನದೊಳಗೆ ಇಳಿಯುತ್ತ ಹೋಗುವ ಗೆಳೆಯ, ಮುಂದಿರುವ ಪತಿಯ ಕಣ್ಣೊಳಗೂ ಇಣುಕಿ ಮರೆಯಾದಂತೆ...

ನಿಜ, ಪ್ರೀತಿಯನ್ನು ಮರೆತು ಬಿಡುವುದು ಅಷ್ಟು ಸುಲಭಸಾಧ್ಯವಾಗಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲ ಅನಾಹುತಗಳು ನಡೆದು ಈ ಪ್ರೀತಿಗೆ ಇತಿಹಾಸ ಸೃಷ್ಟಿಯಾಗುತ್ತಿರಲಿಲ್ಲ. ನಿಜವಾದ ಪ್ರೀತಿ ಯಾವತ್ತೂ ಮರೆತು ಹೋಗುವುದಿಲ್ಲ. ಮರೆತಂತೆನಿಸಿದರೂ ಮನದ ಮೂಲೆಯಿಂದ ಆಗಾಗ ಮೇಲೆದ್ದು ದಂಗೆ ಇಡುವ ಪ್ರೀತಿಯನ್ನು ಸಂಭಾಳಿಸುವುದು ಕಷ್ಟದ ಮಾತೇ. 

ಆದರೆ ಬದುಕು ಹೀಗೆ ಮನಸ್ಸಿಗೆ ಬಂದಾಗ ಮುಕ್ತಾಯ ಹಾಡಿಕೊಳ್ಳುವಷ್ಟು ಅಗ್ಗದ್ದಲ್ಲ. ಹಾಗೆಯೇ ಪ್ರೀತಿ ಜೀವವನ್ನು ಬಲಿ ಕೇಳುವ ಮಾರಿಯಾಗದಿರಲಿ, ಅದು ಜೀವರಸ, ಹೊಸ ಬದುಕಿಗೆ ನಾಂದಿ ಹಾಡುವ ಚಿಲುಮೆಯಾಗಲಿ ಪ್ರೀತಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.