ADVERTISEMENT

ತ್ರಿವಳಿ ತಲಾಖ್ ರದ್ದತಿ ಸಾಧ್ಯವೇ?

ಸಾರಾ ಅಬೂಬಕ್ಕರ್‌, ಮಂಗಳೂರು
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ತ್ರಿವಳಿ ತಲಾಖ್ ರದ್ದತಿ ಸಾಧ್ಯವೇ?
ತ್ರಿವಳಿ ತಲಾಖ್ ರದ್ದತಿ ಸಾಧ್ಯವೇ?   

ಕೇಂದ್ರ ಸರ್ಕಾರ ಹೊರತರಲಿಚ್ಚಿಸಿರುವ ತ್ರಿವಳಿ ತಲಾಖ್ ಮಸೂದೆಯಿಂದ ಮುಸ್ಲಿಂ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಬೀದಿಪಾಲು ಮಾಡುವ ಹುನ್ನಾರ ನಡೆದಿದೆಯೆಂದು ಮುಸ್ಲಿಂ ಮಹಿಳೆಯೋರ್ವರು ಇತ್ತೀಚಿಗೆ ಆರೋಪಿಸಿದ್ದಾರೆ.

‘ಇಸ್ಲಾಮಿ ಶರಿಯತ್‌ ಕಾನೂನು ಸಂಪೂರ್ಣವಾಗಿದೆ. ಇದರಲ್ಲಿ ಇನ್ನಾರದೋ ಹಸ್ತಕ್ಷೇ‍‍ಪವನ್ನು ಇಸ್ಲಾಂ ಸಹಿಸದು. ಕೇಂದ್ರ ಸರ್ಕಾರ ವಿನಾ ಕಾರಣ ಶರಿಯತ್ ಕಾನೂನಿನಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ಮುಸ್ಲಿಂ ಮಹಿಳೆಯರು ಶರಿಯತ್‌ ಕಾನೂನಿನಡಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರದ ವಕ್ರದೃಷ್ಟಿಯ ಪರಿಣಾಮ ಅದು ಇಂದು ಅಪಾಯದಲ್ಲಿದೆ. ಲೋಕಸಭೆಯಲ್ಲಿ ಮಂಡಿಸಿದ ಬಿಲ್ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಸೋಕಾಲ್ಡ್ ಸೆಕ್ಯುಲರ್ ಪಕ್ಷಗಳೂ ಇದಕ್ಕೆ ಬೆಂಬಲಿಸುತ್ತಿರುವುದು ನಮಗೆ ನೋವುಂಟು ಮಾಡಿದೆ. ರಾಜ್ಯಸಭೆಯ ಸದಸ್ಯರಿಗೆ ಇ–ಮೇಲ್ ಮಾಡುವ ಅಭಿಯಾನದ ಮೂಲಕ ಯಾವುದೇ ಕಾರಣಕ್ಕೂ ಮಸೂದೆ ಪಾಸ್ ಆಗದಂತೆ ತಡೆಯುತ್ತೇವೆ’ ಎಂಬುದು ಈ ಮಹಿಳೆಯ ನಿರ್ಧಾರ!

ಮುಸ್ಲಿಂ ಮಹಿಳೆಯರಿಂದಲೇ ಇಂತಹ ಲೇಖನಗಳನ್ನು ಬರೆಸುವುದರ ಮೂಲಕ ಈ ಸಮಾಜದ ಪುರುಷರಿಗೆ ಸರಿಸಮಾನರಾದವರು ಯಾರು ಇರಲಾರರು. ಅವರ ಮಗಳಿಗೇ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಾದಾಗ ಮಾತ್ರವಷ್ಟೆ ಅವರು ಎಚ್ಚರಗೊಳ್ಳಬಹುದು.

ADVERTISEMENT

ಮುಸ್ಲಿಂ ಪುರುಷರು ಶಾಬಾನು ಎಂಬ ಮಹಿಳೆಗೆ ಜೀವನಾಂಶ ದೊರೆಯಬಾರದೆಂದು ಇಡೀ ದೇಶದ ಮುಸ್ಲಿಂ ಪುರುಷರನ್ನು ಆ ಮಹಿಳೆಯ ವಿರುದ್ಧ ಎತ್ತಿಕಟ್ಟಿ ಆಕೆಗೆ ಜಾತಿಯಿಂದ ಬಹಿಷ್ಕಾರ ಹಾಕುವಲ್ಲಿಯವರೆಗೆ ಹೋರಾಡಿದ್ದಾರೆ. ತನಗೆ ಮತ್ತು ಮಕ್ಕಳಿಗೆ ಬದುಕಲು ತಿಂಗಳಿಗೆ 185 ರೂಪಾಯಿ ಸಾಕಾಗುವುದಿಲ್ಲ; ಜೀವನಾಂಶ ಕೊಂಚ ಜಾಸ್ತಿ ಮಾಡಬೇಕೆಂದು ಆಕೆ ನ್ಯಾಯವಾದಿಯಾಗಿದ್ದ ತನ್ನ ವಿಚ್ಛೇದಿತ ಗಂಡನ ವಿರುದ್ಧ ಹೈಕೋರ್ಟಿಗೆ ಹೋದದ್ದೇ ಮಹಾಪರಾಧವೆಂಬಂತೆ ಆಕೆಯನ್ನು ಸಮಾಜದಿಂದಲೇ ದೂರೀಕರಿಸಲಾಯಿತು. ಅಂದು ತಲಾಖ್ ಆದ ಬಳಿಕ ಜೀವನಾಂಶ ಕೊಡುವುದು ಅಧಾರ್ಮಿಕವೆಂದು ವಾದಿಸಿ ಈ ಜನರು ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ತಲೆ ತಿರುಗಿಸಿದ್ದರು.

ಇಂದು ಅದೇ ಜನರು ತಲಾಖ್ ಹೇಳಿದ ಗಂಡನಿಗೆ ಜೈಲು ಶಿಕ್ಷೆ ನೀಡಿದರೆ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಎಂದು ತಮ್ಮ ವಾದವನ್ನು ‘ಯು ಟರ್ನ್’ ಮಾಡಿದ್ದಾರೆ. ಅಂದರೆ ತಲಾಖ್ ನೀಡಿದ ಗಂಡನು ಹೆಂಡತಿಯನ್ನು ಪೋಷಿಸುವುದು ಅಧಾರ್ಮಿಕವೆಂದವರು ಇಂದು ಅದು ಧರ್ಮ ಸಮ್ಮತವೆನ್ನುತ್ತಾರೆಯೇ? ಇವರ ಯಾವ ಮಾತನ್ನು ನಾವು ನಂಬಬೇಕು? ಈ ಗಂಡಂದಿರಿಗೆ ಜೈಲುಶಿಕ್ಷೆಯನ್ನು ನೀಡಬೇಕೆನ್ನುವುದು ನನ್ನ ಅಭಿಪ್ರಾಯವಲ್ಲ.

ತ್ರಿವಳಿ ತಲಾಖ್ ರದ್ದತಿ ಎಂಬ ಈ ಮಸೂದೆ ಜಾರಿಗೆ ಬಂದು ಆ ಗಂಡ ಜೈಲಿಗೆ ಹೋದರೆ ಅವರ ಪುನರ್ಮೈತ್ರಿಗೆ ಸಾಧ್ಯ ಇಲ್ಲದಂತಾಗುತ್ತದೆ ಎಂಬ ಇನ್ನೊಂದು ನೆಪವನ್ನೂ ಈ ಜನರು ಮುಂದೊಡ್ಡುತ್ತಾರೆ. ಅದು ಕೂಡ ಈ ಜನರ ಕುತಂತ್ರವೇ ಆಗಿದೆ. ಯಾಕೆಂದರೆ ಒಮ್ಮೆ ತ್ರಿವಳಿ ತಲಾಖ್‌ ಆದ ಬಳಿಕೆ ಮತ್ತೆ ಸಂಧಾನವಾಗಬೇಕಾದರೆ ಆ ಹೆಂಡತಿ ಬೇರೊಬ್ಬನನ್ನು ಮದುವೆಯಾಗಿ ಒಂದು ರಾತ್ರಿಯಾದರೂ ಆತನೊಡನೆ ಕಳೆಯಬೇಕು ಎಂಬ ಸಂಪ್ರದಾಯವಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ (ನೋಡಿ ನನ್ನ ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿ). ಹೀಗಾಗಿ ಇಂತಹ ಮಾತುಗಳನ್ನು ಜನರ ಕಣ್ಣಿಗೆ ಮಣ್ಣು ಹಾಕುವ ತಂತ್ರವೆಂದು ಪರಿಗಣಿಸಬೇಕಾಗುತ್ತದೆ.

ತ್ರಿವಳಿ ತಲಾಖ್ ನೀಡಿ ಹೆಂಡತಿ ಮಕ್ಕಳನ್ನು ಹೊರಹಾಕುವ ಸೌಲಭ್ಯ ಗಂಡಸರಿಗೆ ಸುಲಭವಾಗಿಯೇ ಇದೆ. ಆದರೆ ಓರ್ವ ಹೆಂಡತಿಗೆ, ಗಂಡನ ದೌರ್ನಜ್ಯ ಸಹಿಸಲಾಗದೆ ತಲಾಖ್ ಬೇಕೆಂದರೆ ಅದು ಸುಲಭದಲ್ಲಿ ದೊರೆಯಲಾರದು. ಅದಕ್ಕಾಗಿ ಆಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕಾಗುತ್ತದೆ. ಆರ್ಥಿಕವಾಗಿಯೂ ಆಕೆ ಸಬಲಳಾಗಿರಬೇಕು; ಅದಕ್ಕಾಗಿ ಓಡಾಡುವ ಬಂಧುಗಳೂ ಇರಬೇಕಾಗುತ್ತದೆ. ಬಹಳ ವರ್ಷ ಹೋರಾಡಿಯೂ ಆ ಗಂಡನಿಂದ ಬಿಡುಗಡೆ ಪಡೆಯಲಾಗದೆ ಕೊನೆಗೆ ಅವನ ದೌರ್ಜನ್ಯವನ್ನು ಸಹಿಸಿಕೊಂಡು ಆತನೊಡನೆಯೇ ಬದುಕಿ ಚಿಕ್ಕ ಪ್ರಾಯದಲ್ಲಿಯೇ ಮೃತಳಾದವಳೊಬ್ಬಳು ನನ್ನ ನೆನಪಿನಲ್ಲಿದ್ದಾಳೆ.

ತ್ರಿವಳಿ ತಲಾಖ್‌ನ ರದ್ದತಿ – ಎಂಬ ಕಾನೂನು ಅನುಷ್ಠಾನಗೊಂಡರೂ ಅದನ್ನು ಸಂಪೂರ್ಣ ರದ್ದು ಪಡಿಸಲು ಸಾಧ್ಯವಾಗದು. ಹಳ್ಳಿಗಳಲ್ಲಿ ಯಾರಿಗೂ ತಿಳಿಯದಂತೆ ಒಳಗಿಂದೊಳಗೆ ಮೂರು ತಲಾಖ್ ನೀಡಿ ಕೈ ತೊಳೆದುಕೊಳ್ಳಲು ನಮ್ಮ ಸಮಾಜದ ಗಂಡಸರಿಗೆ ಯಾರೂ ಕಲಿಸಬೇಕಾಗಿಲ್ಲ. ಗಂಡನಿಂದ ತಲಾಖ್ ಪಡೆದ ಮಹಿಳೆಗೆ ಒಂದು ರೀತಿ ಕೀಳರಿಮೆ ಬಾಧಿಸುವುದರಿಂದ ಆಕೆ ಅಥವಾ ಆಕೆಯ ಕುಟುಂಬ ಈ ವಿಷಯವನ್ನು ಯಾರಲ್ಲೂ ಬಾಯಿ ಬಿಡಲಾರರು. ಬಡವರಿಗಿಂತೂ ನ್ಯಾಯಾಲಯದಲ್ಲಿ ಹೋರಾಡಲು ಅಸಾಧ್ಯವಾಗಿರುತ್ತದೆ. ಹೀಗಾಗಿ ಸರ್ಕಾರ ಕಾನೂನು ರೂಪಿಸಿದರೂ ಅದರಿಂದ ಮುಸ್ಲಿಂ ಮಹಿಳೆಯ ಈ ಶೋಷಣೆಯೇನೂ ರದ್ದಾಗದು.

ತ್ರಿವಳಿ ತಲಾಖ್ ರದ್ದು ಪಡಿಸಬೇಕೆಂಬ ಸಲಹೆ ಶ್ರೇಷ್ಠ ನ್ಯಾಯಾಲಯದ ನ್ಯಾಯಧೀಶರಿಂದ ಬಂದಿದ್ದೇ ಹೊರತು ಅದು ಈಗಿನ ಸರ್ಕಾರದ ಚಿಂತನೆಯಾಗಿರಲಿಲ್ಲ. ನಮ್ಮ ಸಂವಿಧಾನದಲ್ಲಿ ‘ಸರ್ವರೂ ಸಮಾನರು, ಸರ್ವರಿಗೂ ಸಮಾನ ಹಕ್ಕು’ಗಳಿವೆ. ಈ ಸಮಾನತೆಗನುಸಾರವಾಗಿ ತಮಗೆ ನ್ಯಾಯ ತಿರ್ಮಾನ ಮಾಡಲಾಗುವುದಿಲ್ಲ ಎಂಬ ಅಪರಾಧಿ ಮನೋಭಾವ ನ್ಯಾಯಧೀಶರನ್ನು ಕಾಡುವುದು ಸಹಜ. ಹಿಂದೂ ಮಹಿಳೆಗೆ ಜೀವನಾಂಶ ನೀಡಬೇಕೆಂದೂ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡಬೇಕಾಗಿಲ್ಲವೆಂದೂ ನ್ಯಾಯ ತಿರ್ಮಾನ ಮಾಡುವಂತಹ ಸಂದರ್ಭದಲ್ಲಿ ನ್ಯಾಯಧೀಶರಿಗೆ ಇಂತಹ ಒಂದು ಕಾನೂನಿನ ಸೂಚನೆ ನೀಡಿರಬಹುದು.

ಹಾಗಾಗಿ ಇದು ಶ್ರೇಷ್ಠ ನ್ಯಾಯಲಯದ ನ್ಯಾಯಧೀಶರ ಕಳಕಳಿಯೇ ಹೊರತು ಪ್ರಧಾನಮಂತ್ರಿ ಅಥವಾ ಸರ್ಕಾರದ ಆಸಕ್ತಿ ಅಲ್ಲ. ಹಾಗೂ ಈ ರದ್ದತಿಯಿಂದ ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗುವುದೂ ಇಲ್ಲ. ಇಂಡಿಯನ್ ಕ್ರಿಮಿನಲ್ ಪ್ರೋಸಿಜರ್ ಕೋಡ್ ಸರ್ವರಿಗೂ ಏಕಪ್ರಕಾರವಾಗಿ ಅನ್ವಯಿಸುವಂತೆ ಇಂಡಿಯನ್ ಸಿವಿಲ್ ಕೋಡ್ ಕೂಡ ಏಕಪ್ರಕಾರವಾಗಿ ಸರ್ವರಿಗೂ ಅನ್ವಯಿಸುವಂತೆ ಕಾನೂನು ರೂಪಿಸಬೇಕು. ಆಗ ಮಾತ್ರ ನಮ್ಮ ಮಹಿಳೆಯರಿಗೆ ಪ್ರಯೋಜನವಾಗಬಹುದು. ತಲಾಖ್ ನೀಡಿದ ಪುರುಷನಿಗೆ ಜೈಲು ಶಿಕ್ಷೆ ನೀಡುವಂತಹ ಹಾಸ್ಯಸ್ಪದ ಕಾನೂನು ಅಗತ್ಯವಿಲ್ಲ. ನಮ್ಮ ಸಂವಿಧಾನಕ್ಕನುಸಾರವಾಗಿ ‘ಸರ್ವರಿಗೂ ಸಮಾನ ಹಕ್ಕುಗಳು, ಸರ್ವರೂ ಸಮಾನರು’ ಎಂಬ ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸಿದರೆ, ಅದಷ್ಟೆ ಧಾರಾಳ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.