ADVERTISEMENT

ಪೊಲೀಸರಿಗೆ ನಮನ...

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST
ಪೊಲೀಸರಿಗೆ ನಮನ...
ಪೊಲೀಸರಿಗೆ ನಮನ...   

ಸುಮಾರು ಮೂರು ವರ್ಷಗಳ ಹಿಂದಿನ ಘಟನೆ. ನಾನು ಬೀದರ್‌ನಲ್ಲಿ ಓದುತ್ತಿದ್ದೆ. ಒಂದು ದಿನ ನಾನು ಜೀನ್ಸ್ ಮತ್ತು ಟಾಪ್ ಧರಿಸಿದ್ದೆ. ಕಾಲೇಜಿಗೆ ಹೋಗುವ ಹುಡುಗಿಯರಿಗೆ ಇದು ಸಾಮಾನ್ಯ. ಮಧ್ಯಾಹ್ನ ನಾನು ಮತ್ತು ನನ್ನ ಗೆಳತಿ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆವು.

ಮುಖ್ಯ ರಸ್ತೆ ಆದ್ದರಿಂದ ತುಂಬಾ ಜನ ಹಾಗೂ ವಾಹನಗಳಿಂದ ತುಂಬಿತ್ತು. ನಾವಿಬ್ಬರೂ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ನಮ್ಮ ಹಿಂದೆ ಯಾರೋ ಬಂದಂತೆ ನನಗೆ ಅನಿಸಿತು. ಆದರೂ ಇಷ್ಟು ಜನರಿಂದ ತುಂಬಿದ ದಾರಿಯಲ್ಲಿ ಹಾಗೆ ಅನಿಸುವುದು ಸಹಜವೆಂದು ನಾನು ನನ್ನ ಪಾಡಿಗೆ ಮುಂದೆ ಸಾಗಿದೆ. ಒಂದೇ ಸೆಕೆಂಡ್‌ನಲ್ಲಿ ನನ್ನ ನಂಬಿಕೆ ಸುಳ್ಳಾಯಿತು.

ಯಾವನೋ ಒಬ್ಬ ನನ್ನ ಜೀನ್ಸ್ ಮೇಲೆ (ಸೊಂಟದ ಕೆಳಗೆ) ಜೋರಾಗಿ ಹೊಡೆದು, ಮುಂದೆ ಬಂದು ನನ್ನನ್ನೆ ನೋಡುತ್ತಾ, ಜೋರಾಗಿ ನಗುತ್ತಾ `ಹೌ ಈಸ್ ಇಟ್ ಸೆಕ್ಸಿ~ ಎಂದ. ನನಗೆ ತಡೆಯಲಾಗಲಿಲ್ಲ. ಜೀನ್ಸ್ ತೊಟ್ಟಿದ್ದೆ ತಪ್ಪಾಯಿತೆ? ಎಂದು ನನ್ನ ಮೇಲೆ ನನಗೇ ಅಸಹ್ಯವೆನಿಸಿತು. ಜನ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಅವನ ಕೆನ್ನೆಗೆ ಒಂದು ಬಾರಿಸಬೇಕು ಅನಿಸಿತು.

ಆದರೆ ಧೈರ್ಯ ಸಾಲಲಿಲ್ಲ. ಕಣ್ಣು ಒರೆಸಿಕೊಂಡು ಮುಂದೆ ಸಾಗಿದೆ. ಅವನು ನಗುತ್ತಾ ಮುಂದೆ ಹೋಗ್ತಾ ಇದ್ದ. ಅದು ಎಲ್ಲಿಂದ ಬಂತೋ ಗೊತ್ತಿಲ್ಲ, ದಿಢೀರ್ ಅಂತ ಒಂದು ಪೊಲೀಸ್ ಜೀಪ್ ಬಂದು ಮುಂದೆ ನಿಂತಿತ್ತು. ಇನ್ನೂ ಸರಿಯಾಗಿ ಜೀಪ್ ಸ್ಟಾಪ್ ಆಗಿರಲಿಲ್ಲ,  ಅದರಲ್ಲಿಂದ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಕೈಯಲ್ಲಿ ಲಾಠಿ ಹಿಡಿದು ಕೆಳಗಿಳಿದರು.

ನೇರವಾಗಿ ಮುಂದೆ ಬಂದು ನನ್ನನ್ನು ಹೊಡೆದವನ ಕಾಲರ್ ಹಿಡಿದು ನನ್ನ ಮುಂದೆ ನಿಂತು, ನನ್ನನ್ನು ಕೇಳಿದರು. `ಏನಮ್ಮಾ ಇವನು ನಿನ್ ಟಚ್ ಮಾಡದ್ನಲ್ಲಾ?~ ಅಂತ. ನಾನು `ಹೌದು~ ಅಂತ ತಲೆ ಅಲ್ಲಾಡಿಸಿದೆ. ಅಷ್ಟೇ ಆ ಪೊಲೀಸ್ `ನೀನ್ ಹೋಗಮ್ಮಾ~ ಎಂದು ಹೇಳಿದರು. ನಾನು ಮತ್ತು ನನ್ನ ಗೆಳತಿ ಅಲ್ಲಿಂದ ಹೊರಟೆವು.

ನನಗೆ ಏನೂ ತೋಚಲಿಲ್ಲ. ಎರಡೇ ನಿಮಿಷದಲ್ಲಿ ಟ್ರಾಫಿಕ್ ಜಾಮ್ ಆಯಿತು. ನಾವು ಅ್ಲ್ಲಲೇ ನಿಂತೆವು. ನಡು ರೋಡಿನಲ್ಲಿ ಪೊಲೀಸ್ ಅವನನ್ನು ಹೊಡೆಯುತ್ತಿದ್ದರು. ಅವನು ಜೋರಾಗಿ `ಅಮ್ಮ! ಅಮ್ಮ!~ ಅಂತ ಕೂಗುತ್ತಿದ್ದ. ಒಂದು ನಿಮಿಷ ಅವನ ಮೇಲೆ ಕನಿಕರ ಬಂತು. ಆದರೂ ನನಗೆ ನ್ಯಾಯ ಸಿಕ್ಕಿದ್ದಕ್ಕೆ ಸಂತೋಷಪಟ್ಟೆ.

`ಅಮ್ಮ!~ ಅಂತ ಅವನು ಚೀರುವಾಗ ನನಗೆ ಅನಿಸಿತು, ನನಗೆ ಟಚ್ ಮಾಡುವಾಗ ಅವನಿಗೆ ನನ್ನಲ್ಲಿ ಅವನ `ಅಮ್ಮ~ ಕಾಣಿಸಲಿಲ್ಲವೆ? ಅವನ ತಾಯಿಯ ಹಾಗೆ ನಾನು ಹೆಣ್ಣು ಎಂದು ಏಕೆ ಭಾವಿಸಲಿಲ್ಲ? ಹೀಗೆ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳು ತೇಲುತ್ತಾ ಸಾಗಿದವು. ಮನಸ್ಸಿನಲ್ಲೇ ಪೊಲೀಸ್ ಅಂಕಲ್‌ಗೆ ಧನ್ಯವಾದ ಹೇಳಿದೆ.

ಇಂದಿಗೂ ಆ ಘಟನೆ ನೆನಸಿಕೊಂಡರೆ ದುಃಖ ಮತ್ತು ಕೃತಜ್ಞತೆ ನನ್ನ ಮನಸ್ಸಿನಲ್ಲಿ ಮೂಡುತ್ತವೆ. ಹೆಣ್ಣು ಮಕ್ಕಳು ಹಾಕುವ ಡ್ರೆಸ್ ಹುಡುಗರಿಗೆ ಪ್ರಚೋದನೆಗೆ ಒಳಪಡಿಸುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲ. `ಯಥಾ ದೃಷ್ಟಿ, ತಥಾ ಸೃಷ್ಟಿ~ ಎಂಬಂತೆ ನೋಡುವ ಕಣ್ಣಿನ ಮೇಲೆ ನಿರ್ಧರಿಸಿರುತ್ತದೆ.

ಇವತ್ತಿಗೂ ಎ್ಲ್ಲಲೇ ಪೊಲೀಸರನ್ನು ನೋಡಿದರೂ ನಾನು ಮನಸ್ಸಿನಲ್ಲೇ ಧನ್ಯವಾದ ಹೇಳಲು ಮರೆಯುವುದಿಲ್ಲ. ದೇವರೆ ಕಳಿಸಿದಂತೆ ಆ ಕ್ಷಣ ಅಲ್ಲಿಗೆ ಬಂದು ನನಗೆ ನ್ಯಾಯ ಕೊಡಿಸಿದ ಪೊಲೀಸರಿಗೆ ನನ್ನ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.