ADVERTISEMENT

ಪತ್ನಿಯ ದುರಾಸೆ ಭ್ರಷ್ಟಾಚಾರಕ್ಕೆ ಮೂಲವೆಂಬ ಆರೋಪ ತಪ್ಪು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:30 IST
Last Updated 1 ಏಪ್ರಿಲ್ 2011, 19:30 IST

 ಆದರ್ಶವನ್ನು ಮಹಿಳೆಯರಲ್ಲಷ್ಟೇ ಹುಡುಕುವುದು ಸರಿಯಲ್ಲ. ಆದರ್ಶ ಪುರುಷ ಹೇಗಿರಬೇಕೋ ಆದರ್ಶ ಮಹಿಳೆಯೂ ಹಾಗೆಯೇ ಇರಬೇಕು ಎಂಬ ವಾದ ನನ್ನದು. ಈಗ ಇಬ್ಬರೂ ಸರಿಸಮಾನರು ಅಲ್ವಾ? ಎನ್ನುತ್ತಾ ಗಂಡು - ಹೆಣ್ಣಿನ ಸಾಮಾಜಿಕ ಸ್ಥಾನಮಾನ
ಬದಲಾವಣೆಯ ಪ್ರಕ್ರಿಯೆ ಕುರಿತಂತೆ  ತಮ್ಮ ಚಿಂತನೆಗಳನ್ನು ಈ ವಾರ ನಮ್ಮೊಂದಿಗೆ ಹಂಚಿಕೊಂಡಿರುವವರು ಲೋಕಾಯುಕ್ತ ನ್ಯಾಯಮೂರ್ತಿ  ಎನ್. ಸಂತೋಷ್ ಹೆಗ್ಡೆ


ಭ್ರ ಷ್ಟಾಚಾರ, ವ್ಯಕ್ತಿಯ ಮನಃಸ್ಥಿತಿ. ಸಾಧಾರಣ ವ್ಯಕ್ತಿ ಅಸಾಧಾರಣ ವ್ಯಕ್ತಿಯಾಗಬೇಕು ಎಂದು ಆಸೆಪಡದಿದ್ದರೆ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು, ಹೆಂಡತಿಯ ಒತ್ತಾಸೆ/ದುರಾಸೆಯಿಂದ ಗಂಡ ಭ್ರಷ್ಟಾಚಾರಕ್ಕಿಳಿದ ಅನ್ನೋ ಆರೋಪ, ಶುದ್ಧ ತಪ್ಪು. ತನ್ನ ತಪ್ಪನ್ನು ಮತ್ತೊಬ್ಬರ ಮೇಲೆ ಹೇರಿ ಬಚಾವಾಗುವ ‘ಎಸ್ಕೇಪಿಸಂ’ ಅದು. ಅಪವಾದಕ್ಕೆ ಎಲ್ಲೊ ಒಬ್ಬಿಬ್ಬರು ‘ಹೆಂಡತಿಯ ಗುಲಾಮ’ರು (ಹೆನ್‌ಪೆಕ್ಡ್ ಹಸ್ಬೆಂಡ್) ಆ ರೀತಿ ಮಾಡಬಹುದು. ಅದನ್ನು ಎಲ್ಲರ ಮೇಲೆ ಹೇರುವುದು ಸರಿಯಲ್ಲ.

ಹಾಗಂತ ಭ್ರಷ್ಟಾಚಾರದಲ್ಲಿ ಮಹಿಳೆಯರು ಹಿಂದೆ ಬಿದ್ದಿದ್ದಾರೆ ಎಂದಲ್ಲ! ಆದರೆ ಪುರುಷರಿಗೆ ಹೋಲಿಸಿದರೆ ಇವರ ಪ್ರಮಾಣ ಕಡಿಮೆಯಿದೆ ಎಂಬುದೇ ಸಮಾಧಾನದ ಸಂಗತಿ. ಲೋಕಾಯುಕ್ತ ಕಳೆದ ವರ್ಷ  ಕೈಗೊಂಡ 326 ದಾಳಿ ಪ್ರಕರಣಗಳಲ್ಲಿ 10 ಮಂದಿ ಮಹಿಳೆಯರು ಬಲೆಗೆ ಬಿದ್ದಿದ್ದರು. ಒಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು.

ಮಹಿಳೆಯನ್ನು ಒಂದು ವಸ್ತುವಾಗಿ ಕಾಣುವ, ಪುರುಷಪ್ರಧಾನ ವ್ಯವಸ್ಥೆ ಒಂದು ಕಾಲದಲ್ಲಿತ್ತು. ಆದರೆ ಮಹಿಳೆಯ ಸ್ಥಿತಿಗತಿ ಈಗ ಸಾಕಷ್ಟು ಬದಲಾಗಿದೆ. ಹರಿಯಾಣ, ರಾಜಸ್ತಾನದಂಥ ಕೆಲವು ರಾಜ್ಯಗಳಲ್ಲಿ ಹೆಣ್ಣು ಇನ್ನೂ ಸಂಪ್ರದಾಯದ ಹೆಸರಿನಲ್ಲಿ ಪುರುಷರ ಕಪಿಮುಷ್ಠಿಯಲ್ಲಿದ್ದಾಳೆ. ಆಕೆ ಸಂಪ್ರದಾಯದಿಂದ ಹೊರಬಂದಿಲ್ಲ. ಆಕೆಯದು ಇನ್ನೂ ಕೆಳಸ್ತರದ ಬದುಕು. ಇದು ವಿಷಾದನೀಯ. ಆದರೆ ದೇಶದ ಬಹುಪಾಲು ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿ ಬಾಳುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಆಕೆಗೆ ಹೆಚ್ಚು ಗೌರವ ಸಿಗುತ್ತಿದೆ. ಅಂದರೆ ಕೌಟುಂಬಿಕ ಮತ್ತು ಸಾಮಾಜಿಕವಾಗಿ ಆಕೆ ಸಶಕ್ತಳಾಗಿದ್ದಾಳೆ.

ಈ ರಾಷ್ಟ್ರದ ಪ್ರಥಮ ಪ್ರಜೆ ಮಹಿಳೆ ಅನ್ನುವಲ್ಲಿಂದಲೇ, ಬದಲಾದ ಮಹಿಳೆಯ ಯಶೋಚರಿತ್ರೆ ಆರಂಭವಾಗುತ್ತದೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೋಡಿ. ದಿಟ್ಟ ಮಹಿಳೆ ಆಕೆ. ಸ್ವತಂತ್ರವಾಗಿ ರಾಜ್ಯಭಾರ ಮಾಡುತ್ತಾರೆ. ಹೆಣ್ಣು ಮಕ್ಕಳು ಹಾಗಿರಬೇಕು. 61 ವರ್ಷದ ಪ್ರಜಾಪ್ರಭುತ್ವದಲ್ಲಿ 16 ವರ್ಷ ಮಹಿಳಾ ಪ್ರಧಾನಿ ಈ ದೇಶವನ್ನು ಮುನ್ನಡೆಸಿರುವುದು ಸ್ತ್ರೀ ಎಷ್ಟು ಶಕ್ತಿಶಾಲಿ ಎಂಬುದಕ್ಕೆ ಸಾಕ್ಷಿ.

ಪಂಚಾಯತ್‌ರಾಜ್‌ನಲ್ಲಿ ಅಧಿಕಾರದ ವಿಕೇಂದ್ರೀಕರಣ ಆಗಿ ಮಹಿಳಾ ಮೀಸಲಾತಿ ಹೆಚ್ಚಿದ ಮೇಲಂತೂ ಗ್ರಾಮೀಣ ಹೆಣ್ಣುಮಕ್ಕಳು ಅಧಿಕಾರದ ರುಚಿ ಸವಿಯುವಂತಾಗಿದೆ. ಆದರೆ ಎಷ್ಟೋ ಕಡೆ ಮಹಿಳಾ ಅಧ್ಯಕ್ಷರನ್ನು ಮೀಸಲಾತಿಯ ಕಾರಣ ಅನಿವಾರ್ಯವಾಗಿ ಒಪ್ಪಿಕೊಳ್ಳಲಾಗಿದೆ. ಅಧಿಕಾರ, ಆಡಳಿತ ಚಲಾಯಿಸುವ, ನಿರ್ಧಾರ ತೆಗೆದುಕೊಳ್ಳುವ ಪ್ರಶ್ನೆ ಬಂದಾಗ ಯಾರೋ ಪುರುಷರೇ ಮೇಲುಗೈ ಸಾಧಿಸುತ್ತಾರೆ. ಅಂತಹ ಅಧ್ಯಕ್ಷರು ವೇಸ್ಟ್. ನಿಮಗೆ ಅಧಿಕಾರ ಸಿಕ್ಕಿರುವಾಗ ಅದನ್ನು ಸ್ವಂತ ಆಲೋಚನಾಶಕ್ತಿಯಿಂದ, ವಿವೇಚನೆಯಿಂದ ಬಳಸಿ. ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ಮನಃಸ್ಥಿತಿ ಅಂತಹುದಾದರೆ ದಯವಿಟ್ಟು ನೀವು ರಾಜಕೀಯ ಕಣಕ್ಕಿಳಿಯುವುದೇ ಬೇಡ. ಇನ್ಯಾರೋ ಸಮರ್ಥರು ಅದನ್ನು ಬಳಸಿಕೊಳ್ಳಲಿ.

ಇದಕ್ಕಿಂತಲೂ ಮುಖ್ಯವಾಗಿ, ಮೀಸಲಾತಿಯಲ್ಲಿ ನಂಬಿಕೆಯಿಟ್ಟು ರಾಜಕೀಯಕ್ಕೆ ಇಳಿಯಬೇಡಿ. ನಿಮ್ಮ ಸ್ವಸಾಮರ್ಥ್ಯದ ಮೇಲೆ ವಿಶ್ವಾಸವಿಡಿ. ಶೇಕಡಾ 33 ಮೀಸಲಾತಿ ಅನುಷ್ಠಾನಗೊಳ್ಳಲಿ ಎಂದು ಕಾದುಕೂತವರಾದರೂ ಯಾರು? ಈ ಅಂಶ, ವಾಸ್ತವವಾಗಿ ರಾಜಕೀಯ ಪಕ್ಷಗಳಿಗೆ ಒಂದು ಒಳ್ಳೆಯ ಅಸ್ತ್ರ ಅಷ್ಟೇ. ಈ ಮಸೂದೆ ಜಾರಿಯಾದ ತಕ್ಷಣ ಸಂಸತ್ತಿನಲ್ಲಿ ಎಲ್ಲವೂ ಸರಿಹೋಗುತ್ತದಾ? ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಷ್ಟಿಷ್ಟಾದರೂ ಅಭಿವೃದ್ಧಿ ಮಾಡಿ ಮತ್ತೊಮ್ಮೆ ಗೆದ್ದು ಬಂದವಳೇ ನಿಜವಾದ ನಾಯಕಿಯೇ ಹೊರತು  ಮೀಸಲಾತಿಯಿಂದ ಅನಿವಾರ್ಯವಾಗಿ ಆಯ್ಕೆಯಾದವಳಲ್ಲ.

ಬಾಹ್ಯಾಕಾಶದಲ್ಲೂ ಮಹಿಳೆ ಪುರುಷರಿಗೆ ಸರಿಸಾಟಿಯಾಗಿ ನಿಂತಿರುವ ಕಾಲಘಟ್ಟವಿದು. ಐಟಿ-ಬಿಟಿ, ಇಂಜಿನಿಯರಿಂಗ್, ಮಾಧ್ಯಮ, ವೈದ್ಯಕೀಯ ಹೀಗೆ ಯಾವುದೇ ಕ್ಷೇತ್ರವನ್ನು ಪರಿಭಾವಿಸಿದರೂ ಹೆಣ್ಣು ಪ್ರಾಬಲ್ಯ ಮೆರೆದಿದ್ದಾಳೆ.

ಹೆಣ್ಣಿನ ಈ ಪ್ರಗತಿಪರ ಬದಲಾವಣೆ ಗಂಡು-ಹೆಣ್ಣಿನ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರಿರುವುದು ಸತ್ಯ. ಈಗ ಹೆಂಡತಿ ಗಂಡನ ಸಂಪಾದನೆಯನ್ನೇ ನಂಬಿ ಕೂತಿಲ್ಲ. ಆಕೆಯೂ ದುಡಿಯುವ ಕಾರಣ ಅವಳು ಎರಡನೇ ದರ್ಜೆಯ ಪ್ರಜೆಯಲ್ಲ. ಹೀಗಾಗಿ ಹಿಂದೆ ಇದ್ದ ಮೇಲ್ ಸುಪೀರಿಯಾರಿಟಿ ಮತ್ತು ಫಿಮೇಲ್ ಇನ್‌ಫೀರಿಯಾರಿಟಿ (ಮೇಲು-ಕೀಳು) ತಾರತಮ್ಯ ಕಡಿಮೆ ಆಗಿದೆ.

ಆದರೆ ಒಂದು ಸಂಗತಿ: ಈ ಆರ್ಥಿಕ ಸುಸ್ಥಿರತೆ ಸಂಸಾರದಲ್ಲಿ ಸಂಘರ್ಷಕ್ಕೂ ದಾರಿ ಮಾಡಿಕೊಡುವುದುಂಟು. ಗಂಡ-ಹೆಂಡಿರ ಸಂಬಂಧವನ್ನು ಗಟ್ಟಿಮಾಡಬೇಕಾದ ವೈಯಕ್ತಿಕ ನಿಷ್ಠೆ (ಪರ್ಸನಲ್ ಲಾಯಲ್ಟಿ) ದುರ್ಬಲಗೊಳ್ಳುವುದುಂಟು. ಸ್ವಾತಂತ್ರ್ಯ ಜಾಸ್ತಿಯಾದಾಗ ಭಿನ್ನಾಭಿಪ್ರಾಯಗಳೂ ಜಾಸ್ತಿ ಅಲ್ವೇ? ಮನೆ-ಕಚೇರಿ ಅಂತ ದುಡಿಯೋ ಹೆಣ್ಣಿಗೆ ತಾಳ್ಮೆ ಕಡಿಮೆ ಆಗ್ತಿದೆ. ಸ್ವತಂತ್ರ ಬದುಕು ಕಟ್ಟೋ ಧೈರ್ಯ ಬಂದಿದೆ. ಹೀಗಾಗಿ ಸಂಸಾರದಲ್ಲಿ ಅಪಸ್ವರ ಎದ್ದಾಗ ಆಕೆ ವಿಚ್ಛೇದನದ ಬಗ್ಗೆ ಚಿಂತಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಹೆಣ್ಣು-ಗಂಡು ಇಬ್ಬರೂ ಕಾರಣ.

ಜಗತ್ತು ಎಷ್ಟೇ ಮುಂದುವರಿದಿದ್ದರೂ ಹೆಣ್ಣಿನಲ್ಲಿ ಆದರ್ಶ/ಮಾದರಿ ಗುಣಗಳನ್ನು ಹುಡುಕುವ ಪ್ರವೃತ್ತಿ ಕಡಿಮೆಯಾಗಿಲ್ಲ. ‘ಆದರ್ಶ ಮಹಿಳೆ’ ಎಂಬ ಪರಿಕಲ್ಪನೆಯನ್ನೇ ತೆಗೆದುಕೊಳ್ಳಿ. ಆದರ್ಶ ಪುರುಷ ಹೇಗಿರಬೇಕೋ, ಆದರ್ಶ ಮಹಿಳೆಯೂ ಹಾಗೇ ಇರಬೇಕು ಎಂಬ ವಾದ ನನ್ನದು. ದುಡಿಯುವ ಮಹಿಳೆಗೆ ಮನೆಯಲ್ಲಿ ನೆರವಾಗುವ ಪುರುಷರ ಪ್ರಮಾಣ ಈಗ ಹೆಚ್ಚಿದೆ. ಗೃಹಕೃತ್ಯಗಳಲ್ಲಿ ಆಕೆಯೊಂದಿಗೆ ತಾನೂ ಕೆಲಸ ನಿರ್ವಹಿಸುತ್ತಾನೆ. ಇದು ಹೊಣೆಗಾರಿಕೆಯನ್ನು ನಿಭಾಯಿಸುವ ರೀತಿಯೂ ಹೌದು. ಹೀಗೆ, ಹೆಣ್ಣಿನ ಸಾಮಾಜಿಕ, ಕೌಟುಂಬಿಕ, ಔದ್ಯೋಗಿಕ ಬದುಕಿನಲ್ಲಿ ದಾಖಲಾರ್ಹ ಬದಲಾವಣೆಗಳಾಗಿವೆ.

ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಬೇಕು. ಪ್ರತಿಭೆ, ಸ್ವಸಾಮರ್ಥ್ಯದಿಂದ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಸ್ವಾವಲಂಬಿಯಾಗಿ ಬದುಕಬೇಕು. ಮೀಸಲಾತಿಯಲ್ಲಿ ನಂಬಿಕೆ ಬೇಡ.

ಸ್ವಾತಂತ್ರ್ಯ ಜಾಸ್ತಿಯಾದಾಗ ಭಿನ್ನಾಭಿಪ್ರಾಯಗಳೂ ಜಾಸ್ತಿ ಅಲ್ವೇ? ಮನೆ-ಕಚೇರಿ ಅಂತ ದುಡಿಯೋ ಹೆಣ್ಣಿಗೆ ತಾಳ್ಮೆ ಕಡಿಮೆ ಆಗ್ತಿದೆ. ಸ್ವತಂತ್ರ ಬದುಕು ಕಟ್ಟೋ ಧೈರ್ಯ ಬಂದಿದೆ. ಹೀಗಾಗಿ ಸಂಸಾರದಲ್ಲಿ ಅಪಸ್ವರ ಎದ್ದಾಗ ಆಕೆ ವಿಚ್ಛೇದನದ ಬಗ್ಗೆ ಚಿಂತಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಹೆಣ್ಣು-ಗಂಡು ಇಬ್ಬರೂ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.