ADVERTISEMENT

ಗೌರಮ್ಮ

ಮಿನಿ ಕಥೆ

ಡಾ.ವಿನಯಾ ಶ್ರೀನಿವಾಸ್
Published 27 ಸೆಪ್ಟೆಂಬರ್ 2013, 19:59 IST
Last Updated 27 ಸೆಪ್ಟೆಂಬರ್ 2013, 19:59 IST
ಗೌರಮ್ಮ
ಗೌರಮ್ಮ   

‘ಅಪ್ಪನ ಕಂಡೀಶನ್ ಹೇಳ್ಲಿಕ್ಕೆ ಬರಾಂಗಿಲ್ಲ, ಬೇಗ ಹೊರಟು ಬಾ'- ಗಿರೀಶ ಅಕ್ಕನಿಗೆ ಫೋನ್ ಮಾಡಿದ್ದ. ಫೋನ್ ಕೆಳಗಿಟ್ಟ ಗೀತಾ ತಡಮಾಡದೆ ಬಸ್ ಹತ್ತಿದ್ದಳು. ಬಸ್ ಹತ್ತಿ ಕುಳಿತವಳಿಗೆ ಮನಸ್ಸಿನ ತುಂಬಾ ಅಪ್ಪನದೇ ನೆನಪು.
                                                                 * * *
ಬೇಲೂರಯ್ಯ-– ಗೌರಮ್ಮ ದಂಪತಿಗೆ ಗಿರೀಶ್-, ಗೀತಾ ಇಬ್ಬರೇ ಮಕ್ಕಳು. ಸಣ್ಣದೊಂದು ಸರ್ಕಾರಿ ನೌಕರಿಯಲ್ಲಿದ್ದ ಬೇಲೂರಯ್ಯನವರದ್ದು ನೆಮ್ಮದಿಯ ಜೀವನ. ಇರಲಿಕ್ಕೊಂದು ಸ್ವಂತ ಮನೆ, ಮಕ್ಕಳಿಬ್ಬರಿಗೂ ವಿದ್ಯಾಭ್ಯಾಸ. ಇವಿಷ್ಟೇ ಅವರು ಮಾಡಿದ್ದ ಆಸ್ತಿ. ಮಗನಿಗೆ  ಸರ್ಕಾರಿ ಕೆಲಸ ಸಿಕ್ಕಾಗ ಬೇಲೂರಯ್ಯನವರ ಆನಂದಕ್ಕೆ ಎಣೆಯೇ ಇರಲಿಲ್ಲ. ಅವರ ಅದೃಷ್ಟಕ್ಕೆ ಮಗಳಿಗೂ ಅನುಕೂಲವಾಗಿರೋ ಸಂಬಂಧವೇ ಸಿಕ್ಕಿತ್ತು.

ಬೇಲೂರಯ್ಯ-– ಗೌರಮ್ಮನವರದ್ದು ಅನ್ಯೋನ್ಯ ದಾಂಪತ್ಯ. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಮಕ್ಕಳ ಮನೆಗೆ ಇಬ್ಬರೂ ಒಟ್ಟಿಗೇ ಹೋಗಿ ಒಂದೆರಡು ದಿನ ಇದ್ದು ಬರುತ್ತಿದ್ದರು. ನಿವೃತ್ತರಾಗಿ ಇನ್ನೂ ಎರಡು ವರ್ಷ ಆಗಿರಲಿಲ್ಲ, ಬೇಲೂರಯ್ಯನಿಗೆ ಬಿ.ಪಿ, ಸಕ್ಕರೆ ಕಾಯಿಲೆ ಎರಡೂ ಬೆನ್ಹತ್ತಿದವು. ಚಳಿಗಾಲದಲ್ಲಿ ಉಬ್ಬಸವೂ ಭಾರಿ ತೊಂದರೆ ಕೊಡುತ್ತಿತ್ತು. ಮೊದಲೇ ಮೆತ್ತನೆಯ ಜೀವ, ಕಾಯಿಲೆ ಇರೋದು ಪತ್ತೆಯಾಗುತ್ತಲೇ ಬೇಲೂರಯ್ಯ ಇನ್ನೂ ಮೆತ್ತಗಾಗಿದ್ದರು.

ಆದರೆ ಗೌರಮ್ಮ ಹಾಗಲ್ಲ, ಗಟ್ಟಿಗಿತ್ತಿ. `ಕಾಯಿಲೆ ಏನು ಮನುಷ್ಯರಿಗೆ ಬರದೇ ಮರಕ್ಕೆ ಬರುತ್ತೇನು?' ಎನ್ನುತ್ತಾ ಗಂಡನಿಗೆ ಧೈರ್ಯ ಹೇಳುತ್ತಿದ್ದರು. ಎಷ್ಟೇ ಕೆಲಸವಿದ್ದರೂ ಗಂಡನ ಸೇವೆ ತಪ್ಪಿಸುತ್ತಿರಲಿಲ್ಲ. `ಇಬ್ರೂ ಇಲ್ಲೇ ಬಂದು ಬಿಡಿ' ಎಂದು ಬೆಂಗಳೂರಿನಲ್ಲಿದ್ದ ಮಗ ಫೋನ್ ಮಾಡ್ದಾಗಲೆಲ್ಲ ಹೇಳುತ್ತಲೇ ಇದ್ದ. `ಕೈಲಾಗ್ದಿದ್ದ ಕಾಲಕ್ಕೆ ಬರೋಣ ಬಿಡಪ್ಪ' ಎಂದು ಗೌರಮ್ಮ ನಯವಾಗೇ ತಿರಸ್ಕರಿಸುತ್ತಿದ್ದರು. ಅದ್ಯಾಕೋ ದಂಪತಿಗೆ ಆ ಊರು-, ಮನೆ ಬಿಡಲು ಮನಸ್ಸಿರಲಿಲ್ಲ.

                                                                      * * *
ಗೀತಾಗೆ ಕಣ್ಣು ಮುಚ್ಚಿದರೆ ಅಮ್ಮನ ಮುಖವೇ ಎದುರು ಬಂದಂತಾಗುತ್ತಿತ್ತು. ಅಮ್ಮ ಒಂಟಿಯಾಗುವಳಲ್ಲ ಎನ್ನುವುದೇ ಅವಳ ವೇದನೆ. ಬಸ್ ಇಳಿದವಳೇ ಆಟೊ ಹಿಡಿದು ಅಮ್ಮನ ಮನೆಗೆ ಧಾವಿಸಿದಳು. ಬೇಲೂರಯ್ಯನವರ ಪಾರ್ಥಿವ ಶರೀರವನ್ನು ಮುಂದಿನ ರೂಮ್‌ನಲ್ಲೇ ಇರಿಸಲಾಗಿತ್ತು. ಅಲ್ಲೇ ಪಕ್ಕದಲ್ಲಿ ಕಣ್ಣಾಲಿಗಳನ್ನು ತುಂಬಿಕೊಂಡು ಕುಳಿತಿದ್ದ ಅಮ್ಮನನ್ನು ಕಂಡು ಗೀತಾಗೆ ಕರುಳು ಹಿಂಡಿದಂತಾಯಿತು. ಅಮ್ಮನನ್ನು ತಬ್ಬಿಕೊಂಡ ಗೀತಾಳ ಅಳು ಮುಗಿಲು ಮುಟ್ಟಿತ್ತು. ಗೌರಮ್ಮನೇ ಮಗಳನ್ನು ಸಮಾಧಾನಿಸತೊಡಗಿದರು.

`ಯಾಕವ್ವ ಅಳ್ತೀ? ನನ್ನ ಮುಂದೆ ನಿಮ್ಮಪ್ಪ ಹೋಗಿದ್ದೇ ಚಲೋ ಆಯ್ತು ನೋಡು. ಅವರಿದ್ದು ನಾನೇನಾರಾ ಹೋಗಿದ್ರೆ ಏಟ್ ಕಷ್ಟ ಆಗ್ತಿತ್ತವ್ವಾ? ಅವರಿಗ್ಯಾರು ಹೊತ್ತಿಗ್ ಸರಿಯಾಗಿ ಗುಳಿಗಿ ಕೊಡ್ತಿದ್ರು, ನೀರ್ ಕಾಯ್ಸಿ ಕೊಡ್ತಿದ್ರು, ದಿನಾ ವಾಕಿಂಗ್‌ಗೆ,  ತಿಂಗಳಿಗೊಂದ್ ಸಲ ಆಸ್ಪತ್ರಿಗೆ ಯಾರ್ ಕರಕೊಂಡ್‌ ಹೋಗ್ತಿದ್ರು ಹೇಳು? ನಂದೇನು... ಗಟ್ಟಿಗಿದ್ದೀನಿ ನಡೆಯುತ್ತೆ. ನೀ ಅಳ್‌ಬ್ಯಾಡ, ಸುಮ್‌ನಿರವ್ವ...'
ಅಮ್ಮನ ಪ್ರಾಯೋಗಿಕ ವಿಚಾರ ಶೈಲಿ ಹಾಗೂ ಅಪ್ಪನ ಬಗೆಗಿನ ಕಾಳಜಿಯ ಮಾತುಗಳು ಗೀತಾಳನ್ನು ಮೂಕವಿಸ್ಮಿತಳನ್ನಾಗಿಸಿದವು. ತಾಯಿಯ ಸಕಾರಾತ್ಮಕ ಚಿಂತನೆ ಮತ್ತು ಭಾವನಾತ್ಮಕ ಸಬಲತೆಯನ್ನು ಕಂಡು ಮೆಚ್ಚುಗೆ ಮೂಡಿತ್ತು.

-ಡಾ. ವಿನಯಾ ಶ್ರೀನಿವಾಸ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.