ADVERTISEMENT

ನೋವು ನಲಿವಿಗೆ ಬಣ್ಣದ ಗುತ್ತಿಗೆ ಇದೆಯೇ!

ದೀಪಾ ಫಡ್ಕೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ನೋವು ನಲಿವಿಗೆ ಬಣ್ಣದ ಗುತ್ತಿಗೆ ಇದೆಯೇ!
ನೋವು ನಲಿವಿಗೆ ಬಣ್ಣದ ಗುತ್ತಿಗೆ ಇದೆಯೇ!   

ಸಲ್ಮಾನ್‌ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್’  ಚಿತ್ರದಲ್ಲೊಂದು  ಸೂಪರ್‌ಹಿಟ್ ದೃಶ್ಯವಿದೆ. ಮೂಕಿ ಬಾಲಕಿಯೊಬ್ಬಳು ಹೆತ್ತವರಿಂದ ತಪ್ಪಿಸಿಕೊಂಡು ಚಿತ್ರದ ನಾಯಕನಿಗೆ ಸಿಕ್ಕಿದಾಗ, ನಾಯಕ ನಾಯಕಿ ಇಬ್ಬರೂ ಕೂತು  ಮಗುವಿನ ಹಿನ್ನೆಲೆ ತಿಳಿಯುವ ಯತ್ನ ಮಾಡುತ್ತಿರುತ್ತಾರೆ. ಆಗ ನಾಯಕ ‘ಗೋರಿ ಹೇ, ಬ್ರಾಮ್ಮನ್ ಹೋಗಿ ಎನ್ನುವ ಮಾತು, ಬಣ್ಣವನ್ನು ಜಾತಿಯೊಂದಿಗೆ ಗಂಟು ಹಾಕಿರುವ ನಮ್ಮ ಇತಿಹಾಸವನ್ನು ಹೇಳುತ್ತದೆ. ನಿಜಕ್ಕೂ ಬಣ್ಣ ಮತ್ತು ಜಾತಿಗೇನಾದರೂ ಸಂಬಂಧವಿದೆಯೇ! ತಮಾಷೆಯೆನ್ನಿಸುವುದಿಲ್ಲವೇ? ನಮ್ಮೂರಿನಲ್ಲಿ ಕರಿಭಟ್ಟ ಎಂದು ಊರ ಎಲ್ಲರಿಂದಲೂ ಗೇಲಿ ಮಾಡಿಸಿಕೊಳ್ಳುವ ಜನರು ಬೇಕಾದಷ್ಟಿದ್ದಾರೆ.

ಕಥಾಕಮ್ಮಟವೊಂದಕ್ಕೆ ಗೆಳತಿ ಹೋಗಿದ್ದಳು. ಕಥೆಗಳ ಹಿನ್ನೆಲೆ, ವಸ್ತು ಅದರಲ್ಲಿ ಬರುವ ವರ್ಗ ಸಂಘರ್ಷ – ಹೀಗೆ ಎಲ್ಲದರ ಕುರಿತೂ ಚರ್ಚೆಯಾಗುತ್ತಿತ್ತು. ಎಲ್ಲರೂ ಅವರವರ ನೋವಿನ ಬದುಕನ್ನು ಸಂದರ್ಭಕ್ಕೆ ಸರಿಯಾಗಿ ತೆರೆದಿಡುತ್ತಾ ಹೋಗುವಾಗ ಗೆಳತಿಯೂ ಅವಳಿಗಾದ ನೋವನ್ನು ಸಹಜವಾಗಿ ಹಂಚಿಕೊಂಡಿದ್ದಳು. ಕ್ಷಣದಲ್ಲಿ ಕಮ್ಮಟದಲ್ಲಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು, ‘ಸುಮ್ನಿರ್ರಿ, ನಿಮ್ಗೆ ಅದೆಲ್ಲ ಅರ್ಥವಾಗಲ್ಲ ಎಂದು ಬಾಯಿ ಮುಚ್ಚಿಸಿದ್ದೂ ಅಲ್ಲದೇ ಆ ಕಡೆ ತಿರುಗಿ ಪಕ್ಕದಲ್ಲಿದ್ದವರಲ್ಲಿ, ‘ಆ ಬಣ್ಣ ನೋಡಿದ್ರೆನೇ ಮೈ ಉರಿಯುತ್ತೆ ಎಂದಾಗ ಗೆಳತಿ ಬೆಚ್ಚಿ ಬಿದ್ದಿದ್ದಳು. ಹೌದು, ಅವಳು ಲೋಕದ ಕಣ್ಣಿಗೆ ಬೀಳುವ ಬಿಳಿ ಮೈಬಣ್ಣದವಳು. ಇತ್ತೀಚೆಗೆ ತರುಣ್ ವಿಜಯ್ ಅಂದ ಮಾತಿಗೆ ಬಂದ ಪ್ರತಿಕ್ರಿಯೆ ನೋಡಿದಾಗ, ಜಗತ್ತಿನ ಕಣ್ಣಿಗೆ ಬೀಳದೇ ಹೋಗುವ ನೋವಿನ ಇನ್ನೊಂದು ಮಗ್ಗುಲೂ ಇದೆಯೆಂದು ಕೂಗಿ ಹೇಳಬೇಕೆನಿಸಿದ್ದೂ ಸತ್ಯ.

ಮೈಬಣ್ಣ, ಉದ್ದ-ಗಿಡ್ಡಗಳು ದೇಹದ ಗಾತ್ರ ಇವೆಲ್ಲವೂ ಇತಿಹಾಸದಿಂದ ಹಿಡಿದು ವರ್ತಮಾನದ ಎಲ್ಲ ಕಾಲದಲ್ಲೂ ಬಾಯಿಮಾತಿಗೆ ಗ್ರಾಸವಾಗಿದ್ದಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಇವನ್ನೆಲ್ಲ ಬಳಸುವ ಅಭ್ಯಾಸ ಲಾಗಾಯ್ತಿನಿಂದ ಆಗಿರುವುದೇ. ಈ ಮಾತುಗಳು ಸಹಜವಾಗಿದ್ದರೆ ಅಷ್ಟು ಮನಸ್ಸಿಗೆ ಘಾಸಿ ಮಾಡಲಾರದು. ಆದರೆ ತಿರಸ್ಕಾರದಿಂದ ಹೇಳಿದರೆ ನೋವು ನಿಶ್ಚಿತ. ಗೆಳತಿಯ ಮೈಬಣ್ಣ ನೋಡಿ ಅವರು, ಅವಳು ಮೇಲ್ಜಾತಿಯವಳೆಂದು, ಮೇಲ್ಜಾತಿಯವಳಾದ ಕಾರಣ ಅವಳಿಗೆ ಯಾವ ನೋವೂ ಇರದೆಂದು ತೀರ್ಮಾನಿಸಿದ್ದರು. ಬಡತನ, ಹೆಣ್ಣು, ಮೇಲ್ಜಾತಿ ಇದರಷ್ಟು ದೊಡ್ಡ ಕೆಟ್ಟ ಕಾಂಬಿನೇಷನ್ ಇನ್ನೊಂದಿಲ್ಲವೇನೋ ಎನ್ನುವಂತೆ ಅವಳೂ ಸಂಕಟ ಅನುಭವಿಸಿದ್ದಳು.

ADVERTISEMENT

ಆದರೆ ಅವಳ ನಗುಮುಖ, ಹತಾಶೆಯಿಲ್ಲದ ನಡೆ ಲೋಕದ ಕುರುಡು ಕಣ್ಣಿಗೆ ಅವಳಿಗೆ ಯಾವ ನೋವೂ ಇಲ್ಲ ಎನ್ನುವಂತೆ ಕಂಡಿತ್ತು. ಆದ್ದರಿಂದ ಅವಳು ಇಂತಹ ವಿಚಾರಗಳಲ್ಲಿ ಮಾತಾಡಲೂ ಯೋಗ್ಯಳಲ್ಲ ಎನ್ನುವ ಸೂಚನೆಯೂ ಅವರದಾಗಿತ್ತು. ನೋವಿಗೂ, ಜಾತಿಯಿದೆಯೆನ್ನುವ ಭಾವ ಮೂಡಿದ್ದೇ ಆಗ. ಹೀಗೆ ಬಣ್ಣ, ಜಾತಿ, ನೋವನ್ನು ಒಂದಕ್ಕೊಂದು ಸಂಬಂಧವಿಲ್ಲದೇ ಇರುವ ರೀತಿಯಲ್ಲಿ ಜೋಡಿಸಿ,  ಪರಿಣಾಮವನ್ನು ಯೋಚಿಸದೇ ಆಡುವ ಮಾತುಗಳೇ ಮನುಷ್ಯನ ದೌರ್ಬಲ್ಯವಾಗಿ ವ್ಯಕ್ತಿ-ವ್ಯಕ್ತಿಗಳ ನಡುವೆ ಸಲ್ಲದ ಭೇದವನ್ನು ಹುಟ್ಟಿಸುತ್ತಿರುವುದು. ಇಂತಹ ಮಾತುಗಳೂ ಸಜ್ಜನಿಕೆಯ, ಮನುಷ್ಯತ್ವದ ಪರಿಧಿಯ ಹೊರಗುಳಿಯುತ್ತವೆ.

ನೋವು, ಎಲ್ಲ ಜೀವಿಗಳ, ಪ್ರತಿ ಮನುಷ್ಯನ ಅನಿವಾರ್ಯ ಸಂಗಾತಿಯಾಗಿದೆ. ಯಾರ ನೋವು ಎಷ್ಟು ದೊಡ್ಡದು ಎನ್ನುವ ತೂಕ ಯಾವುದೇ ಬಟ್ಟುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇದಕ್ಕೂ ಜಾತಿ, ವರ್ಗ, ಧರ್ಮದ ಲೇಪ ಅಗತ್ಯವಿಲ್ಲ. ಗೆಳತಿ ಅನುಭವಿಸಿದಂಥ ದುಃಖದ ಕತೆಗಳು ನಮ್ಮ ಸಮಾಜದ ಮೂಲೆಮೂಲೆಯಲ್ಲಿವೆ. ಕೆಲವು ಮೂಲೆಗಳು ನಗುವನ್ನು ಅಪ್ಪಿದ್ದರೆ ಇನ್ನೂ ಕೆಲವು ಮೂಲೆಗಳು ಮೌನವನ್ನು ಹೊದ್ದಿವೆ. ಹೊದಿಕೆ ಸರಿಸಿದರಷ್ಟೇ ಗಾಯದ ಗೀರುಗಳು ಕಾಣುವುದು. ಇದು ಬರೀ ಕಪ್ಪು-ಬಿಳಿ ಎನ್ನುವ ಬಣ್ಣದ ಪ್ರಶ್ನೆಯಲ್ಲ. ಇದು ಒಂದು ಅಸಹನೀಯ ಮನೋಧರ್ಮದ ಪ್ರಶ್ನೆ. 

‘ಬಣ್ಣ ಡೊಂಕು ಮುಚ್ಚಿತು’ – ಇದು ಬಿಳಿಬಣ್ಣದವರನ್ನು ಕುರಿತಾದ ಮಾತೂ ಆಗಿದೆ. ಕನ್ನಡದ ಹಿರಿಯ ನಟಿ ಹರಿಣಿಯವರು ಅವರ ಬಣ್ಣಕ್ಕೆ ಮೇಕಪ್ ಕೂರದೇ ಇದ್ದಾಗ  ‘ನಾನೂ ಸ್ವಲ್ಪ ಕಪ್ಪಿದ್ದರೆ ಒಳ್ಳೆಯದಿತ್ತೇನೋ ಎಂದು ಕೊರಗಿದ್ದರಂತೆ. ಹಾಗಿದ್ದಲ್ಲಿ ಕಪ್ಪು-ಬಿಳಿ, ಎತ್ತರ-ಕುಳ್ಳು ಇಂತಹ ವ್ಯತ್ಯಾಸಗಳು ಪ್ರತಿ ಮನುಷ್ಯನನ್ನೂ ಒಂದು ಬಾರಿಯಾದರೂ ಕುಗ್ಗಿಸದೇ ಇರಲಾರದೇನೋ! ಅಂದರೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕಿಂತಲೂ ಬೇರೆಯವರ ದೃಷ್ಟಿಯಲ್ಲಿ ನೋಡಿಕೊಳ್ಳುವ ಕಾರಣದಿಂದಲೇ ಇಂಥ ಪ್ರಸಂಗಗಳು ಕಾಣಿಸಿಕೊಳ್ಳುವುದು.

ಈ ಬಣ್ಣ, ಗಾತ್ರಗಳು ಕೇವಲ ಒಂದು ಹಂತದವರೆಗಿನ ಟೈಂಪಾಸ್ ಗಾಸಿಪ್ಪಿನ ಮಾತುಗಳಾದರೆ, ಮತ್ತೆ ಮರುಕ್ಷಣದಲ್ಲಿ ಮರೆತು ಹೋದರೆ ಯಾವುದೇ ತೊಂದರೆಯಿಲ್ಲ. ಆದರೆ ಗಾಯವನ್ನೇ ಮಾಡಬೇಕೆಂದು ಉದ್ದೇಶಪೂರ್ವಕವಾಗಿ ಆಡುವ ಮಾತುಗಳು ಮಾತ್ರ ಕೆಟ್ಟ ಮನಸ್ಸಿನ ಮಾತುಗಳೆನ್ನಲೇಬೇಕು. ಅತ್ಯಂತ ಕೀಳರಿಮೆಯಿಂದ ನರಳುವವರ ಮಾತುಗಳೆನ್ನಬೇಕು. ವಸ್ತ್ರಾಪಹರಣದ ಹೊತ್ತಿನಲ್ಲಿ ದಾನವೀರ ಕರ್ಣ ಆಡಿದ ಮಾತೂ ಇದೇ ಕೀಳರಿಮೆಯಿಂದ ಬಂದ ಮಾತೇ, ‘ನಾವೂ ನೋಡೋಣ’ ಅದುವರೆಗೂ ಕರ್ಣನ ಬಗೆಗಿದ್ದ ಅನುಕಂಪ, ಗೌರವ ಮಣ್ಣುಪಾಲು ಆಗಿದ್ದು ಈ ಒಂದು ಮಾತಿನಿಂದಲೇ ಇರಬೇಕು.

ಬಣ್ಣ, ಗಾತ್ರದ ಜಟಾಪಟಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿಯೊಂದಕ್ಕೂ ಟೀಕೆ, ಟಿಪ್ಪಣಿಗಳು ಸಾಮಾನ್ಯ. ಪ್ರಾಯಶಃ ವೈಯಕ್ತಿಕ ಕೊರತೆಗಳು ಹೀಗೆ ಪ್ರತಿಯೊಂದನ್ನು ಟೀಕಿಸಲು ಪ್ರೇರೇಪಿಸುತ್ತವೆನೋ. ಕಪ್ಪಿನವರನ್ನು ತೆಗಳಿದಾಗ ಆಗುವ ನೋವೆ ಬಿಳಿಬಣ್ಣವನ್ನು ತೆಗಳಿದಾಗಲೂ ಆಗಬಹುದು. ‘ಅಬ್ಬಾ ಬಿಳಿ ಜಿರಳೆ, ಆ ಬಣ್ಣವೇ ಎಲ್ಲ ಕೆಲಸ ಮಾಡುತ್ತದೆ ಇಂತಹ ಮೂದಲಿಕೆಯನ್ನು ಬಿಳಿ ಬಣ್ಣದವರೂ ಕೇಳಿಯೇ ಇರುತ್ತಾರೆ. ‘ನೀನು ಗಿಡ್ಡವಿದ್ದಿಯಲ್ವಾ, ಹಾಗೆ ನಿನ್ನ ದೇಹಕ್ಕೆ ಸ್ವಲ್ಪ ಆಹಾರ ಸಾಕು, ‘ಏನೇ ಕುಳ್ಳಿ ಅಥವಾ ಕುಳ್ಳ’, ‘ಬಂದ್ಲು ನೋಡು ಡುಮ್ಮಿ’, ಇಂಥ ನಾಲಗೆತುದಿಯ ಮಾತುಗಳು ಸಂವೇದನಾಶೂನ್ಯರಿಂದ ಸಾಮಾನ್ಯವಾಗಿ ಬರುವವುಗಳು. ಈ ಮಾತುಗಳೂ ನೋವನ್ನು ಹುಟ್ಟಿಸುವ ಮಾತುಗಳೆ ತಾನೇ. ಇನ್ನು ಅದರ ತೀವ್ರತೆ ಹೆಚ್ಚು ಕಡಿಮೆ ಇರಬಹುದೇನೋ. ಆದರೆ ನೋವಂತೂ ಆಗುವುದು ಸತ್ಯ.

ರೇಣುಕಾ, ನಿವೃತ್ತ ಅಧ್ಯಾಪಕಿ. ಗಂಡ, ಇದ್ದೊಬ್ಬ ಮಗನೂ ಅಪಘಾತದಲ್ಲಿ ನಿಧನರಾಗಿ ಐದು ವರ್ಷಗಳಾಗಿವೆ. ರೇಣುಕಾ ಅವರು ಇಂದಿಗೂ ಮೊದಲಿನಂತೆ ನೀಟ್ ಆಗಿ ಉಡುಪು ಧರಿಸಿ, ಮುಖದಲ್ಲಿ ಒಂದಿನಿತೂ ದುಃಖ ತೋರದೇ, ವಾರದ ಅಷ್ಟೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಿ ನೋವು ಮರೆಯಲು ಯತ್ನಿಸಿದರೆ, ನೋಡುವವರ ಸುಮ್ಮನಿರದ ಬಾಯಿ, ‘ಅಬ್ಬಾ ಅದೆಷ್ಟು ಬೇಗ ದುಃಖ ಮರೆತಿದ್ದಾರೆ ನೋಡು, ಆರಾಮಾಗಿದ್ದಾರೆ’ – ಇಂಥ ಮಾತುಗಳನ್ನು ಕೇಳದಂತೆ ಮಾಡಿ, ಯಾರಿಗೂ ತನ್ನ ಕಣ್ಣೀರು ಕಾಣದಂತೆ ಒರೆಸಿಕೊಂಡು ಹೋಗುತ್ತಿರುತ್ತಾರೆ.  ಇಂಥ ಉದಾಹರಣೆಗಳಿಂದ ನಮ್ಮರಿವಿಗೆ ಬರುವ ವಿಚಾರವೆಂದರೆ, ಎಲ್ಲ ವರ್ಗದ, ಜಾತಿಯ ಜನರಿಗೂ ಲಿಂಗ, ವರ್ಣಭೇದವಿಲ್ಲದೆ ನೋವುಗಳಿವೆ, ಅಪಮಾನಗಳಿವೆ. ದೈನ್ಯ ಕಾಡುವ ಸನ್ನಿವೇಶಗಳೂ ಬರುತ್ತವೆ. ನೋವು ಯಾರನ್ನೂ ಕೇಳಿಕೊಂಡು ಬರುವಂಥದ್ದಲ್ಲ. ಅದು ಬದುಕಿನ ಭಾಗ. ಎಲ್ಲರನ್ನೂ ಸಮಾನವಾಗಿ ಪೀಡಿಸುವ ನೋವನ್ನು ‘ಇವರ ನೋವು ದೊಡ್ಡದು, ಅವರ ನೋವು ನೋವೇ ಅಲ್ಲ’ – ಎಂಬಂತಹ ಮಾತುಗಳು ನಿಜಕ್ಕೂ ಕ್ರೂರವಾಗಿ ಕಾಣುತ್ತದೆ.

ಎಲ್ಲವನ್ನು ಬುದ್ಧಿಯಿಂದ ಅಳೆಯುವ ನಮಗೆ ನೋವಿಗೆ ಸರಿಯಾದ ವ್ಯಾಖ್ಯಾನ ಮಾಡಲಾದೀತೆ! ಆಗದು ಎಂದೇ ಕಾಣುತ್ತದೆ. ಪ್ರತಿಯೊಂದು ನೋವೂ ಪ್ರತಿಯೊಬ್ಬ ವ್ಯಕ್ತಿಯಂತೆ ಭಿನ್ನ. ನೋವಿನ ತೀವ್ರತೆಯೂ ಭಿನ್ನ. ಪ್ರತಿ ಸಾರಿ ನೋವಿನ ಮಾತು ಬಂದಾಗಲೆಲ್ಲ, ನಮಗೆಲ್ಲ ಒಂದು ವರ್ಗಕ್ಕೆ, ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ಮಾತಾಡುವ ಅಭ್ಯಾಸ ಆಗಿಬಿಟ್ಟಿದೆ. ಹಾಗಾದರೆ ನಿಜಕ್ಕೂ ನೋವು, ಅಷ್ಟಕ್ಕೇ ಸೀಮಿತವೇ? ಅಥವಾ ಉಳಿದವರ ನೋವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದೇವೆಯೇ! ಹಾಗಿದ್ದಲ್ಲಿ ನಾವು ನೋವನ್ನೂ ದಾಳ ಮಾಡಿಕೊಂಡಿದ್ದೇವೆ ಎನ್ನಬೇಕು. 

ಮೇಲಿನ ಒಂದೆರಡು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಧೋರಣೆಗಳು. ಕಪ್ಪು-ಬಿಳಿ, ಗಿಡ್ಡ-ಉದ್ದ, ದಪ್ಪ-ಸಣ್ಣ, ಗಂಡು-ಹೆಣ್ಣು ಇಂತಹ ದೈಹಿಕ ಭೇದಗಳು ಇರುವಂತೆ ಸಿರಿತನ-ಬಡತನವೆಂಬ ಭೇದಗಳೂ ಮನುಷ್ಯಪ್ರಪಂಚದ ಗುರುತುಗಳು. ಇದುವರೆಗೂ ನಮ್ಮನ್ನು ಆಳಿದ ಈ ಭೇದಗಳು ಈಗ ಇನ್ನೂ ಒಂದಷ್ಟು ಹೊಸ ವಿಶೇಷತೆಗಳನ್ನು ಸೇರಿಸಿಕೊಂಡು ಆಡಿಸುತ್ತಿವೆ. ವಿಪರ್ಯಾಸವೆಂದರೆ ಈ ಎಲ್ಲ ಭೇದಗಳನ್ನು ನಾವು ನೋವಿನೊಂದಿಗೆ ಎದುರಾದಾಗ ಜಾತಿ, ಧರ್ಮ, ಲಿಂಗ, ವರ್ಗ, ಸಂದರ್ಭ, ಅವಕಾಶಗಳೊಂದಿಗೆ ಮಿಶ್ರಮಾಡಿ ಎಲ್ಲಿ ಅದರಿಂದ ಅನುಕೂಲವಿದೆಯೆಂದು ಅರಿವಾಗುತ್ತದೆಯೋ ಅಲ್ಲಿ ಅದನ್ನು ಬಳಸುತ್ತಿದ್ದೇವೆ. ಆದ್ದರಿಂದ ಕೆಲವು ನೋವು ನೋವಲ್ಲವೆನ್ನುವಂತೆ ಮುಖ ತಿರುಗಿಸಿ ಹೋಗುವ ನಾವು ಕೆಲವು ಆಯ್ದ ನೋವುಗಳನ್ನು ಹೆಕ್ಕಿಕೊಳ್ಳುತ್ತೇವೆ.

ನೋವನ್ನು ವ್ಯಕ್ತಪಡಿಸುವ ರೀತಿಯಲ್ಲೂ ತುಂಬಾ ವ್ಯತ್ಯಾಸಗಳಿವೆ. ಸಣ್ಣ ವಿಷಯಕ್ಕೂ ದೊಡ್ಡ ರಂಪ ಮಾಡುವವರಿರುವಂತೆ, ನಿಜಕ್ಕೂ ದೊಡ್ಡ ನೋವನ್ನು ಯಾರಿಗೂ ಹೇಳದೇ ಮೌನವಾಗಿ ಸಂಕಟ ಅನುಭವಿಸುವವರಿರುತ್ತಾರೆ. ನಗುನಗುತ್ತಿರುವವರನ್ನು ‘ಅವರಿಗೇನು, ಯಾವ ನೋವೇ ಇಲ್ಲ ಎಂದು ಒಂದೇ ನೋಟದಲ್ಲಿ ನಿರ್ಧರಿಸಿಬಿಡುವವರಿಗೆ ಆ ನಗುವಿನ ಹಿಂದೆ ಇರುವ ಸಾಗರದಂತಹ ನೋವಿನ ಸಣ್ಣ ಪರಿಚಯವೂ ಇರುವುದಿಲ್ಲ. ಚಾರ್ಲಿ ಚಾಪ್ಲಿನನ ಮಾತು ಎಲ್ಲ ಕಾಲಕ್ಕೂ ವೇದವಾಕ್ಯವೇ, ‘ನಾನು ಮಳೆಯಲ್ಲಿ ನಡೆಯಲು ಇಚ್ಛಿಸುತ್ತೇನೆ, ಏಕೆಂದರೆ ಆಗ ನನ್ನ ಕಣ್ಣೀರು ಯಾರಿಗೂ ಕಾಣದು.’

ಯಾರ, ಯಾವ ನೋವು ಸಂಭ್ರಮಿಸುವ ವಿಶೇಷವಲ್ಲ. ಸಾಧ್ಯವಾದರೆ ಸಾಂತ್ವನ ಹೇಳಿ ನಮ್ಮಲ್ಲಿರುವ ಮಾನವನನ್ನು ಜೀವಂತವಾಗಿರಿಸಿಕೊಳ್ಳೋಣ. ಲೇವಡಿ, ಅಸಹನೆ, ಕೊಂಕು  ಸಭ್ಯತೆಯ ಲಕ್ಷಣವಲ್ಲ. ಯಾರ ಅನುಮತಿಯಿಲ್ಲದೇ, ಯಾರ ಒಪ್ಪಿಗೆಯನ್ನೂ ಕೇಳದೆ ಪ್ರತಿ ಮನುಷ್ಯ ಒಂದಷ್ಟು ಭಿನ್ನತೆಗಳೊಂದಿಗೆ ಜಗತ್ತಿಗೆ ಬರುತ್ತಾನೆ. ಹೀಗೆ ಬಂದ ಮೇಲೆ ಪ್ರಕೃತಿ ಸಹಜವಾಗಿ ದಕ್ಕಿದ ವೈವಿಧ್ಯತೆಗಳನ್ನು ಒಪ್ಪಿಕೊಂಡು ಅವುಗಳನ್ನು ಮೀರಿ ಬದುಕುವ ಯತ್ನ ಮಾಡಿದರೆ ಯಾರಿಗೂ ಕಣ್ಣೀರು ಕಾಣಬಾರದೆಂದು ಮಳೆಯಲ್ಲಿ ನಡೆಯುವ ಪರಿಸ್ಥಿತಿ ಬಾರದು. ಸಂತೋಷದಿಂದ ಮಳೆಯನ್ನು ಸಂಭ್ರಮಿಸುವ ಅವಕಾಶವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.