ADVERTISEMENT

ತಂಬಾಕು ಭೀತಿ: ಜೀವನ ಪ್ರೀತಿ

ರಾಘವೇಂದೆ ಕೆ.
Published 30 ಮೇ 2014, 19:30 IST
Last Updated 30 ಮೇ 2014, 19:30 IST
ತಂಬಾಕು ಭೀತಿ: ಜೀವನ ಪ್ರೀತಿ
ತಂಬಾಕು ಭೀತಿ: ಜೀವನ ಪ್ರೀತಿ   

ಇಂದು (ಮೇ 31) ವಿಶ್ವ ತಂಬಾಕು ರಹಿತ ದಿನ. ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಮಾನವ ಸಂಪನ್ಮೂಲ ಸಂರಕ್ಷಣೆಯ ಸಂಬಂಧ 1987ರಿಂದ ಈ ದಿನವನ್ನು ಹಮ್ಮಿಕೊಂಡಿದೆ. ‘ತಂಬಾಕಿನ ಮಜಾ- ಜೀವಕ್ಕೆ ಸಜಾ’ ಎಂಬ ಮಾತು ವೈಜ್ಞಾನಿಕವಾಗಿ ಸಾಬೀತಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಭಾರತದಲ್ಲಿ  ಪ್ರತಿ ವರ್ಷ ಸುಮಾರು 10 ಲಕ್ಷ ಮಂದಿ ತಂಬಾಕು ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ತಂಬಾಕಿನ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮದಿಂದಾಗಿ ಕ್ಯಾನ್ಸರ್‌ ಹೃದ್ರೋಗ, ಮಿದುಳಿನ ರಕ್ತದ ಒತ್ತಡ, ಮೂತ್ರ ಪಿಂಡದ  ಸಮಸ್ಯೆ ಮುಂತಾದ ರೋಗಗಳಿಗೆ ಒಳಗಾಗುತ್ತಿದ್ದಾರೆ.

ದೇಶದ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಧೂಮ ಪ್ರಿಯರ ಪ್ರಮಾಣ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ತಂಬಾಕಿನ ವಿಷಚೇಳು ಹೆಣ್ಣಿರಲಿ ಗಂಡಿರಲಿ ಕುಟುಕದೆ ಬಿಡುವುದಿಲ್ಲ. ವೈದ್ಯ ವಿಜ್ಞಾನವೇ ಹೇಳಿರುವಂತೆ ತಂಬಾಕಿನಿಂದ ಹೃದ್ರೋಗ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಅಲ್ಲದೆ 18 ಬಗೆಯ ಕ್ಯಾನ್ಸರ್‌ಗಳೂ ಬರುತ್ತವೆ. ಈ ಸಂಗತಿಯನ್ನು ದೊಡ್ಡ ಪ್ರಮಾಣದಲ್ಲಿ ಜಾಹೀರು ಮಾಡಿದರೂ ತಂಬಾಕು ಸೇವಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. 

ಕೆಲವೆಡೆ ಮಹಿಳೆಯರು ಸಿಗರೇಟ್‌ ಅಪ್ಪಿದರೆ, ಬಡವರೂ, ಶ್ರಮಿಕ ಸಮುದಾಯದ ಹೆಂಗಸರು ಅಗೆಯುವ ತಂಬಾಕಿನ ವಿವಿಧ ಉತ್ಪನ್ನಗಳನ್ನು ಒಪ್ಪುತ್ತಾರೆ.  ಯುವ ಜನಾಂಗಕ್ಕೆ ಆರಂಭದಲ್ಲಿ ತಂಬಾಕು ಫ್ಯಾಷನ್‌ ರೂಪದಲ್ಲಿ ಆಕರ್ಷಣೆಯಾಗಿ ಚಟವಾಗಿ ಸ್ಥಾಯಿಗೊಂಡಿರುತ್ತದೆ. ಹಾಗಾಗಿ ಗುಂಪಾಗಿ ಸಿಗರೆಟ್‌ ಸೇದುವುದು, ಹುಕ್ಕಾ (ನಿಕೊಟಿನ್‌- ರಸಾಯನಿಕ ತುಂಬಿದ ಯಂತ್ರ) ಎಳೆಯುವ ಹುಚ್ಚು ಯುವ ಜನಾಂಗದಲ್ಲಿದೆ. 

ಆದರೆ ತಂಬಾಕಿನಲ್ಲಿನ ನಿಕೊಟಿನ್‌ ರಕ್ತದಲ್ಲಿ ನೆಲೆ ಕಂಡುಕೊಂಡರೆ ಅದರಿಂದ ಮುಕ್ತರಾಗುವುದು ಕಷ್ಟ. ಅದು ಮೆದುಳನ್ನೇ ನಿಯಂತ್ರಿಸಲು ಆರಂಭವಾಗುತ್ತದೆ. ಅದರ ಪರಿಣಾಮ ಮೇಲಿಂದ ಮೇಲೆ ಧೂಮ ಲೀಲೆಯಲ್ಲಿ ಮಿಂದೇಳಬೇಕು ಅನ್ನುವ ಬಯಕೆ ಕಾಡುತ್ತದೆ. 

ಧೂಮಪಾನದ ಕರಾಳತೆ...
ಧೂಮಪಾನ ಅನಿಷ್ಟ ಅಥವಾ ಮಾರಕದ ಪ್ರಶ್ನೆಯಾಗಿ ಯುವಕರಿಗೆ ಕಾಡುತ್ತಿಲ್ಲ. ಅದು ಟ್ರೆಂಡ್‌ ಆಗಿ ಕನವರಿಕೆಯಾಗುತ್ತಿದೆ. ತಂಬಾಕಿನ ಅಪಾಯ ಕ್ಯಾನ್ಸರ್‌ ಮಾತ್ರ ಅಲ್ಲ. ಇದು ಹತ್ತಾರು ರೀತಿಯಲ್ಲಿ ಮನಸ್ಸು ಹಾಗೂ ದೇಹವನ್ನು ಬಾಧಿಸುತ್ತದೆ. ಪರೋಕ್ಷ ‘ಧೂಮ’ ಎಳೆಯ ಮಕ್ಕಳ ಆಸ್ತಮಾಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ‘sids’ ಅಂದರೆ ಧಿಡೀರನೆ ಮಗು ಸಾವಿನ ದವಡೆಗೆ ತುತ್ತಾಗಬಹುದು ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಯೋಜನಾ ಅಧಿಕಾರಿ ಡಾ. ಪ್ರಗತಿ ಹೆಬ್ಬಾರ್‌ ಆತಂಕ ವ್ಯಕ್ತಪಡಿಸಿದರು.

ತಂಬಾಕಿನಿಂದ ಸಮಾಜಕ್ಕೆ ನಾನಾ ರೀತಿಯ ಅಪಾಯಗಳಿವೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹಲವಾರು ನಿಯಂತ್ರಣಗಳನ್ನು ಹೇರುತ್ತಲೇ ಬಂದಿದೆ. ತಂಬಾಕು ಚಟದಿಂದ ಮುಕ್ತಗೊಳಿಸುವ ಸಂಬಧ ವೈದ್ಯ ಉಪಚಾರವೂ ಇದೆ. ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ಹಲವು ಆಸ್ಪತ್ರೆ ಹಾಗೂ ಆಪ್ತ ಸಮಾಲೋಚನೆ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಮಾನಸಿಕ ಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಿದವರನ್ನು ಆಪ್ತ ಮಾತುಕತೆಯ ಮೂಲಕವೇ ತಂಬಾಕಿ ಸಹವಾಸದಿಂದ ದೂರಮಾಡಬಹುದು.
ಕೆಲವರಿಗೆ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಅಂಥವರಿಗೆ ರಸಾಯನಿಕ ಮುಕ್ತ, ನಿಕೊಟಿನ್‌ಯುಕ್ತ ಚುಯಿಂಗಮ್ ನೀಡುತ್ತಾ ಕ್ರಮೇಣ ಅದರಿಂದ ವಿಮೋಚನೆಗೊಳಿಸಲಾಗುತ್ತದೆ. ತಂಬಾಕಿನ ವ್ಯಸನದ ಅತೀರೆಕಕ್ಕೆ ಹೋದವರನ್ನು ಒಮ್ಮಿಂದೊಮ್ಮೆಲೆ ಬಿಡಿಸಿದರೆ ಕೆಲ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಉಂಟಾಗುವುದರಿಂದ ಈ ರೀತಿ ಮಾಡಲಾಗುತ್ತದೆ ಎಂದು ಡಾ. ಪ್ರಗತಿ ಹೇಳುತ್ತಾರೆ. 
(ನಿಮ್ಹಾನ್ಸ್‌ ದುಶ್ಚಟ ವಿಮೋಚನಾ ಕೇಂದ್ರ: 9480829735, 080-26995360, 26995547)

ADVERTISEMENT

ಜೀವ ಸುಡುವ ಬೆಂಕಿಯಿದು...
ಸಿಗರೆಟಿನಲ್ಲಿ ಕೇವಲ ನಿಕೊಟಿನ್‌ ಮಾತ್ರ ಇರುವುದಿಲ್ಲ. ಅದರಲ್ಲಿ ಸುಮಾರು ನಾಲ್ಕು ಸಾವಿರ ರಸಾಯನಿಕಗಳ ಮಿಶ್ರಣ ಇದೆ. ಆ ಎಲ್ಲಾ ರಸಾಯನಿಕಗಳು ಜೀವವನ್ನು ನಿರಂತರವಾಗಿ ಸುಡುತ್ತಾ ಹೋಗುತ್ತವೆ ಎಂದು ಬಿಜಿಎಸ್‌ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞ ಡಾ. ವಿಶಾಲ್‌ ರಾವ್‌ ಯು.ಎಸ್‌. ಅಭಿಪ್ರಾಯಪಡುತ್ತಾರೆ.  ಮಹಿಳೆಯರ ರಕ್ತದಲ್ಲಿ ನಿಕೊಟಿನ್‌ ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿ ಆಗಲಿ ಪ್ರವೇಶ ಪಡೆದರೆ ಅದು ತನ್ನ ಮಗುವಿನ ರಕ್ತದಲ್ಲಿಯೂ ಆಶ್ರಯ ಪಡೆಯುತ್ತದೆ. ಧೂಮಪಾನಿ ತಾಯಿ ಗರ್ಭವತಿಯಾಗಿದ್ದರೆ ಭ್ರೂಣದ ಬೆಳವಣಿಗೆ ಸಮರ್ಪಕವಾಗಿ ಆಗುವುದಿಲ್ಲ. ಕೆಲವೊಮ್ಮೆ ಇದೇ ಕಾರಣಕ್ಕೆ ಶಿಶು ಗರ್ಭ ಸಮಾಧಿಯನ್ನೂ ಹೊಂದಬಹುದು. ಇಲ್ಲವೆ ಜನನ ಸಂದರ್ಭದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಬೆಳೆಯುವ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ತಂಬಾಕು ಕೂಡ ಕಾರಣ ಅನ್ನುವುದು ಸತ್ಯ. ಧೂಮವನ್ನು ಪರೋಕ್ಷವಾಗಿ ಸೇವಿಸಿದರೂ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಸಂತಾನ ಹೀನ ಸ್ಥಿತಿ ಉಂಟಾಗಬಹುದು. ಬಾಯಿ ಕ್ಯಾನ್ಸರ್‌ ಕಾರಣಕ್ಕೆ ದಿನವೂ ದವಡೆ, ನಾಲಿಗೆ, ಗಂಟಲನ್ನು ಕತ್ತರಿಸಿ ಹಾಕುತ್ತಿದ್ದೇವೆ. ಇದಕ್ಕೆ ತಂಬಾಕು ಅಗೆಯುವುದೇ ಮೂಲ ಕಾರಣ. ಸರಿಯಾಗಿ ನೀರು ಕುಡಿಯುವುದಿಲ್ಲ. ಇದು ಗ್ಯಾಸ್ಟ್ರಿಕ್‌ ಹಾಗೂ ಅನ್ನನಾಳ ಸಂಬಂಧಿ ಕಾಯಿಲೆಯನ್ನು ತಂದೊಡ್ಡುತ್ತದೆ. ದೀರ್ಘಕಾಲ ಬಾಯಲ್ಲಿ ತಂಬಾಕು ಇಟ್ಟುಕೊಳ್ಳುವುದರಿಂದ ಆ ಭಾಗದ ಕ್ಯಾನ್ಸರ್‌ಗೆ ತುತ್ತಾಗಬಹುದು. ಋತುಚಕ್ರ ಸಮಸ್ಯೆ ಉಂಟಾಗುತ್ತದೆ. ಅದರಲ್ಲಿ ಕಾಲಾನುಕ್ರಮ ಬದಲಾಗುತ್ತದೆ. ರಕ್ತ ಸ್ರಾವದಲ್ಲಿಯೂ ಏರುಪೇರಾಗುತ್ತದೆ. ಸಾಮಾನ್ಯವಾಗಿ 45ರ ವರೆಗೂ ಗರ್ಭಧಾರಣೆಗೆ ಸಶಕ್ತವಾಗಿರುವ ಗರ್ಭಕೋಶ 40ಕ್ಕೆ ಇಳಿಯಬಹುದು ಎಂದು ಡಾ. ವಿಶಾಲ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.