ADVERTISEMENT

ಜಾಗೃತಗೊಳ್ಳುತ್ತಿದೆ ಪುರುಷ ಸಂಘಟನೆ!

ಶೋಭಾ ಎಚ್.ಜಿ.
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

`ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯವಾದರೆ ಕಾನೂನಿದೆ, ಆಯೋಗಗಳಿವೆ. ಆದರೆ, ಮಹಿಳೆಯರಿಂದ ಪುರುಷರಿಗೆ ತೊಂದರೆಯಾದರೆ ಯಾವ ಕಾನೂನಿದೆ? ಇದರ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಾಂಬರಿಸಿ ಕಾನೂನು ರೂಪಿಸಬೇಕಲ್ಲವೇ?'- ಇದು 30ಕ್ಕೂ ಹೆಚ್ಚು ಗಂಡಂದಿರು ತಮ್ಮ ಮಡದಿಯರಿಂದ ಅನುಭವಿಸಿದ ನೋವು, ಕಿರುಕುಳವನ್ನು ತೆರೆದಿಟ್ಟ ಪರಿ.

ಕರ್ನಾಟಕ ರಾಜ್ಯ ಪುರುಷರ ರಕ್ಷಣಾ ಸಮಿತಿ ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ವೈವಾಹಿಕ ಕಾನೂನು ತಿದ್ದುಪಡಿ' ಕುರಿತ ವಿಚಾರ ಸಂಕಿರಣದಲ್ಲಿ ಹಲವು ಪುರುಷರು ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡರು.

`ಸಾಕಷ್ಟು ಕುಟುಂಬಗಳಲ್ಲಿ ಬುದ್ಧಿ ಹೇಳಬೇಕಾದ ಅಪ್ಪ- ಅಮ್ಮ ಜವಾಬ್ದಾರಿ ಮರೆತು, ಮಗಳ ಬೆಂಬಲಕ್ಕೆ ನಿಂತು ಸಂಸಾರ ಒಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಸಣ್ಣ ವಿಚಾರಗಳಿಗೂ ಕೋರ್ಟ್ ಮೆಟ್ಟಿಲೇರಿ ಗಂಡ ಮತ್ತು ಅವನ ಮನೆಯವರನ್ನೆಲ್ಲ ಕಟಕಟೆಗೆ ತಂದು ನಿಲ್ಲಿಸುವ ಹೆಣ್ಣು ಮಕ್ಕಳನ್ನು ಯಾವ ಶಿಕ್ಷೆಗೆ ಗುರಿಪಡಿಸುವಿರಿ' ಎಂಬುದು ಅವರ ಪ್ರಶ್ನೆಯಾಗಿತ್ತು.

`ಕೌಟುಂಬಿಕ ಮನಸ್ತಾಪಕ್ಕೆ ಗಂಡ- ಹೆಂಡತಿ ಇಬ್ಬರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ದುಡಿಯುವ ಹೆಂಡತಿಯನ್ನೂ ಆರ್ಥಿಕವಾಗಿ ಪಾಲುದಾರಳನ್ನಾಗಿ ಮಾಡಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ ಮಹಿಳೆಯರ ಪರ ಇರುವ ಐಪಿಸಿ 498ಎ ಕಾಯ್ದೆಗೆ ತಿದ್ದುಪಡಿ ತರಬೇಕು' ಎಂದು ನೊಂದ ಪುರುಷರು ಒಕ್ಕೂರಲಿನಿಂದ ಒತ್ತಾಯಿಸಿದರು. 
ಕಳೆದ ವರ್ಷ ಇದೇ ಹೊತ್ತಿಗೆ ನಡೆದಿದ್ದ ಸಂಕಿರಣದಲ್ಲಿ ನೂರಾರು ಪುರುಷರ ಜೊತೆಗೆ, 498ಎ ಕಾಯ್ದೆಯಡಿ ಶಿಕ್ಷೆಗೊಳಗಾದ ಅತ್ತೆಯಂದಿರೂ ತಮ್ಮ ಅಳಲು ತೋಡಿಕೊಂಡಿದ್ದರು.

ಇದೇ ರೀತಿ ದಶಕಗಳ ಹಿಂದೆಯೂ ಮಹಿಳೆ (ಸೊಸೆ) ಗೋಳಾಡುತ್ತಿದ್ದಳು. ಆಗ ಮಹಿಳಾ ಪರ ಸಂಘಟನೆಗಳು ನಡೆಸಿದ ಸತತ ಹೋರಾಟದಿಂದಲೇ `ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005' ಜಾರಿಗೆ ಬಂದದ್ದು. ಇದರಿಂದ ಅನೇಕ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಎಗ್ಗಿಲ್ಲದೇ ಹೆಂಡತಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಗಂಡಂದಿರಿಗೆ ಹೆದರಿಕೆ ಆರಂಭವಾಗಿದ್ದು ಅಲ್ಲಿಂದಲೇ.

ಶೋಷಿತ ತಹಶೀಲ್ದಾರ್

ವರದಕ್ಷಿಣೆ ತೆಗೆದುಕೊಳ್ಳದೇ ಮದುವೆಯಾದ ತಹಶೀಲ್ದಾರ್ ಒಬ್ಬರ ಪ್ರಕಾರ ಅವರ ಕಥೆ ಹೀಗಿದೆ: ಮದುವೆಯಾದ ಕೇವಲ 23 ದಿನಗಳಲ್ಲೇ ಹೆಂಡತಿ ಬೇರೆ ಮನೆ ಮಾಡುವಂತೆ ತಾಕೀತು ಮಾಡಿ ತವರಿಗೆ ಹೋದಳು.

ನಂತರ ಗಂಡ ಮತ್ತು ಆತನ ವಯಸ್ಸಾದ ತಂದೆ ತಾಯಿಯ ಮೇಲೆ ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದಳು. ಗಂಡನಿಗೆ ಬೇರೆ ಹುಡುಗಿಯ ಜೊತೆ ಸಂಬಂಧ ಇದೆ ಎಂದು ಆತ ಕೆಲಸ ಮಾಡುವೆಡೆಯಲ್ಲೆಲ್ಲ ಅಪಪ್ರಚಾರ ಮಾಡಿಸಿದಳು, ಪತ್ರಿಕೆಯಲ್ಲಿ ಬರುವ ಹಾಗೆ ಮಾಡಿದಳು.

ADVERTISEMENT

ಎರಡು ವರ್ಷ ಇದನ್ನು ಸರಿಮಾಡಲು ಓಡಾಡಿದ ಗಂಡ, ಇನ್ನು ತನಗೆ ಆಕೆ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕೇಸ್ ದಾಖಲಿಸಿ 4 ವರ್ಷ ಕಳೆದಿದೆ. ಇದರ ಮಧ್ಯೆ ಅವರಿಗೊಂದು ಮಗುವೂ ಆಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಮೂರು ಕಡೆ ಪ್ರಕರಣ ಎದುರಿಸುತ್ತಿರುವ ತಹಶೀಲ್ದಾರ್ ಬಡ್ತಿಯಿಂದಲೂ ವಂಚಿತರಾಗಿದ್ದಾರೆ.

ಈಗ ಅವರ ಪ್ರಶ್ನೆಗಳೆಂದರೆ- ಕಷ್ಟಪಟ್ಟು ಬೆಳೆಸಿರುವ ತಂದೆ-ತಾಯಿಗೆ ಕೊನೆಗಾಲದಲ್ಲಿ ಮಗನ ಗೋಳಾಟವನ್ನು ನೋಡಬೇಕಾದ ಮತ್ತು ತಾವೂ ಕೋರ್ಟ್ ಕಟೆಕಟೆಯಲ್ಲಿ ನಿಲ್ಲಬೇಕಾದ ಕರ್ಮ ಯಾಕಾಗಿ? ಹಾಗಿದ್ದರೆ ನಮಗೆ ಯಾವುದೇ ಕಾನೂನುಗಳಿಲ್ಲವೇ?

ಆಕೆ ಹೆಣ್ಣು ಎಂದು ಯೋಚಿಸುವವರಿಗೆ, ಮಗನಿಗೆ ಒದಗಿದ ದುರ್ಗತಿ ಕಂಡು  ಮರುಗುತ್ತಿರುವ ನನ್ನ ತಾಯಿಯೂ ಒಬ್ಬಳು ಹೆಣ್ಣು ಎಂಬುದು ತಿಳಿಯುವುದಿಲ್ಲವೇಕೆ? ಸೊಸೆಗೊಂದು ನ್ಯಾಯ- ಅತ್ತೆಗೊಂದು ನ್ಯಾಯವೇ?

ಗಂಡ ಕೆಲಸಕ್ಕೆ ರಾಜೀನಾಮೆ ಕೊಟ್ಟರೆ ನಾನು ಡೈವೋರ್ಸ್ ಕೊಟ್ಟು ಕೇಸ್ ವಾಪಸ್ ಪಡೆಯುತ್ತೇನೆ ಎನ್ನುವ ಹೆಂಡತಿಯ ವಿಕೃತ ಮನೋಭಾವಕ್ಕೆ ಏನೆನ್ನಬೇಕು?

ಆದರೆ ಕೆಲ ಹೆಣ್ಣು ಮಕ್ಕಳು ಈ ಕಾಯ್ದೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡ ಪರಿಣಾಮವಾಗಿ ಇಂದು ಪುರುಷ ಸಂಘಟನೆಗಳು ತಲೆ ಎತ್ತುವಂತಾಗಿದೆ. ತಮಗೊಂದು ಪುರುಷ ಆಯೋಗ ಬೇಕು, ಪುರುಷ ಕಲ್ಯಾಣ ಇಲಾಖೆ ಬೇಕು, ಮಹಿಳಾ ಪರ ಕಾನೂನುಗಳಿಗೆ ತಿದ್ದುಪಡಿ ತರಬೇಕು ಎಂದು ಕೇಳುವಂತಾಗಿದೆ.

ಅಷ್ಟೇ ಅಲ್ಲದೆ, ಇಂತಹ ಪುರುಷ ಪರ ಸಂಕಿರಣಗಳ ಸಂಖ್ಯೆಯೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಶ್ಲೇಷಣೆ ಮಾಡ ಹೊರಟವರಿಗೆ ಕೆಲವು ಭಯಾನಕ ಸತ್ಯಗಳು ಗೋಚರಿಸಿವೆ. ಮಹಿಳಾ ಪರ ಹೋರಾಟಗಾರರು ಸಹ, ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ಎಂದು ಪ್ರಶ್ನಿಸುವಂತೆ ಆಗಿದೆ.

ಪುರುಷ ಅಥವಾ ಅವನ ಸಂಬಂಧಿಕರು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದು ಸಾಬೀತಾದರೆ 498ಎ ಅಡಿ ನ್ಯಾಯಾಲಯ ಮೂರು ವರ್ಷದವರೆಗೆ ಶಿಕ್ಷೆ ನೀಡಬಹುದು.

ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿದ್ದ ಈ ಕಾಯ್ದೆ ಕೆಲವೊಮ್ಮೆ ದಾರಿ ತಪ್ಪುತ್ತಿರುವುದೇಕೆ ಎಂದು ಗಂಭೀರವಾಗಿ ಯೋಚಿಸಬೇಕಾದ ಸಮಯ ಈಗ ಬಂದಿದೆ.

ಎಷ್ಟೇ ಮಹಿಳಾ ಪರ ಕಾನೂನುಗಳಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಎಲ್ಲೋ ಒಂದು ಕಡೆ, ಯಾವುದೋ ಸಂದರ್ಭದಲ್ಲಿ ಗಂಡಿನಿಂದ ಶೋಷಣೆಗೆ ಒಳಗಾಗುತ್ತಲೇ ಇದ್ದಾಳೆ. ದುರದೃಷ್ಟವಶಾತ್ ಕೆಲವು ಮಹಿಳೆಯರು ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಕೆಲವು ಪುರುಷರೂ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.

ಕಳೆದ ಆಗಸ್ಟ್ 27ರಂದು ಹೈಕೋರ್ಟ್, ಹೀಗೆ ಕಾನೂನು ದುರ್ಬಳಕೆ ಮಾಡಿಕೊಂಡ ಪ್ರಕರಣವೊಂದರ ವಿಚಾರಣೆ ವೇಳೆ, ಕಾಯ್ದೆಯ ತಿದ್ದುಪಡಿಗೆ ಸರ್ಕಾರದ ಅಭಿಪ್ರಾಯ ಕೇಳಿರುವುದು ಗಂಭೀರ ವಿಷಯ. ಕೆಲ ಹೆಣ್ಣು ಮಕ್ಕಳ ಸ್ವಾರ್ಥದಿಂದ ಲಕ್ಷಾಂತರ ಹೆಣ್ಣು ಮಕ್ಕಳು ಇಂತಹದ್ದೊಂದು ಪ್ರಬಲ ಕಾಯ್ದೆಯಿಂದ ವಂಚಿತರಾಗಬೇಕಾಗಿ ಬರಬಹುದೇನೋ ಎಂಬ ಆತಂಕ ಸಹ ಎದುರಾಗಿದೆ.

`ಸರ್ಕಾರ ಮಹಿಳೆಯರ ಪರವಾಗಿ ಜಾರಿಗೆ ತಂದಿರುವ ಕಾನೂನನ್ನೇ ಮುಂದಿಟ್ಟುಕೊಂಡು ಎಷ್ಟೋ ಮಹಿಳೆಯರು ಸಲ್ಲದ ರಾದ್ದಾಂತ ಮಾಡುತ್ತಾರೆ. ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ ಗಂಡನನ್ನು, ಅವನ ಕುಟುಂಬದವರನ್ನು ಬ್ಲಾಕ್‌ಮೇಲ್ ಮಾಡುತ್ತಾರೆ. ವಿಚ್ಛೇದನ ಕೊಡುವುದಕ್ಕೂ ಒಪ್ಪದೆ ಮಾನಸಿಕವಾಗಿ ಹಿಂಸಿಸುತ್ತಾರೆ. ಮಹಿಳೆಯರು ದೂರು ಕೊಟ್ಟರೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಅದೇ ಪುರುಷರು ಕೊಟ್ಟರೆ ಅವರನ್ನೇ ಜೈಲಿಗೆ ತಳ್ಳುತ್ತಾರೆ' ಎನ್ನುವುದು ಶೋಷಿತ ಪುರುಷರ ಅಳಲು.

ಹೀಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುವವರಲ್ಲಿ ಹೆಚ್ಚು ಮಂದಿ ಶಿಕ್ಷಿತರು, ಉನ್ನತ ಹುದ್ದೆಯಲ್ಲಿ ಇರುವವರು, ಸಾಫ್ಟ್‌ವೇರ್ ಉದ್ಯೋಗಿಗಳು, ಶಿಕ್ಷಕರು, ಉದ್ಯಮಿಗಳು. ಕೆಲವು ಕಿರುತೆರೆ ಕಲಾವಿದರು ಸಹ ಹೆಂಡತಿ ಮತ್ತು ಆಕೆಯ ಮನೆಯವರಿಂದ ಅನುಭವಿಸಿದ ಮಾನಸಿಕ ನೋವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.

ಯಾಕೆ ಹೀಗೆ?
`ಪತಿ-ಪತ್ನಿ ಒಂದಾದ ಭಕ್ತಿ ಹಿತವಪ್ಪುದು ಶಿವಂಗೆ' ಎಂದಿದ್ದಾರೆ ಶರಣರು. ಪೂಜೆ ಮಾಡುವುದರಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಗಂಡ ಹೆಂಡತಿ ಸಂಬಂಧ ಅನ್ಯೋನ್ಯವಾಗಿರಬೇಕು ಎಂದು ಅಂದೇ ವಚನಕಾರರು ಹೇಳಿದ್ದರು.

ಹಿಂದೂ ಧರ್ಮದಲ್ಲಿ ವಿವಾಹ  ಪವಿತ್ರವಾದ ಬಂಧ. ಆದರೆ ಇಂದು ಮದುವೆ ವ್ಯಾಪಾರವಾಗಿದೆ. ಬಹುತೇಕ ಗಂಡು- ಹೆಣ್ಣು ಪರಸ್ಪರರಿಂದ ತಮಗೇನು ಲಾಭ ಎಂದೇ ಯೋಚಿಸಿ ಮದುವೆಯಾಗುತ್ತಿದ್ದಾರೆ.

ವಿವಾಹ ಕೇವಲ ಗಂಡು-ಹೆಣ್ಣಿನ ಮಿಲನವಲ್ಲ. ಅದು ಜೀವನದ ಒಂದು ಮಗ್ಗುಲು. ಎರಡು ಕುಟುಂಬಗಳ ಬಂಧು-ಬಾಂಧವರು, ಸಮಾಜ ಎಲ್ಲವನ್ನೂ ಒಳಗೊಂಡು ಬದುಕುವ ವ್ಯವಸ್ಥೆ. ಇಲ್ಲಿ ಮಹಿಳೆಗೆ ಹೆಚ್ಚು ಪ್ರಾಶಸ್ತ್ಯ, ಆಕೆ ಕುಟುಂಬದ ಕಣ್ಣು. ವಿಪರ್ಯಾಸವೆಂದರೆ, ಇಂದು ನಮ್ಮ ಕೆಲವು ವಿದ್ಯಾವಂತ ದುಡಿಯುವ ಹೆಣ್ಣು ಮಕ್ಕಳಿಗೆ ಇಂತಹ ವ್ಯವಸ್ಥೆ ಬೇಕಿಲ್ಲ.

ಸಮಾಜ, ಬಂಧು ಬಳಗ ಹಾಗಿರಲಿ ಪತಿಯಾಗುವವನ ಹೆತ್ತವರು ಕೂಡಾ ಬೇಡ. ತಾನು, ತನ್ನ ಗಂಡ ಇಷ್ಟೇ ಪ್ರಪಂಚ (ತನ್ನ ಹೆತ್ತವರು ಮಾತ್ರ ಬೇಕು) ಗಂಡ- ಹೆಂಡತಿ ಮಧ್ಯೆ ಸಮಸ್ಯೆ ಸಹಜ. ಆದರೆ ಅವರು ತಮಗೆ ಬೇಕಾದಾಗ, ಬೇಕಾದಂತೆ ಪರಸ್ಪರರನ್ನು ಬದಲಾಯಿಸಬಹುದು ಎಂಬ ಮನೋಭಾವ ಬೆಳೆಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿ ಅನೇಕ ವಿವಾಹ ವಿಚ್ಛೇದನಗಳು ನಮ್ಮ ಕಣ್ಣ ಮುಂದಿವೆ.

ಇಲ್ಲಿ ಪ್ರಮುಖವಾಗಿ ಉಲ್ಲೇಖಿಸ ಹೊರಟಿರುವುದು ಹೆತ್ತವರು ಮಕ್ಕಳನ್ನು ಬೆಳೆಸುವ ರೀತಿಯ ಬಗ್ಗೆ. ನಮ್ಮ ಸಂಸ್ಕೃತಿ- ಸಂಪ್ರದಾಯದ ಬಗ್ಗೆ ತಿಳಿವಳಿಕೆ ನೀಡದಿರುವುದು, ಒಟ್ಟು ಕುಟುಂಬದ ಹಾಗೂ ಅದರ ಸಾಫಲ್ಯತೆಯ ಅರಿವು ಉಂಟು ಮಾಡದಿರುವುದು ಮುಖ್ಯ ಕಾರಣ. ಜಾಗತೀಕರಣದಿಂದ ಜೀವನ ನವೀಕರಣ ಪಡೆಯಬೇಕೇ ಹೊರತು, ಎಲ್ಲ ಸಂಸ್ಕಾರಗಳನ್ನೂ ಮರೆತು ಬದುಕುವುದಲ್ಲ. ವಿದೇಶಿಯರು ಭಾರತೀಯ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಆದರೆ ಪಾಶ್ಚಾತ್ಯೀಕರಣಗೊಂಡಿದ್ದೇವೆ ಎಂದು ಹೇಳುವ ಅನೇಕರಿಗೆ ನಮ್ಮ ಭಾರತೀಯ ಸಂಸ್ಕೃತಿ ಎಷ್ಟು ಉನ್ನತವಾದುದು, ಅದನ್ನು ಅಳವಡಿಸಿಕೊಳ್ಳುವಲ್ಲಿ ನಾವು ಹೇಗೆ ಸೋಲುತ್ತಿದ್ದೇವೆ ಎಂಬುದು ತಿಳಿಯುತ್ತಿಲ್ಲ.

ಮಗು ಚಿಕ್ಕದಾಗಿರುವಾಗ ತಾಯಿ ತಂದೆ ನೀಡುವ ಸಂಸ್ಕಾರ ಕೊನೆಯ ತನಕ ಉಳಿಯುತ್ತದೆ. ಆಧುನಿಕ ಬದುಕಿಗೆ ಮಾರುಹೋಗಿರುವ ಹಲವು ಹೆತ್ತವರು, ದುಡಿಯುವ ಹಂಬಲದಲ್ಲಿ ಮಕ್ಕಳ ಭವಿಷ್ಯ ಮರೆಯುತ್ತಿದ್ದಾರೆ. ಮಕ್ಕಳಿಗಾಗೇ ನಾವು ದುಡಿಯುತ್ತಿದ್ದೇವೆ ಎಂಬ ಧೋರಣೆ ಅವರಲ್ಲಿ ಕಂಡುಬರುತ್ತದೆ. ಆದರೆ ಆ ಮಗುವಿನ ಮಾನಸಿಕ ವ್ಯವಸ್ಥೆ, ಅದರ ಭಾವನೆಗಳ ಬಗ್ಗೆ ಯೋಚಿಸದೆ, ತಮ್ಮ ನಿಲುವುಗಳನ್ನು ಒತ್ತಡದಿಂದ ಹೇರಲು ಮುಂದಾಗುತ್ತಾರೆ.

ಮುಂದೆ ಅದೇ ಮಗು ಸಮಾಜಕ್ಕೆ, ರಾಷ್ಟ್ರಕ್ಕೆ ಹೇಗೆ ಮಾರಕ ಆಗಬಲ್ಲದು ಎಂದು ಯೋಚಿಸುವ ಶಕ್ತಿಯನ್ನೇ ಹೆತ್ತವರು ಕಳೆದುಕೊಂಡಿರುತ್ತಾರೆ. ತಮ್ಮ ಪ್ರತಿಷ್ಠೆ, ಅಹಂನಿಂದ ಮಕ್ಕಳ ಜೀವನವನ್ನಷ್ಟೇ ಅಲ್ಲದೆ, ಸಮಾಜದ ಸ್ವಾಸ್ಥ್ಯವನ್ನೂ ಕದಡಲು ಕಾರಣರಾಗುತ್ತಿದ್ದಾರೆ.

ಇದಕ್ಕೊಂದು ಉದಾಹರಣೆ: ಇತ್ತೀಚೆಗೆ ಒಬ್ಬ ತಾಯಿ ತನ್ನ ಮಗಳನ್ನು ಸಂಪ್ರದಾಯಸ್ಥ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಳು. (ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು) ಮದುವೆಯಾದ ಒಂದೇ ತಿಂಗಳಲ್ಲಿ ಮಗಳು ತನಗೆ ಅಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲ, ಬೇರೆ ಮನೆ ಮಾಡಬೇಕೆಂದು ಹಟ ಹಿಡಿದಳು. ತಾಯಿಯ ಮನೆಯಲ್ಲಿ ಇದ್ದುಕೊಂಡೇ ಪೊಲೀಸರಲ್ಲಿ ದೂರು ದಾಖಲಿಸಿದಳು.

ಒಂದೋ ಬೇರೆ ಮನೆ ಮಾಡಬೇಕು, ಇಲ್ಲದಿದ್ದರೆ ಗಂಡನನ್ನು ಕಿರುಕುಳದ ಆಧಾರದ ಮೇಲೆ ಬಂಧಿಸಬೇಕು ಎಂಬುದು ಅವಳ ಬೇಡಿಕೆಯಾಗಿತ್ತು. ಗಂಡನ ಜೊತೆಗೆ ಅವನ ವಯಸ್ಸಾದ ತಂದೆ-ತಾಯಿ, ಅಣ್ಣ- ಅತ್ತಿಗೆ, 4 ವರ್ಷದ ಮಗು ಎಲ್ಲರ ಮೇಲೂ ಕೇಸು ದಾಖಲಾಯಿತು.

ಇಬ್ಬರು ಸ್ವಾರ್ಥ ಹೆಂಗಸರಿಂದ ಇಡೀ ಕುಟುಂಬ ಕಳೆದ 8-10 ತಿಂಗಳಿನಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಹೆಂಡತಿಯಿಂದ ಮನೆಯವರಿಗೆಲ್ಲ ತೊಂದರೆ ಆಗುತ್ತಿರುವುದನ್ನು ನೋಡಲಾರದೆ ಗಂಡ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದಾನೆ.

ಇದನ್ನೆಲ್ಲ ನೋಡಿದಾಗ ಕಣ್ಣ ಮುಂದೆ ಬರುವುದು ನಮ್ಮ ಭಾರತೀಯ ಕೌಟುಂಬಿಕ ಪದ್ಧತಿ. ಅದು ಹಿಂದೆ ಹೇಗಿತ್ತು, ಇಂದು ಹೇಗಾಗಿದೆ? ಆರ್ಥಿಕ ಸ್ವಾತಂತ್ರ್ಯ ಬಂದಾಕ್ಷಣ ಹೆಣ್ಣಾಗಲೀ ಗಂಡಾಗಲೀ ಸಂಸ್ಕೃತಿಯನ್ನು ಧಿಕ್ಕರಿಸಿ ಬದುಕಬೇಕೆಂದಿಲ್ಲ. ಸಹಬಾಳ್ವೆಯ ಚೌಕಟ್ಟಿನಲ್ಲಿ ಬದುಕಿದಾಗ ಸಿಗುವ ತೃಪ್ತಿ-ಸಂತೋಷ ಬೇರೆಲ್ಲಿ ಸಿಗುತ್ತದೆ? ಲಕ್ಷಾಂತರ ದುಡಿದರೂ ನೆಮ್ಮದಿ ಇಲ್ಲದ ಬದುಕು ಯಾತಕ್ಕಾಗಿ? ಇಲ್ಲದಿದ್ದರೆ ಮದುವೆ ಆಗುವಾಗಲೇ ಒಂಟಿ ಹುಡುಗನನ್ನೋ ಅಥವಾ ಹುಡುಗಿಯನ್ನೋ ಹುಡುಕಿ ಆಗಬೇಕು ಅಥವಾ ಒಂಟಿ ಜೀವನ ನಡೆಸಬೇಕು.

ತನ್ನ ಸ್ವಾರ್ಥಕ್ಕೆ ಇನ್ನೊಂದು ಕುಟುಂಬದ ಸ್ವಾಸ್ಥ್ಯ ಕೆಡಿಸುವ ಅಧಿಕಾರವಾಗಲಿ, ಹಕ್ಕಾಗಲಿ ಪುರುಷ ಅಥವಾ ಮಹಿಳೆ ಇಬ್ಬರಿಗೂ ಇರುವುದಿಲ್ಲ.ಸಂಗ್ಯಾ ಬಾಳ್ಯ, ಪತ್ನಿ ಪೀಡಕರ ಸಂಘದಂತಹ ಅನೇಕ ಪುರುಷ ಪರ ಸಂಘಟನೆಗಳು ಈಗ ದೇಶದಾದ್ಯಂತ ತಲೆ ಎತ್ತಿವೆ. ಅದಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳೂ ಇದ್ದು, ವಿಷಯದ ಗಾಂಭೀರ‌್ಯವನ್ನು ಸೂಚಿಸುತ್ತಿವೆ. ವ್ಯವಸ್ಥೆ ಇನ್ನಷ್ಟು ಹಾಳಾಗುವ ಮುಂಚೆಯೇ ಸಮಾಜ ಎಚ್ಚೆತ್ತುಕೊಳ್ಳಬೇಕು. ಅದಕ್ಕಾಗಿ ಕುಟುಂಬ ವ್ಯವಸ್ಥೆಯ ಬಗ್ಗೆ ತಿಳಿಹೇಳುವ ಸಾಮಾಜಿಕ ಆಂದೋಲನವೇ ರೂಪುಗೊಳ್ಳಬೇಕು.

ಸಾಕಷ್ಟು ಸಂಪಾದನೆ, ವಾಹನ, ಮೋಜು... ಅದರಾಚೆಗೆ ಚಿಂತನೆ ಇಲ್ಲದಿದ್ದರೆ ಎಲ್ಲ ಸಂಪತ್ತಿನ ಜೊತೆಗೆ ಏಕತಾನತೆಯ ದಿನಚರಿಯಿಂದ ಮಾನಸಿಕ ಬಳಲಿಕೆ, ಒತ್ತಡ ಇದ್ದದ್ದೇ. ಇವೆಲ್ಲದರಿಂದ ಜೀವನಕ್ಕೆ ನೆಮ್ಮದಿ ಇಲ್ಲವಾಗುತ್ತದೆ. ದೌರ್ಜನ್ಯ ಯಾರ ಕಡೆಯಿಂದಲೇ ಆದರೂ ಅದು ಒಪ್ಪತಕ್ಕದ್ದಲ್ಲ. ಎಲ್ಲದಕ್ಕೂ ಕಾನೂನಿನಲ್ಲೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದುಕೊಳ್ಳುವುದು ಸಹ ಮೂರ್ಖತನ. ಸುಖ ಸಂಸಾರಕ್ಕೆ ಗಂಡ- ಹೆಂಡಿರ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಆಧಾರ ಎಂಬುದನ್ನು ಯಾರೂ ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.