ಪ್ರೀತಿಯ ಗೆಳತಿ,
ಬಹು ದಿನಗಳ ನಂತರ ನಿನ್ನ ಸುದೀರ್ಘ ಪತ್ರ ಇಂದು ತಲುಪಿತು. ಇದು ಇ-ಮೇಲ್, ಎಸ್.ಎಂ.ಎಸ್.ಗಳ ಕಾಲ. ಪತ್ರ ವ್ಯವಹಾರ ಮರೆತೇ ಹೋಗಿತ್ತು. ನಿನ್ನ ಪತ್ರವನ್ನು ಬಹು ಸಂತಸದಿಂದ ತೆರೆದು ಓದಿದೆ. ಅದರ ಒಕ್ಕಣೆಯಿಂದ ನೀನು ಯಾಕೋ ಬೇಸರದಲ್ಲಿದ್ದೀಯ ಎಂದು ಅರಿವಾಯಿತು.
ಅದೇ ಮಾಮೂಲಿನ ಬದುಕು, ಬೆಳಗಾದರೆ ಮಕ್ಕಳು, ಗಂಡನಿಗೆ ಅಣಿ ಮಾಡುವುದು, ಅವಸರದಲ್ಲಿ ಕಚೇರಿಗೆ ಧಾವಿಸುವುದು, ಅಲ್ಲಿಯೂ ಅದೇ ಮಾಮೂಲಿ ಕೆಲಸ, ಸಂಜೆಯಾದರೆ ಮತ್ತೆ ಮಕ್ಕಳ ಹೋಂವರ್ಕ್, ಮರುದಿನಕ್ಕೆ ತಯಾರಿ, ಮತ್ತದೇ ಪುನರಾವರ್ತನೆ... ಬದುಕಿನಲ್ಲಿ ಮಹತ್ತರವಾದುದೇನನ್ನೂ ಸಾಧಿಸಲಿಲ್ಲ ಎಂದು ನೊಂದುಕೊಂಡಿದ್ದೀಯ.
ನಿನ್ನ ಮನದಾಳದ ನೋವು ನನಗೆ ಅರ್ಥವಾಯಿತು ಗೆಳತಿ, ನಿನ್ನ ಮನಸ್ಸೇನು ಹೊಸತೇ ನನಗೆ? ಜೀವನದ ಕೆಲ ಹಂತಗಳಲ್ಲಿ ನನಗೂ ನಿನ್ನ ಹಾಗೆಯೇ ಅನ್ನಿಸಿದ್ದುಂಟು. ಹಿರಿದಾದ ಸಾಧನೆ ಎಲ್ಲರಿಗೂ ಸಿದ್ಧಿಸಲಿಕ್ಕಿಲ್ಲ ಗೆಳತಿ.
ಆದರೆ ಜೀವನದಲ್ಲಿ ಸಣ್ಣ ಪುಟ್ಟ ಸಂಗತಿಗಳೂ ಮನಸ್ಸಿಗೆ ಹಿತ ನೀಡಬಹುದೆಂದರೆ ನಂಬುತ್ತೀಯಾ? ಬುದ್ಧನಿಗೆ ಆದಂತೆ ನನಗೂ ನಲವತ್ತರ ಅಂಚಿನಲ್ಲಿ ಜ್ಞಾನೋದಯ ಆದಂತಾಗಿತ್ತು. ಕೆಲ ಸಂಗತಿಗಳು ಹೊಸದೆಂಬಂತೆ ಮನವರಿಕೆಯಾಗಿದ್ದವು.
ಆದ್ದರಿಂದಲೇ ಇತ್ತೀಚೆಗೆ ದೃಢಸಂಕಲ್ಪ ಮಾಡಿ ದಿನನಿತ್ಯದ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ರೂಢಿಸಿಕೊಂಡೆ. ಏನಾಶ್ಚರ್ಯ! ನನ್ನೊಳಗೇ ಹೊಸ ಚೇತನವೊಂದು ಬಂದಂತೆ ಭಾಸವಾಗಿದೆ. ಮನಸ್ಸು ಉಲ್ಲಸಿತವಾಗಿದೆ. ಏನನ್ನೋ ಸಾಧಿಸಿದ ಅನುಭವದಿಂದ ಮನಸ್ಸು ಹಿಗ್ಗಿದೆ. ಒಂದು ರೀತಿಯ ಹಿತಕರ ಹಾಗೂ ಸಂತೃಪ್ತ ಭಾವ ನನ್ನದಾಗಿದೆ ಎಂದರೆ ನಂಬುತ್ತೀಯಾ? ಇದೆಲ್ಲಾ ಹೇಗಾಯಿತು ಎಂದು ಹೇಳುತ್ತೇನೆ ಕೇಳು.
ಕೋಪವನ್ನು ನಿಯಂತ್ರಿಸಿದೆ: ಸದಾ ಮನಃಶಾಂತಿಯನ್ನು ಕದಡುತ್ತಿದ್ದ ಸಿಟ್ಟನ್ನು ದೃಢ ಸಂಕಲ್ಪ ಮಾಡಿ ನಿಯಂತ್ರಿಸಿದ್ದು ನನ್ನ ಮಟ್ಟಿಗೆ ಒಂದು ಸಾಧನೆಯೇ ಆಗಿತ್ತು. ಮಕ್ಕಳ ಮೇಲೆ ಯಾವಾಗಲೂ ರೇಗುತ್ತಿದ್ದವಳು ಅವರು ಕೇಳುವ ಪ್ರತಿಯೊಂದನ್ನೂ ಸಮಾಧಾನದಿಂದ ಕೇಳಿ ಸ್ಪಂದಿಸಿದೆ.
ಮನೆಗೆ ಬಂದ ಮಕ್ಕಳ ಗೆಳೆಯರನ್ನು ಕಂಡು ಸದಾ ಗೊಣಗುತ್ತಿದ್ದವಳು ಈಗ ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿರುವೆ. ಪತಿರಾಯರ ಅಡುಗೆ ತಿಂಡಿಗಳ ಬಗೆಗಿನ ಟೀಕೆಯನ್ನೂ ಬೇಸರಿಸದೇ ಸ್ವೀಕರಿಸಿದೆ. ಮನೆಕೆಲಸದಾಕೆ ರಜೆ ಬೇಕೆಂದು ಕೇಳಿದಾಗ ಪ್ರತಿ ಬಾರಿ ಸಿಡಿಮಿಡಿಗುಟ್ಟುತ್ತಿದ್ದವಳು ಈ ಬಾರಿ ಸಂತಸದಿಂದ ಸಮ್ಮತಿಸಿದೆ.
ಸಂಬಂಧಿಯ ಮದುವೆಗೆ ಹೊರಟಿದ್ದ ಆಕೆಯ ಖರ್ಚಿಗೆ ನೂರು ರೂಪಾಯಿ ಕೊಟ್ಟಾಗ, ಅವಳ ಮುಖ ಸಂತಸದಿಂದ ಅರಳಿತು. ಆಸ್ಪತ್ರೆಯಲ್ಲಿ ಕಿರಿಯ ಸಹೋದ್ಯೋಗಿಗಳ ಮೇಲೆ ಕೋಪಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ಸಲ ಅವರ ಸಣ್ಣಪುಟ್ಟ ಸಮಸ್ಯೆಗಳನ್ನು ಸಮಾಧಾನದಿಂದ ಬಿಡಿಸಿದೆ.
ಅವರೊಡನೆ ಆಗಾಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ತಿಳಿ ವಾತಾವರಣ ಸೃಷ್ಟಿಸಿದೆ. ಒಂದು ಭಾನುವಾರ ಎಲ್ಲರೂ ಕೂಡಿ ಹತ್ತಿರದ ಜೋಗ ಜಲಪಾತವನ್ನು ನೋಡಿ ಬಂದೆವು. ಕೆಲ ಕಾಲವಾದರೂ ದೈನಂದಿನ ಒತ್ತಡದ ದಿನಚರಿಯಿಂದ ಹೊರಗುಳಿದು ಸಂತಸಪಟ್ಟೆವು.
ಪರಿಸರ ಸ್ನೇಹಿಯಾದೆ: ಯಾವಾಗಲೂ ಕೆಲಸದಾಕೆಯೇ ಮಾಡಲಿ ಎನ್ನುತ್ತಿದ್ದವಳು, ಸಂಜೆ ಬಿಡುವು ಮಾಡಿಕೊಂಡು ಮನೆ ಮುಂದಿನ ಗಿಡಗಳಿಗೆ ನೀರುಣಿಸಿದೆ. ಹೂವಿನ ಕುಂಡಗಳನ್ನು ಸ್ವಚ್ಛಗೊಳಿಸಿದೆ. ಗಿಡಗಳನ್ನು ಗಮನಿಸಿದ ಪತಿರಾಯರು, ಅವು ಸುಂದರವಾಗಿ ಕಾಣುತ್ತಿವೆಯೆಂದು ಪ್ರಶಂಸಿಸಿದಾಗ ಮನಸ್ಸು ಹೆಮ್ಮೆಪಟ್ಟಿತು. ಅಂಗಡಿ ಗಳಿಗೆ ಹೋಗುವಾಗ ತಪ್ಪದೇ ಬಟ್ಟೆಯ ಚೀಲಗಳನ್ನು ತೆಗೆದುಕೊಂಡು ಹೋದೆ, ಪ್ಲಾಸ್ಟಿಕ್ ಚೀಲಗಳನ್ನು ತಿರಸ್ಕರಿಸಿದೆ.
ಮುಂಚೆ ಕಸದ ಡಬ್ಬಿಗೆ ಹಾಕುತ್ತಿದ್ದ ತರಕಾರಿ ಹಾಗೂ ಹಣ್ಣಿನ ಸಿಪ್ಪೆಯನ್ನು ಪ್ರತ್ಯೇಕವಾಗಿ ಶೇಖರಿಸಿಟ್ಟು ಮನೆ ಮುಂದೆ ಬರುವ ಹಸುಕರುಗಳಿಗೆ ತಿನ್ನಿಸಿದೆ. ಹಸುಗಳು ಧನ್ಯತೆಯಿಂದ ನನ್ನನ್ನು ನೋಡಿದಾಗ ಏನೋ ಒಂದು ಬಗೆಯ ಆನಂದ ನನಗಾಗಿದ್ದು ನಿಜ ಗೆಳತಿ.
ಕಾಳಜಿ ವಹಿಸಿದೆ: ಮನಸ್ಸಿನಿಂದ ನನಗೆ ಸಮಯವಿಲ್ಲ ಎಂಬ ವಿಚಾರವನ್ನು ಕಿತ್ತೊಗೆದೆ.
ನನ್ನ ಬಳಿ ಸಾಕಷ್ಟು ಸಮಯವಿದೆ, ಎಲ್ಲವನ್ನೂ ನಾನು ಮಾಡಬಲ್ಲೆ ಎಂದು ದೃಢ ಸಂಕಲ್ಪ ಮಾಡಿಕೊಂಡೆ. ಯಾವ್ಯಾವುದೋ ನೆಪ ಹೇಳಿಕೊಂಡು ವ್ಯಾಯಾಮ ನಿಲ್ಲಿಸೇಬಿಟ್ಟಿದ್ದೆ. ಗಟ್ಟಿ ಮನಸ್ಸಿನಿಂದ ಕೆಲ ತಿಂಗಳುಗಳಿಂದ ಬೇಗನೇ ಎದ್ದು 30- 45 ನಿಮಿಷ ಯೋಗಾಸನ ಪ್ರಾರಂಭಿಸಿದೆ.
ಇದು ನನ್ನ ದೇಹ ಹಾಗೂ ಮನಸ್ಸು ಲವಲವಿಕೆಯಿಂದಿರಲು ಸಹಕರಿಸಿದೆ. ಪದೇ ಪದೇ ಕುಡಿಯುತ್ತಿದ್ದ ಟೀ-ಕಾಫಿಯನ್ನು ಕಷ್ಟಪಟ್ಟು ತ್ಯಜಿಸಿ ದಿನಕ್ಕೆ 3- 4 ಲೀಟರ್ ನೀರು ಕುಡಿಯಲು ಅಭ್ಯಾಸ ಮಾಡಿಕೊಂಡಿರುವೆ. ಬಾಯಿ ಚಪಲ ನಿಯಂತ್ರಿಸಿ, ಅನಗತ್ಯವಾದ ಕರಿದ ತಿಂಡಿಗಳು, ಬೇಕರಿ ಪದಾರ್ಥಗಳನ್ನು ಬೇಡವೆಂದಿರುವೆ.
ಇದರಿಂದ ದೇಹದ ತೂಕ ನಾಲ್ಕಾರು ಕೆ.ಜಿ ಕಡಿಮೆಯಾಗಿದೆಯಲ್ಲದೆ, ಮನಸ್ಸೂ ಹಗುರಾಗಿದೆ. ನನ್ನ ಹವ್ಯಾಸಗಳಾದ ಸಾಹಿತ್ಯ ಮತ್ತು ಸಂಗೀತಕ್ಕೆ ಸಮಯದ ಅಭಾವವೆಂದು ತಿಲಾಂಜಲಿಯಿತ್ತಿದ್ದೆ. ಈಗ ಅವುಗಳತ್ತಲೂ ಚಿತ್ತ ಹರಿಸಿದ್ದೇನೆ. ವಾರಕ್ಕೆರಡು ದಿನ, ಮನೆಯ ಹತ್ತಿರವಿರುವ ಸುಗಮ ಸಂಗೀತ ಶಾಲೆಗೆ ಹೋಗುತ್ತಿದ್ದೇನೆ. ಹೊಸ ಹಾಡುಗಳನ್ನು ಕಲಿಯುವಾಗ ಆಗುವ ಆನಂದಕ್ಕೆ ಪಾರವೇ ಇಲ್ಲ, ಗೊತ್ತೇನು?
ಕರ್ತವ್ಯ ಪಾಲಿಸಿದೆ: ವಾರದಲ್ಲಿ ಒಮ್ಮೆಯಾದರೂ, ಮರೆಯದೇ ಊರಲ್ಲಿದ್ದ ಅಜ್ಜಿಗೆ ಫೋನ್ ಮಾಡಿ, ಆಕೆಯ ಆರೋಗ್ಯ ವಿಚಾರಿಸಿದೆ. ನನ್ನ ಎರಡು ನಿಮಿಷದ ಮಾತಿನಿಂದ ಆ ಜೀವ ಎಷ್ಟೊಂದು ಖುಷಿ ಪಟ್ಟಿತು ಗೊತ್ತೇ? ಅಮ್ಮ ಅಪ್ಪನಿಗೂ ಮೂರ‌್ನಾಲ್ಕು ದಿನಗಳಿಗೊಮ್ಮೆ ಕರೆ ಮಾಡಿ ಮಾತನಾಡಿದೆ.
ಮಕ್ಕಳಿಗೂ ಅವರೊಡನೆ ಮಾತನಾಡಲು ಹೇಳಿದೆ. ಮೊಮ್ಮಕ್ಕಳೊಂದಿಗೆ ಮಾತನಾಡಿ ಅಜ್ಜ ಅಜ್ಜಿಗೆ ಖುಷಿಯೋ ಖುಷಿ. ಈ ದಿನಗಳಲ್ಲಿ ಮೊಮ್ಮಕ್ಕಳೇ ಅವರ ಪ್ರಪಂಚ, ಅಲ್ಲವೇ?
ಪೂರ್ವ ಯೋಜನೆ: ದೈನಂದಿನ ಜೀವನದಲ್ಲಿ ತುಸು ಬದಲಾವಣೆಗಳನ್ನು ರೂಢಿಸಿಕೊಂಡೆ. ಮಕ್ಕಳ ಸಮವಸ್ತ್ರದಿಂದ ಹಿಡಿದು ಅಡುಗೆ, ಆಸ್ಪತ್ರೆಯಲ್ಲಿನ ಕೆಲಸಗಳು, ಸಂಜೆಯ ಸಣ್ಣಪುಟ್ಟ ಕಾರ್ಯ ಕಲಾಪ, ಮಲಗುವಾಗ ಮಕ್ಕಳಿಗೆ ಹೇಳಬೇಕಾದ ಕತೆ... ಹೀಗೆ ಪ್ರತಿಯೊಂದಕ್ಕೂ ಹಿಂದಿನ ದಿನವೇ ಮಾನಸಿಕವಾಗಿ ತಯಾರಾಗತೊಡಗಿದೆ. ಸೋಮಾರಿತನವನ್ನು ದೂರ ತಳ್ಳಿದೆ. ಎಲ್ಲ ಕೆಲಸಗಳನ್ನೂ ಆಸಕ್ತಿ, ಶ್ರದ್ಧೆ, ಶಿಸ್ತಿನಿಂದ ಮಾಡಿದೆ. ಸಮಯ ಪರಿಪಾಲನೆಗೆ ಮಹತ್ವ ಕೊಡುತ್ತಿರುವೆ.
***
ಏನಾಶ್ಚರ್ಯ ಗೆಳತಿ, ನನ್ನೊಂದಿಗೇ ನನ್ನ ಮಕ್ಕಳು, ಪತಿರಾಯರು, ಕೆಲಸದಾಕೆ... ಹೀಗೆ ಒಟ್ಟಿನಲ್ಲಿ ಇಡೀ ಮನೆಯ ವಾತಾವರಣವೇ ಬದಲಾಗತೊಡಗಿದೆ. ಪತಿ ಹಾಗೂ ಮಕ್ಕಳು ಹಲವು ವಿಷಯಗಳಲ್ಲಿ ನನ್ನನ್ನೇ ಅನುಕರಿಸತೊಡಗಿದ್ದಾರೆ. ಪತಿ ಬೇಗನೇ ಎದ್ದು ವಾಕಿಂಗ್ ಶುರು ಮಾಡಿದ್ದಾರೆ. ಮಕ್ಕಳು ಸಮಯಕ್ಕೆ ಸರಿಯಾಗಿ ಓದು ಬರಹ ಮಾಡಿಕೊಳ್ಳುತ್ತಿದ್ದಾರೆ.
ಅವರೆಲ್ಲರ ಕೆಲಸಗಳಲ್ಲಿ ಶಿಸ್ತು, ಶ್ರದ್ಧೆ, ಚುರುಕುತನ ಎದ್ದು ಕಾಣತೊಡಗಿದೆ. ಕೆಲಸದಾಕೆಯೂ ಪದೇ ಪದೇ ರಜೆ ಹಾಕುವುದನ್ನು ನಿಲ್ಲಿಸಿದ್ದಾಳೆ. ಹೀಗೆ ಒಂದೇ ಎರಡೇ? ಮನೆಯ ವಾತಾವರಣದಲ್ಲಾದ ಹಲವು ಸಕಾರಾತ್ಮಕ ಬದಲಾವಣೆಗಳಿಂದ ನನ್ನ ಸಂತಸಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ಇದೂ ಒಂದು ಬಗೆಯ ಸಾಧನೆಯೇ ಅಲ್ಲವೇ ಗೆಳತಿ?
ಹೇಳು, ಮನೆ- ಮಕ್ಕಳಲ್ಲಿ ಒಳ್ಳೆಯ ಬದಲಾವಣೆಗಳಿಗೆ ಕಾರಣವಾಗಿದ್ದು ನಾನು ತಾನೇ? ಜೀವನದಲ್ಲಿನ ಸಣ್ಣಪುಟ್ಟ ಶಿಸ್ತುಗಳೂ ಯಶಸ್ಸಿಗೆ, ಸಾಧನೆಗೆ ಮೆಟ್ಟಿಲು ತಾನೇ? ‘Success is nothing but a few disciplines practiced every day’ ~ ಎಂಬ ಸ್ವಾಮಿ ವಿವೇಕಾನಂದರ ಉಕ್ತಿಯ ನಿಜವಾದ ಅರ್ಥ ಇಂದು ನನಗೆ ಆಗಿದೆ.
ಮಹತ್ತರವಾದದ್ದಲ್ಲದಿದ್ದರೂ ಏನನ್ನೋ ಗೆದ್ದ ಭಾವ ನನ್ನದಾಗಿದೆ. ಸಂತಸ-ಸಂತೃಪ್ತಿಯಿಂದ ಮನಸ್ಸು ಬೀಗಿದೆ. ಮನಸ್ಸಿಗೆ ಮುದ ನೀಡಬಲ್ಲ ಇಂತಹ ಸಣ್ಣ ಸಣ್ಣ ಸಂಗತಿಗಳ ಬಗ್ಗೆ ನೀನೇನನ್ನುತ್ತೀಯ ಗೆಳತಿ?
ಇಂತಿ ನಿನ್ನ ಪ್ರೀತಿಯ ಗೆಳತಿ,
ಭೂಮಿಕಾ
-ಡಾ. ವಿನಯಾ ಶ್ರೀನಿವಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.